ಕಾಸರಗೋಡು | ಇಬ್ಬರು ಆದಿವಾಸಿಗಳ ಭೂಮಿಯನ್ನು ನಿವೃತ್ತ ಸೈನಿಕರಿಗೆ ಬಿಟ್ಟು ಕೊಡುವಂತೆ ಜಿಲ್ಲಾಡಳಿತದಿಂದ ಒತ್ತಡ

  • 46 ವರ್ಷಗಳ ಒಡೆತನದ  ಭೂಮಿಯನ್ನು ಬಿಟ್ಟು ಕೊಡುವಂತೆ ಒತ್ತಾಯ
  • ಸರ್ವೆ ಸಂಖ್ಯೆ ತಾಳೆಯಾಗುತ್ತಿಲ್ಲ ಎಂದ ಜಿಲ್ಲಾಡಳಿತ

ಕಾಸರಗೋಡಿನ ಕರಿಂತಲಂ ಗ್ರಾಮದ ಇಬ್ಬರು ಆದಿವಾಸಿ ಕುಟುಂಬಗಳ 46 ವರ್ಷಗಳ ಒಡೆತನದ ಭೂಮಿಯನ್ನು ನಿವೃತ್ತ ಸೈನಿಕರ ಕುಟುಂಬಕ್ಕೆ ಬಿಟ್ಟು ಕೊಡುವಂತೆ ಜಿಲ್ಲಾಡಳಿತ ಒತ್ತಡ ಹಾಕುತ್ತಿದೆ ಎಂದು ಬುಡಕಟ್ಟು ಸಮುದಾಯದ ರಾಘವನ್‌ ಅಂಗಿಲತ್‌ ಅಳಲು ತೋಡಿಕೊಂಡಿದ್ದಾರೆ.

ಮಾವಿಲನ್ ಪರಿಶಿಷ್ಟ ಪಂಗಡದ(ಆದಿವಾಸಿ) ಸಮುದಾಯಕ್ಕೆ ಸೇರಿದ ಐವತ್ನಾಲ್ಕು ವರ್ಷದ ರಾಘವನ್‌ ಅಂಗಿಲತ್ 1.10 ಎಕರೆ ಭೂಮಿ ಹೊಂದಿದ್ದರೆ ಅವರ ಸಂಬಂಧಿಯಾದ ಅರವತ್ತು ವರ್ಷದ  ನಾರಾಯಣಿ ಒಂದು ಎಕರೆ ಭೂಮಿ ಹೊಂದಿದ್ದಾರೆ.

ಸುಮಾರು ವರ್ಷಗಳಿಂದ ತಮ್ಮ ಭೂಮಿಯಲ್ಲಿ ತೆಂಗಿನ ಮರ, ಅಡಿಕೆ ಮರ, ರಬ್ಬರ್, ಗೋಡಂಬಿ ಮರಗಳು ಮತ್ತು ಮೆಣಸುಗಳನ್ನು ಬೆಳೆದಿದ್ದಾರೆ. ನಾರಾಯಣಿ ತಮ್ಮ ಒಡ ಹುಟ್ಟಿದವರು ಮತ್ತು ಅವರ ಮಕ್ಕಳೊಂದಿಗೆ ಒಂದು ಎಕರೆ ಭೂಮಿಯನ್ನು ಹಂಚಿಕೊಂಡಿದ್ದಾರೆ.

“1976ರಲ್ಲಿ ನಮ್ಮ ತಂದೆ ಮಾವಿಲನ್ ಪೊಕ್ಲನ್, ಭೂಮಾಲೀಕರಾದ ಕರಿಂಬಿಲ್ ಕಣ್ಣನ್ ನಾಯರ್ ಅವರಲ್ಲಿ 500 ರೂಪಾಯಿ ಕೊಟ್ಟು ಭೂಮಿಯನ್ನು ಖರೀದಿಸಿದ್ದು, ಅದನ್ನು ಸಾಬೀತು ಪಡಿಸಲು ದಾಖಲೆಗಳು ನಮ್ಮಲ್ಲಿದೆ” ಎಂದು ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ರಾಘವನ್‌ ಹೇಳಿದರು.

ಏಪ್ರಿಲ್‌ ಒಂದರಂದು ನಮ್ಮ ಮನೆಗೆ ಬಂದ ಜಿಲ್ಲಾಧಿಕಾರಿಗಳು ಭೂಮಿಯನ್ನು ಸೈನಿಕರ ಕುಟುಂಬಕ್ಕೆ ಬಿಟ್ಟು ಕೊಡುವಂತೆ ಕೇಳಿದರು. ಅದು ಹೇಗೆ ಸಾಧ್ಯ? 2022ರವರೆಗೆ ಭೂಮಿಯ ತೆರಿಗೆಯನ್ನು ಕಟ್ಟಿದ್ದೆನೆ ಎಂದು ಅವರು ತಿಳಿಸಿದರು.

“ಗ್ರಾಮ ಪಂಚಾಯತ್ ಕಚೇರಿ 2013ರವರೆಗೂ ಭೂಕಂದಾಯವನ್ನು ಸ್ವೀಕರಿಸುತ್ತಿದ್ದು, ಸೈನಿಕ ಕುಟುಂಬ ನಮ್ಮ ಜಮೀನನ್ನು ಸ್ವಾಧೀನ ಪಡಿಸಲು ಪ್ರಯತ್ನಿಸಿದ  ಮೇಲೆ ಕಂದಾಯವನ್ನು ಸ್ವೀಕರಿಸುತ್ತಿಲ್ಲ” ಎಂದು ನಾರಾಯಿಣಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಓದಿದ್ದಿರಾ? ಕೊಡಗು | ಪುನರ್ವಸತಿ ಹೆಸರಲ್ಲಿ ಬದುಕು ಆತಂತ್ರ: ಆದಿವಾಸಿಗಳ ಹೋರಾಟ

ಮಂಗಳವಾರ ಅಪರಿಚಿತ ವ್ಯಕ್ತಿಗಳು ತೋಟಕ್ಕೆ ನುಗ್ಗಿ ಕೆಲವು ತೆಂಗಿನ ಮರ ಮತ್ತು ರಬ್ಬರ್ ಮರಗಳನ್ನು ಕಡಿದು ಹಾಕಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಟಿ ಎಂ ಕುನ್‌ಹಂಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮವರಿಗೆ ಅನ್ಯಾಯವಾಗುತ್ತಿರುವಾಗ ಅದನ್ನು ನೋಡಿ ಮೂಕ ಪ್ರೇಕ್ಷಕರಂತೆ ಕೂರಲು ಸಾಧ್ಯವಿಲ್ಲ. ಜಿಲ್ಲಾಡಳಿತ ಮತ್ತು ಪೊಲೀಸರು ಇದೇ ರೀತಿ ಮಾಡಲು ಹೊರಟರೆ ವೆಳ್ಳರಿಕ್ಕುಂಡು ತಾಲೂಕು ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

“ಭೂಮಿಯಲ್ಲಿರುವ ಸರ್ವೆ ಸಂಖ್ಯೆಯು ಹಕ್ಕು ಪತ್ರದಲ್ಲಿರುವ ಸರ್ವೆ ಸಂಖ್ಯೆಯೊಂದಿಗೆ ತಾಳೆಯಾಗುತ್ತಿಲ್ಲ. ಹೆಚ್ಚುವರಿ ಭೂಮಿಯನ್ನು ಬಿಟ್ಟು ಕೊಟ್ಟರೆ, ಸರ್ಕಾರವು ಅವರಿಗೆ ಮತ್ತೊಂದು ತುಂಡು ಭೂಮಿಯನ್ನು ಪರಿಹಾರವಾಗಿ ನೀಡಬಹುದು. ಆದರೆ ಅವರು ವಿನಿಮಯ ಮಾಡಿಕೊಳ್ಳಲು ಸಿದ್ಧರಿಲ್ಲ” ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ವಾದವನ್ನು ರಾಘವನ್‌ ತಳ್ಳಿ ಹಾಕಿದ್ದು 46 ವರ್ಷಗಳಿಂದ ಈ ಭೂಮಿಯ ಒಡೆತನ ಹೊಂದಿದ್ದು ಹಕ್ಕು ಪತ್ರದ ಸಂಖ್ಯೆಯು ಭೂಮಿಯ ಸಂಖ್ಯೆಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ತಿಳಿಸಿದ್ದಾರೆ. 

ಬುಡಕಟ್ಟು ಪಂಗಡದ ಸಂಘಟನೆಗಳಾದ ‘ಮಲವೆಟ್ಟುವ ಸಭಾ’ ಮತ್ತು ‘ಅಖಿಲ ಕೇರಳ ಮಾವಿಲ ಸಮಾಜಮ್’ ರಾಘವನ್‌ ಹೋರಾಟಕ್ಕೆ ಬೆಂಬಲ ನೀಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್