ಒಂದು ನಿಮಿಷದ ಓದು | ದೆಹಲಿಯಲ್ಲಿ ಫಡ್ನಾವಿಸ್‌; ಮುಂಬೈನಲ್ಲಿ ಠಾಕ್ರೆ ಸಭೆ

ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡುಕೋರ ಶಾಸಕರು ಮುಂಬೈಗೆ ಮರಳಿ ತಮ್ಮೊಂದಿಗೆ ಮಾತನಾಡುವಂತೆ ಉದ್ದವ್‌ ಠಾಕ್ರೆ ಮನವಿ ಮಾಡಿಕೊಂಡಿದ್ದಾರೆ.

"ನೀವು ಹಿಂತಿರುಗಿ ನನ್ನನ್ನು ಭೇಟಿ ಮಾಡಿ ಕೆಲವು ಮಾರ್ಗಗಳನ್ನು ಕಂಡುಕೊಳ್ಳಬಹುದು. ಪಕ್ಷದ ಅಧ್ಯಕ್ಷನಾಗಿ ಮತ್ತು ಕುಟುಂಬದ ಮುಖ್ಯಸ್ಥನಾಗಿ, ನಾನು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೇನೆ. ದಿನವೂ ನಿಮ್ಮ ಬಗ್ಗೆ ಹೊಸ ಮಾಹಿತಿಗಳು ಹೊರಬೀಳುತ್ತಿವೆ, ಜೊತೆಗೆ ನಿಮ್ಮಲ್ಲಿ ಅನೇಕ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ನಿಮ್ಮ ಹೃದಯದಲ್ಲಿ ನೀವು ಇನ್ನೂ ಶಿವಸೇನೆಯೊಂದಿಗೆ ಇದ್ದೀರಿ" ಎಂದು ಠಾಕ್ರೆ ಹೇಳಿದ್ದಾರೆ.

ಈ ನಡುವೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಕೇಂದ್ರ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ, ಮಹಾರಾಷ್ಟ್ರದ ಬಿಕ್ಕಟ್ಟಿನ ಕುರಿತು ಪಕ್ಷದ ಮುಂದಿನ ಕ್ರಮದ ಬಗ್ಗೆ ಚರ್ಚಿಸಿದರು.

ಬಿಜೆಪಿ ಸಂಸದ ಮತ್ತು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಅವರು ಗೃಹ ಸಚಿವರೊಂದಿಗಿನ ಸಭೆಯಲ್ಲಿ ದೇವೇಂದ್ರ ಫಡ್ನಾವಿಸ್ ಅವರನ್ನು ಸೇರಿಕೊಂಡರು ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ ಅಧಿಕಾರ ಮರಳಿ ವಶಪಡಿಸಿಕೊಳ್ಳಲು ಬಂಡುಕೋರ ಶಾಸಕರು ಮತ್ತು ಇತರ ಸ್ವತಂತ್ರ ಶಾಸಕರ ಆಯ್ಕೆ ಕುರಿತು ಹಾಗೂ ಕಾನೂನು ಕಾರ್ಯಸಾಧ್ಯತೆಯ ಬಗ್ಗೆ ಅವರು ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಅಮಿತ್‌ ಶಾ ಭೇಟಿಯ ನಂತರ, ದೇವೇಂದ್ರ ಫಡ್ನಾವಿಸ್‌ ಅವರು ಜೆಪಿ ನಡ್ಡಾ ಅವರ ನಿವಾಸಕ್ಕೆ ತೆರಳಿ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ವಿವರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app