ಒಂದು ನಿಮಿಷದ ಓದು | ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಅತ್ಯಾಚಾರ ಆರೋಪಿ

ವಿಚಾರಣಾಧೀನ ಕೈದಿಯೊಬ್ಬ ತಪಾಸಣೆ ನಡೆಸಲು ಬಂದಿದ್ದ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ್ದು, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನುಷ ಘಟನೆ ದೆಹಲಿಯ ಮಂಡೋಲಿ ಜೈಲಿನಲ್ಲಿ ನಡೆದಿದೆ.

ಎಲ್ಲ ಕೈದಿಗಳ ನಿಯಮಿತ ಆರೋಗ್ಯ ತಪಾಸಣೆಗಾಗಿ ಸೋಮವಾರ ವೈದ್ಯರ ತಂಡವೊಂದು ಜೈಲಿಗೆ ಆಗಮಿಸಿತ್ತು. ತಂಡವು ತಪಾಸಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ದೆಹಲಿಯ ಮಂಡೋಲಿ ಜೈಲಿನ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ʻʻಆರೋಪಿ ಸ್ನಾನದ ಕೋಣೆಯಲ್ಲಿ ಬಚ್ಚಿಟ್ಟುಕೊಂಡಿದ್ದು, ಯಾರೂ ಇಲ್ಲದ ಸಮಯದಲ್ಲಿ ಕಿರಿಯ ವೈದ್ಯರೊಬ್ಬರಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಆಕೆಯ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದಾನೆ. ವೈದ್ಯೆಯೂ ಆತನನ್ನು ತಳ್ಳಿ ಹೊರಗೆ ಓಡಿ ಹೋಗಿದ್ದಾಳೆ. ಆ ಸಂದರ್ಭದಲ್ಲಿ ಘಟನೆ ನಡೆದ ಸ್ಥಳದಲ್ಲಿದ್ದ ವೈದ್ಯರು ಭದ್ರತಾ ಸಿಬ್ಬಂದಿಯನ್ನು ಎಚ್ಚರಿಸಿದರುʼʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ʻʻಕೂಡಲೇ ಕೈದಿಯನ್ನು ಬಂಧಿಸಲಾಗಿದೆ. ಘಟನೆಯ ಬಗ್ಗೆ ಜೈಲು ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಕಾನೂನು ಕ್ರಮ ಕೈಗೊಳ್ಳಲಾಗಿದೆʼʼ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಹರ್ಷ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ" ಎಂದು ಅವರು ಹೇಳಿದರು.

ʻʻಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಆ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆʼʼ ಎಂದು ಮಾಹಿತಿ ನೀಡಿದ ಜೈಲಿನ ಅಧಿಕಾರಿ, ʻʻಭವಿಷ್ಯದಲ್ಲಿ ಈ ರೀತಿಯ ಘಟನೆ ನಡೆಯದಂತೆ ಬ್ಯಾರಕ್‌ಗಳ ಸುತ್ತಲೂ ಭದ್ರತೆ ಹೆಚ್ಚಿಸಲಾಗಿದೆʼʼ ಎಂದು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್