ಯುಜಿಸಿ ಟ್ವಿಟರ್‌ ಖಾತೆ ಹ್ಯಾಕ್‌ ಪ್ರಕರಣ | ಎಫ್‌ಐಆರ್‌ ದಾಖಲು

  • ಏಪ್ರಿಲ್‌ 10ರಂದು ಹ್ಯಾಕ್‌ ಆಗಿದ್ದ ಯುಜಿಸಿ ಟ್ವಿಟರ್‌ ಖಾತೆ
  • ಐಟಿ ಕಾಯ್ದೆಯ ಸೆಕ್ಷನ್‌ 66, 66ಸಿ ಅಡಿಯಲ್ಲಿ ಎಫ್‌ಐಆರ್‌ ದಾಖಲು

ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಟ್ವಿಟರ್ ಖಾತೆ ಹ್ಯಾಕ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ವಿಶೇಷ ಪೊಲೀಸ್‌ ದಳವು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ಯುಜಿಸಿಯ ಸ್ವಯಂ (SWAYAM) ಯೋಜನೆಯ ಐಟಿ ಸಲಹೆಗಾರ ಅಭಿಷೇಕ್‌ ಕುಮಾರ್‌ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಐಟಿ ಕಾಯ್ದೆಯ ಸೆಕ್ಷನ್‌ 66, 66ಸಿ ಅಡಿಯಲ್ಲಿ  ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಯುಜಿಸಿಯ ಟ್ವಿಟರ್ ಖಾತೆಯು ಏಪ್ರಿಲ್ 10ರ ರಾತ್ರಿ ಸುಮಾರು 1.30 ಗಂಟೆಗೆ ಹ್ಯಾಕ್ ಆಗಿತ್ತು. ಹ್ಯಾಕರ್‌ಗಳು ಸುಮಾರು 24 ಸಾವಿರ ಸ್ಪ್ಯಾಮ್ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದರು. ಈ ಎಲ್ಲಾ ಟ್ವೀಟ್‌ಗಳನ್ನು ಒಂದೊಂದಾಗಿ ಅಳಿಸಬೇಕು ಎಂದು ಹೇಳಿದ್ದ ಟ್ವಿಟರ್‌, ಬೆಳಗ್ಗೆ 10 ಗಂಟೆ ಹೊತ್ತಿಗೆ ಖಾತೆಯನ್ನು ಸರಿಪಡಿಸಿತ್ತು.

Image

ಯುಜಿಸಿಯು - ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ, ಬೋಧನೆ, ಪರೀಕ್ಷೆ ಮತ್ತು ಸಂಶೋಧನೆಗಳ ಗುಣಮಟ್ಟಗಳ ಸಮನ್ವಯ, ನಿರ್ಣಯ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರದ ಶಿಕ್ಷಣ ಇಲಾಖೆಯಿಂದ ಸ್ಥಾಪಿಸಲಾದ ಸಂಸ್ಥೆಯಾಗಿದೆ. ಇದರ ಅಧೀಕೃತ ಟ್ವಿಟರ್ ಖಾತೆಯು 2,98,704 ಫಾಲೋವರ್‌ಗಳನ್ನು ಹೊಂದಿದೆ.

ಟ್ವಿಟರ್‌ ಖಾತೆಗಳನ್ನು ಹ್ಯಾಕ್‌ ಮಾಡುವ ಪ್ರಹಸನ ಇದೇ ಮೊದಲಲ್ಲ. ಏಪ್ರಿಲ್‌ 9ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ (ಸಿಎಂಒ) ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು. ಸುಮಾರು ನಾಲ್ಕು ಗಂಟೆಗಳ ನಂತರ ಟ್ವಿಟರ್‌ ಈ ಸಮಸ್ಯೆಯನ್ನು ಸರಿಪಡಿಸಿತ್ತು. ಟ್ವಿಟರ್‌ ಖಾತೆಯ ನಿಯಂತ್ರಣವನ್ನು ಮರಳಿ ಪಡೆದ ನಂತರ, ಹ್ಯಾಕರ್‌ಗಳು ಪೋಸ್ಟ್‌ ಮಾಡಿದ್ದ ಟ್ವೀಟ್‌ಗಳನ್ನು ತೆಗೆದುಹಾಕಲಾಯಿತು. ಆದರೂ, ಕೆಲವು ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇದನ್ನು ಓದಿದ್ದೀರಾ ? |  ಸಿಎಂ ಯೋಗಿ ಕಚೇರಿಯ ಟ್ವಿಟರ್‌ ಖಾತೆ ಹ್ಯಾಕ್‌ | ಸ್ಕ್ರೀನ್‌ಶಾಟ್‌ಗಳು ವೈರಲ್

ಈ ಹಿಂದೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆಯನ್ನೂ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದರು. ಪ್ರಧಾನಿಯವರ ಟ್ವಿಟರ್ ಹ್ಯಾಂಡಲ್‌ನಿಂದ ಭಾರತವು "ಅಧಿಕೃತವಾಗಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧಗೊಳಿಸಿದೆ" ಎಂದು ಹ್ಯಾಕರ್‌ಗಳು ಟ್ವೀಟ್ ಮಾಡಿದ್ದರು. ಇದು ಕೆಲವು ಸಮಯದ ಕಾಲ ಜನರನ್ನು ಬೆರಗುಗೊಳಿಸಿತ್ತು.  ಕಳೆದ ತಿಂಗಳು ಕರ್ನಾಟಕದ ಮುಖ್ಯಮಂತ್ರಿಗಳ ಟ್ವಿಟರ್‌ ಖಾತೆ ಕೂಡ ಹ್ಯಾಕ್‌ ಆಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್