ಎಲ್ಲ ಮಹಿಳೆಯರೂ ಸುರಕ್ಷಿತ, ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು: ಸುಪ್ರೀಂ ಕೋರ್ಟ್‌

  • ಅವಿವಾಹಿತ ಮಹಿಳೆಯರೂ ಗರ್ಭಪಾತಕ್ಕೆ ಅರ್ಹರು
  • ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

ಎಲ್ಲ ಮಹಿಳೆಯರೂ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತ ಮಾಡಿಸಿಕೊಳ್ಳಲು ಅರ್ಹರು. ಈ ನಿಟ್ಟಿನಲ್ಲಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯ ನಡುವೆ ವ್ಯತ್ಯಾಸವನ್ನು ಮಾಡುವುದು ಅಸಾಂವಿಧಾನಿಕ ಎಂದು ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ಎ ಎಸ್ ಬೋಪಣ್ಣ ಅವರಿದ್ದ ಪೀಠವು ಮಹತ್ವದ ತೀರ್ಪು ನೀಡಿದೆ. ಗರ್ಭಪಾತದ ವ್ಯಾಪ್ತಿಯಲ್ಲಿ ವೈವಾಹಿಕ ಅತ್ಯಾಚಾರವನ್ನು ನ್ಯಾಯಾಲಯ ಗುರುತಿಸಿದೆ.

ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಕಾಯ್ದೆ-2021 ಅಡಿಯಲ್ಲಿ, ಅತ್ಯಾಚಾರದ ವ್ಯಾಖ್ಯಾನವು ವೈವಾಹಿಕ ಅತ್ಯಾಚಾರವನ್ನು ಒಳಗೊಂಡಿರಬೇಕು ಎಂದು ನ್ಯಾಯಾಲಯವು ತಿಳಿಸಿದೆ. ಈ ಅವಲೋಕನವು ದೇಶದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿರುವ ವೈವಾಹಿಕ ಅತ್ಯಾಚಾರದ ಬಗ್ಗೆ ಮತ್ತೊಂದಿಷ್ಟು ಬೆಳಕು ಚೆಲ್ಲಬಹುದು. 

ಮಹಿಳೆಯ ವೈವಾಹಿಕ ಸ್ಥಿತಿಯು ಗರ್ಭಪಾತದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಅವಿವಾಹಿತ ಮಹಿಳೆಯರು ಸಹ 24 ವಾರಗಳಲ್ಲಿ ಅನಗತ್ಯ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಅರ್ಹರಾಗಿರುತ್ತಾರೆ. ಒಂಟಿ ಅಥವಾ ಅವಿವಾಹಿತ ಮಹಿಳೆಯರಿಂದ ಅನಗತ್ಯ ಗರ್ಭಪಾತದ ಹಕ್ಕನ್ನು ಕಸಿದುಕೊಳ್ಳುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಗರ್ಭಪಾತ ತಿದ್ದುಪಡಿ ಕಾಯ್ದೆಯಡಿಯಲ್ಲಿ, ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವಿನ ವ್ಯತ್ಯಾಸವು ʻಕೃತಕವಾದುದು ಮತ್ತು ಅದು ಸಾಂವಿಧಾನಿಕವಾಗಿ ಸಮರ್ಥನೀಯವಲ್ಲʼ. ಏಕೆಂದರೆ, ವಿವಾಹಿತ ಮಹಿಳೆಯರು ಮಾತ್ರ ಲೈಂಗಿಕವಾಗಿ ಸಕ್ರಿಯರಾಗಿದ್ದಾರೆ ಎಂಬುದು ಸಾಂಪ್ರದಾಯಿಕ ಪರಿಕಲ್ಪನೆಯನ್ನು ಬಲಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. 

ಈ ಸುದ್ದಿ ಓದಿದ್ದೀರಾ?: ಭಾರತ್‌ ಜೋಡೋ | ಕೇರಳದಲ್ಲಿ ಕೊನೆಯ ದಿನ; ಮಧ್ಯಾಹ್ನ ತಮಿಳುನಾಡು ಪ್ರವೇಶಿಸಲಿರುವ ಪಾದಯಾತ್ರೆ

ಅವಿವಾಹಿತ ಮಹಿಳೆಯು ಒಮ್ಮತದ ಸಂಬಂಧದಿಂದ ಗರ್ಭ ಧರಿಸಿದರೆ ಅವರು ತಮ್ಮ ಗರ್ಭಾವಸ್ಥೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಬಹುದು. ಅಂದರೆ, ವಿವಾಹೇತರ ಸಹಜೀವನ (ಲಿವ್‌-ಇನ್‌) ಸಂಬಂಧದಿಂದ ಗರ್ಭ ಧರಿಸುವ ಅವಿವಾಹಿತ ಮಹಿಳೆಯರನ್ನು 'ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಕಾಯ್ದೆ-2021'ಗಳಿಂದ ಹೊರಗಿಡುವುದು ಅಸಾಂವಿಧಾನಿಕ ಎಂದು ಕೋರ್ಟ್ ತೀರ್ಪು ನೀಡಿದೆ.

2021ರ ಗರ್ಭಪಾತ ಕಾಯ್ದೆ ತಿದ್ದುಪಡಿಯು, ವಿವಾಹಿತ ಮತ್ತು ಅವಿವಾಹಿತ ಮಹಿಳೆಯ ನಡುವೆ ವ್ಯತ್ಯಾಸ ಮಾಡುವುದಿಲ್ಲ. ಆದ್ದರಿಂದ, ಎಲ್ಲ ಮಹಿಳೆಯರೂ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅವಿವಾಹಿತ ಮಹಿಳೆ ಒಪ್ಪಿತ ಸಂಬಂಧದಲ್ಲಿ ಗರ್ಭ ಧರಿಸಿದ 24 ವಾರಗಳ ಅವಧಿಯೊಳಗೆ ಗರ್ಭಪಾತ ಮಾಡಿಸಿಕೊಳ್ಳಬಹುದೇ ಎಂಬ ಕುರಿತು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. 

25ರ ವರ್ಷದ ಅವಿವಾಹಿತ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮೇರೆಗೆ ಈ ಮಹತ್ವದ ತೀರ್ಪು ಹೊರಬಿದ್ದಿದೆ.

ಯುವತಿ ಅವಿವಾಹಿತಳಾಗಿರುವುದರಿಂದ ಮತ್ತು ಗರ್ಭಧಾರಣೆಯು ಒಮ್ಮತದ ಸಂಬಂಧವನ್ನು ಅನುಸರಿಸಿದ ಕಾರಣ ಗರ್ಭಪಾತ ಕಾಯ್ದೆಯಡಿ ಆಕೆಗೆ ಗರ್ಭಪಾತಕ್ಕೆ ಅರ್ಹತೆ ಇಲ್ಲ ಎಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿತ್ತು. ಈ ಆದೇಶದ ವಿರುದ್ಧ ಮಹಿಳೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್