ಪ್ರಕರಣವನ್ನು ಉನ್ನಾವೋದಿಂದ ದೆಹಲಿಗೆ ವರ್ಗಾಯಿಸುವಂತೆ ಕೋರಿ ಸಂತ್ರಸ್ತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ

Supreme Court
  • ಆರೋಪಿ ಶುಭಂ ಸಿಂಗ್‌ ತಂದೆ ಸಲ್ಲಿಸಿದ್ದ ದೂರಿನ ಮೇಲೆ ವಾರಂಟ್‌
  • ಏಕಪಕ್ಷೀಯ ಮಧ್ಯಂತರ ತಡೆ ನೀಡುವಂತೆ ಸಂತ್ರಸ್ತೆ ಮನವಿ

ತನ್ನ ವಿರುದ್ಧ ಆರೋಪಿಯೊಬ್ಬರ ತಂದೆ ದಾಖಲಿಸಿರುವ ಪ್ರಕರಣವನ್ನು ಉತ್ತರ ಪ್ರದೇಶದಿಂದ ದೆಹಲಿಗೆ ವರ್ಗಾಯಿಸುವಂತೆ ಕೋರಿ ಉನ್ನಾವೊ ಸಂತ್ರಸ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. 

ಉತ್ತರ ಪ್ರದೇಶದ ಉನ್ನಾವೊದಲ್ಲಿ 2017ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ದೆಹಲಿಯಲ್ಲಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ನಿರೀಕ್ಷಣಾ ಜಾಮೀನು ಅರ್ಜಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಇದೆ. ಆದರೂ, ಉನ್ನಾವೊ ನ್ಯಾಯಾಲಯ ತನ್ನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ಅರ್ಜಿದಾರೆ ಆರೋಪಿಸಿದ್ದಾರೆ.

ಆರೋಪಿ ಶುಭಂ ಸಿಂಗ್‌ ಎಂಬಾತನ ತಂದೆ 2018ರಲ್ಲಿ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಈ ವಾರಂಟ್ ಹೊರಡಿಸಲಾಗಿದೆ. ಸಂತ್ರಸ್ತೆ ಪೊಲೀಸರಿಗೆ ಒದಗಿಸಿದ ವಯಸ್ಸಿನ ದಾಖಲೆಯನ್ನು ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಯ ತಂದೆ ದೂರಿದ್ದಾರೆ.

ತನ್ನ ವಿರುದ್ಧದ ದೂರನ್ನು ರದ್ದುಗೊಳಿಸುವಂತೆ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಅಲ್ಲದೆ ವಾರಂಟ್ ರದ್ದುಪಡಿಸುವಂತೆ ಇಲ್ಲವೇ ಹಿಂತೆಗೆದುಕೊಳ್ಳುವಂತೆ ಕೋರಿ ಆಕೆ ಸಲ್ಲಿಸಿದ ಅರ್ಜಿಯ ಕುರಿತು ಯಾವುದೇ ನಿರ್ಧಾರವನ್ನು ನ್ಯಾಯಾಲಯ ಕೈಗೊಂಡಿರಲಿಲ್ಲ. ಹೀಗಾಗಿ ಜಾಮೀನು ರಹಿತ ವಾರಂಟ್‌ಗೆ ಏಕಪಕ್ಷೀಯ ಮಧ್ಯಂತರ ತಡೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಂತ್ರಸ್ತೆ ಕೋರಿದ್ದಾರೆ.

ಈ ಸುದ್ದಿ ಓದಿದ್ದೀರಾ?: 19 ವರ್ಷ ಜೈಲಿನಲ್ಲಿದ್ದ ವ್ಯಕ್ತಿಯ ಬಿಡುಗಡೆಗೆ ಆದೇಶಿಸಿದ ಸುಪ್ರೀಂ ಕೋರ್ಟ್

ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ನನ್ನು ದೋಷಿ ಎಂದು ದೆಹಲಿಯ ಅಧೀನ ನ್ಯಾಯಾಲಯ ತೀರ್ಪು ನೀಡಿತ್ತು. ಈ ಮಧ್ಯೆ ತನಗೆ ಜೀವ ಬೆದರಿಕೆ ಇದ್ದರೂ, ಉನ್ನಾವೊ ನ್ಯಾಯಾಲಯ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದೆ ಎಂದು ಅವರು ಆರೋಪಿಸಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ಆಗಸ್ಟ್ 2019ರಲ್ಲಿ, ದೆಹಲಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್ ಅವುಗಳ ವಿಚಾರಣೆಯನ್ನು 45 ದಿನಗಳಲ್ಲಿ ಪೂರ್ಣಗೊಳಿಸಲು ಆದೇಶಿಸಿತ್ತು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಗರ್‌ಗೆ ಡಿಸೆಂಬರ್ 2019ರಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಪೊಲೀಸ್‌ ಕಸ್ಟಡಿಯಲ್ಲಿದ್ದ ಸಂತ್ರಸ್ತೆ ತಂದೆಯ ಸಾವಿಗೆ ಕೂಡ ಸೆಂಗರ್‌ ಕಾರಣ ಎಂದು ಶಿಕ್ಷೆ ನೀಡಲಾಯಿತು. 

ನಿಮಗೆ ಏನು ಅನ್ನಿಸ್ತು?
0 ವೋಟ್