ಭದ್ರಾ ಮೇಲ್ದಂಡೆ ಯೋಜನೆ | ರಾಷ್ಟ್ರೀಯ ಯೋಜನೆ ಮಾನ್ಯತೆಗೆ ಶೀಘ್ರದಲ್ಲೇ ಕೂಡಿ ಬರಲಿದೆ ಕಾಲ

BHADRA MELDANDE
  • ಮಧ್ಯ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ನೀರಾವರಿ ಕನಸಿನ ‘ಭದ್ರಾ ಮೇಲ್ದಂಡೆ’ ಯೋಜನೆ 
  • ಕೇಂದ್ರದ ಹಣಕಾಸು ನೆರವಿನೊಂದಿಗೆ ಚುರುಕು ಪಡೆಯಲಿರುವ ‘ಭದ್ರಾ ಮೇಲ್ದಂಡೆ’ ಕಾಮಗಾರಿ

ರಾಜ್ಯ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದು, ಮಧ್ಯ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ನೀರಾವರಿ ಕನಸಿನ ‘ಭದ್ರಾ ಮೇಲ್ದಂಡೆ’ಗೆ ರಾಷ್ಟ್ರೀಯ ಯೋಜನೆಯ ಪಟ್ಟ ಶೀಘ್ರದಲ್ಲೇ ದೊರೆಯಲಿದೆ.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಕೇಂದ್ರ ಸಚಿವ ಸಂಪುಟ ಅತಿ ಶೀಘ್ರದಲ್ಲೇ ಘೋಷಿಸಲಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಮಂಡಿಸುವುದಕ್ಕೆ ಸಂಬಂಧಿಸಿದ ಸಂಪುಟ ಟಿಪ್ಪಣಿ (ಕ್ಯಾಬಿನೆಟ್ ನೋಟ್) ಈಗಾಗಲೇ ಸಿದ್ಧವಾಗಿದೆ ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬುಧವಾರ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ವಿಚಾರದ ಕುರಿತು ಮನವರಿಕೆ ಮಾಡಲಾಯಿತು ಎಂದು ಅವರು ವಿವರಿಸಿದರು.

ಕರ್ನಾಟಕದ ಮೊಟ್ಟ ಮೊದಲ ರಾಷ್ಟ್ರೀಯ ನೀರಾವರಿ ಎಂಬ ಅಗ್ಗಳಿಕೆಗೆ ಭದ್ರಾ ಮೇಲ್ದಂಡೆ ಯೋಜನೆ ಪಾತ್ರವಾಗಲಿದೆ. ರಾಷ್ಟ್ರೀಯ ಯೋಜನೆಯ ಸ್ಥಾನಮಾನದಿಂದ 9675.26 ಕೋಟಿ ರೂಪಾಯಿಯಷ್ಟು ಕೇಂದ್ರದ ನೆರವು ಈ ಯೋಜನೆಗೆ ದೊರೆಯಲಿದೆ.   ಕೇಂದ್ರದ ಜಲಶಕ್ತಿ ಮಂತ್ರಾಲಯ 2020ರ ಫೆಬ್ರವರಿ 15ರಂದು ನಡೆದ 14ನೇ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ  ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲು ಕೇಂದ್ರ ಸಚಿವ ಸಂಪುಟಕ್ಕೆ ಶಿಫಾರಸು ಮಾಡಿತ್ತು.

ಈ ಸುದ್ದಿಯನ್ನು ಓದಿದ್ದೀರಾ:? ಭಾರತದಿಂದ ಅತ್ಯಧಿಕ ಅಕ್ಕಿ ಆಮದು ಮಾಡಿಕೊಳ್ಳುತ್ತಿರುವ ಚೀನಾ

ಈ ಯೋಜನೆಗೆ ತಗಲುವ ಒಟ್ಟು ವೆಚ್ಚ 21,473.67 ಕೋಟಿ ರೂಪಾಯಿ. ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಲ್ಪಟ್ಟ ನಂತರ ಕೇಂದ್ರ ಸರ್ಕಾರ ಈ ಯೋಜನೆಗೆ ಅಂದಾಜು 16125.48 ( ಸೂಕ್ಷ್ಮ ನೀರಾವರಿ ಹೊರತುಪಡಿಸಿ) ಕೋಟಿ ರೂಪಾಯಿ ವೆಚ್ಚದಲ್ಲಿ ಶೇ. 60ರಷ್ಟು  (9675.29 ಕೋಟಿ ರೂಪಾಯಿ ಭರಿಸಲಿದೆ ಎಂದು ಸಚಿವರು ತಿಳಿಸಿದರು.

2020ರ ಡಿಸೆಂಬರ್ 16ರಂದು ಸರ್ಕಾರ ನೀಡಿದ ಆದೇಶದಡಿ ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. 21473.67 ಕೋಟಿ ರೂ. ವೆಚ್ಚದ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸದರಿ ಯೋಜನೆಯನ್ನು ಎರಡು ಹಂತದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿಗಳು ನಾನಾ ಹಂತದ ಪ್ರಗತಿಯಲ್ಲಿವೆ.

Image
BHADRA MELDANDE new

ಕರ್ನಾಟಕದ ಬೃಹತ್ ನೀರಾವರಿ ಯೋಜನೆಯಲ್ಲಿ ಒಂದಾದ ಭದ್ರಾ ಮೇಲ್ದಂಡೆ ಯೋಜನೆಯಡಿ 29.90 ಟಿಎಂಸಿ ಅಡಿ ನೀರನ್ನು ( ತುಂಗಾ ನದಿಯಿಂದ 17.40 ಟಿಎಂಸಿ ಮತ್ತು ಭದ್ರಾ ಜಲಾಶಯದಿಂದ 12.50 ಟಿಎಂಸಿ ) ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಗಳಿಗೆ ಹರಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಡಿ ಅಂದಾಜು 2,25,515 ಹೆಕ್ಟೇರ್ (5,57,022 ಎಕರೆ ) ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಲಭ್ಯವಾಗಲಿದೆ ಮತ್ತು ಈ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 367 ಕೆರೆಗಳನ್ನು ಶೇ.50ರಷ್ಟು ಭರ್ತಿ ಮಾಡಲಾಗುತ್ತದೆ. 

ಮೊದಲನೆಯ ಹಂತದಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿಎಂಸಿ ಅಡಿ ನೀರನ್ನು ಎರಡು ಹಂತಗಳಲ್ಲಿ ಎತ್ತಿ ಹರಿಸುವುದು. ನಂತರ ಭದ್ರಾ ಜಲಾಶಯದಿಂದ ಅಜ್ಜಂಪುರದವರೆಗೆ 29.90 ಟಿಎಂಸಿ ನೀರನ್ನು ಎತ್ತಿ ಹರಿಸುವ ಕಾಮಗಾರಿ ಮುಂದುವರಿದಿದೆ. ಈಗಾಗಲೇ ಅಜ್ಜಂಪುರದ ಬಳಿ 7.039 ಕಿಮೀ ಉದ್ದದ ಸುರಂಗ ಕಾಲುವೆ ನಿರ್ಮಾಣವಾಗಿದೆ. 

ಎರಡನೇ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಜ್ಜಂಪುರ ಸುರಂಗದ ಆಗಮನ- ನಿರ್ಗಮನ ಕಾಮಗಾರಿ ಮತ್ತು ತರಿಕೆರೆ ಏತ ನೀರಾವರಿ ಪ್ಯಾಕೇಜ್-I ಮತ್ತು ಪ್ಯಾಕೇಜ್-II ಕಾಮಗಾರಿಗಳು, ಚಿತ್ರದುರ್ಗ ಶಾಖಾ ವ್ಯಾಪ್ತಿಯಲ್ಲಿ ಬರುವ 134.538 ಕಿಮೀ ಕಾಲುವೆ ನಿರ್ಮಾಣ ಕಾಮಗಾರಿ, ತುಮಕೂರು ಶಾಖೆಯ 159.684 ಕಿಮೀ ಕಾಲುವೆ ಕಾಮಗಾರಿ, ಜಗಳೂರು  ಶಾಖೆಯ ಕಾಲುವೆ, ಚಳ್ಳಕೆರೆ, ಮೊಳಕಾಲ್ಮೂರು, ಪಾವಗಡ, ಹೊಳಲ್ಕೆರೆ, ಶಿರಾ ಮತ್ತು ಚಿಕ್ಕನಾಯಕನಹಳ್ಳಿ ಫೀಡರ್ ನಿರ್ಮಾಣದ ಕಾಮಗಾರಿಗಳು ನಡೆಯಬೇಕಿದೆ. 

Image
BHADRA MELDANDE 4

'ಭದ್ರಾ ಮೇಲ್ದಂಡೆ’ ರಾಷ್ಟ್ರೀಯ ಮಾನ್ಯತೆಯ ಪ್ರಯೋಜನಗಳೇನು?

  1. ಯೋಜನೆಯ ಅನುಷ್ಠಾನಕ್ಕೆ ಕಾಲ ಮಿತಿ ನಿಗದಿಯಾಗಲಿದೆ
  2. ಕಾಮಗಾರಿ ವೇಗ ಪಡೆಯಲಿದೆ
  3. ರಾಜ್ಯ ಸರ್ಕಾರದ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ
  4. ಕಾಮಗಾರಿಯ ವೇಗಕ್ಕೆ ಅನುಗುಣವಾಗಿ ಅನುದಾನ ಬಿಡುಗಡೆ ಆಗಲಿದೆ. 

ಮಹದಾಯಿ ಯೋಜನೆ
ಮಹದಾಯಿ ಯೋಜನೆಯ ಕುರಿತು ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೆಂದ್ರ ಸಿಂಗ್ ಶೇಖಾವತ್ ಅವರಿಗೆ ವಿಶೇಷ ಮನವಿ ಸಲ್ಲಿಸಲಾಯಿತು. ಮಹಾದಾಯಿ ಯೋಜನೆಯ ಅನುಮೋದನೆ ಕುರಿತು ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು. ಕೂಡಲೇ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು ಎಂದು ಗೋವಿಂದ ಕಾರಜೋಳ ತಿಳಿಸಿದರು.
ಮೇಕೆದಾಟು ಯೋಜನೆ
ಈ ಭೇಟಿಯ ಸಂದರ್ಭದಲ್ಲಿ ಮೇಕೆದಾಟು ಯೋಜನೆಯ ಕುರಿತು ವಿವರವಾಗಿ ಪ್ರಸ್ತಾಪಿಸಲಾಯಿತು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಶುಕ್ರವಾರದ (ಜೂನ್-17) ಬದಲಿಗೆ ಇದೇ ತಿಂಗಳ 23ರಂದು ಚರ್ಚೆಯಾಗಲಿದೆ ಎಂದು ಅವರು ತಿಳಿಸಿದರು.
ಕೃಷ್ಣ ಮೇಲ್ದಂಡೆ ಯೋಜನೆ
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ 13 ಸಾವಿರ ಕೋಟಿ ರೂಪಾಯಿಗಳನ್ನು ಈಗಾಗಲೇ ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್ ನಲ್ಲಿ ಕೃಷ್ಣಾ ಜಲ ವಿವಾದ ಎರಡನೇ ನ್ಯಾಯಾಧೀಕರಣದ ಐತೀರ್ಪನ್ನು ಗೆಜೆಟ್ನಲ್ಲಿ ಪ್ರಕಟಿಸುವ ಮೂಲಕ ಕರ್ನಾಟಕದ ಈ ಪ್ರತಿಷ್ಠಿತ ಯೋಜನೆಗೆ ನ್ಯಾಯ ಒದಗಿಸಬೇಕೆಂದು ವಿನಂತಿಸಲಾಯಿತು.

ನಿಮಗೆ ಏನು ಅನ್ನಿಸ್ತು?
1 ವೋಟ್