ಗೆಳೆಯ ಶಿವಕುಮಾರ್‌ ಶರ್ಮಾ ಅಂತಿಮ ಯಾತ್ರೆಗೆ ಹೆಗಲಾದ ಝಾಕಿರ್ ಹುಸೇನ್

  • 'ಧರ್ಮಕ್ಕಿಂತಲೂ ಮಿಗಿಲಾದುದು ಪ್ರೀತಿ ಮತ್ತು ಗೆಳೆತನ' ನೆಟ್ಟಿಗರಿಂದ ವ್ಯಾಪಕ ಶ್ಲಾಘನೆ
  • ಅಂತಿಮ ವಿಧಿವಿಧಾನದ ಕೊನೆಯವರೆಗೂ ನಿಂತಿದ್ದ 'ಜುಗಲ್ ಬಂದಿʼ ಸಾಥಿ

ಭಾರತದ ಖ್ಯಾತ ಸಂಗೀತ ಮಾಂತ್ರಿಕ ಸಂತೂರ್‌ ವಾದಕ ಪಂಡಿತ್‌ ಶಿವಕುಮಾರ್‌ ಶರ್ಮಾ ಅವರ ಅಂತಿಮಯಾತ್ರೆಯಲ್ಲಿ ಭಾಗಿಯಾಗಿದ್ದ 'ಜುಗಲ್ ಬಂದಿʼ ಪಾರ್ಟ್‌ನರ್ ಆಗಿದ್ದ ಖ್ಯಾತ ತಬಲವಾದಕ ಸಾಮ್ರಾಟ್ ಝಾಕಿರ್ ಹುಸೇನ್ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಂಡಿತ್‌ ಶಿವಕುಮಾರ್‌ ಶರ್ಮಾ ಅವರು ಮೇ 10ರಂದು ನಿಧನರಾಗಿದ್ದರು. ಅವರ ಮೃತದೇಹದ ಅಂತಿಮ ಯಾತ್ರೆಯ ವೇಳೆ ಹೆಗಲಾದ ಝಾಕಿರ್ ಹುಸೇನ್ ಅವರ ಫೋಟೋ ಸದ್ಯ ನೆಟ್ಟಿಗರ ಮನಸ್ಸು ಕಲಕಿದೆ. ಸುಮಾರು ಐದು ದಶಕಗಳ ಕಾಲ ಶರ್ಮಾ ಅವರೊಂದಿಗೆ ತಬಲ ವಾದಕ ಝಾಕಿರ್ ಹುಸೇನ್  ಒಡನಾಟ ಮತ್ತು ಸ್ನೇಹ ಹೊಂದಿದ್ದರು.

ಪಂಡಿತ್ ಶಿವಕುಮಾರ್ ಶರ್ಮಾ ಅವರ ನಿಧನವು ಸಂಗೀತ ಕ್ಷೇತ್ರದ ಒಂದು ಯುಗವನ್ನೇ ಕೊನೆಗೊಳಿಸಿದೆ. ಶರ್ಮಾರ ನಿಧನಕ್ಕೆ ಶ್ರದ್ಧಾಂಜಲಿಗಳು ಬಂದವಾದರೂ ಝಾಕಿರ್ ಹುಸೇನ್ ಅವರ ಫೋಟೋ ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ಜನರು ಹಂಚಿಕೊಂಡು 'ಇದು ನಮ್ಮ ಸೌಹಾರ್ದ ಭಾರತ. ಧರ್ಮಕ್ಕಿಂತಲೂ ಮಿಗಿಲಾದುದು ಪ್ರೀತಿ ಮತ್ತು ಗೆಳೆತನ' ಎಂದು ಬರೆಯುತ್ತಿದ್ದಾರೆ.

 

ಶರ್ಮಾ ಅವರ ಪಾರ್ಥಿವ ಶರೀರಕ್ಕೆ ಹೆಗಲಾದ ಮತ್ತು ಉರಿಯುವ ಚಿತಾಗಾರದ ಬಳಿ ಏಕಾಂಗಿಯಾಗಿ ನಿಂತಿರುವ ಫೋಟೋ ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುತ್ತಿರುವವರಿಗೆ ಉತ್ತಮ ಸಂದೇಶ ನೀಡುವಂತಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

"ಉಸ್ತಾದ್ ಝಾಕಿರ್ ಹುಸೇನ್ ಅವರು ಹಲವು ದಶಕಗಳ ಸ್ನೇಹಿತ ಪಂಡಿತ್ ಶಿವಕುಮಾರ್ ಶರ್ಮಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅವರನ್ನು ಕಳುಹಿಸಿಕೊಟ್ಟಿದ್ದಾರೆ. ಹಲವಾರು ವೇದಿಕೆಯಲ್ಲಿ ಇಬ್ಬರು 'ಮ್ಯಾಜಿಕ್' ಅನ್ನೇ ಸೃಷ್ಟಿಸಿದ್ದರು. ಇಂತಹ ಒಂದು ಅರ್ಥಪೂರ್ಣವಾದ ಫೋಟೋವನ್ನು ನಾನು ನೋಡಿಲ್ಲ" ಎಂದು ಸಂಯುಕ್ತ ಚೌಧರಿ ಎಂಬವರು ಬರೆದುಕೊಂಡಿದ್ದಾರೆ. ಉಸ್ತಾದ್ ಝಾಕಿರ್ ಹುಸೇನ್ ಅವರ ಫೋಟೋವನ್ನು ಮೆಚ್ಚಿ, ಹಲವರು ರೀಟ್ವೀಟ್ ಮಾಡುತ್ತಲೇ ಇದ್ದಾರೆ.

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್, ನಟಿ ಶಬಾನಾ ಅಝ್ಮಿ,, ಗೀತ ರಚನೆಕಾರ ಜಾವೇದ್ ಅಖ್ತರ್, ಸಂಗೀತ ಸಂಯೋಜಕ ಜತಿನ್-ಲಲಿತ್ ಮತ್ತು ಗಾಯಕಿ ಇಲಾ ಅರುಣ್ ಸೇರಿದಂತೆ ಹಲವು ಖ್ಯಾತನಾಮರು ಪಂಡಿತ್ ಶಿವಕುಮಾರ್ ಶರ್ಮಾ ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು.

ನಿಮಗೆ ಏನು ಅನ್ನಿಸ್ತು?
2 ವೋಟ್