
- ಉತ್ತರ ಪ್ರದೇಶದ ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ಭೇಟಿಯಾಗಿ ರಕ್ಷಣೆಗೆ ಕೋರಿಕೆ
- ಸ್ವಾತಿಯಾಗಿ ಬದಲಾದ ಇರಾಮ್ ಝೈದಿ ಮತ್ತು ಸುಮನ್ ಆದ ಶಹನಾಝ್
ಉತ್ತರ ಪ್ರದೇಶದ ಬರೇಲಿಯಲ್ಲಿ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಹುಡುಗರನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಮದುವೆಯಾದ ಬಳಿಕ ರಕ್ಷಣೆ ನೀಡುವಂತೆ ಕೋರಿ ಪೊಲೀಸ್ ವರಿಷ್ಠಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಿದ್ದು, ರಕ್ಷಣೆಯ ಅಭಯ ನೀಡಿದ್ದಾರೆ.
ಮದಿನಾಥದಲ್ಲಿರುವ ಅಗಸ್ತ ಮುನಿ ಆಶ್ರಮದ ಪುರೋಹಿತ ಕೆಕೆ ಶಂಖಧರ್ ಎಂಬವರು ಹಿಂದೂ ಸಂಪ್ರದಾಯದಂತೆ ವಿವಾಹವನ್ನು ನೆರವೇರಿಸಿದರು. ಇಬ್ಬರೂ ಹುಡುಗಿಯರು ಹಿಂದೂ ಹೆಸರುಗಳನ್ನು ಅಳವಡಿಸಿಕೊಂಡಿದ್ದು, ಇರಾಮ್ ಝೈದಿ ಎಂಬಾಕೆ ಈಗ ಸ್ವಾತಿಯಾಗಿ ಬದಲಾದರೆ, ಸುಮನ್ ಆಗಿ ಶಹನಾಝ್ ಎಂಬಾಕೆ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ.
ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಮುನ್ನ ಇಬ್ಬರನ್ನೂ 'ಶುದ್ಧೀಕರಿಸಿದ' ಪುರೋಹಿತ ಕೆಕೆ ಶಂಖಧರ್, ನಂತರ ಅವರ ಹೆಸರನ್ನು ಬದಲಾಯಿಸಿದರು. ಆ ಬಳಿಕ ಇಬ್ಬರ ಮದುವೆ ಸಮಾರಂಭ ನಡೆಸಲಾಯಿತು. ಇರಾಮ್ ಝೈದಿ ಅವರು ಆದೇಶ್ ಕುಮಾರ್ ಅವರನ್ನು ವಿವಾಹವಾದರೆ ಮತ್ತು ಶಹನಾಝ್ ಅವರು ಅಜಯ್ ಎಂಬ ಯುವಕನನ್ನು ವಿವಾಹವಾದರು.
"ನಮಗೆ ಹಿಂದೂ ಧರ್ಮದಲ್ಲಿ ದೃಢ ನಂಬಿಕೆ ಇದೆ. ಮುಸ್ಲಿಂ ಮಹಿಳೆಯರಿಗೆ ಸಮಾಜದಲ್ಲಿ ಸಾಕಷ್ಟು ಗೌರವ ಸಿಗದ ಕಾರಣ ಇಸ್ಲಾಂ ಧರ್ಮ ತೊರೆದಿದ್ದೇವೆ" ಎಂದು ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ತೇಲುವ 'ಕೂರ್ಮ ಸಿಟಿ' ನಿರ್ಮಿಸಲು ಮುಂದಾದ ಅರಬರು
ಮದುವೆಯಾದ ಕೆಲವೇ ಗಂಟೆಗಳ ಬಳಿಕ, ಇಬ್ಬರಲ್ಲಿ ಒಬ್ಬಾಕೆ ರಕ್ಷಣೆ ಕೋರಿ ಬರೇಲಿಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ, "ತನಗಾಗಿ ಸಮಾಧಿ ಸಿದ್ಧಪಡಿಸಿರುವ ಪೋಷಕರು ಮತ್ತು ಸಹೋದರನಿಂದ ಜೀವ ಬೆದರಿಕೆ ಇದೆ. ಆದ್ದರಿಂದ ರಕ್ಷಣೆ ನೀಡಿ" ಎಂದು ಕೋರಿದ್ದಾರೆ. ಆಕೆಯ ಮನವಿಯ ಹಿನ್ನೆಲೆಯಲ್ಲಿ ಸಂಪೂರ್ಣ ಭದ್ರತೆ ನೀಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.