
- ಭಾರೀ ಮಳೆಯಿಂದ ಸಂಕಷ್ಟದಲ್ಲಿ ಸಿಲುಕಿದ 650 ಗ್ರಾಮಗಳ 8.43 ಲಕ್ಷ ಮಂದಿ
- ಲಖನೌ ಸೇರಿ ಅನೇಕ ಜಿಲ್ಲೆಗಳ ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ
ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಸುಮಾರು 900 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜಲಾವೃತಗೊಂಡಿವೆ.
ರಾಜ್ಯದ ಏಳು ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಸೋಮವಾರ (ಅ. 10) ತಡರಾತ್ರಿಯವರೆಗೆ 12 ಮಂದಿ ಮೃತಪಟ್ಟಿದ್ದಾರೆ.
“ಪ್ರವಾಹದಿಂದ 16 ಜಿಲ್ಲೆಗಳ 650 ಗ್ರಾಮಗಳ ಸುಮಾರು 8.43 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈಲು, ಬಸ್ ಸಂಚಾರಕ್ಕೆ ತೊಡಕಾಗಿದೆ” ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಆಯುಕ್ತ ಪ್ರಭುನಾಥ್ ಸಿಂಗ್ ಹೇಳಿದ್ದಾರೆ.
ನಿರಂತರ ಮಳೆಯಿಂದ ಮನೆಗಳ ಗೋಡೆ ಕುಸಿದು ಐದು ಮಂದಿ, ಮೂವರು ಹಾವು ಕಡಿತದಿಂದ, ಝಾನ್ಸಿಯಲ್ಲಿ ಸೋಮವಾರ ಮಧ್ಯಾಹ್ನದ ನಂತರ ಸಿಡಿಲು ಬಡಿದು ಇಬ್ಬರು ಮತ್ತು ನೀರಿನಲ್ಲಿ ಮುಳುಗಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಲ್ರಾಮ್ಪುರದಲ್ಲಿ ಇಬ್ಬರು ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಕಾಣೆಯಾಗಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನೆಯ ಗೋಡೆ ಕುಸಿದು ಇಬ್ಬರು ಮತ್ತು ಹಾವು ಕಡಿತದಿಂದ ಒಬ್ಬರು ಪ್ರತಾಪಗಢದಲ್ಲಿ ಸಾವನ್ನಪ್ಪಿದ್ದಾರೆ. ಅಮೇಠಿಯಲ್ಲೂ ಒಬ್ಬರು ಮನೆಯ ಗೋಡೆ ಕುಸಿತ ಮತ್ತು ಮತ್ತೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಂಬೇಡ್ಕರ್ ನಗರದಲ್ಲಿ ಸಿಡಿಲು ಬಡಿದು ಒಬ್ಬರು ಕೊನೆಯುಸಿರೆಳೆದಿದ್ದಾರೆ.
ಹಾನಿ ಪರಿಹಾರಕ್ಕೆ ಸೂಚನೆ
ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.
ಜಲಾವೃತ ಪ್ರದೇಶಗಳಲ್ಲಿ ಸೂಕ್ತ ಪರಿಹಾರ ಕ್ರಮಗಳಿಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶ್ರೀಲಂಕಾ ನೌಕಾಪಡೆಯಿಂದ ನಿಯಮಿತ ದಾಳಿ; ಮೀನುಗಾರರ ಸಂಘದಿಂದ ಪ್ರತಿಭಟನೆ
ಮಳೆಯಿಂದಾಗಿ ಶಾಲೆಗಳಿಗೆ ರಜೆ
ಮಂಗಳವಾರವೂ (ಅ. 11) ಮಳೆ ಮುಂದುವರಿಯುವ ಹಿನ್ನೆಲೆ ರಾಜಧಾನಿ ಲಖನೌ ಸೇರಿದಂತೆ ಹಲವು ಜಿಲ್ಲೆಗಳ ಎಲ್ಲ ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಲಖನೌದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂರ್ಯಪಾಲ್ ಗಂಗ್ವಾರ್ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.
ಇದಕ್ಕೂ ಮುನ್ನ ಭಾನುವಾರ (ಅ.9) ಲಖನೌ, ನೋಯ್ಡಾ, ಗಾಜಿಯಾಬಾದ್, ಆಗ್ರಾ, ಮೀರತ್, ಅಲಿಗಢ್, ಮಥುರಾ, ಕಾನ್ಪುರ, ಇಟಾಹ್, ಮೈನ್ಪುರಿ ಮತ್ತು ಫಿರೋಜಾಬಾದ್ನ ಜಿಲ್ಲಾ ಅಧಿಕಾರಿಗಳು ಸೋಮವಾರ ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದರು. ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಸೋಮವಾರವೂ ಭಾರೀ ಮಳೆ ಸುರಿದಿದೆ.