
- ಅನ್ಯ ಧರ್ಮದ ಯುವಕ- ಯುವತಿ ನಡುವಿನ ಪ್ರೀತಿ ಹತ್ಯೆಗೆ ಕಾರಣ ಎಂಬ ಶಂಕೆ
- ಪರಸ್ಪರರ ಮೇಲೆ ದೂರು ದಾಖಲಿಸಿಕೊಂಡ ಹಿಂದೂ ಮತ್ತು ಮುಸ್ಲಿಂ ಕುಟುಂಬ
ಪಶ್ಚಿಮ ಉತ್ತರ ಪ್ರದೇಶದ ಗ್ರಾಮದಲ್ಲಿ 10 ಗಂಟೆಗಳ ಅಂತರದಲ್ಲಿ ಕೋಮು ವೈಷಮ್ಯದ ಪರಿಸ್ಥಿತಿ ನಿರ್ಮಾಣವಾಗಿದೆ. ಅನ್ಯ ಧರ್ಮಗಳ ನಡುವಿನ ದ್ವೇಷದಿಂದ ಯುವಕ ಮತ್ತು ಯುವತಿ ಬಲಿಯಾಗಿರುವ ಪ್ರಕರಣದಲ್ಲಿ ಎರಡೂ ಕುಟುಂಬಗಳು ಪರಸ್ಪರರ ಮೇಲೆ ದೂರು ನೀಡಿದ್ದಾರೆ.
ರಾಂಪುರ ಮಣಿಹರನ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಬುಧವಾರ (ನ. 2) ಮುಸ್ಲಿಂ ಕುಟುಂಬದ ಜಿಯಾ- ಉರ್- ರೆಹಮಾನ್ ಎಂಬ ಯುವಕ ಹಿಂದೂ ಯುವತಿ ಸೈನಿ ಅವರ ಮನೆಯಲ್ಲಿ ಥಳಿತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಘಟನೆಯಿಂದ ಆಘಾತಗೊಂಡು ಸೈನಿ ಅವರ ಪುತ್ರಿ 19 ವರ್ಷದ ತನು ಎಂಬ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿತ್ತು. ಇದೀಗ, ಅನ್ಯ ಧರ್ಮದ ಯುವಕ- ಯುವತಿಯ ಪ್ರೀತಿ ಹತ್ಯೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹಿಂದೂ ಮತ್ತು ಮುಸ್ಲಿಂ ಕುಟುಂಬ ಪರಸ್ಪರರ ಮೇಲೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ.
ಎರಡು ಧರ್ಮಗಳ ನಡುವೆ ವೈಷಮ್ಯದಿಂದ ಕೊಲೆ ಸಂಭವಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಎರಡೂ ಕುಟುಂಬಗಳ ನಿವಾಸಗಳ ಹೊರಗೆ ಕಾವಲು ಪಡೆ ನಿಯೋಜಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಸ್ಲಿಮರ ಪ್ರಾಬಲ್ಯವಿರುವ ಗ್ರಾಮದಲ್ಲಿ ಕಿರಾಣಿ ಅಂಗಡಿಯ ಮಾಲೀಕನಾಗಿರುವ ಮೃತ ಯುವಕನ ತಂದೆ ಮೊಹಮ್ಮದ್ ಅಯೂಬ್, "ಪುತ್ರನ ಮೇಲೆ ಏಕೆ ದಾಳಿಯಾಯಿತು ಎಂಬುದು ತಿಳಿದಿಲ್ಲ" ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
“ಬುಧವಾರ ಬೆಳಗ್ಗೆ 2 ಗಂಟೆಗೆ ನನ್ನ ಪುತ್ರನಿಗೆ ತೀವ್ರವಾಗಿ ಗಾಯವಾಗಿರುವುದಾಗಿ ಕರೆ ಬಂತು. ನಾನು ಸ್ಥಳಕ್ಕೆ (ಸೈನಿ ಮನೆ) ಧಾವಿಸಿ ಜಿಯಾನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದೆ. ಆತನ ಸ್ಥಿತಿ ಗಂಭೀರವಾಗಿರುವ ಕಾರಣ ಚಿಕಿತ್ಸೆ ನೀಡಲು ನಿರಾಕರಿಸಿದರು. ಬಳಿಕ ಡೆಹ್ರಾಡೂನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಜಿಯಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು” ಎಂದು ಮೊಹಮ್ಮದ್ ಅಯೂಬ್ ಹೇಳಿದ್ದಾರೆ.
ತನು ಅವರ ತಾಯಿ ಸುನೇಶ್ ದೇವಿ ಸೈನಿ ಅವರು ಅಯೂಬ್ ಅಥವಾ ಅವನನ್ನು ಹೊಡೆದವರು ಯಾರು ಎಂದು ತಿಳಿದಿಲ್ಲ ಎಂದು ಹೇಳುತ್ತಾರೆ.
“ಮಂಗಳವಾರ ತಡರಾತ್ರಿ ಸುಮಾರಿಗೆ ನಮ್ಮ ಮನೆಯ ಅಂಗಳದಿಂದ ಜೋರಾಗಿ ಸದ್ದು ಕೇಳಿ ಬಂತು. ನನ್ನ ಪತಿ ಮತ್ತು ನಾನು ಹೊರಗೆ ಹೋಗಿ ನೋಡಿದಾಗ ಒಬ್ಬ ಯುವಕನನ್ನು ನಾಲ್ಕೈದು ಮಂದಿ ಅಪರಿಚಿತರು ಲಾಠಿ ಮತ್ತು ಕಬ್ಬಿಣದ ರಾಡ್ಗಳಿಂದ ಥಳಿಸುತ್ತಿರುವುದನ್ನು ನೋಡಿದೆವು. ಆತನನ್ನು ರಕ್ಷಿಸಲು ಪ್ರಯತ್ನಿಸಿದೆವು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆವು. ಪೊಲೀಸರು ಅಲ್ಲಿಗೆ ಧಾವಿಸಿ ಯುವಕನನ್ನು ಕರೆದೊಯ್ದರು. ಬಳಿಕ ಮಹಿಳಾ ಪೇದೆಗಳು ಬಂದು ಯುವಕನನ್ನು ಹತ್ಯೆ ಮಾಡಿರುವುದಾಗಿ ನಮ್ಮನ್ನು ದೂಷಿಸಿದರು” ಎಂದು ಮೃತ ಯುವತಿ ತನು ಅವರ ತಾಯಿ ಸುನೇಶ್ ದೇವಿ ಸೈನಿ ಹೇಳಿದ್ದಾರೆ.
ತಮ್ಮ ಮನೆಗೆ ಜಿಯಾ ಅವರು ಬರುವುದನ್ನು ನೋಡಿ ಕಳ್ಳ ಎಂದು ಭಾವಿಸಿ ದಾಳಿಕೋರರು ಥಳಿಸಿದ್ದಾರೆ ಎಂದು ತನು ಅವರ ಸಹೋದರ ಹೇಳಿದ್ದಾರೆ.
“ನಮ್ಮ ಮನೆಯ ಬಳಿ ಬಂದ ಜಿಯಾ ಅವರನ್ನು ಕಳ್ಳ ಎಂದು ಭಾವಿಸಿ ಮನೆಯ ಪಕ್ಕದ ಗ್ರಂಥಾಲಯದಲ್ಲಿ ಓದುತ್ತಿದ್ದ ಆರು ವಿದ್ಯಾರ್ಥಿಗಳು ಅಲ್ಲಿಗೆ ಧಾವಿಸಿದ್ದಾರೆ. ಬಳಿಕ ಯುವಕನನ್ನು ಥಳಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾವು ಜಿಯಾ ಅವರನ್ನು ಉಳಿಸಲು ಪ್ರಯತ್ನಿಸಿದೆವು. ಪೊಲೀಸರಿಗೆ ಮಾಹಿತಿ ನೀಡಿದೆವು” ಎಂದು ಅವರು ಹೇಳಿದ್ದಾರೆ.
ಜಿಯಾ ಅವರ ಸಾವಿನ ನಂತರ ತಂದೆ ಸೈನಿ ಅವರನ್ನು ಪೊಲೀಸರು ಕರೆದೊಯ್ದಿದ್ದಾರೆ. ಇದರಿಂದ ಆಘಾತಗೊಂಡ ತನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರಾಂಪುರ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ಅಯೂಬ್ ಸೈನಿ ಕುಟುಂಬದ ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ತನು ಅವರ ತಂದೆ ಜನೇಶ್ವರ್ ಸೈನಿ (52), ಅವರ ಹಿರಿಯ ಸಹೋದರ ಮನೇಶ್ವರ್ (55), ಇಬ್ಬರು ಸೋದರ ಸಂಬಂಧಿಗಳಾದ ಪ್ರಿಯಾಂಶು (22) ಮತ್ತು ಶಿವಂ ಸೈನಿ (20) ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಅಭಿಮನ್ಯು ಮಾಂಗ್ಲಿಕ್ ಹೇಳಿದ್ದಾರೆ.
ಜಿಯಾ ಮತ್ತು ತನು ಒಂದೇ ಶಾಲೆಯಲ್ಲಿ ಓದಿದ್ದರು. ಅವರಿಬ್ಬರಿಗೂ ಪರಿಚಯವಿತ್ತು. ತನು ಸಾವು ಆತ್ಮಹತ್ಯೆಯಿಂದ ಸಂಭವಿಸಿಲ್ಲ ಎಂದು ನೆರೆಹೊರೆಯ ವ್ಯಕ್ತಿಯೊಬ್ಬರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರಾಖಂಡ | ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಆರಂಭಿಸಲಿರುವ ಎರಡನೇ ರಾಜ್ಯ; ಮುಂದಿನ ವರ್ಷದಿಂದ ಜಾರಿ
ಮಧ್ಯರಾತ್ರಿ ವೇಳೆ ಜಿಯಾ ಏಕೆ ತನು ಮನೆಗೆ ಹೋಗಿದ್ದ ಎನ್ನುವ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
“ತನು ಅವರ ಮನೆಯ ಒಳಗಿನಿಂದ ಬಾಗಿಲು ತೆರೆಯದೆ ಜಿಯಾ ಒಳಗೆ ಪ್ರವೇಶಿಸಲು ಸಾಧ್ಯವಿರಲಿಲ್ಲ” ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.