ಉತ್ತರ ಪ್ರದೇಶ | ದಲಿತ ಬಾಲಕಿ ಮೇಲೆ 'ಮಾರ್ಷಲ್ ಆರ್ಟ್ಸ್' ತರಬೇತುದಾರನಿಂದ ಅತ್ಯಾಚಾರ

  • ಮಳೆ ಬಂದಿದ್ದರಿಂದ ಮನೆಗೆ ಬಿಡುವ ದಾರಿ ಮಧ್ಯ ಅತ್ಯಾಚಾರ
  • ಮಂಡುವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು

ದಲಿತ ಬಾಲಕಿಯ ಮೇಲೆ ಮಾರ್ಷಲ್ ಆರ್ಟ್ಸ್‌ ತರಬೇತುದಾರ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಬನಾರಸ್ ಲೋಕೋಮೋಟಿವ್ ವರ್ಕ್ಸ್ (ಬಿಎಲ್‌ಡಬ್ಲ್ಯು) ಕ್ಯಾಂಪಸ್‌ನಲ್ಲಿ ನಡೆದಿದೆ.

ಕಾಂಡ್ವಾ ನಿವಾಸಿ ವಿನೋದ್ ಈ ಕೃತ್ಯ ಎಸಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 376, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಮಂಡುವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸೋನ್‌ಭದ್ರ ಜಿಲ್ಲೆಯ ಬಾಲಕಿ ವಾರಣಾಸಿಯ ಮಂಡುವಾಡಿಯಲ್ಲಿ ಸ್ನೇಹಿತರೊಂದಿಗೆ ವಾಸವಿದ್ದಳು. ಆತ್ಮರಕ್ಷಣೆಗಾಗಿ ಕಾಂಡ್ವಾ ನಿವಾಸಿ ವಿನೋದ್ ಎಂಬವರಿಂದ ಒಂದು ತಿಂಗಳಿನಿಂದ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಳು.

ವಿನೋದ್ ಸೋಮವಾರ ಸಂಜೆ 6:30 ಕ್ಕೆ ಬಿಎಲ್‌ಡಬ್ಲ್ಯೂ  ಕ್ಯಾಂಪಸ್‌ನಲ್ಲಿ ಬಾಲಕಿ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳಿಗೆ ಮಾರ್ಷಲ್ ಆರ್ಟ್ಸ್ ಕಲಿಸುತ್ತಿದ್ದರು. ಅಷ್ಟರಲ್ಲಿ ಮಳೆ ಸುರಿಯಲಾರಂಭಿಸಿತು. ಆಗ ತರಬೇತುದಾರ ಇತರ ವಿದ್ಯಾರ್ಥಿಗಳನ್ನು ಮನೆಗೆ ಹೋಗುವಂತೆ ಹೇಳಿದ್ದಾನೆ. ಬಳಿಕ ಬಾಲಕಿಯನ್ನು ಮನೆಗೆ ಬಿಡುತ್ತೇನೆ ಎಂದು ಕರೆದೊಯ್ಯುವುದಾಗಿ ನಂಬಿಸಿ, ದಾರಿ ಮಧ್ಯೆ ಅತ್ಯಾಚಾರವೆಸಗಿದ್ದಾನೆ.

ಅತ್ಯಾಚಾರದ ನಂತರ ಬಾಲಕಿ ತುಂಬಾ ಭಯಪಟ್ಟಿದ್ದು, ಯಾರಿಗೂ ವಿಷಯ ತಿಳಿಸಿರಲಿಲ್ಲ. ಒಂದು ದಿನ ಕಳೆದ ಬಳಿಕ ವಕೀಲರನ್ನು ಸಂಪರ್ಕಿಸಿ ಮಂಡುವಾಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಎಫ್ಐಆರ್ ದಾಖಲಿಸಿದ್ದಾಳೆ.

ಈ ಸುದ್ದಿ ಓದಿದ್ದೀರಾ ? ಉತ್ತರ ಪ್ರದೇಶ | ದಲಿತ ಅಪ್ರಾಪ್ತೆ ಮೇಲೆ ಅತ್ಯಾಚಾರ ಸಜೀವ ದಹನಕ್ಕೆ ಯತ್ನ ಪ್ರಕರಣ; ಸಂತ್ರಸ್ತೆ ಸಾವು

ಬಿಎಲ್‌ಡಬ್ಲ್ಯೂ  ವಕ್ತಾರ ರಾಜೇಶ್ ಕುಮಾರ್ ಈ ಬಗ್ಗೆ  ಸುದ್ದಿಗಾರರೊಂದಿಗೆ ಮಾತನಾಡಿ, "ಬಿಎಲ್‌ಡಬ್ಲ್ಯೂ  ವತಿಯಿಂದ ಕ್ಯಾಂಪಸ್‌ನಲ್ಲಿ ಅಂಥ ಯಾವುದೇ ತರಬೇತಿ ಶಿಬಿರ ನಡೆಸುತ್ತಿಲ್ಲ. ಬಿಎಲ್‌ಡಬ್ಲ್ಯೂ  ಆಡಳಿತ ಮಂಡಳಿ ಘಟನೆಯ ಬಗ್ಗೆ ಗಮನ ಹರಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಹೊರಗಿನವರು ಬೆಳಗ್ಗೆ ವಾಯು ವಿಹಾರಕ್ಕೆ ಭೇಟಿ ನೀಡುತ್ತಾರೆ. ಘಟನೆ ನಡೆದಿರುವುದು ಸೂರ್ಯ ಸರೋವರದ ಬಳಿ. ಅಲ್ಲಿ ಹೊರಗಿನವರು ಸಂಜೆ ವ್ಯಾಯಾಮ ಮಾಡುತ್ತಾರೆ. ಸಂಸ್ಥೆಗೂ ಮಾರ್ಷಲ್ ಆರ್ಟ್ಸ್ ಕಲಿಸುತ್ತಿದ್ದ ವ್ಯಕ್ತಿಗೂ ಯಾವುದೇ ಸಂಬಂಧ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಮಾಹಿತಿ ಆಧರಿತ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್