ಉತ್ತರ ಪ್ರದೇಶ| ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ

  • ಕಬ್ಬಿನ ಗದ್ದೆಯ ನಡುವೆ ಪತ್ತೆಯಾಗಿತ್ತು ಮಹಿಳೆಯ ಮೃತದೇಹ
  • ಪೊಲೀಸರ ಪರಿಶೀಲನೆ, ಮರಣೋತ್ತರ ಪರೀಕ್ಷೆಗೆ ರವಾನೆ

ಕಬ್ಬಿನ ಗದ್ದೆಯಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೂರ್‌ನ ಚಂದಪುರದಲ್ಲಿ ನಡೆದಿದೆ.

ಜಾನುವಾರುಗಳಿಗೆ ಮೇವು ತರಲು ಹೊಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕಬ್ಬಿನ ಗದ್ದೆಗಳ ನಡುವೆ ಮೃತದೇಹ ಪತ್ತೆಯಾಗಿದೆ. ಕಕ್ರಾಲ ಗ್ರಾಮದ ನಿವಾಸಿ ಸುನೀಲ್ ಕುಮಾರ್ ಹರಿದ್ವಾರದಲ್ಲಿ ವಾಸವಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಅವನ ಕುಟುಂಬ ಕಕ್ರಾಲ ಗ್ರಾಮದಲ್ಲಿಯೇ ವಾಸವಾಗಿತ್ತು. ಆತನಿಗೆ ಇಬ್ಬರು ಪುತ್ರರಿದ್ದಾರೆ.

ಕುಟುಂಬಸ್ಥರು ಹೇಳುವಂತೆ, ಸುನೀಲ್ ಅವರ ಪತ್ನಿ ಕುಂಕುಮ (27) ಮಂಗಳವಾರ ಬೆಳಿಗ್ಗೆ ಜಾನುವಾರುಗಳಿಗೆ ಮೇವು ತರಲು ಹೊಲಕ್ಕೆ ಹೋಗಿದ್ದರು. ಮಧ್ಯಾಹ್ನವಾದರೂ ಮನೆಗೆ ಹಿಂತಿರುಗಿ ಬಾರದೇ ಇದ್ದುದರಿಂದ ಮನೆಯವರಲ್ಲಿ ಆತಂಕ ಉಂಟಾಗಿತ್ತು. ಬಳಿಕ ಆಕೆಯನ್ನು ಹುಡುಕಿಕೊಂಡು ಹೊಲದ ಕಡೆಗೆ ಹೊರಟಾಗ ಗ್ರಾಮದ ನಿವಾಸಿಯೊಬ್ಬರ ಕಬ್ಬಿನ ಗದ್ದೆಯಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಾಳೆ.

ಸ್ಥಳದಲ್ಲಿ ಗ್ರಾಮಸ್ಥರ ಗುಂಪು ಜಮಾಯಿಸಿತ್ತು. ಈ ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತ್ತು. ಶವ ಪತ್ತೆಯಾದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮೃತದೇಹದ ಸ್ಥಿತಿ ನೋಡಿದ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಅತ್ಯಾಚಾರ ನಡೆಸಿ ಬಳಿಕ ಕತ್ತು ಹಿಚುಕಿ ಕೊಲೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ?  ಉತ್ತರ ಪ್ರದೇಶ | ಬಲಿಷ್ಠ ಸಮುದಾಯದ ಬಾಲಕಿಯರಿಗಾಗಿ ದಲಿತ ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ ಶಿಕ್ಷಕರು

ಘಟನಾ ಸ್ಥಳಕ್ಕೆ ಸಿಒ ಸುನೀತಾ ದಹಿಯಾ, ಪೊಲೀಸ್ ಇನ್‌ಸ್ಟೆಕ್ಟರ್‌ ಕೃಷ್ಣ ಮುರಾರಿ ದೋಹ್ರಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸತ್ಯಾಂಶ ಹೊರಬರಲಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್