ಉತ್ತರ ಪ್ರದೇಶ| ಕೋಣೆಯಲ್ಲಿ ಕೂಡಿಹಾಕಿ ದಲಿತ ಯುವಕನಿಗೆ ಬೆಲ್ಟ್‌ನಿಂದ ಥಳಿತ

  • ಉದ್ಯೋಗ ಕೊಡಿಸಲು ಬೇಡಿಕೆ ಇಟ್ಟಿದ್ದ ಹಣ ನೀಡದಿದ್ದಕ್ಕೆ ಹಲ್ಲೆ
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ

ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇವೆ. ಉದ್ಯೋಗ ಅರಸಿ ದೆಹಲಿಗೆ ತೆರಳಿದ್ದ ದಲಿತ ಯುವಕನನ್ನು ಕೋಣೆಯಲ್ಲಿ ಕೂಡಿಹಾಕಿ ಬೆಲ್ಟ್ ಮತ್ತು ದೊಣ್ಣೆಯಿಂದ ಥಳಿಸಿರುವ ಘಟನೆ ನಡೆದಿದೆ.

ದೌರ್ಜನ್ಯಕ್ಕೆ ಒಳಗಾದ ದಲಿತ ಯುವಕ ಸಚಿತ್, ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಪೋತ್ರಿಹಾ ಗ್ರಾಮದವನು. ಯುವಕನನ್ನು ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ವ್ಯಕ್ತಿಯೊಬ್ಬ ಚಿತ್ರಿಕರಿಸಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಗನಿಗೆ ಥಳಿಸುವ ವಿಡಿಯೋ ನೋಡಿದ ಕುಟುಂಬಸ್ಥರು ಅಚಲಗಂಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಪೋಷಕರು ಎಸ್ಪಿಯನ್ನು ಭೇಟಿಯಾಗಿದ್ದಾರೆ.

ಉದ್ಯೋಗ ಕೊಡಿಸಲು ಹಣಕ್ಕೆ ಬೇಡಿಕೆ

“ನನ್ನ ಮಗ ಸಚಿನ್ ಐದು ತಿಂಗಳ ಹಿಂದೆ ಉದ್ಯೋಗ ಅರಸಿ ದೆಹಲಿಗೆ ಹೋಗಿದ್ದ. ದೆಹಲಿಯ ಆಜಾದ್ ನಗರ ಮೊಹಲ್ಲಾದಲ್ಲಿ ಬನಿಯಾ ಅಂಗಡಿಯಲ್ಲಿ ಡ್ರೈ ಫ್ರೂಟ್ಸ್ ವ್ಯಾಪಾರ ಮಾಡುತ್ತಿದ್ದ. ಪೋಟ್ರಿಹಾ ಗ್ರಾಮದ ಕೆಲವು ಯುವಕರು ದೆಹಲಿಯ ಮುಘಲ್ಪುರದಲ್ಲಿ ಮಕ್ಕಳ ಆಟಿಕೆ ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಯುವಕರು ಸಚಿನ್‌ಗೆ ಕಾರ್ಖಾನೆಯಲ್ಲಿ ಒಳ್ಳೆಯ ಸಂಬಳದ ಕೆಲಸ ಕೊಡಿಸುವುದಾಗಿ ಹೇಳಿ ಕೋಣೆಗೆ ಕರೆದಿದ್ದಾರೆ. ಬಳಿಕ ಸಚಿನ್‌ಗೆ ಯುವಕರು ಐವತ್ತು ಸಾವಿರ ರೂಪಾಯಿ ಕೇಳಿದ್ದರು. ಸಚಿನ್ ಹಣ ನೀಡದಿದ್ದಕ್ಕೆ ಯುವಕರು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದಾರೆ” ಎಂದು ಸಚಿನ್ ತಂದೆ ಕಮಲೇಶ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ₹600 ಕಳ್ಳತನ ಆರೋಪ; ಕಂಬಕ್ಕೆ ಕಟ್ಟಿ ದಲಿತ ಬಾಲಕನಿಗೆ ಥಳಿತ

ಕ್ರಮಕ್ಕೆ ಎಸ್ಪಿ ಸೂಚನೆ

ಆಗಸ್ಟ್  21ರಂದು ಕಮಲೇಶ್ ಅಚಲಗಂಜ್ ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಕಮಲೇಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಎಸ್ಪಿ ದಿನೇಶ್ ತ್ರಿಪಾಠಿ, ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಚಲಗಂಜ್ ಇನ್‌ಸ್ಪೆಕ್ಟರ್‌ಗೆ ಸೂಚಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180