ಉತ್ತರ ಪ್ರದೇಶ | ಬೈಕ್‌ಗೆ ಅಡ್ಡ ಬಂದ ಕಾರಣಕ್ಕೆ ದಲಿತ ಯುವಕನನ್ನು ಥಳಿಸಿ ಹತ್ಯೆ

Dalit Lives Matter
  • ಗಾಯಗೊಂಡಿದ್ದ ದಲಿತ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಸಾವು
  • ಪೊಲೀಸರ ಸಮ್ಮುಖದಲ್ಲಿ ಅಂತ್ಯಕ್ರಿಯೆ; ತಲೆಮರೆಸಿಕೊಂಡಿರುವ ಆರೋಪಿಗಳು

ಬೈಕ್‌ಗೆ ಅಡ್ಡಬಂದ ಕಾರಣಕ್ಕೆ ದಲಿತ ಯುವಕನನ್ನು ಮಾರಣಾಂತಿಕವಾಗಿ ಥಳಿಸಿದ್ದು, ಹಲ್ಲೆಗೆ ಒಳಗಾದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307, 302 ಮತ್ತು ಎಸ್ಸಿ–ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಮೃತ ಯುವಕ ಡಿಯೋರಿಯಾ ಜಿಲ್ಲೆಯ ಸುರೌಲಿ ಪ್ರದೇಶದ ಜಡ್ಡು ಪರಾಸಿಯಾ ಗ್ರಾಮದ ನಿವಾಸಿ ನಾಗಿನಾ ಪ್ರಸಾದ್ ಎಂಬುವರ ಪುತ್ರ. ಕೂಲಿ ಕಾರ್ಮಿಕನಾಗಿರುವ ನಗೀನಾ ಪ್ರಸಾದ್ ಗ್ರಾಮದ ಪಕ್ಕದಲ್ಲಿರುವ ಖಜೂರಿ ತಿವಾರಿ ಬಳಿ ಧೀಮಾ ಯಾದವ್ ಅವರ ಇಟ್ಟಿಗೆ ಗೂಡಿನಲ್ಲಿ ಇಡೀ ಕುಟುಂಬದೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದಾರೆ.

ಇಟ್ಟಿಗೆ ಗೂಡಿನಿಂದ ಸ್ವಲ್ಪ ದೂರದಲ್ಲಿ ಹೋಗುತ್ತಿದ್ದ ವೇಳೆ ಗ್ರಾಮದ ಹಿರಿಯ ಉಗ್ರಸೇನ್ ಯಾದವ್ ಎಂಬಾತನ ಬೈಕ್‌ಗೆ ನಾಗಿನಾ ಪ್ರಸಾದ್ ಪುತ್ರ ಅಡ್ಡ ಹೋಗಿದ್ದಾನೆ. ಈ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಿಂದ ಬಿದ್ದು ಉಗ್ರಸೇನ್ ಯಾದವ್‌ನ ಕಾಲಿಗೆ ಪೆಟ್ಟಾಗಿತ್ತು. ಈ ಅಪಘಾತದ ನಂತರ, ಭಯಗೊಂಡಿದ್ದ ನಾಗಿನಾ ಪ್ರಸಾದ್ ಪುತ್ರ ಇಟ್ಟಿಗೆ ಗೂಡಿಗೆ ಮರಳಿದ್ದ.

ಸ್ವಲ್ಪ ಸಮಯದ ನಂತರ ಗ್ರಾಮದ ಕೆಲ ಯುವಕರು ದೊಣ್ಣೆ ಹಿಡಿದುಕೊಂಡು ಇಟ್ಟಿಗೆ ಗೂಡಿಗೆ ಬಂದು ದಲಿತ ಯುವಕನಿಗೆ ಮನಬಂದಂತೆ ಥಳಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಅಲ್ಲಿಂದ ಅವರೆಲ್ಲರೂ ಪರಾರಿಯಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಗಾಯಾಳುವನ್ನು ಭಾಲುವಾನಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಸ್ಥಿತಿ ಗಂಭೀರವಾದ ಕಾರಣ, ವೈದ್ಯರು ಯುವಕನನ್ನು ಮಹರ್ಷಿ ದೇವ್ರಹಾ ಬಾಬಾ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದರು. ಅಲ್ಲಿಯೂ ಪರಿಸ್ಥಿತಿಯ ಗಂಭೀರತೆ ಅರಿತ ವೈದ್ಯರು ಗಾಯಾಳುವನ್ನು ಗೋರಖ್ಪುರ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿಯೇ ಯುವಕ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯ ಬಳಿಕ ಪೊಲೀಸರ ಸಮ್ಮುಖದಲ್ಲಿ ಮೃತ ದೇಹವನ್ನು ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ತ್ರಿಪುರಾ | ಪ್ರಚಾರ ನಿರತ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಬೆಂಬಲಿಗರಿಂದ ಹಲ್ಲೆ

ಈ ಬಗ್ಗೆ ಮದನಪುರ ಪೊಲೀಸ್ ಠಾಣೆ ಪ್ರಭಾರಿ ಮುಖೇಶ್ ಮಿಶ್ರಾ ಸುದ್ದಿಗಾರರೊಂದಿಗೆ ಮಾತನಾಡಿ, “ದಲಿತ ಯುವಕನಿಗೆ ಇಟ್ಟಿಗೆ ಗೂಡಿನಲ್ಲಿ ಕೆಲವರು ಥಳಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ. ಗುಜೇಸರ್ ಯಾದವ್, ರಾಮ್ಹನ್ಸ್ ಯಾದವ್, ಶೈಲೇಶ್ ಯಾದವ್, ಶ್ರೀರಾಮ್ ಯಾದವ್, ರಾಮಪ್ರವೇಶ ಯಾದವ್ ಮತ್ತು ರಾಜು ಯಾದವ್ ವಿರುದ್ಧ 302, 307 ಮತ್ತು ಎಸ್ಸಿ - ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯವೇ ಆರೋಪಿಗಳನ್ನು ಬಂಧಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app