
- ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿರುವ ಶಂಕೆ
- ಮೊದಲ ಮಹಡಿಯಲ್ಲಿದ್ದ ಮಾಲೀಕರ ಮನೆಗೂ ಬೆಂಕಿ
ಉತ್ತರ ಪ್ರದೇಶದ ಫಿರೋಜಾಬಾದ್ನ ಎಲೆಕ್ಟ್ರಾನಿಕ್ಸ್ ಮತ್ತು ಪೀಠೋಪಕರಣ ಮಳಿಗೆಯಲ್ಲಿ ಮಂಗಳವಾರ (ನ.29) ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ.
ಪೀಠೋಪಕರಣ ಮಳಿಗೆ ನೆಲಮಹಡಿಯಲ್ಲಿದೆ. ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಮಳಿಗೆ ಮಾತ್ರವಲ್ಲದೆ ಅದೇ ಕಟ್ಟಡದಲ್ಲಿ ಮೊದಲ ಮಹಡಿಯಲ್ಲಿದ್ದ ಮಾಲೀಕರ ನಿವಾಸವೂ ಬೆಂಕಿಗೆ ತುತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಸೇರಿ ನಾಲ್ಕು ನಗರಗಳಲ್ಲಿ ಡಿಸೆಂಬರ್ 1ರಿಂದ ಡಿಜಿಟಲ್ ರೂಪಾಯಿ ಲಭ್ಯ
ಆಗ್ರಾ, ಮೈನ್ಪುರಿ, ಇಟಾಹ್ ಮತ್ತು ಫಿರೋಜಾಬಾದ್ನಿಂದ 18 ಅಗ್ನಿಶಾಮಕ ವಾಹನಗಳು ಮತ್ತು 12 ಪೊಲೀಸ್ ಠಾಣೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುಮಾರು ಎರಡೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ತಿವಾರಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜೀವಹಾನಿಗೆ ಸಂತಾಪ ಸೂಚಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.