ಉತ್ತರ ಪ್ರದೇಶ | ದಲಿತ ವಿದ್ಯಾರ್ಥಿಯನ್ನು 18 ಗಂಟೆ ಶೌಚಾಲಯದಲ್ಲಿ ಕೂಡಿ ಹಾಕಿದ ಶಿಕ್ಷಕ

  • ಉತ್ತರ ಪ್ರದೇಶದ ಔರೈಯಾದ ಬಿದುನಾ ತಾಲೂಕಿನ ಪಿಪ್ರೌಲಿ ಶಿವ ಗ್ರಾಮದಲ್ಲಿ ಘಟನೆ
  • ಆರೋಪಿ ಶಿಕ್ಷಕನ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು

ರಾಜಸ್ತಾನದಲ್ಲಿ ತಾನು ನೀರು ಕುಡಿಯುವ ಕೊಡವನ್ನು ಮುಟ್ಟಿ ನೀರು ಕುಡಿದ ಕಾರಣಕ್ಕೆ ಮೇಲ್ಜಾತಿಯ ಶಿಕ್ಷಕನೊಬ್ಬ ದಲಿತ ಬಾಲಕನನ್ನು ಥಳಿಸಿ ಕೊಂದಿರುವ ಘಟನೆ ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ದಲಿತ ವಿದ್ಯಾರ್ಥಿಯೊಬ್ಬನನ್ನು 18 ಗಂಟೆಗಳ ಕಾಲ ಶೌಚಾಲಯದಲ್ಲಿ ಕೂಡಿ ಹಾಕಿರುವ ಮತ್ತೊಂದು ಅಮಾನವಿಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಔರೈಯಾದ ಬಿದುನಾ ತಾಲೂಕಿನ ಪಿಪ್ರೌಲಿ ಶಿವ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಮರುದಿನ ಶಾಲೆಗೆ ಬಂದ ಶಿಕ್ಷಕರು ಶೌಚಾಲಯದ ಬೀಗ ತೆಗೆದಾಗ ಬಾಲಕ ಹೊರಗೆ ಬಂದಿದ್ದಾನೆ. ಮನೆಗೆ ತಲುಪಿದ ಬಳಿಕ ವಿದ್ಯಾರ್ಥಿ ತನಗಾದ ನೋವಿನ ಘಟನೆಯನ್ನು ಕುಟುಂಬಸ್ಥರ ಬಳಿ ವಿವರಿಸಿದ್ದಾನೆ.

ಪೂರ್ವ ದೂಜೆ ಗ್ರಾಮದ 11 ವರ್ಷದ ವಿದ್ಯಾರ್ಥಿಯು ಆ ಶಾಲೆಯಲ್ಲಿ 6 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಕಳೆದ ಆಗಸ್ಟ್ 5ರಂದು ತನ್ನ ಮಗ ಶಾಲೆಗೆ ಹೋಗಿದ್ದ, ಆದರೆ ಶಾಲೆ ಬಿಟ್ಟರೂ ಮನೆಗೆ ಹಿಂದಿರುಗಲಿಲ್ಲ ಎಂದು ವಿದ್ಯಾರ್ಥಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ರಾತ್ರಿಯಿಡಿ ಊರಿನಲ್ಲಿ ಮತ್ತು ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸಿರೂ ಮಗನ ಬಗ್ಗೆ ಯಾವುದೇ ವಿಷಯ ತಿಳಿಯಲಿಲ್ಲ. ಆಗಸ್ಟ್ 6 ರಂದು ಬೆಳಗ್ಗೆ 8 ಗಂಟೆಗೆ ಶಾಲೆಯ ಬಾಗಿಲು ತೆರೆಯಲು ಶಿಕ್ಷಕರು ಬಂದಾಗ ಕೊಠಡಿಗಳ ಜತೆಗೆ ಶೌಚಾಲಯದ ಬೀಗವನ್ನೂ ತೆರೆಯಲಾಗಿತ್ತು. ಈ ವೇಳೆ, ಮಗ ಶೌಚಾಲಯದಿಂದ ಹೊರಗೆ ಬಂದಿದ್ದಾನೆ ಎಂದು ಸಂತ್ರಸ್ತ ಬಾಲಕನ ತಂದೆ ಹೇಳಿದ್ದಾರೆ.

“ಶಾಲೆಗೆ ರಜೆ ಇದ್ದ ಕಾರಣ ನಾನು ಮನೆಗೆ ಬರುತ್ತಿದ್ದೆ. ಆಗ ಶಿಕ್ಷಕ ವಿಜಯ್ ಕುಶ್ವಾಹ ಅವರು ನನ್ನನ್ನು ತಡೆದು ಮಧ್ಯಾಹ್ನ 2 ಗಂಟೆಗೆ ಶೌಚಾಲಯಕ್ಕೆ ತಳ್ಳಿದರು ಮತ್ತು ಹೊರಗಿನಿಂದ ಬಾಗಿಲು ಮುಚ್ಚಿದರು. ಆ ಬಳಿಕ ಶೌಚಾಲಯಕ್ಕೂ ಬೀಗ ಹಾಕಲಾಗಿತ್ತು. ಎಲ್ಲರೂ ಹೊರಟು ಹೋಗಿದ್ದರು. ನಾನು ರಾತ್ರಿ ಸಹಾಯಕ್ಕಾಗಿ ಕಿರುಚುತ್ತಿದ್ದೆ” ಎಂದು ಮಗ ನನ್ನ ಬಳಿ ಹೇಳಿದ್ದಾನೆ. ಶಾಲೆಯ ಬಳಿ ಯಾವುದೇ ಮನೆ ಇಲ್ಲ. ಹೀಗಾಗಿ ಮಗನ ಧ್ವನಿ ಯಾರಿಗೂ ಕೇಳಿಸದೇ 18 ಗಂಟೆಗಳ ಕಾಲ ಶೌಚಗೃಹದಲ್ಲೇ ಉಳಿದಿಕೊಂಡಿದ್ದ” ಎಂದು ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ| ಕುಡಿಯುವ ನೀರಿನ ಕೊಡ ಮುಟ್ಟಿದ್ದಕ್ಕೆ ಶಿಕ್ಷಕನಿಂದ ಹಲ್ಲೆ; ದಲಿತ ವಿದ್ಯಾರ್ಥಿ ಸಾವು

“ದಲಿತ ಮಕ್ಕಳೊಂದಿಗೆ ಶಿಕ್ಷಕರ ವರ್ತನೆ ಮತ್ತು ಶಿಕ್ಷಕರ ಅಭ್ಯಾಸ ಸರಿಯಿಲ್ಲ. ಶಾಲೆಯ ಎಲ್ಲ ದಲಿತ ಮಕ್ಕಳೊಂದಿಗೆ ಅವರು ಅನುಚಿತವಾಗಿ ವರ್ತಿಸುತ್ತಾರೆ. ಊಟದಲ್ಲಿ ಪಲ್ಯ ಬಡಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ” ಎಂದು ಬಾಲಕ ಆರೋಪಿಸಿದ್ದಾನೆ. 

ಈ ಘಟನೆ ಬೆಳಕಿಗೆ ಬಂದ ನಂತರ ಗ್ರಾಮದ ಜನರೊಂದಿಗೆ ಶಾಲೆ ಬಳಿಗೆ ಆಗಮಿಸಿ, ಸಂಬಂಧಿಕರು ಪ್ರತಿಭಟನೆ ನಡೆಸಿದರು. ಸಂತ್ರಸ್ತ ಕುಟುಂಬದ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಿಒ ಮಹೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ಶಿಕ್ಷಕನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್