ಉತ್ತರ ಪ್ರದೇಶ | ದಲಿತ ಬಾಲಕಿ ಎಂಬ ಕಾರಣಕ್ಕೆ ಪಾಠ ಮಾಡಲು ನಿರಾಕರಿಸಿದ ಶಿಕ್ಷಕಿ

  • ಸತತವಾಗಿ ಮೂರು ತಿಂಗಳಿಂದ ಪಾಠ ಹೇಳಿಕೊಡಲು ನಿರಾಕರಣೆ
  • ಅಧಿಕಾರಿಗಳಿಂದ ನೋಟಿಸ್ ಜಾರಿ; ಆರೋಪ ಅಲ್ಲಗಳೆದ ಶಿಕ್ಷಕಿ 

ದಲಿತ ಬಾಲಕಿ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಗೆ ಪಾಠ ಮಾಡಲು ನಿರಾಕರಿಸಿ, ಸತತವಾಗಿ ಮೂರು ತಿಂಗಳಿನಿಂದ ಶಾಲೆಯಿಂದ ಹೊರಗೆ ಕಳುಹಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಕರ್ನಲ್ಗಂಜ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ ವರದಿಯಾಗಿದೆ. ದಲಿತ (ಪರಿಶಿಷ್ಟ ಜಾತಿ) ಬಾಲಕಿ ಸೋನಿಯಾ, “ತನ್ನ ಶಿಕ್ಷಕಿ ಪೂಜಾ ಸಿಂಗ್ ನನಗೆ ಪಾಠ ಹೇಳಿಕೊಡಲು ನಿರಾಕರಿಸುತ್ತಾರೆ” ಎಂದು ಆರೋಪಿಸಿದ್ದಾಳೆ.

ಬಾಲಕಿ ಶಾಲೆಗೆ ಹೋದಾಗಲೆಲ್ಲಾ ಶಿಕ್ಷಕಿ ಪೂಜಾ ಸಿಂಗ್ ಆಕೆಯನ್ನು ಶಾಲೆಯಿಂದ ಹೊರಗೆ ಕಳುಹಿಸುತ್ತಿದ್ದರು. ಜುಲೈನಿಂದಲೂ ಇದೇ ರೀತಿ ಮಾಡಿಕೊಂಡು ಬಂದಿದ್ದಾರೆ.

ವಿಷಯ ತಿಳಿದು ದಲಿತ ಬಾಲಕಿ ಸೋನಿಯಾ ಅವರ ತಂದೆ ಭಗವಾನ್ ಪ್ರಸಾದ್ ಅನೇಕ ಬಾರಿ ಶಾಲೆಗೆ ಹೋಗಿ ವಿಚಾರಿಸಿದಾಗ ಅವರಿಗೂ ಶಿಕ್ಷಕಿ ಪೂಜಾ ಸಿಂಗ್ ಜಾತಿ ನಿಂದನೆ ಮಾಡಿದ್ದಾರೆ.

“ನಾನು ಚಾಮ್ಮಾರ ಮತ್ತು ಸಣ್ಣ ಜಾತಿಯ ಮಕ್ಕಳಿಗೆ ಪಾಠ ಮಾಡುವುದಿಲ್ಲ. ನಿಮ್ಮ ಮಗಳನ್ನು ತರಗತಿಯಲ್ಲಿ ಕುಳಿತುಕೊಳ್ಳಲು ನಾನು ಬಿಡುವುದಿಲ್ಲ. ಪದೇ ಪದೆ ಶಾಲೆಗೆ ಬಂದು ತೊಂದರೆ ಕೊಟ್ಟರೆ ನಾನು ಪೊಲೀಸರಿಗೆ ಕರೆ ಮಾಡಿ ನನ್ನನ್ನು ಕೊಲ್ಲಲು ಬಂದಿದ್ದಾರೆ ಎಂದು ದೂರು ನೀಡುತ್ತೇನೆ” ಎಂದು ಶಿಕ್ಷಕಿ ಬೆದರಿಕೆ ಹಾಕಿ ಕಳುಹಿಸಿದ್ದಾಳೆ.

ಈ ಸುದ್ದಿ ಓದಿದ್ದೀರಾ ? ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ಅರ್ಜಿ ಆಹ್ವಾನ

ಈ ಬಗ್ಗೆ ಸಂತ್ರಸ್ತ ಬಾಲಕಿ ಮತ್ತು ಪೋಷಕರು ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದರು. ಬಳಿಕ ಅಧಿಕಾರಿ ಶಿಕ್ಷಕಿಗೆ ನೋಟಿಸ್ ನೀಡಿದ್ದು, ತನಿಖೆಗಾಗಿ ಅಧಿಕಾರಿ ತಂಡ ರಚಿಸಿದ್ದಾರೆ. ಆದರೆ, “ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದೇನೆ” ಎಂದು ಶಿಕ್ಷಕಿ ಸಮರ್ಥಿಸಿಕೊಂಡಿದ್ದು, “ತನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು” ಎಂದು ಅಲ್ಲಗಳೆದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್