ಉತ್ತರ ಪ್ರದೇಶ | ದಲಿತ ಮಹಿಳೆ, ಆಕೆಯ ಮಗನ ಮೇಲೆ ಪಂಚಾಯ್ತಿಯಲ್ಲಿಯೇ ಜಾತಿ ನಿಂದನೆ ಮತ್ತು ಹಲ್ಲೆ

  • ಮಗಳ ಇಚ್ಛೆಗೆ ತಕ್ಕಂತೆ ಮದುವೆ ಮಾಡಿದ್ದಕ್ಕೆ ಆಕೆಯ ತಾಯಿ, ಸೋದರನ ಮೇಲೆ ಹಲ್ಲೆ
  • ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ ಪೊಲೀಸರು

ಗ್ರಾಮ ಪಂಚಾಯ್ತಿ ಪ್ರತಿನಿಧಿ ಮತ್ತು ಆತನ ಸಹಚರರು ದಲಿತ ಕುಟುಂಬದ ಮಹಿಳೆ ಮತ್ತು ಆಕೆಯ ಮಗನ ಮೇಲೆ ಜಾತಿ ನಿಂದನೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಪ್ರದೇಶದಲ್ಲಿ ನಡೆದಿದೆ. 

ಗ್ರಾಮದ ಮುಖಂಡ ಸಂತೋಷ್‌ ಯಾದವ್‌ ಮತ್ತು ಆತನ ಸಹಚರ ಸಂತ್‌ ಕುಮಾರ್‌ ಯಾದವ್‌ ಜಾತಿ ನಿಂದ ಮಾಡಿರುವ ಆರೋಪಿಗಳು ಎಂದು ಪೊಲೀಸರು ತಿಳಿಸಿದರು.

ʻʻಆಗಸ್ಟ್‌ 16ರಂದು ದಲಿತ ಸಮುದಾಯದ ಜೈಶ್ರೀ ಎನ್ನುವವರ ಮಗಳ ಮದುವೆ ಅದೇ ಗ್ರಾಮದ ಯುವಕನ ಜೊತೆ ನಿಶ್ಚಯವಾಗಿತ್ತು. ಮದುವೆ ಸಂಬಂಧ ವಿವಾದವೇರ್ಪಟ್ಟು, ಕೊನೆಗೆ ನ್ಯಾಯಾಲಯದಲ್ಲಿ ಮದುವೆ ನಡೆದಿತ್ತು. ಈ ಮದುವೆಗೆ ಎರಡೂ ಕುಟುಂಬದವರು ಪರಸ್ಪರ ಒಪ್ಪಿಗೆ ಸೂಚಿಸಿದ್ದರು. ಆದರೆ ಮದುಮಗಳ ಅಜ್ಜಿಗೆ ಆ ಮದುವೆ ಇಷ್ಟವಿರಲಿಲ್ಲ. ಅಜ್ಜಿ ಮದುವೆ ಬಗ್ಗೆ ಪಂಚಾಯ್ತಿಗೆ ದೂರು ಕೊಟ್ಟರು. ದೂರಿನ ಮೇರೆಗೆ ಗ್ರಾಮದಲ್ಲಿ ಪಂಚಾಯ್ತಿ ನಡೆಸಿ, ಮದುಮಗಳ ತಾಯಿ ಮತ್ತು ಕುಟುಂಬಸ್ಥರಿಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಅಷ್ಟೇ ಅಲ್ಲದೇ ಭಾನುವಾರ ಕಲ್ಲಾಪುರ ಗ್ರಾಮದಲ್ಲಿ ಸಾರ್ವಜನಿಕರ ಎದುರಲ್ಲಿಯೇ ಅವರಿಗೆ ಮತ್ತೆ ಕಿರುಕುಳ ನೀಡಿ, ಅವರ ಮನೆಗೆ ಬೀಗ ಹಾಕಲಾಗಿತ್ತು" ಎಂದು ಗೊಂಡಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆಕಾಶ್ ತೋಮರ್ ವಿವರಿಸಿದರು. 

ಈ ಸುದ್ದಿ ಓದಿದ್ದೀರಾ?: ಅಭಿಜಿತ್ ಸೇನ್ ನೆನಪು | ಜೀವನದುದ್ದಕ್ಕೂ ಜನಪರ ಆರ್ಥಿಕ ನೀತಿ ಪ್ರತಿಪಾದಿಸಿದ ಅಪರೂಪದ ಅರ್ಥಶಾಸ್ತ್ರಜ್ಞ

ʻʻಪಂಚಾಯ್ತಿ ನಡೆದ ಸಮಯದಲ್ಲಿ ಸಂತೋಷ್ ಮತ್ತು ಸಂತ ಕುಮಾರ್ ಮದುಮಗಳ ತಾಯಿ ಮತ್ತು ಆಕೆಯ ಸಹೋದರನಿಗೆ ಸಾರ್ವಜನಿಕವಾಗಿ ಹೊಡೆದು, ಕಿರುಕುಳ ನೀಡಿದ್ದಾರೆ. ಈ ಪಂಚಾಯ್ತಿಯಲ್ಲಿ ನೆರೆದಿದ್ದವರಲ್ಲಿ ಒಬ್ಬರು, ಘಟನೆಯನ್ನು  ವಿಡಿಯೊ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆʼʼ ಎಂದು ಅವರು ಹೇಳಿದರು.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 323 ಅಡಿಯಲ್ಲಿ (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 504 (ಅವಮಾನ) ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಬೀಗ ತೆಗೆದ ನಂತರ ಮಹಿಳೆ ತನ್ನ ಮನೆಗೆ ಮರಳಿದ್ದಾಳೆ ಎಂದು ಅವರು ಹೇಳಿದರು. ಸಂತ್ರಸ್ತೆಯ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಪ್ರದೇಶದ ಉಸ್ತುವಾರಿ ಪೊಲೀಸ್‌ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಪಂಚಾಯ್ತಿಗಳಲ್ಲಿ ಪ್ರಬಲ ಜಾತಿಗಳು ಹೇಳಿದ್ದೇ ನ್ಯಾಯ!

ದಲಿತ ಕುಟುಂಬಗಳ ಮೇಲಿನ ದೌರ್ಜನ್ಯ, ಜಾತಿ ನಿಂದನೆ ಪ್ರಕರಣಗಳು ಕರ್ನಾಟಕವೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಹೆಚ್ಚಾಗಿರುವುದನ್ನು ಪತ್ರಿಕಾ ವರದಿಗಳೇ ಬಹಿರಂಗ ಪಡಿಸುತ್ತವೆ. ಬಲಿಷ್ಠ ಜಾತಿಯ ಜನರ ಮುಂದಾಳತ್ವದಲ್ಲಿ ನಡೆಯುವ ಇಂತಹ ಪಂಚಾಯ್ತಿಗಳಲ್ಲಿ ದುರ್ಬಲ ಜಾತಿಯವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ, ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಪಂಚಾಯ್ತಿಗಳಲ್ಲಿ ಪ್ರಬಲ ಜಾತಿಗಳ ಮುಖಂಡರು ಹೇಳಿದ್ದೇ ನ್ಯಾಯ ಎನ್ನುವಂಥ ಪರಿಸ್ಥಿತಿ ಇವತ್ತಿಗೂ ಇದೆ. ಇಂತಹ ಪ್ರಕರಣಗಳು ಪೊಲೀಸ್‌ ಠಾಣೆಯ ಮೆಟ್ಟಿಲೇರಿದರೆ ಮಾತ್ರ ಗಮನ ಹರಿಸುವ ಪೊಲೀಸರು, ಈ ಬಗ್ಗೆ ಗ್ರಾಮಗಳಲ್ಲಿ ಅರಿವು ಮೂಡಿಸುವ ಗೋಜಿಗೆ ಹೋಗುವುದಿಲ್ಲ. ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸಾಮಾಜಿಕ ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್