ಉತ್ತರಾಖಂಡ | ಆದಾಯಕ್ಕಿಂತ 522 ಪಟ್ಟು ಹೆಚ್ಚು ಆಸ್ತಿ; ಐಎಎಸ್‌ ಅಧಿಕಾರಿಯ ಬಂಧನ

  • ಜೂನ್ ಆರಂಭದಲ್ಲಿ ದಾಳಿ ಮಾಡಿದ್ದ ವಿಚಕ್ಷಣ ದಳ
  • 2019ರಲ್ಲಿ ಉತ್ತರ ಪ್ರದೇಶದಿಂದ ಉತ್ತರಾಖಂಡಗೆ ವರ್ಗಾವಣೆ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಉತ್ತರಾಖಂಡ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ, ಐಎಎಸ್ ಅಧಿಕಾರಿ ರಾಮ್ ವಿಲಾಸ್ ಯಾದವ್ ಅವರನ್ನು ವಿಚಕ್ಷಣ ದಳ ಬಂಧಿಸಿದೆ.

"ಅವರ ಆದಾಯಕ್ಕಿಂತ ಶೇಕಡ 500ರಷ್ಟು ಹೆಚ್ಚು ಆಸ್ತಿ ಹೊಂದಿದ್ದಾರೆ ಎನ್ನುವುದು ನಮ್ಮ ಪ್ರಾಥಮಿಕ ತನಿಖೆಯಲ್ಲಿ ಹೊರಬಿದ್ದಿದ್ದು, ನಾವು ತನಿಖೆ ಆರಂಭಿಸಲು ಸರ್ಕಾರದಿಂದ ಅನುಮತಿ ಕೋರಿದ್ದೇವೆ" ಎಂದು ಉತ್ತರಾಖಂಡ್‌ ವಿಚಕ್ಷಣ ದಳದ ನಿರ್ದೇಶಕ ಅಮಿತ್‌ ಸಿನ್ಹಾ ಹೇಳಿದ್ದಾರೆ.

“ಏಪ್ರಿಲ್‌ ತಿಂಗಳಲ್ಲಿ ತನಿಖೆಗೆ ಅನುಮತಿ ಪಡೆದು ಡೆಹ್ರಾಡೂನ್, ಲಕ್ನೋ ಹಾಗೂ ಘಾಜಿಪುರದಲ್ಲಿರುವ ರಾಮ್ ವಿಲಾಸ್ ಯಾದವ್ ಅವರ ಆಸ್ತಿಗಳ ಮೇಲೆ ದಾಳಿ ನಡೆಸಿದ್ದೇವೆ. ಈ ಸಂದರ್ಭದಲ್ಲಿ ಅವರ ಭ್ರಷ್ಟಾಚಾರದ ಬಗ್ಗೆ ಹಲವಾರು ದಾಖಲೆಗಳು ದೊರೆತಿವೆ” ಎಂದು ಅಮಿತ್ ಸಿನ್ಹಾ ತಿಳಿಸಿದ್ದಾರೆ. 

"ಬುಧವಾರ ಮಧ್ಯಾಹ್ನ ರಾಮ್ ವಿಲಾಸ್ ಯಾದವ್ ವಿಚಾರಣೆಗೆ ಹಾಜರಾಗಿದ್ದರು. ಅವರು ಅನೇಕ ದಾಖಲೆಗಳ ಬಗ್ಗೆ ಉತ್ತರಿಸಲಿಲ್ಲ. ಹಾಗಾಗಿ ಅವರನ್ನು ರಾತ್ರಿ 2:15ಕ್ಕೆ ಬಂಧಿಸಿದ್ದೇವೆ. ಗುರುವಾರ ಮಧ್ಯಾಹ್ನ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ'' ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ ? ದೆಹಲಿಯಲ್ಲಿ ಧಾಮಿ | ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಪ್ರಸ್ತಾಪ

ರಾಮ್‌ ವಿಲಾಸ್‌ ಯಾದವ್ ಅವರ ಆರು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅಮಿತ್ ಸಿನ್ಹಾ ತಿಳಿಸಿದ್ದಾರೆ.

“ಅವರ ಪತ್ನಿ ಸಾಕಷ್ಟು ಆಸ್ತಿ ಹೊಂದಿರುವುದರಿಂದ ಆ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದೇವೆ. ಬುಧವಾರ ಅವರ ಪತ್ನಿಗೆ ಸಮನ್ಸ್ ನೀಡಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿಲ್ಲ” ಎಂದು ಹೇಳಿದರು.

ರಾಜ್ಯ ವಿಚಕ್ಷಣ ದಳ ಆರಂಭಿಸಿರುವ ತನಿಖೆಗೆ ಸಹಕರಿಸದ ಕಾರಣ ಬುಧವಾರ ಸಂಜೆ ರಾಜ್ಯ ಸರ್ಕಾರ ರಾಮ್‌ ವಿಲಾಸ್‌ ಯಾದವ್ ಅವರನ್ನು ಅಮಾನತುಗೊಳಿಸಿತ್ತು. ರಾಮ್ ವಿಲಾಸ್ ಯಾದವ್ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮ್ಮ ಬಂಧನ ತಡೆಯುವಂತೆ ಮತ್ತು ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಕ್ರಿಮಿನಲ್ ರಿಟ್ ಅರ್ಜಿ ಸಲ್ಲಿಸಿದ್ದರು. ಉತ್ತರಾಖಂಡ ಹೈಕೋರ್ಟ್ ಜೂನ್ 23ರೊಳಗೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಬೇಕು ಎಂದು ಆದೇಶಿಸಿತ್ತು.  

ತನಿಖೆಗೆ ಸಹಕರಿಸುವಂತೆ ಮತ್ತು ಎಲ್ಲ ದಾಖಲೆಗಳೊಂದಿಗೆ ಬುಧವಾರ ವಿಚಕ್ಷಣ ದಳದ ಮುಂದೆ ಹಾಜರಾಗಿ ಉತ್ತರಿಸುವಂತೆ ಯಾದವ್‌ಗೆ ಹೈಕೋರ್ಟ್‌ ಸೂಚಿಸಿತ್ತು. ಏಪ್ರಿಲ್‌ನಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಯಾದವ್ ವಿರುದ್ಧ ರಾಜ್ಯ ವಿಚಕ್ಷಣ ದಳ ಎಫ್‌ಐಆರ್ ದಾಖಲಿಸಿತ್ತು. 

ಲಕ್ನೋ ಮೂಲದ ವ್ಯಕ್ತಿಯೊಬ್ಬರ ದೂರಿನ ಆಧಾರದ ಮೇಲೆ, ಉತ್ತರಾಖಂಡ ಸರ್ಕಾರವು ಯಾದವ್ ವಿರುದ್ಧ ತನಿಖೆ ಪ್ರಾರಂಭಿಸಿದ್ದು, ವಿಚಕ್ಷಣ ದಳವು ಜೂನ್ ಆರಂಭದಲ್ಲಿ ಲಕ್ನೋ, ಡೆಹ್ರಾಡೂನ್ ಹಾಗೂ ಗಾಜಿಪುರದಲ್ಲಿ ಅವರ ಆಸ್ತಿಯ ಮೇಲೆ ದಾಳಿ ನಡೆಸಿತ್ತು. 

ನಾಲ್ಕು ವರ್ಷಗಳ ಹಿಂದೆ ರಾಮ್ ವಿಲಾಸ್‌ ಯಾದವ್ ಉತ್ತರ ಪ್ರದೇಶ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 2019ರಲ್ಲಿ ಉತ್ತರಾಖಂಡಕ್ಕೆ ವರ್ಗಾವಣೆಯಾಗಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app