ಉತ್ತರಾಖಂಡ | ಭೂಕುಸಿತ; ಒಂದೇ ಕುಟುಂಬದ ನಾಲ್ವರ ಸಾವು

Accational Photo
  • ಭೂಕುಸಿತದಿಂದ ಮೂರು ಮನೆಗಳ ಮೇಲೆ ಉರುಳಿದ ಬಂಡೆ
  • ಸೆಪ್ಟೆಂಬರ್ 17ರಂದು ಉತ್ತರ ಪ್ರದೇಶದಲ್ಲಿ ಬಂಡೆ ಉರುಳಿ ವ್ಯಕ್ತಿ ಸಾವು

ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ಥರಾಲಿ ತಹ್ಸಿಲ್‌ನ ಪೈಂಗರ್‌ ಗ್ರಾಮದಲ್ಲಿ ಶನಿವಾರ (ಅ. 22) ನಸುಕಿನ ಜಾವ 1.35ರ ಸುಮಾರಿಗೆ ಭೂಕುಸಿತ ಉಂಟಾಗಿ ಬೃಹತ್‌ ಬಂಡೆಯೊಂದು ಮೂರು ಮನೆಗಳ ಮೇಲೆ ಉರುಳಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ತಿಳಿಸಿದೆ. 

ಮೃತರನ್ನು ಬಚುಲಿ ದೇವಿ (75), ಸುನಿತಾ ದೇವಿ (37), ದೇವಾನಂದ್ (57) ಮತ್ತು ಘನಾನಂದ್ (45) ಎಂದು ಗುರುತಿಸಲಾಗಿದೆ.

Eedina App

15 ವರ್ಷದ ಯೋಗೇಶ್‌ ಎಂಬ ಬಾಲಕ ಗಂಭೀರ ಗಾಯಗೊಂಡಿದ್ದು, ಉನ್ನತ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.  ದುರಂತದ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಎಸ್‌ಡಿಆರ್‌ಎಫ್‌ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. 

“ಘಟನೆ ಬಗ್ಗೆ ಮಾಹಿತಿ ದೊರೆತ ನಂತರ ಅಗಸ್ಟುಮುನಿ ಸೇವಾ ಠಾಣೆಯಿಂದ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ” ಎಂದು ಎಸ್‌ಡಿಆರ್‌ಎಫ್‌ನ ಮಾಧ್ಯಮ ಉಸ್ತುವಾರಿ ಲಲಿತಾ ನೇಗಿ ಹೇಳಿದರು. 

AV Eye Hospital ad

“ಅವಶೇಷಗಳಡಿ ಐವರು ಸಿಲುಕಿಕೊಂಡಿದ್ದರು. ರಕ್ಷಣಾ ತಂಡಗಳು ಆರಂಭದಲ್ಲಿ ಒಂದು ಮೃತದೇಹವನ್ನು ಹೊರತೆಗೆದಿದ್ದವು. ಇತರ ನಾಲ್ವರು ಗಾಯಾಳುಗಳನ್ನು ಥರಾಲಿಯ ಚಿಕಿತ್ಸಾಲಯಕ್ಕೆ ರವಾನಿಸಿಸಲಾಗಿತ್ತು. ಚಿಕಿತ್ಸೆ ವೇಳೆ ಮೂವರು ಮೃತಪಟ್ಟಿದ್ದು, ಉಳಿದ ಮತ್ತೊಬ್ಬರನ್ನು ಇತರ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ” ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ (ಚಮೋಲಿ) ನಂದ ಕಿಶೋರ್ ಜೋಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪ್ರಧಾನಿಯಿಂದ 'ರೋಜ್‌ಗಾರ್ ಮೇಳ'ಕ್ಕೆ ಚಾಲನೆ; ಭರವಸೆ ನೀಡಿದ 16 ಕೋಟಿ ಉದ್ಯೋಗಗಳೆಲ್ಲಿ ಎಂದು ಪ್ರಶ್ನಿಸಿದ ಕಾಂಗ್ರೆಸ್

ಘಟನೆಯಲ್ಲಿ ಮೂರು ಮನೆಗಳ ಪೈಕಿ ಒಂದು ಮನೆ ಸಂಪೂರ್ಣ ಹಾನಿಗೊಂಡಿದೆ ಎಂದು ಅವರು ತಿಳಿಸಿದರು.

ಸೆಪ್ಟೆಂಬರ್ 17ರಂದು ಉತ್ತರ ಪ್ರದೇಶದ ನೈನಿತಾಲ್‌ ಜಿಲ್ಲೆಯಲ್ಲಿ ಖೈರ್ನಾ- ಅಲ್ಮೋರಾ ಹೆದ್ದಾರಿಯಲ್ಲಿ ಪರ್ವತದ ಇಳಿಜಾರು ಮೂಲಕ ಬಂಡೆಯೊಂದು ಕಾರಿನ ಮೇಲೆ ಉರುಳಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇತರ ಮೂವರು ಗಾಯಗೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app