ಗ್ರಾಮೀಣ ಯುವಕರಿಂದ ನಡೆಯುವ ಸಾಫ್ಟ್‌ವೇರ್ ಕಂಪನಿಯನ್ನು ಗುರುತಿಸಿದ ಸ್ಯಾನ್‌ಫ್ರಾನ್ಸಿಸ್ಕೋ

VILLUPURAM
  • ವಿ- ಗ್ಲುಗ್ ಕಂಪನಿಗೆ ವಿಕಿಮೀಡಿಯಾ ಅನುದಾನ 
  • ಅತ್ಯಂತ ಹಿಂದುಳಿದ ಜಿಲ್ಲೆಗೆ ಹೆಚ್ಚಿದ ಅನುಕೂಲ ನಿರೀಕ್ಷೆ

ಸ್ಯಾನ್ ಫ್ರಾನ್ಸಿಸ್ಕೋದ ವಿಕಿಮೀಡಿಯಾ ಫೌಂಡೇಶನ್‌ನ ಪ್ರಧಾನ ಕಚೇರಿ ಶೈಕ್ಷಣಿಕ ವೆಬ್‌ಸೈಟ್‌ನ (wikipedia.org) ಅಭಿವೃದ್ಧಿಗಾಗಿ ಹ್ಯಾಕಥಾನ್ ಹೆಸರಲ್ಲಿ ನೀಡುವ ಉಚಿತ ಅನುದಾನಕ್ಕೆ ಭಾರತದ ಐಟಿ ಆಧಾರಿತ ಸಂಸ್ಥೆಗಳೆರಡನ್ನು ಆಯ್ಕೆ ಮಾಡಿದೆ.

ಈ ಮನ್ನಣೆಗೆ ತಮಿಳುನಾಡಿನ ಹಿಂದುಳಿದ ಗ್ರಾಮೀಣ ಪಟ್ಟಣ ವಿಲ್ಲುಪುರಂನ ಸಣ್ಣ ಸಾಫ್ಟ್‌ವೇರ್ ಕಂಪನಿ ಜಿಎನ್‌ಯು/ ಲಿನುಕ್ಸ್ ಬಳಕೆದಾರರ ಗುಂಪು ಅಥವಾ ವಿ ಗ್ಲುಗ್ (V-GLUG) ಆಯ್ಕೆಯಾಗಲಿದೆ ಎಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ.

ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ವಿಲ್ಲುಪುರಂ, ವಿಶ್ವ ಐಟಿ ನಕ್ಷೆಯಲ್ಲಿ ಎಂದಿಗೂ ಕಾಣಿಸಿಕೊಂಡಿರಲಿಲ್ಲ. ಆದರೆ ವಿಕಿಮೀಡಿಯಾ ಫೌಂಡೇಶನ್ ವಿಲ್ಲುಪುರಂನ ವಿ ಗ್ಲುಗ್ (V-GLUG) ಅನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. 

ವರದಿಯ ಪ್ರಕಾರ ವಿ ಗ್ಲುಗ್‌ ಮೊದಲ ಭಾರತೀಯ ಉಚಿತ ಸಾಫ್ಟ್‌ವೇರ್‌ ಸಂಸ್ಥೆಯಾಗಿದ್ದು, ಸ್ವಯಂಸೇವಕರೇ ನಡೆಸುತ್ತಿದ್ದಾರೆ. ಹೈಟೆಕ್ ಸಾಫ್ಟ್‌ವೇರ್‌ನಲ್ಲಿ ತರಬೇತಿ ಪಡೆದ ಗ್ರಾಮೀಣ ಯುವಕರು ಸ್ವಯಂ ಸೇವಕರಾಗಿದ್ದಾರೆ. ಯಾವುದೇ ಲಾಭದ ಉದ್ದೇಶವಿಲ್ಲದ ಈ ಸಂಸ್ಥೆಯು ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್‌ ಫೋನ್‌ಗಳು ಸೇರಿದಂತೆ ಡಿಜಿಟಲ್ ಉಪಕರಣಗಳಲ್ಲಿ ಉಚಿತ ಸಾಫ್ಟ್‌ವೇರ್ ಬಳಕೆಗೆ ನೆರವಾಗುತ್ತಿದೆ. 

ನಾನಾ ಐಟಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆ ನಿರ್ವಹಿಸುವ ವೃತ್ತಿಪರರು, ಗ್ರಾಮೀಣ ಯುವಕರನ್ನು ಸಂಪರ್ಕಿಸಿ ಕೋಡಿಂಗ್ ಬಗ್ಗೆ ಉಚಿತ ತರಬೇತಿಯನ್ನು ನೀಡುತ್ತಿದ್ದಾರೆ. ಕುರಿತು ಅವರಿಗೆ ಉಚಿತ ತರಬೇತಿ ನೀಡುತ್ತಾರೆ. ಜಿಲ್ಲೆಯ ವಿವಿಧ ಸರ್ಕಾರಿ ಕಲಾ ಕಾಲೇಜುಗಳ ವಿದ್ಯಾರ್ಥಿಗಳು ವಿ-ಗ್ಲುಗ್ (V-GLUG) ಸ್ವಯಂ ಸೇವಕರಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ:? ಸಮುದ್ರ ಮಟ್ಟದ ಏರಿಕೆಗೆ ಮೊದಲು ಕುಸಿತದಿಂದಲೇ ಮುಳುಗಲಿರುವ ಕರಾವಳಿ ನಗರಗಳು

"ಸ್ವಯಂಸೇವಕರಲ್ಲಿ ಮನೆಗೆಲಸದಿಂದಲೇ ಮನೆ ನಡೆಸುತ್ತಿರುವ ತಾಯಿಯ ಆರೈಕೆಯಲ್ಲಿ (ಸಿಂಗಲ್‌ ಪೇರಂಟ್‌) ಬೆಳೆದ ಬಾಲಕನೂ ಸೇರಿದ್ದಾನೆ. ಇನ್ನೊಬ್ಬರು ದೈನಂದಿನ ಕೂಲಿ ಕಾರ್ಮಿಕರ ಮಗಳು. ಹೀಗೆ ಅನೇಕ ಸ್ವಯಂ ಸೇವಕರು ಹಿಂದುಳಿದ ಕುಟುಂಬಗಳಿಂದ ಬಂದವರು.

ವಿ ಗ್ಲುಗ್ (V-GLUG) ವ್ಯವಸ್ಥಾಪಕ ಯು ಕರ್ಕಿ ಪ್ರಕಾರ, "ಪೈಥಾನ್‌ ಸೇರಿದಂತೆ ನಾನಾ ಪ್ರೋಗ್ರಾಮಿಂಗ್ ಭಾಷೆಗಳನ್ನು ಅವರಿಗೆ ಉಚಿತವಾಗಿ ಕಲಿಸಲಾಗುತ್ತದೆ. ಹೀಗೆ ಹಿಂದುಳಿದ ಹಣೆಪಟ್ಟಿ ಹೊಂದಿದ್ದ ವಿಲ್ಲುಪುರಂ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ" ಎಂದು ಹೇಳಿರುವುದಾಗಿ 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌' ಉಲ್ಲೇಖಿಸಿದೆ. 

ಹಿರಿಯ ಸಂಯೋಜಕ ಜೆ ಸೈಯದ್ ಖಲೀಲ್, "ಸರಿಯಾದ ಪಥದಲ್ಲಿ ಕಲಿಸಿದಲ್ಲಿ, ಗ್ರಾಮೀಣ ಪ್ರದೇಶದ ಯುವಕರ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಹೆಚ್ಚಿಸುವಲ್ಲಿ ತಂತ್ರಜ್ಞಾನಗಳ ಅಳವಡಿಕೆಗೆ ಸಮಾನ ಯಾವುದೂ ಇಲ್ಲ. ವಿ ಗ್ಲುಗ್ ( V-GLUG) ಅದೇ ಕಲ್ಪನೆಯಲ್ಲಿ ಬೆಳೆದಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಸಂಸ್ಥೆ ಯುವಕರಿಗೆ ತರಬೇತಿ ನೀಡುತ್ತಿದೆ ಮತ್ತು ಇದರ ಹಲವು ಹಳೆಯ ವಿದ್ಯಾರ್ಥಿಗಳು ಉನ್ನತ ಐಟಿ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

ವಿಲ್ಲುಪುರಂನ ಅರಿಗ್ನರ್ ಅಣ್ಣಾ ಆರ್ಟ್ಸ್ ಕಾಲೇಜಿನ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ವೆಂಕಟೇಶನ್, "ವಿಕಿಮೀಡಿಯಾದಲ್ಲಿ ಕೆಲಸ ಮಾಡುವ ಅದ್ಭುತ ಅವಕಾಶದೊಂದಿಗೆ, ನನ್ನ ಭವಿಷ್ಯ ಹಸನಾಗಲು ಚಿನ್ನದ ಟಿಕೆಟ್ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ. ನಾನು ವಿ ಗ್ಲುಗ್‌ನೊಂದಿಗೆ (V-GLUG) ನೋಂದಾಯಿಸದೆ ಇದ್ದಲ್ಲಿ ಜಾಗತಿಕ ಕೋಡಿಂಗ್ ಎಂಜಿನಿಯರ್‌ಗಳೊಂದಿಗೆ ಸಂವಹನ ನಡೆಸಲು ಎಂದಿಗೂ ಅವಕಾಶ ಸಿಗುತ್ತಿರಲಿಲ್ಲ" ಎಂದು ಹೇಳಿದ್ದಾರೆ. 

ವಿ ಗ್ಲುಗ್ (V-GLUG) ಹಾಕಿಕೊಂಡಿರುವ ಮತ್ತೊಂದು ಯೋಜನೆಯಲ್ಲಿ, ಜಿಲ್ಲೆಯ 100 ಹಳ್ಳಿಗಳಿಗೆ ತಾಂತ್ರಿಕ ಅಂಶಗಳ ಕುರಿತು ಶಿಕ್ಷಣ ಒದಗಿಸುವ ತಳಮಟ್ಟದ ಅಭಿಯಾನವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಂಟು ಗ್ರಾಮಗಳಲ್ಲಿ ಕಾರ್ಯಕ್ರಮಗಳು ಪೂರ್ಣಗೊಂಡಿವೆ.

"ತಾಂತ್ರಿಕ ಪ್ರಗತಿಗಳು ಮತ್ತು ಆವಿಷ್ಕಾರ ಪುರುಷರಿಗೆ ಮಾತ್ರ ಸೀಮಿತ ಮತ್ತು ಮಹಿಳೆಯರು ಅದರ ಲಾಭವನ್ನಷ್ಟೇ ಪಡೆಯುತ್ತಿದ್ದಾರೆ ಎನ್ನುವುದು ತಪ್ಪು ಕಲ್ಪನೆ ಎಂದು ನಾವು ಸಾಬೀತು ಮಾಡಿದ್ದೇವೆ. ಗ್ರಾಮೀಣ ಮಹಿಳೆಯರಿಗೆ ಇಲ್ಲಿ ನಾವು ಕೋಡಿಂಗ್ ಕಾರ್ಯಕ್ರಮಗಳಲ್ಲಿ ತರಬೇತಿ ನೀಡುತ್ತೇವೆ. ಸಾಫ್ಟ್‌ವೇರ್‌ ಕೋಡಿಂಗ್‌ ಕಲಿತ ಮಹಿಳೆಯರು ಅತಿ ಚಿಕ್ಕ ವಯಸ್ಸಿನಲ್ಲಿಯೇ ವೃತ್ತಿಪರರಾಗಿ ತಮ್ಮ ಕುಟುಂಬಕ್ಕೆ ನೆರವಾಗುತ್ತಿದ್ದಾರೆ" ಎಂದು ವಿಜಿ ಹೇಳಿದ್ದಾರೆ.

ವಿಕಿಮೀಡಿಯಾ ಅನುದಾನವು ಗ್ರಾಮೀಣ ಯುವಕರ ಜೀವನಕ್ಕೆ ಹೊಸ ಗುರಿ ನೀಡಲು ಸಹಾಯವಾಗಲಿದೆ. ಅವರ ಮೂಲಕ ಈ 'ಅತ್ಯಂತ ಹಿಂದುಳಿದ' ಜಿಲ್ಲೆಯೂ ಅಭಿವೃದ್ಧಿಯಾಗಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್