ಮನುಷ್ಯರ ಮನದಲ್ಲಿನ ವಿಕೃತಿ ನಿರ್ಮೂಲನೆಯಿಂದ ಹಿಂಸೆ ಅಂತ್ಯಗೊಳಿಸಲು ಸಾಧ್ಯ: ಕೆ ಎಸ್‌ ವಿಮಲಾ

  • ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನದ ಕಾರ್ಯಕ್ರಮ
  • ಘನತೆಯ ಬದುಕು ನಮ್ಮದಾಗಲಿ ಎಂದು ಘೋಷಣೆ ಕೂಗಿದ ಸಂಗಾತಿಗಳು

ಮಹಿಳೆಯರು ಮತ್ತು ಮಕ್ಕಳ ಮೇಲಿನ ಎಲ್ಲ ಬಗೆಯ ದೌರ್ಜನ್ಯ ಕ್ರೌರ್ಯ ವಿಕೃತ ರೂಪ ಪಡೆದಿದೆ. ಮನುಷ್ಯನ ಮನದಲ್ಲಿ ಉಳಿದಿರುವ ಈ ವಿಕೃತಿಯನ್ನು ನಿಮೂರ್ಲನೆ ಮಾಡದೇ ಮಹಿಳೆಯರ ಮೇಲಿನ ದೌರ್ಜನ್ಯಗಳು ಅಂತ್ಯಗೊಳ್ಳಲು ಸಾಧ್ಯವಿಲ್ಲ. ಹಿಂಸೆ ಎಂಬುದು ಇಡೀ ನೆಲಕ್ಕೆ ಅಂಟಿದ ಕಳಂಕ. ಅದನ್ನು ತೊಡೆದುಹಾಕಲು ನಾವೆಲ್ಲರೂ ಪ್ರಯತ್ನಿಸಬೇಕಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ಕೆ ಎಸ್‌ ವಿಮಲಾ ಆಗ್ರಹಿಸಿದರು. 

ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ‌ ದಿನದ ಅಂಗವಾಗಿ ನಗರದಲ್ಲಿ ಪ್ರಗತಿಪರ, ಮಹಿಳಾ, ವಿದ್ಯಾರ್ಥಿ ಸಂಘಟನೆಗಳು ಹಮ್ಮಿಕೊಂಡಿದ್ದ ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಬಗೆಯ ದೌರ್ಜನ್ಯಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿರುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು.

Eedina App

“ದೆಹಲಿಯ ಶ್ರದ್ಧಾ ಯುವತಿಯನ್ನು ಕೊಂದು ತುಂಡು ಮಾಡಿ ಬಿಸಾಕಿದ ಪ್ರಕರಣ, ಆಳಂದದ 76 ವರ್ಷದ ಅಜ್ಜಿಯ ಮೇಲಿನ ಅತ್ಯಾಚಾರ, 10 ವರ್ಷದ ಪುಟ್ಟ ಕಂದಮ್ಮನ ಮೇಲಿನ ಅತ್ಯಾಚಾರ.... ಈ ಎಲ್ಲ ಪ್ರಕರಣಗಳಲ್ಲಿ ಜಾತಿ, ಧರ್ಮವನ್ನು ನೋಡುವುದಿಲ್ಲ. ಹಿಂಸೆಗೆ ಯಾವುದೇ ಜಾತಿ, ಧರ್ಮ, ಭಾಷೆ, ಗಡಿಯ ಹಂಗಿಲ್ಲ. ಹಿಂಸೆಯನ್ನು ಜಾತಿ, ಧರ್ಮದ ಆಧಾರದಲ್ಲಿ ಗುರುತಿಸುವುದು ಕ್ರೌರ್ಯವೇ ಆಗಿದೆ. ಶ್ರದ್ಧಾ ವಾಕರ್ ಪ್ರಕರಣದಲ್ಲಿ ಆರೋಪಿಯನ್ನು ಆತನ ಧರ್ಮದ ಹೆಸರಿನಿಂದ ಗುರುತಿಸುವುದು ಒಂದು ಸಮುದಾಯವನ್ನು ಬಲಿಪಶು ಮಾಡುವುದಾಗಿದೆ” ಎಂದರು. 

“21ನೇ ಶತಮಾನವನ್ನು ನಾವು ಈ ರೀತಿ ನೋಡುತ್ತೇವೆ ಎಂದುಕೊಂಡಿರಲಿಲ್ಲ. ನೆಮ್ಮದಿಯ ಘನತೆಯ ಬದುಕು ಎಲ್ಲರಿಗೂ ದೊರೆಯುತ್ತದೆಯೆಂಬ ನಂಬಿಕೆಯಿತ್ತು. ಆದರೆ, ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯಗಳು  ಹೆಚ್ಚಾಗಿವೆ. ಈ ದೌರ್ಜನ್ಯಗಳ ವಿರುದ್ದ, ಘನತೆಯ ಬದುಕಿಗಾಗಿ ಆಗ್ರಹಿಸಿ ಧ್ವನಿಯಾಗಲು ನಾವಿಲ್ಲಿ ಬಂದಿದ್ದೇವೆ” ಎಂದು ಪ್ರಜ್ವಲ ಎಂಬುವವರು ವಿವರಿಸಿದರು.

AV Eye Hospital ad

ಈ ಸುದ್ದಿ ಓದಿದ್ದೀರಾ?: ಮಂಡ್ಯ | ಅಸ್ಪೃಶ್ಯತೆಗಿಲ್ಲ ಕಡಿವಾಣ; ದಲಿತರಿಗೆ ಕ್ಷೌರ ನಿರಾಕರಿಸಿ ಕ್ಷೌರದ ಅಂಗಡಿಗಳು ಬಂದ್

“ಮಹಿಳೆಯರು ಮಾತ್ರವಲ್ಲದೇ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರ ಮೇಲಿನ ದೌರ್ಜನ್ಯಗಳು ಏರಿಕೆಯಾಗಿವೆ. ನಮ್ಮ ಸಮಾಜದಲ್ಲಿ ವಾಸಿಸುವ ಎಲ್ಲರೂ ಗೌರವಯುತವಾಗಿ, ಘನತೆಯ ಬದುಕು ಸಾಗಿಸುವ ಹಕ್ಕಿದೆ. ಸರ್ಕಾರಗಳು ದೌರ್ಜನ್ಯ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು, ಸಮಾಜವೂ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು” ಎಂದು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮಾಲಾ ಬಾಯಿ ಹೇಳಿದರು.

“ಬಾಲ್ಯದಿಂದಲೇ ಮಕ್ಕಳಲ್ಲಿ ಹೆಣ್ಣು ಗಂಡು ಎಂಬು ಅಸಮಾನತೆಯ ಆಲೋಚನೆಗಳು ಬಿತ್ತಲಾಗುತ್ತಿದೆ. ಹೆಣ್ಣು ಭೋಗದ ವಸ್ತು ಎಂದು ಬಾಲ್ಯದಿಂದಲೇ ಗಂಡಿನಲ್ಲಿ ಪುರುಷಾಧಿಪತ್ಯದ ಆಲೋಚನೆಗಳನ್ನು ಹುಟ್ಟುತ್ತಿವೆ. ಇಂತಹ ಮನಸ್ಥಿತಿ ಬದಲಗಬೇಕು. ಸಮಾನತೆಯ ಆಲೋಚನೆಗಳನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ಮೂಡಿಸಬೇಕು. ಇದರಿಂದ, ಕಾಲಕಳೆದಂತೆ ದೌರ್ಜನ್ಯಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಬಹುದು” ಎಂದು ಡಾ ಬಾನುಪ್ರಕಾಶ್‌ ತಿಳಿಸಿದರು.

ಲೇಖಕಿ ಕೆ ಷರೀಫಾ, ಪುಷ್ಪಾ, ಸಂಗಮ ಸಂಸ್ಥೆಯ ಮನೋಹರ್‌ ಇಳವರ್ತಿ, ಜನವಾದಿ ಮಹಿಳಾ ಸಂಘಟನೆಯ ಗೀತಾ, ಗೌರಮ್ಮ ಸೇರಿದಂತೆ ವಿದ್ಯಾರ್ಥಿ, ಯುವಜನರು ಈ ಅರಿವಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೌರ್ಜನ್ಯದ ವಿರುದ್ಧ ಅರಿವಿನ ಪಯಣದ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app