ಯುವತಿ ಕೊಲೆ ಪ್ರಕರಣ | ರಕ್ತ ಸ್ವಚ್ಛಗೊಳಿಸುವುದು ಹೇಗೆ ಎಂದು ಗೂಗಲ್‌ ಮಾಡಿದ್ದ ಆರೋಪಿ

  • ಯುವತಿಯ ಕೊಲೆ ಮಾಡಿ, 35 ಭಾಗಗಳಾಗಿ ತುಂಡರಿಸಿದ್ದ ಆರೋಪಿ
  • ಡೇಟಿಂಗ್‌ ಅಪ್ಲಿಕೇಶನ್ ಮೂಲಕ ಪರಿಚಯವಾಗಿದ್ದ ಯುವ ಜೋಡಿ

ಯುವತಿ ಶ್ರದ್ಧಾ ವಾಕರ್‌ ಅನ್ನು ಕೊಂದು ಮೃತದೇಹವನ್ನು 35 ಭಾಗಗಳಾಗಿ ತುಂಡರಿಸಿದ ಆರೋಪಿ ಅಫ್ತಾಬ್‌ ಅಮೀನ್ ಪೂನಾವಾಲ, ರಕ್ತ ಸ್ವಚ್ಛಗೊಳಿಸುವುದು ಹೇಗೆ ಎಂಬ ಬಗ್ಗೆ ಗೂಗಲ್‌ನಲ್ಲಿ ವಿವರ ಹುಡುಕಿರುವುದು ಈಗ ಬಹಿರಂಗವಾಗಿದೆ.

ವಿವಾಹೇತರ ಸಹಜೀವನ ನಡೆಸುತ್ತಿದ್ದ ಜೋಡಿಯ ನಡುವೆ ಗಲಾಟೆಯಾದ ಮೇಲೆ ಕೊಲೆ ನಡೆದಿದೆ. ಈ ಪ್ರಕರಣದ ಆರೋಪಿ ಅಫ್ತಾಬ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಈ ಕೃತ್ಯದ ಭಯಾನಕ ವಿವರಗಳು ಇದೀಗ ಒಂದೊಂದೇ ಹೊರಬರುತ್ತಿವೆ. ಯುವತಿಯ ಹತ್ಯೆಯನ್ನು ಮರೆಮಾಚಲು ಆರೋಪಿಯು ಆಕೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Eedina App

ಗೂಗಲ್‌ನಿಂದ ಅಂಗರಚನಾಶಾಸ್ತ್ರದ ಬಗ್ಗೆ ಮಾಹಿತಿ

ಶ್ರದ್ಧಾ ಕೊಲೆಯ ನಂತರ, ರಕ್ತವನ್ನು ಸ್ವಚ್ಛ ಗೊಳಿಸುವ ವಿಧಾನ ಹೇಗೆ ಎಂಬುದನ್ನು ಗೂಗಲ್‌ನಲ್ಲಿ ಹುಡುಕಿದ್ದಾನೆ. ಮಾನವ ಅಂಗರಚನಾಶಾಸ್ತ್ರದ ಬಗ್ಗೆಯೂ ಆರೋಪಿ ಗೂಗಲ್‌ನಲ್ಲಿ ಮಾಹಿತಿ ಪಡೆದಿದ್ದಾನೆ. ಮೇ 18ರಂದು ಶ್ರದ್ಧಾ ವಾಕರ್ ಅವರನ್ನು ಕೊಂದ ನಂತರ, ಅಫ್ತಾಬ್ ಅದೇ ಮನೆಯಲ್ಲಿ ವಾಸಿಸುತ್ತಿದ್ದ. ಆನ್‌ಲೈನ್ ಅಪ್ಲಿಕೇಶನ್‌ಗಳ ಮೂಲಕ ಆಹಾರವನ್ನು ಆರ್ಡರ್ ಮಾಡಿದ್ದಾರೆ. ಜೂನ್ 9ರವರೆಗೆ ಆಕೆಯ ಸ್ನೇಹಿತರೊಂದಿಗೆ ಆರೋಪಿಯೇ ಶದ್ಧಾ ಹೆಸರಿನಲ್ಲಿ ಚಾಟ್ ಮಾಡುತ್ತಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.

AV Eye Hospital ad

ಯುವತಿಯ ಶವವನ್ನು ತುಂಡರಿಸಿ ಆಕೆಯ ದೇಹವನ್ನು ಸಂಗ್ರಹಿಸಿಡಲು 300 ಲೀಟರ್ ರೆಫ್ರಿಜರೇಟರ್‌ ಖರೀದಿಸಿ, ಅದರಲ್ಲಿ ಎಲ್ಲ ಭಾಗಗಳನ್ನು ಹಲವು ದಿನಗಳ ಕಾಲ ಇಟ್ಟಿದ್ದಾನೆ. ದೇಹವನ್ನು ಹೇಗೆ ಕತ್ತರಿಸುವುದು ಎಂದು ಎರಡು ವಾರಗಳ ತರಬೇತಿ ಪಡೆದಿದ್ದಾನೆ. ನಂತರ ದೆಹಲಿಯ ಮೆಹ್ರೌಲಿ ಕಾಡಿನಲ್ಲಿ  ಒಂದೊಂದೇ ತುಂಡನ್ನು ಎಸೆದುಬಂದಿದ್ದಾನೆ. ತಾನಿದ್ದ ಮನೆಯಲ್ಲಿ ಶವದ ದುರ್ವಾಸನೆ ಕಡಿಮೆಮಾಡಲು ಯಾವಾಗಲೂ ಅಗರಬತ್ತಿ ಹಚ್ಚುತ್ತಿದ್ದ. ಶವವನ್ನು ಯಾರಿಗೂ ತಿಳಿಯದ ಹಾಗೆ ಮುಚ್ಚಿಡಲು ಇಂಟರ್‌ನೆಟ್‌, ಟಿವಿ ಶೋಗಳನ್ನು ನೋಡಿದ್ದ. ಅದರಲ್ಲೂ ಮುಖ್ಯವಾಗಿ, ಅಮೆರಿಕದ ಕ್ರೈಂ ಶೋ ‘ಡೆಕ್ಸ್ಟರ್‌’ ನೋಡಿ ಪ್ರಭಾವಿತನಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಮತ್ತೊಬ್ಬ ಯುವತಿಯನ್ನು ಮನೆಗೆ ಕರೆತಂದಿದ್ದ ಆರೋಪಿ

ಯುವತಿಯ ದೇಹವನ್ನು ಮನೆಯಲ್ಲಿ ಮುಚ್ಚಿಟ್ಟಿದ್ದಾಗಲೇ, ಆರೋಪಿಯು ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತಂದಿದ್ದ ಎಂಬ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಶ್ರದ್ಧಾ ಕೊಲೆಯ ಬಳಿಯ ಪೂನಾವಾಲಾ ‘ಬ್ಲಂಬ್‌’ ಎಂಬ ಡೇಟಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮತ್ತೊಂದು ಮಹಿಳೆಯ ಸಂಪರ್ಕಿಸಿದ್ದಾನೆ. ಶ್ರದ್ಧಾ ದೇಹವನ್ನು ಫ್ರಿಡ್ಜ್‌ನಲ್ಲಿ ಇಟ್ಟಿರುವಾಗಲೇ ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತಂದಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿ ಓದಿದ್ದೀರಾ?: ರಾಯಚೂರು | ಸರ್ಕಾರಿ ಜಮೀನಿನಲ್ಲಿ ಆಕ್ರಮ ಮಣ್ಣು ಗಣಿಗಾರಿಕೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಡೇಟಿಂಗ್‌ ಅಪ್ಲಿಕೇಷನ್‌ ಮೂಲಕ ಪರಿಚಯವಾಗಿದ್ದ ಜೋಡಿ

ಅಫ್ತಾಬ್‌ ಮತ್ತು ಶ್ರದ್ಧಾ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ ಮೂಲಕ ಪರಸ್ಪರ ಭೇಟಿಯಾಗಿದ್ದರು. ನಂತರ ಮುಂಬೈನಲ್ಲಿ ಯುವತಿ ಕೆಲಸ ಮಾಡುತ್ತಿದ್ದ ಕಾಲ್ ಸೆಂಟರ್‌ನಲ್ಲಿಯೇ ಆತ ಕೆಲಸ ಮಾಡಲು ಪ್ರಾರಂಭಿಸಿದ್ದ. ಅವರ ನಡುವಿನ ಸ್ನೇಹ ಸಲುಗೆಯು ಪ್ರೀತಿಯಾಗಿ ಬದಲಾಗಿದೆ. ಇಬ್ಬರ ಪ್ರೀತಿಗೆ ಕುಟುಂಬದವರ ವಿರೋಧ ವ್ಯಕ್ತವಾದ ನಂತರ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶಕ್ಕೆ ಹೋಗಿ ನಂತರ ದೆಹಲಿಗೆ ಬಂದು ನೆಲೆಸಿದ್ದಾರೆ. ಮದುವೆ ವಿಚಾರವಾಗಿ ಇಬ್ಬರ ನಡುವೆ ನಡೆದ ವಾದ- ವಿವಾದದ ಹಿನ್ನೆಲೆಯಲ್ಲಿ ಶ್ರದ್ಧಾಳನ್ನು ಅಫ್ತಾಬ್ ಕೊಲೆ ಮಾಡಿದ್ದಾನೆ.

ಶ್ರದ್ಧಾ ಅವರ ತಂದೆ ಎಫ್‌ಐಆರ್‌ನಲ್ಲಿ, "ಅಫ್ತಾಬ್ ಶ್ರದ್ಧಾ ಮೇಲೆ ದೌರ್ಜನ್ಯ ನಡೆಸುತ್ತಿದ್ದ. ಆಗಾಗ್ಗೆ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ" ಎಂದು ಆರೋಪಿಸಿದ್ದಾರೆ.

ಅಫ್ತಾಬ್‌ ಅಪರಾಧಗಳನ್ನು ಒಪ್ಪಿಕೊಂಡಿದ್ದರೂ ಸಹ, ದೆಹಲಿ ಪೊಲೀಸರಿಗೆ ಪ್ರಕರಣದ ಸಾಕ್ಷ್ಯವನ್ನು ಸಂಗ್ರಹಿಸುವುದು ಕಷ್ಟಕರವಾಗಿದೆ. ಈವರೆಗಿನ ಹುಡುಕಾಟದಲ್ಲಿ ಕೆಲವೇ ಮೂಳೆಗಳು ಮಾತ್ರ ಪತ್ತೆಯಾಗಿವೆ. ಡಿಎನ್‌ಎ ಪರೀಕ್ಷೆಯಿಂದ ಮಾತ್ರ ಪತ್ತೆಯಾದ ಮೂಳೆಗಳು ಶ್ರದ್ಧಾ ಅವರದ್ದೇ ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಆರೋಪಿ ಬಳಸಿದ ಚಾಕು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಫ್ತಾಬ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಆತನನ್ನು ಐದು ದಿನಗಳ ಪೊಲೀಸ್ ಬಂಧನದಲ್ಲಿರಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app