
ಐಎಎಸ್ ಅಧಿಕಾರಿ ಹುದ್ದೆಗೆ ಸ್ವಯಂ ನಿವೃತ್ತಿ ಘೋಷಿಸಿದ ಮಾರನೇ ದಿನವೇ ಅರುಣ್ ಗೋಯೆಲ್ ಅವರನ್ನು ಭಾರತದ ಮುಖ್ಯ ಚುನಾವಣಾ ಅಧಿಕಾರಿ(ಸಿಇಸಿ)ಯನ್ನಾಗಿ ನೇಮಿಸಿದ ಕೇಂದ್ರ ಸರ್ಕಾರದ ನಡೆಗೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ, ಈ ʻಸೂಪರ್ ಫಾಸ್ಟ್ʼ ನೇಮಕಾತಿ ಮಾಡಿದ್ದು ಯಾಕೆ" ಎಂದು ಕೋರ್ಟ್, ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಹಾಗಾದರೆ ಚುನಾವಣಾ ಆಯುಕ್ತರ ನೇಮಕಾತಿ ಕುರಿತಂತೆ ಸುಪ್ರೀಂ ಕೋರ್ಟ್ ಎತ್ತಿರುವ ಆಕ್ಷೇಪಣೆ ಏನು? ಈ ಬಗ್ಗೆ ಕಾನೂನು ತಜ್ಞರು ಏನು ಹೇಳುತ್ತಾರೆ?
ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು ಶಿಥಿಲ
"ಪ್ರಜಾಪ್ರಭುತ್ವದ ವ್ಯವಸ್ಥೆಯ ಅಡಿಪಾಯವೇ ಚುನಾವಣೆಗಳು. ಅಂಥ ಚುನಾವಣೆಗಳನ್ನು ನಡೆಸುವುದು ಚುನಾವಣಾ ಆಯೋಗ. ಆದರೆ, ಅಂಥ ಗುರುತರ ಹೊಣೆಗಾರಿಕೆಯ ಸಾಂವಿಧಾನಿಕ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಒತ್ತಡಕ್ಕೆ ಒಳಗಾಗಿರುವಂತೆ ಕಾಣುತ್ತಿದೆ" ಎಂದು ಈ ದಿನ.ಕಾಮ್ ಜತೆ ಕಾಂಗ್ರೆಸ್ ಮುಖಂಡ, ವಕೀಲ ವಿ ಎಸ್ ಉಗ್ರಪ್ಪ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ಸೆಕ್ಷನ್ 324 ಪ್ರಕಾರ ಭಾರತದ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ, ಸ್ವತಂತ್ರವಾದ ಸಂಸ್ಥೆ. ಈ ಸರ್ವಸ್ವತಂತ್ರವಾದ ಸಂಸ್ಥೆಯ ಮುಖ್ಯಸ್ಥರಾದವರು, ಚುನಾವಣೆ ಘೋಷಿಸುವುದು, ಚುನಾವಣೆಗೆ ನೀತಿ ನಿಯಮ ರೂಪಿಸುವುದರಿಂದ ಹಿಡಿದು, ಫಲಿತಾಂಶ ಪ್ರಕಟಗೊಳ್ಳುವವರೆಗೆ ಅವರದ್ದೇ ಜವಾಬ್ದಾರಿ. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗ ಯಾರದ್ದೋ ಒತ್ತಡಕ್ಕೆ ಒಳಗಾಗಿರುವ ರೀತಿ ಕಾಣುತ್ತಿದೆ. ಆ ಒತ್ತಡ ಏನು ಎಂಬುದನ್ನೇ ಸರ್ವೋಚ್ಛ ನ್ಯಾಯಾಲಯ ಇತ್ತೀಚಿನ ಕಲಾಪಗಳಲ್ಲಿ ಸ್ಪಷ್ಟಪಡಿಸಿದೆ" ಎಂದರು.
"ಬಹುಶಃ ಸುಪ್ರೀಂ ಕೋರ್ಟಿನ ಈ ಅಭಿಪ್ರಾಯ ಕೇಂದ್ರ ಸರ್ಕಾರಕ್ಕೆ ಕಪಾಳ ಮೋಕ್ಷ. ಈ ಸಂದರ್ಭದಲ್ಲಿ ನೈತಿಕ ಹೊಣೆ ಹೊರಬೇಕಾದ ಪ್ರಧಾನಿ ಮತ್ತು ಕಾನೂನು ಸಚಿವರಿಬ್ಬರೂ ಮೌನಕ್ಕೆ ಶರಣಾಗಿದ್ದಾರೆ. ಇದು ವಿಪರ್ಯಾಸ. ಇದು ಸಂವಿಧಾನದತ್ತವಾದ ಸಂಸ್ಥೆಗೆ ಮತ್ತು ಸಂವಿಧಾನಕ್ಕೆ ಎಸಗುತ್ತಿರುವ ಅಪಚಾರ" ಎಂದು ಅವರು ಅಭಿಪ್ರಾಯಪಟ್ಟರು.
"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗದ ಮೇಲೆ ಕೇಂದ್ರ ಸರ್ಕಾರ ವ್ಯವಸ್ಥಿತವಾದ ಪ್ರಹಾರ ನಡೆಸುತ್ತಿದೆ. ಸಂವಿಧಾನದತ್ತವಾದ ಚುನಾವಣಾ ಆಯೋಗದ ಆಯುಕ್ತರ ನೇಮಕಾತಿ, ನ್ಯಾಯಾಧೀಶರ, ನ್ಯಾಯಮೂರ್ತಿಗಳ ನೇಮಕಾತಿ ಮುಂತಾದ ಸಂವಿಧಾನಿಕ ಸ್ಥಾನಮಾನಗಳ ನೇಮಕಾತಿಯನ್ನು ರಾಜಕೀಯಗೊಳಿಸುತ್ತಿರುವುದು ಮತ್ತು ರಾಜಕೀಯಗೊಳಿಸಲು ಯತ್ನಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದ ಪ್ರಧಾನಿ ಮೋದಿ, ಒಂದು ರೀತಿಯ ಹಿಟ್ಲರ್ ಸ್ವಭಾವದ ಮನುಷ್ಯ. ಜನರನ್ನು ಮರಳು ಮಾಡಿ, ದಾರಿತಪ್ಪಿಸುವ ಪ್ರಯತ್ನಗಳನ್ನು ಮಾಡುತ್ತ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭಗಳನ್ನು ಶಿಥಿಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಅವರು ದೂರಿದರು.
2014ರ ನಂತರದ ನೇಮಕಾತಿಗಳು ಹೀಗೆಯೇ?
"ಅರುಣ್ ಗೋಯೆಲ್ ಅವರ ನೇಮಕಾತಿ ಮಾತ್ರವಲ್ಲ, 2014ರ ನಂತರ ನಡೆಯುತ್ತಿರುವ ಎಲ್ಲಾ ಚುನಾವಣಾ ಆಯುಕ್ತರ ನೇಮಕಾತಿ ಹೀಗೆಯೇ ಇದೆ. ತಮಗೆ ಬೇಕಾದವರನ್ನು ಮಾತ್ರ ಈ ಹುದ್ದೆಗಳಿಗೆ ತಂದು ಕೂರಿಸಲಾಗುತ್ತಿದೆ" ಎಂದು ಸುಪ್ರೀಂ ಕೋರ್ಟಿನ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜತೆ ಮಾತನಾಡಿರುವ ಅವರು, ಸಾಮಾನ್ಯವಾಗಿ ಚುನಾವಣಾ ಆಯುಕ್ತರನ್ನು ಆಡಳಿತ ಮತ್ತು ವಿಪಕ್ಷಗಳು ಸೇರಿ ಆಯ್ಕೆ ಮಾಡಬೇಕಿತ್ತು. ಆದರೆ, ಆ ಪ್ರಕ್ರಿಯೆ ಇಲ್ಲಿ ನಡೆದಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ ಎಂದರು.

ಹಿಮಾಚಲ ಮತ್ತು ಗುಜರಾತ್ ಚುನಾವಣಾ ದಿನಾಂಕಗಳನ್ನು ಘೋಷಿಸಿರುವುದು ಕೂಡ ಆಡಳಿತ ಪಕ್ಷಕ್ಕೆ ಅನುಕೂಲಮಾಡಿಕೊಡುವ ನಿಟ್ಟಿನಲ್ಲಿಯೇ. ಅಂದರೆ, ತಮ್ಮ ಅಭಿಪ್ರಾಯಗಳಿಗೆ ಸಮ್ಮತಿ ಸೂಚಿಸುವ ವ್ಯಕ್ತಿಯನ್ನೇ ಆಯ್ಕೆ ಮಾಡುತ್ತಾರೆ. ಸರ್ಕಾರದ ಇಚ್ಛಾಶಕ್ತಿ ಸರಿಯಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಆಡಳಿತ ಪಕ್ಷ ತನ್ನ ಚಾಣಕ್ಯ ನೀತಿಯನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಚುನಾವಣಾ ಆಯುಕ್ತರ ನೇಮಕಾತಿಗೆ ಕೊಲಿಜಿಯಂ ವ್ಯವಸ್ಥೆ ರಚಿಸಬೇಕೆಂಬ ಸುಪ್ರೀಂ ಕೋರ್ಟ್ ಅಭಿಪ್ರಾಯ ಕುರಿತಾಗಿ ಪ್ರತಿಕ್ರಿಯಿಸಿದ ಅವರು, "ಒಂದು ವೇಳೆ ಸುಪ್ರೀಂ ಕೋರ್ಟ್ ಹೇಳುವ ಪ್ರಕಾರ ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ರಚಿಸಿದರೆ, ಕೇವಲ ನ್ಯಾಯಾಂಗದ ವ್ಯಾಪ್ತಿಗೆ ಬರುವವರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆದರೆ, ಕೇಂದ್ರ ಸರ್ಕಾರ ಆಯ್ಕೆ ಮಾಡಿದರೆ, ವಿವಿಧ ಕ್ಷೇತ್ರಗಳ ಜನರೂ ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಅಂದರೆ, ಆಯ್ಕೆಗೆ ಹೆಚ್ಚು ಅವಕಾಶವಿರುತ್ತದೆ" ಎಂದರು.
"ಐಎಎಸ್ ಹುದ್ದೆಯಿಂದ ನಿವೃತ್ತಿಯಾದ ಮರುದಿನವೇ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಈ ʻಸೂಪರ್ ಫಾಸ್ಟ್ʼ ನೇಮಕಾತಿ ಮಾಡಿದ್ದು ಯಾಕೆ" ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.
"ನ.18ರಂದು ಚುನಾವಣಾ ಆಯುಕ್ತರ ನೇಮಕಾತಿ ಸಂಬಂಧ ನಾಲ್ವರ ಹೆಸರನ್ನು ಪಟ್ಟಿ ಮಾಡಲಾಗಿದೆ. ಆ ಪಟ್ಟಿಯಲ್ಲಿ ಒಬ್ಬರ ಹೆಸರನ್ನು ಕಾನೂನು ಸಚಿವರು ಆಯ್ಕೆ ಮಾಡಿ ಪ್ರಧಾನಿಗೆ ಕಳಿಸಿದ್ದಾರೆ. ಬಳಿಕ, ಪ್ರಧಾನಿ ಕೂಡ ಅದೇ ಹೆಸರನ್ನು ಶಿಫಾರಸು ಮಾಡುತ್ತಾರೆ. ಈ ತರಾತುರಿಯ ನೇಮಕಾತಿ ಯಾಕೆ" ಎಂದು ಪೀಠ ಪ್ರಶ್ನಿಸಿತ್ತು.
ಈ ಸುದ್ದಿ ಓದಿದ್ದೀರಾ? : ಚುನಾವಣಾ ಆಯುಕ್ತರ ನೇಮಕ | ಅರುಣ್ ಗೋಯೆಲ್ ಅವರ ತರಾತುರಿ ನೇಮಕಾತಿ ಯಾಕೆ?: ಕೇಂದ್ರಕ್ಕೆ ʻಸುಪ್ರೀಂʼ ಚಾಟಿ
"ಭಾರತದ ಮುಖ್ಯ ಚುನಾವಣಾ ಆಯುಕ್ತರ ಹುದ್ದೆ ಮೇ ತಿಂಗಳಿನಿಂದ ನವೆಂಬರ್ವರೆಗೆ ಖಾಲಿಯಿತ್ತು. ಆವರೆಗೆ ಚುನಾವಣಾ ಆಯುಕ್ತರ ಹುದ್ದೆಗೆ ಸಂಬಂಧಿಸಿದಂತೆ ಸರ್ಕಾರ ಏನು ಕ್ರಮ ಕೈಗೊಂಡಿತ್ತು ಎಂಬುದು ತಿಳಿದಿಲ್ಲ. ಆದರೆ, ಗೋಯೆಲ್ ಅವರ ನೇಮಕಾತಿ ಪ್ರಕ್ರಿಯೆ ಒಂದೇ ದಿನದಲ್ಲಿ ಪೂರ್ಣಗೊಂಡಿದೆ. ನಾವು ಅರುಣ್ ಗೋಯೆಲ್ ಅವರ ಅರ್ಹತೆ ಪ್ರಶ್ನಿಸುತ್ತಿಲ್ಲ. ಆದರೆ, ಕೇವಲ 24 ಗಂಟೆಗಳಲ್ಲಿ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆ ಹೇಗೆ ಮುಗಿಯಿತು" ಎಂಬುದು ಪ್ರಶ್ನೆ ಎಂದು ಪೀಠ ಹೇಳಿತ್ತು.
"ಆಯುಕ್ತರ ನೇಮಕಾತಿ ಪ್ರಕ್ರಿಯೆಗೆ ನಾಲ್ವರು ಹೆಸರನ್ನು ಆಯ್ಕೆ ಮಾಡಲಾಗಿತ್ತು. ಆ ಪೈಕಿ ಸರ್ಕಾರ ತಾನು ತೆಗೆದುಕೊಳ್ಳುವ ನಿರ್ಧಾರಗಳಿಗೆ ಒಪ್ಪಿಗೆ ಸೂಚಿಸುವಂಥ ವ್ಯಕ್ತಿಯನ್ನೇ ಆಯ್ಕೆ ಮಾಡಿದೆ ಅಲ್ಲವೇ?" ಎಂದೂ ಕೋರ್ಟ್ ಗಂಭೀರ ಟೀಕೆ ಮಾಡಿತ್ತು.