ಗೋಧಿ ರಫ್ತು ನಿಷೇಧ | ರೈತ ವಿರೋಧಿ ನೀತಿ ಎಂದು ಜರೆದ ಕಿಸಾನ್ ಯೂನಿಯನ್‌

Wheat
  • ಗೋಧಿ ನಿಷೇಧ ರೈತ ವಿರೋಧಿ ನಿರ್ಧಾರ ಎಂದ ಕಿಸಾನ್ ಯೂನಿಯನ್‌
  • ಗೋಧಿಯ ಬೆಲೆ ಏರುವ ನಿರೀಕ್ಷೆಯಲ್ಲಿ ಸಂಗ್ರಹಿಸಿದ ರೈತರಿಗೆ ನಷ್ಟವಾಗಲಿದೆ 

ಗೋಧಿ ರಫ್ತು ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಪಂಜಾಬ್‌ನ ರೈತ ಸಂಘಗಳು ಸೋಮವಾರ 'ರೈತ ವಿರೋಧಿ' ಕ್ರಮ ಎಂದು ಟೀಕಿಸಿವೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ತಮ್ಮ ಬೆಳೆಗಳಿಗೆ ಹೆಚ್ಚಿನ ಬೆಲೆಯಿಂದ ಲಾಭ ಪಡೆಯಲು ಕೇಂದ್ರ ಸರ್ಕಾರವು ಅವಕಾಶ ನೀಡುತ್ತಿಲ್ಲ ಎಂದು ಹೇಳಿವೆ.

ಮಾರ್ಚ್‌ನಲ್ಲಿ ತೀವ್ರ ಬಿಸಿಲಿನ ಅಲೆಯಿಂದಾಗಿ ಧಾನ್ಯಗಳ ಇಳುವರಿಯ ಕುಸಿತ ಸರಿದೂಗಿಸಲು ಕ್ವಿಂಟಾಲ್ ಗೋಧಿಗೆ ₹500 ಬೋನಸ್ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದ್ದರು. ಆದರೂ ಬೋನಸ್ ಘೋಷಿಸದ ಕೇಂದ್ರದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಡಿಮೆ ಗೋಧಿ ಉತ್ಪಾದನೆಯ ನಡುವೆ ಏರುತ್ತಿರುವ ಬೆಲೆಗಳನ್ನು ಪರಿಶೀಲಿಸುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವು ಗೋಧಿ ರಫ್ತು ನಿಷೇಧಿಸಿದೆ. ಸರ್ಕಾರದ ಪ್ರಕಾರ ಈ ನಿರ್ಧಾರವು ಗೋಧಿ ಮತ್ತು ಗೋಧಿ ಹಿಟ್ಟಿನ ಚಿಲ್ಲರೆ ಬೆಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಳೆದ ಒಂದು ವರ್ಷದಲ್ಲಿ ಗೋಧಿ ಬೆಲೆಯಲ್ಲಿ ಶೇ. 14-20 ಏರಿಕೆಯಾಗಿದೆ. 

"ಪಂಜಾಬ್‌ನಲ್ಲಿ ಹಲವಾರು ರೈತರು, ವಿಶೇಷವಾಗಿ ದೊಡ್ಡ ಗೋಧಿ ಬೆಳೆಗಾರರು, ಹೆಚ್ಚಿನ ಆದಾಯ ಪಡೆಯುವ ನಿರೀಕ್ಷೆಯಲ್ಲಿ ಬೆಳೆ ಸಂಗ್ರಹಿಸಿದ್ದಾರೆ. ಗೋಧಿ ನಿಷೇಧವು ರೈತ ವಿರೋಧಿ ನಿರ್ಧಾರ" ಎಂದು ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರನ್) ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೊಕ್ರಿಕಲನ್ ಸೋಮವಾರ ಹೇಳಿದರು.

ದೇಶೀ ಮಾರುಕಟ್ಟೆಯಲ್ಲಿ ಬೆಲೆ ಅಧಿಕವಾದಾಗ ಹೆಚ್ಚಿನ ಆದಾಯ ಪಡೆಯುವ ನಿರೀಕ್ಷೆಯಲ್ಲಿ ಬೆಳೆ ಸಂಗ್ರಹಿಸಿರುವ ರೈತರಿಗೆ ರಫ್ತು ನಿಷೇಧದಿಂದ ಹೊಡೆತ ಬೀಳಲಿದೆ ಎಂದು ಅವರು ಹೇಳಿದರು.

ಭಾರತೀಯ ಕಿಸಾನ್ ಯೂನಿಯನ್ (ಲಖೋವಾಲ್) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೋವಲ್ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. “ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿದ ಬೆಲೆಗಳ ಲಾಭ ಪಡೆಯಲು ಸರ್ಕಾರವು ರಫ್ತು ಮುಂದುವರಿಸಬೇಕಿತ್ತು. ಈ ನಿರ್ಧಾರವು ರೈತರ ಹಿತಾಸಕ್ತಿಯಿಂದ ತೆಗೆದುಕೊಂಡಿಲ್ಲ" ಎಂದು ಲಖೋವಾಲ್ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ ? ಗೋಧಿ ರಫ್ತು ನಿಲ್ಲಿಸುವ ಭಾರತದ ನಿರ್ಧಾರವನ್ನು ಟೀಕಿಸಿದ ಜಿ7 ರಾಷ್ಟ್ರಗಳು

ಗೋಧಿ ರಫ್ತು ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರೂ ವಿರೋಧಿಸಿದ್ದಾರೆ. “ಈ ಕ್ರಮದಿಂದ ಬೆಳೆಗೆ ಬೇಡಿಕೆ ಕುಸಿಯುತ್ತದೆ ಮತ್ತು ರೈತರು ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಾರೆ” ಎಂದು ಟೀಕಿಸಿದರು.

ಮೇ 31 ರವರೆಗೆ ರಾಜ್ಯದ 232 ಮಂಡಿಗಳಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಗೋಧಿ ಸಂಗ್ರಹಣೆ ಕಾರ್ಯಾಚರಣೆ ಮುಂದುವರಿಸಲು ಪಂಜಾಬ್ ಸರ್ಕಾರ ಭಾನುವಾರ ಆದೇಶಿಸಿದೆ. ಗೋಧಿ ರಫ್ತಿನ ಮೇಲಿನ ನಿರ್ಬಂಧವು ದೇಶೀಯ ಮಾರುಕಟ್ಟೆಯಲ್ಲಿ ಆಹಾರ ಧಾನ್ಯದ ಬೆಲೆಯಲ್ಲಿನ ಕುಸಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಪಂಜಾಬ್‌ನ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಲಾಲ್ ಚಂದ್ ಕತರುಚಕ್ ಭಾನುವಾರ ಹೇಳಿದ್ದಾರೆ.

"ಇದರ ಪರಿಣಾಮವಾಗಿ ಹೆಚ್ಚಿನ ಬೆಲೆ ಪಡೆಯುವ ನಿರೀಕ್ಷೆಯಲ್ಲಿ ಗೋಧಿ ಉತ್ಪನ್ನಗಳನ್ನು ಸಂಗ್ರಹಿಸಿದ್ದ ಕೆಲ ರೈತರು ಈಗ ಮರುಚಿಂತನೆ ಮಾಡಿ ಮತ್ತು ಗೋಧಿ ಮಾರಾಟದ ಆಯ್ಕೆ ಮಾಡಬಹುದು. ಹೀಗಿರುವಾಗ ಕನಿಷ್ಠ ಬೆಂಬಲ ಬೆಲೆಯಲ್ಲಿ ಸರ್ಕಾರದ ಖರೀದಿಯ ಸೌಲಭ್ಯ ಅಗತ್ಯವಾಗಿ ಸಿಗಬೇಕು" ಎಂದು ಕತರುಚಕ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿ ಪಂಜಾಬ್‌ನಲ್ಲಿ ಗೋಧಿ ಉತ್ಪಾದನೆಯು ಸುಮಾರು 30 ಲಕ್ಷ ಮೆಟ್ರಿಕ್ ಟನ್‌ಗಳಿಂದ 147 ಮೆಟ್ರಿಕ್ ಟನ್‌ಗೆ ಇಳಿಯುವ ನಿರೀಕ್ಷೆಯಿದೆ. ಮಾರ್ಚ್ ತಿಂಗಳ ಹಠಾತ್ ಅಧಿಕ ತಾಪಮಾನದಿಂದ ಬೆಳೆ ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ ನಿರೀಕ್ಷಿಸಿದ್ದ 177 ಲಕ್ಷ ಮೆಟ್ರಿಕ್‌ ಟನ್ ಗೋಧಿ ಉತ್ಪಾದನೆ ಸಾಧ್ಯವಾಗದು. ಕಡಿಮೆ ಇಳುವರಿಯಿಂದಾಗಿ ಪಂಜಾಬ್‌ನಿಂದ 132 ಲಕ್ಷ ಮೆಟ್ರಿಕ್‌ ಟನ್ ಗೋಧಿ ಸಂಗ್ರಹಣೆ ನಿರೀಕ್ಷಿತ ಗುರಿಯೂ ಸಾಧಿಸಲಾಗದು ಎಂದು ಹೇಳಲಾಗಿದೆ.

ಈವರೆಗೆ ಧಾನ್ಯ ಮಾರುಕಟ್ಟೆಗೆ ಒಟ್ಟು 102.27 ಲಕ್ಷ ಮೆಟ್ರಿಕ್‌ ಟನ್ ಗೋಧಿ ಆಗಮನವಾಗಿದೆ. ಸರ್ಕಾರಿ ಖರೀದಿ ಏಜೆನ್ಸಿಗಳು 96.17 ಲಕ್ಷ ಮೆಟ್ರಿಕ್ ಟನ್ ಖರೀದಿಸಿದರೆ, ಖಾಸಗಿ ವರ್ತಕರು 6.10 ಲಕ್ಷ ಮೆಟ್ರಿಕ್ ಟನ್ ಖರೀದಿಸಿದ್ದಾರೆ ಎಂದು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಆದರೆ, ‘ಪಂಜಾಬ್ ರೋಲರ್ ಫ್ಲೋರ್ ಮಿಲ್ಲರ್ಸ್ ಅಸೋಸಿಯೇಷನ್’ ​​ಅಧ್ಯಕ್ಷ ನರೇಶ್ ಘಾಯ್ ಕೇಂದ್ರದ ಕ್ರಮವನ್ನು ಶ್ಲಾಘಿಸಿದ್ದಾರೆ. ರಫ್ತು ನಿಷೇಧವು ಗೋಧಿ ಬೆಲೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಮಧ್ಯಪ್ರದೇಶ ಮತ್ತು ಇತರ ರಾಜ್ಯದ ಮಂಡಿಗಳಲ್ಲಿ ಗೋಧಿ ಬೆಲೆ ಕ್ವಿಂಟಾಲ್‌ಗೆ ₹2,200ಗೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ಶೇ. 18ರಷ್ಟು ಸುಕ್ಕುಗಟ್ಟಿದ ಗೋಧಿ ಧಾನ್ಯಗಳನ್ನು ಅನುಮತಿಸಲು ಕೇಂದ್ರವು ಈ ಹಿಂದೆ ಸಂಗ್ರಹಣೆ ನಿಯಮಗಳನ್ನು ಸಡಿಲಗೊಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್