ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌| ಐತಿಹಾಸಿಕ ಚಿನ್ನ ಗೆದ್ದ ʻಅಂತಿಮ್‌ʼ ಹೆಸರಿನ ಹಿಂದಿದೆ ಅಚ್ಚರಿಯ ಕಾರಣ

  • ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿಪಟು ಅಂತಿಮ್‌ ಪಂಘಲ್‌ಗೆ ಚಿನ್ನದ ಪದಕ
  • ಈ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ ಮೊದಲ ಭಾರತೀಯ ಮಹಿಳೆ

20 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ಅಂತಿಮ್‌ ಪಂಘಲ್‌ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ 53 ಕೆ ಜಿ ವಿಭಾಗದಲ್ಲಿ ಅಂತಿಮ್‌ ಮೊದಲ ಸ್ಥಾನ ಪಡೆದರು. ಈ ಮೂಲಕ ಈ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

18 ವರ್ಷದ ಅಂತಿಮ್‌, 8-0 ಅಂತರದಿಂದ ಕಜಕಿಸ್ತಾನ್‌ನ ಅಟ್ಲಿನ್ ಶಗಾಯೆವಾ ಅವರನ್ನು ಸೋಲಿಸಿ, ಪದಕಕ್ಕೆ ಮುತ್ತಿಕ್ಕಿದರು. 2018ರಲ್ಲಿ ನಡೆದಿದ್ದ ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಮತ್ತು 2021ರಲ್ಲಿ ನಡೆದಿದ್ದ ಕೆಡೆಟ್‌ ವಿಶ್ಚ ಶಾಂಪಿಯನ್‌ಶಿಪ್‌ನಲ್ಲಿ ಅಂತಿಮ್‌ ಕಂಚಿನ ಪದಕ ಗೆದ್ದಿದ್ದರು. ಈ ವರ್ಷ ನಡೆದಿದ್ದ 23 ವರ್ಷದೊಳಗಿನ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕದೊಂದಿಗೆ ತವರಿಗೆ ಮರಳಿದ್ದರು.‌

ಈ ಸುದ್ದಿ ಓದಿದ್ದೀರಾ?: ಕೋವಿಡ್ ಸುದ್ದಿ | ರಾಜ್ಯದಲ್ಲಿ 1,034, ದೇಶಾದ್ಯಂತ 11,726 ಮಂದಿ ಸೋಂಕಿನಿಂದ ಗುಣಮುಖ

ʻಅಂತಿಮ್ʼ ಹೆಸರಿನ ಹಿಂದಿದೆ ಕುತೂಹಲಕಾರಿ ಕತೆ

ಹರಿಯಾಣದ ಹಿಸ್ಸಾರ್‌ನವರಾದ ಅಂತಿಮ್‌ ಅವರ ತಂದೆ ರಾಮ್‌ ನಿವಾಸ್‌ ಮತ್ತು ತಾಯಿ ಕಿರಿಶನ್‌ ಕುಮಾರಿ. ಮೂರು ಮಂದಿ ಅಕ್ಕಂದಿರ ಮುದ್ದಿನ ತಂಗಿಯಾದ ಅಂತಿಮ್‌ ಅವರಿಗೆ ಬಾಲ್ಯದಿಂದಲೇ ಕುಸ್ತಿ, ಕ್ರೀಡೆಯಲ್ಲಿ ಅತೀವ ಆಸಕ್ತಿಯಿತ್ತು. ತಾಯಿಯೊಂದಿಗೆ ಗದ್ದೆಗೆ ಊಟ ಹೊತ್ತೊಯ್ಯುತ್ತಿದ್ದ ಅಂತಿಮ್‌, ಹಳ್ಳಿಯ ಅಖಾಡದಲ್ಲಿ ಸ್ಥಳೀಯ ಕುಸ್ತಿಪಟುಗಳು ತರಬೇತಿ ಪಡೆಯುವುದನ್ನು ನೋಡುತ್ತಿದ್ದಳು. ಮಗಳ ಕ್ರೀಡಾಸಕ್ತಿಗೆ ಬೆನ್ನೆಲುಬಾಗಿ ನಿಂತ ಪೋಷಕರು, ಆಕೆಯನ್ನು ಕುಸ್ತಿಯಲ್ಲಿ ಮುಂದುವರೆಯುವಂತೆ ಪ್ರೋತ್ಸಾಹಿಸಿದರು. ವಿಶ್ವ ಚಾಂಪಿಯನ್‌ಶಿಪ್‌ ಕುಸ್ತಿಯ ಫೈನಲ್ಸ್‌ನಲ್ಲಿಯೂ ಅಷ್ಟೆ, ಮಗಳು ಕುಸ್ತಿ ಅಕಾಡೆಮಿಗೆ ಹೋದ ಸಮಯದಿಂದ ಫೈನಲ್ಸ್‌ನವರೆಗೆ ಮಗಳು ಗೆಲುವಿನ ನಗೆ ಬೀರುವವರೆಗೂ ಅದನ್ನು ಮೊಬೈಲ್‌ನಲ್ಲಿ ವೀಕ್ಷಿಸುತ್ತಿದ್ದರು.

ʻʻನಮಗೆ ನಾಲ್ಕು ಹೆಣ್ಣುಮಕ್ಕಳು ಜನಿಸಿದ್ದರಿಂದ ಇನ್ನೊಂದು ಮಗಳು ಹುಟ್ಟಬಾರದೆಂದು ನಾವು ನಮ್ಮ ಮಗಳಿಗೆ ಅಂತಿಮ್‌ ಎಂದು ಹೆಸರಿಟ್ಟೆವು. ನಮ್ಮೆಲ್ಲರ ಪ್ರೀತಿಯ ಮಗಳವಳು. ವಿಶ್ವ ಚಾಂಪಿಯನ್‌ಶಿಪ್‌ಗೆ ಹೋಗುವ ಮೊದಲು, ಚಿನ್ನದ ಪದಕದೊಂದಿಗೆ ಮರಳುವುದಾಗಿ ಅವಳು ಹೇಳಿದ್ದಳು. ಅಂತಿಮ್‌ ಇಂದು ಕುಸ್ತಿ ಜಗತ್ತಿನಲ್ಲಿ ʻಪ್ರಥಮʼಳಾಗಿದ್ದಾಳೆʼʼ ಎಂದು ಅಂತಿಮ್‌ ಅವರ ತಾಯಿ ಕಿರಿಶನ್‌ ಕುಮಾರಿ ಪ್ರತಿಕ್ರಿಯಿಸಿದ್ದಾರೆ.

Image

"ಬಾಲ್ಯದಲ್ಲಿ ನನ್ನ ತಂದೆಯೊಂದಿಗೆ ತೋಟದಿಂದ ಹಿಂದಿರುಗುವಾಗ ಸ್ಥಳೀಯ ಕುಸ್ತಿಪಟುಗಳು ತರಬೇತಿ ಪಡೆಯುವುದನ್ನು ನೋಡುತ್ತಾ, ನಾನೂ ಕುಸ್ತಿ ಪಟು ಆಗಬೇಕೆಂದು ಬಯಸುತ್ತಿದ್ದೆ. ನನ್ನ ಹೆಸರಿನ ಬಗ್ಗೆ ತಂದೆ ನನ್ನೊಂದಿಗೆ ಎಂದೂ ಚರ್ಚಿಸಿಲ್ಲ. ಆದರೆ, ನಾನು ಎಲ್ಲವನ್ನು ಮಾಡುತ್ತೇನೆ ಎಂದು ಯಾವಾಗಲೂ ಹೇಳುತ್ತಿದ್ದರುʼʼ ಎನ್ನುತ್ತಾರೆ ಅಂತಿಮ್‌.

ನಿಮಗೆ ಏನು ಅನ್ನಿಸ್ತು?
0 ವೋಟ್