ನೇಮಕವಾದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆಜಾದ್ ರಾಜೀನಾಮೆ

Gulab Nabi Azad
  • ಪಕ್ಷದೊಂದಿಗಿನ ಅಸಮಾಧಾನ ಗುಲಾಂ ನಬಿ ಆಜಾದ್ ರಾಜೀನಾಮೆಗೆ ಕಾರಣ?
  • ಕಾಂಗ್ರೆಸ್ ರಾಜಕೀಯ ವ್ಯವಹಾರ ಸಮಿತಿಯ ಸ್ಥಾನಕ್ಕೂ ಆಜಾದ್ ರಾಜೀನಾಮೆ

ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಮಂಗಳವಾರ(ಆಗಸ್ಟ್ 16) ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ (ಜೆಕೆಪಿಸಿಸಿ) ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರು ಆಜಾದ್ ಅವರನ್ನು ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಿಸಿದ್ದರು. ಆದರೆ, ಆನಾರೋಗ್ಯ ಕಾರಣಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಆಜಾದ್ ನಿರಾಕರಿಸಿದ್ದಾರೆ. ವರಿಷ್ಠರ ಆದೇಶ ಬಂದ ಕೆಲವೇ ಗಂಟೆಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಜಾದ್‌ ರಾಜೀನಾಮೆ ನೀಡಿದ್ದಾರೆ.  

ಅಲ್ಲದೆ, ಅವರು ಜಮ್ಮು-ಕಾಶ್ಮೀರದ ಕಾಂಗ್ರೆಸ್ ರಾಜಕೀಯ ವ್ಯವಹಾರ ಸಮಿತಿಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ದೀರ್ಘ ಕಾಲದಿಂದ ಪಕ್ಷದ ಜೊತೆ ಇದ್ದ ಅಸಮಾಧಾನವೇ ರಾಜೀನಾಮೆಗೆ ಕಾರಣ ಎಂದು ಮೂಲಗಳು ಹೇಳಿವೆ.   

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ | ಇಂದ್ರ ಮೇಘವಾಲ್ ಹತ್ಯೆ ಖಂಡಿಸಿ ಪುರಸಭೆ 12 ಸದಸ್ಯರ ರಾಜೀನಾಮೆ

ಈ ಹಿಂದೆ ಆಜಾದ್ ಅವರ ಆಪ್ತ ಗುಲಾಮ್ ಅಹ್ಮದ್ ಮಿರ್ ಅವರು ಜಮ್ಮು–ಕಾಶ್ಮೀರದ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅವರು ಜುಲೈ 6ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೋನಿಯಾ ಗಾಂಧಿ ಅವರು ಮಂಗಳವಾರ ವಿಕರ್ ರಸೂಲ್ ವಾನಿ ಅವರನ್ನು ಜಮ್ಮು ಮತ್ತು ಕಾಶ್ಮೀರದ ಅಧ್ಯಕ್ಷರಾಗಿ ಮತ್ತು ರೇಮನ್ ಭಲ್ಲಾ ಅವರನ್ನು ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಇದೇ ವೇಳೆ, 11 ಸದಸ್ಯರನ್ನೊಳಗೊಂಡ ಪ್ರಚಾರ ಸಮಿತಿಗೆ ಆಜಾದ್ ಅವರನ್ನು ಅಧ್ಯಕ್ಷರಾಗಿ ಮತ್ತು ತಾರಿಕ್ ಹಮೀದ್ ಕರ್ರಾ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು. 

ಗುಲಾಂ ನಬಿ ಆಜಾದ್ ಅವರನ್ನು ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಆಜಾದ್ ಅವರು ಮುಂಬರುವ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮುನ್ನಡೆಸಲಿದ್ದಾರೆ ಎಂದು ಹೇಳಿತ್ತು. ಆದರೆ, ಆಜಾದ್‌ ಆ ಜವಾಬ್ದಾರಿಯನ್ನು ನಿರಾಕರಿಸಿ ರಾಜೀನಾಮೆ ನೀಡಿದ್ದಾರೆ.

ನಾಯಕತ್ವ ಬದಲಾವಣೆ ಸೇರಿ ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಗೆ ಆಗ್ರಹಿಸಿದ್ದ 23 ಮಂದಿ ಜಿ-23 ಬಂಡಾಯ ನಾಯಕರಲ್ಲಿ ಆಜಾದ್ ಸಹ ಒಬ್ಬರು. ಪಕ್ಷದೊಳಗಿನ ಆ ಅಸಮಾಧಾನವೂ ಆಜಾದ್ ರಾಜೀನಾಮೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಇತರ ಅಸಮಾಧಾನಿತ ನಾಯಕರ ನಡೆ ಇನ್ನೂ ನಿಗೂಢವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್