
ಸ್ವಂತ ಮಗಳು (11) ಮತ್ತು ಮಗನ (10) ಮೇಲೆ ಲೈಂಗಿಕ ಕಿರುಕುಳಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದ 30 ವರ್ಷದ ಮಹಿಳೆಯನ್ನು ನಿರಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ್ದ ತಮಿಳುನಾಡಿನ ಪರಮೌರ್ನ ವಿಶೇಷ ಪೋಕ್ಸೋ ನ್ಯಾಯಾಲಯವು, ಈ ಪ್ರಕರಣದಲ್ಲಿ ಮಹಿಳೆಯನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂಬುದನ್ನು ಗಮನಿಸಿದೆ. ತಮ್ಮ ತಾಯಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧದಲ್ಲಿದ್ದ ಆಕ್ರೋಶಕ್ಕೆ ಮಕ್ಕಳು ಅವರಿಬ್ಬರ ವಿರುದ್ಧ ದೂರು ನೀಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಂದಿಗೆ ಮಹಿಳೆಯ ವಿವಾಹ ಮಾಡಲಾಗಿತ್ತು. ಇಬ್ಬರು ಮಕ್ಕಳು ತಾಯಿಯೊಂದಿಗೆ ವಾಸವಾಗಿದ್ದರು. ಪತಿ ವ್ಯಕ್ತಿಯೊಬ್ಬರ ಹತ್ತಿರ ಸಾಲ ಮಾಡಿದ್ದ. ಆ ಸಾಲ ತೀರಿಸದ ಕಾರಣ ಆತನ ವಿರುದ್ಧ ಪ್ರಕರಣ ದಾಖಲಾಗಿ, ಆತ ಜೈಲಿನಲ್ಲಿರುವುದನ್ನು ನ್ಯಾಯಾಲಯ ಗಮನಿಸಿದೆ.
ತಂದೆಗೆ ಸಾಲ ಕೊಟ್ಟಿದ್ದ ವ್ಯಕ್ತಿಯೊಂದಿಗೆ ತಾಯಿ ಸಂಬಂಧ ಮುಂದುವರಿಸಿದ್ದು ಮಕ್ಕಳಿಗೆ ಇಷ್ಟವಾಗಿರಲಿಲ್ಲ. ಹೀಗಾಗಿ, ಮಕ್ಕಳು ಪೋಕ್ಸೋ ಪ್ರಕರಣದಡಿ ದೂರು ದಾಖಲಿಸಿದ್ದರು.
ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯವು ಆಧಾರಗಳ ಕೊರತೆಯಿದೆ ಎಂದು ಹೇಳಿ ಇಬ್ಬರಿಗೂ ಜಾಮೀನು ನೀಡಿದೆ.