ತಮಿಳುನಾಡು | ದಲಿತರಿಗೆ ಮನೆ ಬಾಡಿಗೆಗೆ ಕೊಡಲು ನಿರಾಕರಿಸಿದ ಮಾಲೀಕನ ವಿರುದ್ಧ ದೂರು ದಾಖಲು

  • ದಲಿತರಿಗೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ ಮನೆ ಮಾಲೀಕ
  • ಮನೆ ಮಾಲೀಕರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು

ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ವ್ಯಕ್ತಿಯೊಬ್ಬರಿಗೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ ಆರೋಪದ ಮೇಲೆ ಮನೆ ಮಾಲೀಕರಾಗಿದ್ದ ಮಹಿಳೆಯ ಮೇಲೆ ಎಸ್‌ಸಿ/ ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಒಟ್ಟನ್‌ಛತ್ರಂ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ತಮಿಳುನಾಡಿನ ದಿಂಡಿಗಲ್‌ನಲ್ಲಿ ನಡೆದಿದೆ.

ಅರಸಪಿಳ್ಳೈಪಟ್ಟಿ ಗ್ರಾಮದ ಮಧುರೈ ವೀರನ್ ಎಂಬ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಸೆಪ್ಟೆಂಬರ್ 14ರಂದು ಲಕ್ಷ್ಮಿ ಮತ್ತು ವೇಲುಸಾಮಿ ದಂಪತಿಗಳ ಒಡೆತನದ ಕಟ್ಟಡದ ಮನೆಯನ್ನು ಬಾಡಿಗೆಗೆ ಪಡೆಯಲು ಸಂಪರ್ಕಿಸಿದ್ದರು ಎಂದು ಪೊಲೀಸರು ತಿಳಿಸಿರುವುದಾಗಿ 'ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌' ವರದಿ ಉಲ್ಲೇಖಿಸಿದೆ.

"ವೇಲುಸಾಮಿ ದಂಪತಿ ಬಾಡಿಗೆ ಮನೆ ತೋರಿಸಲು ವೀರನ್‌ ಮತ್ತು ಅವರ ಜೊತೆಯಲ್ಲಿದ್ದ ಇಬ್ಬರನ್ನು ಬಾಡಿಗೆ ಮನೆಗೆ ಕರೆದೊಯ್ದಿದ್ದಾರೆ. ಮನೆ ಮಾಲೀಕ ಲಕ್ಷ್ಮಿ ವೀರನ್ ಅವರ ಜಾತಿ ವಿವರಗಳನ್ನು ಕೇಳಿದ್ದಾರೆ. ವೀರನ್‌ ತನ್ನ ಸಮುದಾಯದ ಬಗ್ಗೆ ಹೇಳಿದಾಗ ಅವರಿಗೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ್ದಾರೆ. ಮತ್ತು ದಲಿತರಿಗೆ ಮನೆ ನೀಡಿದರೆ ಕುಲದೇವತೆಗೆ ಅಪಚಾರವಾಗುತ್ತದೆ ಎಂದಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚಾಮರಾಜನಗರ | ಪೊಲೀಸರ ಮೇಲೆ ಗಣೇಶೋತ್ಸವ ಸಂಘಟಕರಿಂದ ಹಲ್ಲೆ: ಐವರ ಬಂಧನ

ʻʻಎಸ್‌ಟಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಹಿನ್ನೆಲೆಯ ವ್ಯಕ್ತಿಗಳಿಗೂ ಮನೆ ಬಾಡಿಗೆಗೆ ನೀಡುವುದಿಲ್ಲ ಎಂದು ಮಹಿಳೆ ಹೇಳಿದರು. ಮನೆ ಮಾಲೀಕ ವೇಲುಸಾಮಿ, ಒಟ್ಟನ್‌ಛತ್ರಂ ಮಾರುಕಟ್ಟೆಯಲ್ಲಿ ತರಕಾರಿ ಸಗಟು ಅಂಗಡಿ ನಡೆಸುತ್ತಿದ್ದು, ದಲಿತ ಜನರ ದುಡಿಮೆಯಿಂದ ಲಕ್ಷಗಟ್ಟಲೆ ಲಾಭ ಗಳಿಸಿದ್ದಾರೆ. ಆದರೆ, ಅವರ ಪತ್ನಿ ದಲಿತ ಸಮುದಾಯದವರಿಗೆ ಮನೆ ಬಾಡಿಗೆಗೆ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ಈ ಮನಸ್ಥಿತಿ ಮೊದಲು ಬದಲಾಗಬೇಕು" ಎಂದು ವೀರನ್ ಜೊತೆಗಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಾದ ವಿಸಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಜಾನ್ಸನ್ ಕ್ರಿಸ್ಟೋಫರ್ ವಿವರಿಸಿದ್ದಾರೆ.

ವೀರನ್ ನೀಡಿದ ದೂರಿನ ಮೇರೆಗೆ ಮನೆ ಮಾಲೀಕ ಲಕ್ಷ್ಮಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುರಿತು ವಿಚಾರಣೆ ನಡೆಸಲು ಪೊಲೀಸರು ಮನೆ ಮಾಲೀಕನ ಮನೆಗೆ ಹೋದಾಗ, ಅವರು ಪರಾರಿಯಾಗಿದ್ದರು. ಅವರ ಪತ್ತೆಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಲಿತರು, ಅಲ್ಪಸಂಖ್ಯಾತ ಸಮುದಾಯದವರು ಎಂಬ ಕಾರಣಕ್ಕೆ ಮನೆ ಬಾಡಿಗೆಗೆ ಕೊಡಲು ಒಪ್ಪದ ಹಲವಾರು ಪ್ರಕರಣಗಳು ಕರ್ನಾಟಕದ ನಾನಾ ಭಾಗಗಳಲ್ಲಿ ವರದಿಯಾಗುತ್ತಲೇ ಇವೆ. ಶಿಕ್ಷಕರೊಬ್ಬರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಮನೆ ಬಾಡಿಗೆ ನೀಡಲು ಹಲವು ಮನೆ ಮಾಲೀಕರು ನಿರಾಕರಿಸಿದ್ದ ಘಟನೆ ನಾಲ್ಕೈದು ವರ್ಷಗಳ ಹಿಂದೆ ಮೈಸೂರಿನ ನಂಜನಗೂಡಿನಲ್ಲಿ ವರದಿಯಾಗಿತ್ತು. ಮುಸ್ಲಿಮರು ಎಂಬ ಕಾರಣಕ್ಕೆ ಮನೆ ಬಾಡಿಗೆಗೆ ಕೊಡದೇ ಅವಮಾನಿಸಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು.

ʻಮನೆ ಖಾಲಿ ಇದೆʼ ಎಂಬ ಬೋರ್ಡ್‌ ಜೊತೆಯಲ್ಲಿ ಸಸ್ಯಹಾರಿಗಳಿಗೆ ಮಾತ್ರ, ಬ್ರಾಹ್ಮಣರಿಗೆ ಮಾತ್ರ ಎಂದೂ ಬರೆಯುವ ಖಯಾಲಿ ಸರ್ವೇಸಾಮಾನ್ಯ ಎನ್ನುವಂತಿದೆ. ಬಾಡಿಗೆ ಮನೆ ವಿಚಾರಿಸಿ ಕಾಲ್‌ ಮಾಡಿದರೆ, ನೀವು ಯಾವ ಜಾತಿ, ಯಾವ ಧರ್ಮ, ಸಸ್ಯಹಾರಿಯೋ ಮಾಂಸಹಾರಿಯೋ ಎಂದು ಕೇಳುವ ತಾರತಮ್ಯ ಮನಸ್ಥಿತಿ ಇಂದಿನ ದಿನಗಳಲ್ಲೂ ಹೆಚ್ಚಿರುವುದು ಬೇಸರದ ಸಂಗತಿ.

ನಿಮಗೆ ಏನು ಅನ್ನಿಸ್ತು?
3 ವೋಟ್
Image
av 930X180