ಲೈಂಗಿಕ ಕಿರುಕುಳಕ್ಕೆ ಪ್ರತಿರೋಧ: ಚಲಿಸುತ್ತಿದ್ದ ಟ್ರಕ್‌ನಿಂದ ಮಹಿಳೆಯನ್ನು ಹೊರದಬ್ಬಿದ ಚಾಲಕ

  • ಲೈಂಗಿಕ ಕಿರುಕುಳಕ್ಕೆ ಪ್ರತಿರೋಧ ತೋರಿದ ಮಹಿಳೆ
  • ರಾಡ್‌ನಿಂದ ಹಲ್ಲೆ ನಡೆಸಿ ಹೊರ ದಬ್ಬಿದ ಚಾಲಕ

ಲೈಂಗಿಕ ಕಿರುಕುಳಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆಯನ್ನು ಚಲಿಸುತ್ತಿದ್ದ ಟ್ರಕ್‌ನಿಂದ ಹೊರದಬ್ಬಿರುವ ಅಮಾನುಷ ಘಟನೆ ಉತ್ತರಪ್ರದೇಶದ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆ ಸಂಬಂಧ ಟ್ರಕ್‌ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 

"ಆಗಸ್ಟ್‌ 6ರಂದು ಈ ಘಟನೆ ನಡೆದಿದೆ. ಹೆದ್ದಾರಿ ಬಳಿ ನಿಂತಿದ್ದ 27 ವರ್ಷದ ಮಹಿಳೆಗೆ ಲಿಫ್ಟ್‌ ಕೊಡುವುದಾಗಿ ಟ್ರಕ್‌ಗೆ ಹತ್ತಿಸಿಕೊಂಡ ಚಾಲಕ, ಮಾರ್ಗ ಮಧ್ಯೆ ಆಕೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಅದಕ್ಕೆ ಮಹಿಳೆ ಪ್ರತಿರೋಧ ಒಡ್ಡಿದಾಗ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ವಾಹನದಿಂದ ಹೊರದಬ್ಬಿದ್ದಾನೆ" ಎಂದು ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಷ್‌ ಚಂದ್ರ ಹೇಳಿದ್ದಾರೆ.  

"ಚಾಲಕ ಯಾವಾಗ ಕಿರುಕುಳ ನೀಡಲು ಆರಂಭಿಸಿದನೋ, ಆಗ ಮಹಿಳೆ ನೆರವಿಗಾಗಿ ಕೂಗಿದ್ದಾಳೆ. ಇದನ್ನು ಗಮನಿಸಿದ ಇತರೆ ವಾಹನಗಳ ಚಾಲಕರು ಟ್ರಕ್ ಅನ್ನು ಹಿಂಬಾಲಿಸಿದ್ದಾರೆ. ಇದರಿಂದ ದಿಗ್ಭ್ರಮೆಗೊಂಡ ಚಾಲಕ, ಮಹಿಳೆಯ ತಲೆಗೆ ರಾಡ್‌ನಿಂದ ಹೊಡೆದು, ಚಲಿಸುತ್ತಿದ್ದ ಟ್ರಕ್‌ನಿಂದ ಹೊರದಬ್ಬಿದ್ದಾನೆ" ಎಂದೂ ಎಸ್‌ಪಿ ತಿಳಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಉತ್ತರ ಪ್ರದೇಶ| ಎಸ್‌ಪಿ ನಾಯಕನ ಕಾರಿಗೆ ಟ್ರಕ್ ಡಿಕ್ಕಿ, 500 ಮೀಟರ್ ಎಳೆದೊಯ್ದ ವಾಹನ

ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. "ಸಂತ್ರಸ್ತೆ ತಂದೆಯ ದೂರಿನ ಮೇರೆಗೆ ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ. 

ಮಹಿಳೆಯು ಔಷಧಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಔಷಧಿ ವಿತರಣೆ ಮಾಡಿ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್