ಬಿಹಾರ | ಅನಸ್ತೇಶಿಯಾ ನೀಡದೇ 24 ಮಹಿಳೆಯರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ: ಆರೋಪ

  • ಅರಿವಳಿಕೆ ನೀಡದೇ ಶಸ್ತ್ರಚಿಕಿತ್ಸೆ; ತನಿಖೆಗೆ ಆದೇಶಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್
  • ಈ ಹಿಂದೆ ಅರಾರಿಯಾ ಜಿಲ್ಲೆಯಲ್ಲಿ ನಡೆದಿತ್ತು ಇದೇ ರೀತಿಯ ಶಸ್ತ್ರಚಿಕಿತ್ಸೆ

ವೈದ್ಯಕೀಯ ನಿರ್ಲಕ್ಷ್ಯದ ಘಟನೆಗಳು ಭಾರತದಾದ್ಯಂತ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಇಂತಹ ಹಲವು ಪ್ರಕರಣಗಳಲ್ಲಿ ರೋಗಿಗಳು ಮೃತಪಟ್ಟಿರುವುದು ವರದಿಯಾಗಿದೆ. ಇತ್ತೀಚೆಗೆ ಹಳ್ಳಿಯೊಂದರ 24 ಮಹಿಳೆಯರಿಗೆ ಸ್ಥಳೀಯ ಅರಿವಳಿಕೆ ಮದ್ದು (ಅನಸ್ತೇಶಿಯಾ) ನೀಡದೇ ಸಂತಾನ ಹರಣ ಶಸ್ತ್ರಚಿಕಿತ್ಸೆ (ಟ್ಯುಬೆಕ್ಟಮಿ) ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಇಂತಹ ಆಘಾತಕಾರಿ ಘಟನೆ ಬಿಹಾರದ ಖಗಾರಿಯಾದ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಸಂತಾಹ ಹರಣ ಚಿಕಿತ್ಸೆ ನಡೆಸುವಾಗ ಕನಿಷ್ಠ ಸ್ಥಳೀಯ ಅರಿವಳಿಕೆ ಅಗತ್ಯವಿರುತ್ತದೆ. ಆದರೆ, ಇಲ್ಲಿ ಶಸ್ತ್ರಚಿಕಿತ್ಸೆ ನಡೆದ ಸಮಯದಲ್ಲಿ ರೋಗಿಗಳಿಗೆ ಅರಿವಳಿಕೆ ಮದ್ದು ನೀಡಿಲ್ಲ. ರೋಗಿಗಳು ಸಂಪೂರ್ಣವಾಗಿ ಎಚ್ಚರಗೊಂಡಿದ್ದರು. ಅವರನ್ನು ವೈದ್ಯರ ಸಹಾಯಕರು ಬಿಗಿಯಾಗಿ ಹಿಡಿದುಕೊಂಡಿದ್ದರೆ, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸ್ಥಳೀಯ ಅರಿವಳಿಕೆ ನೀಡದೇ ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ 30 ವರ್ಷದ ಗುರ್ಹಿಯಾ ದೇವಿ ಅವರು ನೋವಿನಿಂದ ನರಳಿದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Eedina App

“ಬಿಹಾರದ ಖಗಾರಿಯಾದಲ್ಲಿ ಹಳ್ಳಿಯೊಂದರ ಸುಮಾರು 24 ಮಹಿಳೆಯರಿಗೆ ಅರಿವಳಿಕೆ ಇಲ್ಲದೆ ಸಂತಾನ ಹರಣ ಚಿಕಿತ್ಸೆ ಮಾಡಲಾಗಿದೆ ಎಂಬ ಆಘಾತಕಾರಿ, ಊಹೆಗೂ ನಿಲುಕದ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಚಿಕಿತ್ಸೆಗೆ ಒಳಗಾದವರು ಅವರು ನೋವಿನಿಂದ ಒದ್ದಾಡುತ್ತಿದ್ದಾರೆಂದು ಹೇಳಲಾಗಿದೆ” ಎಂದು ನರೇನ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಅರಿವಳಿಕೆ ನೀಡದೇ ಶಸ್ತ್ರಚಿಕಿತ್ಸೆ; ತನಿಖೆಗೆ ಆದೇಶಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್

ಖಗಾರಿಯಾದ ಎರಡು ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಮಹಿಳೆಯರಿಗೆ ಅರಿವಳಿಕೆ ಮದ್ದು ನೀಡದೇ ಶಾಶ್ವತ ಗರ್ಭನಿರೋಧಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಆರೋಪದ ಬಗ್ಗೆ  ತನಿಖೆ ನಡೆಸುವಂತೆ ಖಗಾರಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕ್ ರಂಜನ್ ಘೋಷ್ ಆದೇಶಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

“ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕ್ ರಂಜನ್ ಘೋಷ್ ಅವರ ನಿರ್ದೇಶನದ ಮೇರೆಗೆ ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ. ಎರಡು ದಿನಗಳಲ್ಲಿ ಮ್ಯಾಜಿಸ್ಟ್ರೇಟ್‌ಗೆ ವರದಿ ಸಲ್ಲಿಸುತ್ತೇವೆ” ಎಂದು ಸಿವಿಲ್ ಸರ್ಜನ್ ಅಮರ್ ನಾಥ್ ಝಾ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಶುದ್ಧೀಕರಣದ ಹೆಸರಿನಲ್ಲಿ ಕೆರೆಯನ್ನೇ ಬರಿದಾಗಿಸುತ್ತಿದೆ ಪಾಲಿಕೆ; ಸ್ಥಳೀಯರ ವಿರೋಧ

“ಎನ್‌ಜಿಒಗಳ ಕಡೆಯಿಂದಾದ ಲೋಪಗಳನ್ನು ಒಪ್ಪಿಕೊಂಡಿದ್ದಾರೆ. ಅವರ ಪರವಾನಗಿಗಳನ್ನು ರದ್ದುಗೊಳಿಸಲಾಗುವುದು. ಹಾಗೆಯೇ, ಅವರ ಮೇಲೆ ಎರಡೇ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲೌಲಿಯಲ್ಲಿ 23 ಮಹಿಳೆಯರು ಈ ಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದರು. ಆದರೆ, ಅವರನ್ನು ಎನ್‌ಜಿಒ ಸಿಬ್ಬಂದಿ ಮತ್ತು ವೈದ್ಯರು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ” ಎಂದು ಝಾ ಹೇಳಿದ್ದಾರೆ.

“ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸುವ ಮೊದಲು ಸ್ಥಳೀಯ ಅರಿವಳಿಕೆ ಬಳಸಬೇಕು. ಅದು ಕಾರ್ಯನಿರ್ವಹಿಸಲು ವಿಫಲವಾದಲ್ಲಿ, ಡೋಸ್‌ ಹೆಚ್ಚಿಸಬೇಕು. ಆದರೆ, ರಾಜ್ಯ ಆರೋಗ್ಯ ಇಲಾಖೆ ಮತ್ತು ಎನ್‌ಜಿಒಗಳ ನಡುವೆ ಸಹಿ ಹಾಕಲಾದ ವೈದ್ಯಕೀಯ ನೀತಿ ಮತ್ತು ಒಪ್ಪಂದಕ್ಕೆ ವಿರುದ್ಧವಾಗಿ ಎನ್‌ಜಿಒಗಳು ವರ್ತಿಸಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app