ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ ಪಕ್ಷದ ಸರ್ಕಾರದಲ್ಲಿ ಮಹಿಳೆಯರಿಗೆ ಭದ್ರತೆಯಿಲ್ಲ; ವಿಪಕ್ಷಗಳ ಟೀಕೆ

  • ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಇಬ್ಬರು ದಲಿತ ಸಹೋದರಿಯರ ಶವ
  • ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ಮುಖಂಡರು

ಇಬ್ಬರು ದಲಿತ ಬಾಲಕಿಯನ್ನು ಅಪಹರಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಆಡಳಿತಾರೂಢ ಬಿಜೆಪಿಯನ್ನು ವಿಪಕ್ಷಗಳು ಸೇರಿದಂತೆ ಹಲವರು ಟೀಕಿಸಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, "ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿ ಗೌರವಿಸುವವರಿಂದ ಮಹಿಳೆಯರ ಸುರಕ್ಷತೆ ನಿರೀಕ್ಷಿಸಲು ಸಾಧ್ಯವಿಲ್ಲ" ಎಂದಿದ್ದಾರೆ.

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಬುಧವಾರ ಇಬ್ಬರು ಸಹೋದರಿಯರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇಬ್ಬರೂ ಬಾಲಕಿಯರು ಅಪ್ರಾಪ್ತರಾಗಿದ್ದು, ದಲಿತ ಕುಟುಂಬಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಆರು ಮಂದಿ ಆರೋಪಿಗಳನ್ನು ಇಂದು (ಗುರುವಾರ) ಬಂಧಿಸಲಾಗಿದೆ. 

ʻʻಲಖೀಂಪುರದಲ್ಲಿ ಹಾಡಹಗಲೇ ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರನ್ನು ಅಪಹರಿಸಿ ಹತ್ಯೆಗೈದಿರುವುದು ಅತ್ಯಂತ ಆತಂಕಕಾರಿ ಘಟನೆʼʼ ಎಂದು ಬೇಸರ ವ್ಯಕ್ತಪಡಿಸಿರುವ ರಾಹುಲ್‌ ಗಾಂಧಿ, ʻʻಅತ್ಯಾಚಾರಿಗಳನ್ನು ಬಿಡುಗಡೆ ಮಾಡಿ ಗೌರವಿಸುವವರಿಂದ ಮಹಿಳೆಯರ ಭದ್ರತೆ ನಿರೀಕ್ಷಿಸಲು ಸಾಧ್ಯವಿಲ್ಲ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ, ದೇಶದಲ್ಲಿ ಸುರಕ್ಷಿತ ವಾತಾವರಣವನ್ನು ನಾವು ನಿರ್ಮಿಸಬೇಕಾಗಿದೆʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರವು ʻಸನ್ನಡತೆʼಯ ಆಧಾರದಲ್ಲಿ ಬಿಲ್ಕಿಸ್‌ ಬಾನೂ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡಿತ್ತು. ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ್ದ ಬಿಜೆಪಿ ನೀತಿಯನ್ನು ರಾಹುಲ್‌ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಉತ್ತರ ಪ್ರದೇಶ | ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ದಲಿತ ಸಹೋದರಿಯರ ಶವ ಪತ್ತೆ: ಅತ್ಯಾಚಾರ ಶಂಕೆ

ʻʻಲಖೀಂಪುರದಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರ ಹತ್ಯೆಯ ಈ ವಿಡಿಯೋ ನೋಡಿದ ನಂತರವೂ ಯಾರಾದರೂ ನೆಮ್ಮದಿಯಿಂದ ಮಲಗಲು ಸಾಧ್ಯವೆಂದರೆ, ಅವರು ಮಾನವೀಯತೆ ಕಳೆದುಕೊಂಡಿದ್ದಾರೆ ಎಂದರ್ಥ. ಅಪರಾಧಿಗಳಿಗೆ ಸರ್ಕಾರಿ ವ್ಯವಸ್ಥೆಯ ಬಗ್ಗೆ ಭಯವಿಲ್ಲ ಎಂಬುದು ಸತ್ಯ. ಹೆಣ್ಣುಮಕ್ಕಳು ಹೀಗೆ ಸಾಯುತ್ತಿದ್ದರೆ ನಾವು ಹೀಗೆ ನೋಡುತ್ತಿರುತ್ತೇವೆಯೇ?ʼʼ ಎಂದು ಸರ್ಕಾರದ ಧೋರಣೆಯನ್ನು ಟೀಕಿಸಿ, ಸಮಾಜದ ಮೌನವನ್ನು ಪ್ರಶ್ನಿಸಿ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಟ್ವೀಟ್‌ ಮಾಡಿದ್ದಾರೆ.

ದಲಿತ ಬಾಲಕಿಯರ ಹತ್ಯೆಯ ಸುದ್ದಿ ಎಲ್ಲಡೆ ವರದಿಯಾಗುತ್ತಿದ್ದಂತೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

"ಲಖೀಂಪುರದಲ್ಲಿ ಇಬ್ಬರು ಸಹೋದರಿಯರ ಹತ್ಯೆಯು ಹೃದಯ ವಿದ್ರಾವಕ. ಅಪ್ರಾಪ್ತೆಯರನ್ನು ಹಗಲು ಹೊತ್ತಿನಲ್ಲಿ ಅಪಹರಿಸಲಾಗಿದೆ ಎಂದು ಸಂಬಂಧಿಕರು ಹೇಳುತ್ತಾರೆ. ದಿನವೂ ಪತ್ರಿಕೆ, ಟಿವಿಗಳಲ್ಲಿ ಸುಳ್ಳು ಜಾಹೀರಾತು ನೀಡುವುದರಿಂದ ಕಾನೂನು ಸುವ್ಯವಸ್ಥೆ ಸುಧಾರಿಸುವುದಿಲ್ಲ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ಘೋರ ಅಪರಾಧಗಳು ಏಕೆ ಹೆಚ್ಚುತ್ತಿವೆ?ʼʼ ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ʻʻರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಜುನೈದ್, ಸೊಹೈಲ್, ಹಫೀಜುರ್ ರೆಹಮಾನ್, ಕರೀಮುದ್ದೀನ್, ಆರಿಫ್ ಮತ್ತು ಛೋಟು ಗೌತಮ್‌ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆʼʼ ಎಂದು ಲಖೀಂಪುರ ಖೇರಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

"ಪ್ರಾಥಮಿಕ ತನಿಖೆಯ ಪ್ರಕಾರ, ಜುನೈದ್ ಮತ್ತು ಸೊಹೈಲ್ ಅವರ ಮನವೊಲಿಕೆಯ ಮೇರೆಗೆ ಇಬ್ಬರು ಸಹೋದರಿಯರು ಬುಧವಾರ ಮಧ್ಯಾಹ್ನ ತಮ್ಮ ಮನೆಯಿಂದ ಹೊರಬಂದಿದ್ದಾರೆ. ಜುನೈದ್ ಮತ್ತು ಸೊಹೈಲ್ ಅವರು ಬಾಲಕಿಯರ ಮೇಲೆ ಅತ್ಯಾಚಾರದ ನಡೆಸಿದ ನಂತರ ಕತ್ತು ಹಿಸುಕಿ ಕೊಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app