
- ಭಯೋತ್ಪಾದನಾ ಗುಂಪಿನ ಆಣತಿ ಮೇರೆಗೆ ಹಣ ವಸೂಲಿ ಆರೋಪ
- ಎನ್ಐಎ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ದಾಖಲಿಸಿದ್ದ ಪ್ರಕರಣದಲ್ಲಿ ಆರೋಪಿಯೊಬ್ಬರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಮೇಲ್ಮನವಿಯನ್ನು ವಜಾ ಮಾಡಿದೆ.
"ಭಯೋತ್ಪಾದನಾ ಗುಂಪಿನ ಆಣತಿಯ ಮೇರೆಗೆ ಆರೋಪಿಯು ಸಾರಿಗೆ ಇಲಾಖೆ ಅಧಿಕಾರಿಗಳಿಂದ ಹಣ ಸುಲಿಗೆ ಮಾಡಿರುವುದರಿಂದ ಆತನ ಜಾಮೀನು ರದ್ದುಪಡಿಸಬೇಕು" ಎಂದು ಎನ್ಐಎ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ವಾದ ಮಂಡಿಸಿದರು.
ಆಗ “ನಿಮ್ಮ ವಾದ ಕೇಳಿದರೆ, ನೋಡಿದರೆ ನಿಮಗೆ ಪತ್ರಕರ್ತರಷ್ಟೇ ಅಲ್ಲ, ಪತ್ರಿಕೆ ಓದುಗರ ಬಗ್ಗೆಯೂ ಸಮಸ್ಯೆ ಇದ್ದಂತಿದೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಪ್ರಶ್ನಿಸಿದರು.
"ಈ ಪ್ರಕರಣದಲ್ಲಿ ಪ್ರತಿವಾದಿಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಹೊರಡಿಸಿರುವ ಆದೇಶದಲ್ಲಿ ಮಧ್ಯಪ್ರವೇಶಿಸುವಂಥದ್ದೇನೂ ನಮಗೆ ಕಾಣುತ್ತಿಲ್ಲ” ಎಂದು ಆದೇಶದಲ್ಲಿ ಉಲ್ಲೇಖಿಸಿದರು.
ತೃತೀಯ ಪ್ರಸ್ತುತಿ ಕಮಿಟಿ (ಟಿಪಿಸಿ) ಎಂಬ ಮಾವೋವಾದಿ ಗುಂಪಿನ ಸೂಚನೆಯಂತೆ ಹಣ ಸುಲಿಗೆ ಮಾಡಿದ ಆರೋಪ ಪ್ರತಿವಾದಿಯ ಮೇಲಿದೆ. ಆರೋಪಿಯನ್ನು ವಶಕ್ಕೆ ಪಡೆದ ಮೂರು ವರ್ಷಗಳ ಬಳಿಕ ಹೈಕೋರ್ಟ್ 2021ರ ಡಿಸೆಂಬರ್ನಲ್ಲಿ ಜಾಮೀನು ಮಂಜೂರು ಮಾಡಿತ್ತು.
ಆರೋಪಕ್ಕೆ ಪೂರಕವಾದ ದಾಖಲೆಗಳು ಇರಲಿಲ್ಲ. ಜತೆಗೆ ತನಿಖೆಯ ಸಂದರ್ಭದಲ್ಲಿ ಆರೋಪಿಯು ಎಲ್ಲ ರೀತಿಯಲ್ಲೂ ಸಹಕರಿಸಿರುವುದನ್ನು ಆಧರಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಈ ಸುದ್ದಿ ಓದಿದ್ದೀರಾ?: ಪಿಎಫ್ಐ ಸಂಘಟನೆಯೊಂದಿಗೆ ಆರ್ಎಸ್ಎಸ್ ಸಮೀಕರಣ: ವಿವಾದದ ಕಿಡಿ ಹೊತ್ತಿಸಿದ ಪೊಲೀಸ್ ಅಧಿಕಾರಿ
“ಟಿಪಿಸಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ನಿರತವಾಗಿರಬಹುದು. ಆದರೆ ಆರೋಪಿತ ಅರ್ಜಿದಾರರು ತೆರಿಗೆ ಹಣವನ್ನು ಟಿಪಿಸಿಗೆ ನೀಡುವುದು ಮತ್ತು ಟಿಪಿಸಿ ಮುಖ್ಯಸ್ಥರನ್ನು ಭೇಟಿ ಮಾಡುವುದು ಯುಎಪಿಎ ಸೆಕ್ಷನ್ಗಳಾದ 17 ಮತ್ತು 18ರ ಅಡಿ ಬರುವುದಿಲ್ಲ. ಆತನ ವಿರುದ್ಧದ ಆರೋಪಗಳಲ್ಲಿ ಮೇಲ್ನೋಟಕ್ಕೆ ಸತ್ಯಸಂಗತಿ ಇದೆ ಎಂಬುದನ್ನು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿತು. ಬಳಿಕ ಯುಎಪಿಎ ಸೆಕ್ಷನ್ 43ಡಿ ಅಡಿ ಬರುವ ಉಪ ನಿಯಮ (5)ರ ನಿರ್ಬಂಧ ಅನ್ವಯಿಸುತ್ತದೆ” ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.
ಇದನ್ನು ಪ್ರಶ್ನಿಸಿ ಎನ್ಐಎ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು.