
- ಆರೋಪಿ ಮಂಪರು ಪರೀಕ್ಷೆಗೆ ಅನುಮತಿ ನೀಡಿದ ನ್ಯಾಯಾಲಯ
- ಯುವತಿಯನ್ನು ಕೊಂದು 35 ಭಾಗಗಳಾಗಿ ಕತ್ತರಿಸಿದ್ದ ಆರೋಪಿ
28ರ ಹರೆಯದ ಶ್ರದ್ಧಾ ವಾಕರ್ ಅವರನ್ನು ಹತ್ಯೆಗೈದ ಆರೋಪಿ ಅಫ್ತಾಬ್ ಪೂನಾವಾಲಾನನ್ನು ವಿಚಾರಣೆಗೆ ಒಳಪಡಿಸಲು ದೆಹಲಿ ನ್ಯಾಯಾಲಯವು ಅಸ್ತು ಎಂದಿದ್ದು, ಆತನ ಪೊಲೀಸ್ ಕಸ್ಟಡಿಯನ್ನು ಐದು ದಿನಗಳ ಕಾಲ ವಿಸ್ತರಿಸಿದೆ. ಈ ಮೊದಲು ಪೊಲೀಸರು ವಿಚಾರಣೆ ನಡೆಸಲು 10 ದಿನಗಳ ಕಾಲಾವಕಾಶ ಕೋರಿದ್ದರು.
ಹಾಗೆಯೇ, ಅಫ್ತಾಬ್ನ ಒಪ್ಪಿಗೆಯೊಂದಿಗೆ ಆತನಿಗೆ ಮಂಪರು ಪರೀಕ್ಷೆ ನಡೆಸಲು ಸಹ ಅನುಮತಿಸಲಾಗಿದೆ. ವಿಚಾರಣೆ ಸಮಯದಲ್ಲಿ ಅಫ್ತಾಬ್ನನ್ನು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ಕರೆದೊಯ್ಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
"ಕೆಲವು ಧಾರ್ಮಿಕ ಸಂಘಟನೆಗಳು ಮತ್ತು ದುಷ್ಕರ್ಮಿಗಳು ಅವನ ಮೇಲೆ ದಾಳಿ ಮಾಡಬಹುದು” ಎಂದು ಪೊಲೀಸರು ಹೇಳಿದ ನಂತರ, ವಿಡಿಯೋ ಕಾನ್ಫರೆನ್ಸ್ ಮೂಲಕ ಆಫ್ತಾಬ್ ಪೂನಾವಾಲಾನನ್ನು ಹಾಜರುಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರತಿಯೊಬ್ಬರೂ ಕಾನೂನಿನ ನಿಯಮವನ್ನು ಪಾಲಿಸಬೇಕೆಂದು ನಾನು ವಿನಂತಿಸುತ್ತೇನೆ. ನ್ಯಾಯ ಸಿಗಲಿಲ್ಲ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ, ನ್ಯಾಯ ಸಿಕ್ಕೇ ಸಿಗುತ್ತದೆ. ಈ ಪ್ರಕರಣ ಪಡೆದಿರುವ ಸೂಕ್ಷ್ಮತೆ ಮತ್ತು ಮಾಧ್ಯಮದ ವರದಿಗಾರಿಕೆ ಬಗ್ಗೆ ನನಗೆ ಅರಿವಿದೆ. ಬೆದರಿಕೆಯ ಗ್ರಹಿಕೆಯಿಂದಾಗಿ, ನಾನು ಸಂಜೆ 4 ಗಂಟೆಗೆ ವಿಡಿಯೋ ಮೂಲಕ ಆರೋಪಿಯನ್ನು ಹಾಜರುಪಡಿಸಲು ಅರ್ಜಿಯನ್ನು ಅನುಮತಿಸುತ್ತಿದ್ದೇನೆ” ಎಂದು ಮ್ಯಾಜಿಸ್ಟ್ರೇಟ್ ಅವಿರಾಲ್ ಶುಕ್ಲಾ ಹೇಳಿದರು.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ವಿಮಾನ ಪ್ರಯಾಣಕ್ಕಿಲ್ಲದ ಕಡ್ಡಾಯ ಮಾಸ್ಕ್ ನಿಯಮ ನಮ್ಮ ಮೆಟ್ರೋಗೆ ಮಾತ್ರ ಯಾಕೆ?
ಏನಿದು ಘಟನೆ?
ಯುವತಿ ಶ್ರದ್ಧಾ ವಾಕರ್ ಅನ್ನು ಕೊಂದು ಮೃತದೇಹವನ್ನು 35 ಭಾಗಗಳಾಗಿ ತುಂಡರಿಸಿದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲ, ರಕ್ತ ಸ್ವಚ್ಛಗೊಳಿಸುವುದು ಹೇಗೆ ಎಂಬ ಬಗ್ಗೆ ಗೂಗಲ್ನಲ್ಲಿ ವಿವರ ಹುಡುಕಿರುವುದು ಈಗ ಬಹಿರಂಗವಾಗಿದೆ.
ವಿವಾಹೇತರ ಸಹಜೀವನ ನಡೆಸುತ್ತಿದ್ದ ಜೋಡಿಯ ನಡುವೆ ಗಲಾಟೆಯಾದ ಮೇಲೆ ಕೊಲೆ ನಡೆದಿದೆ. ಈ ಪ್ರಕರಣದ ಆರೋಪಿ ಅಫ್ತಾಬ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಈ ಕೃತ್ಯದ ಭಯಾನಕ ವಿವರಗಳು ಇದೀಗ ಒಂದೊಂದೇ ಹೊರಬರುತ್ತಿವೆ. ಯುವತಿಯ ಹತ್ಯೆಯನ್ನು ಮರೆಮಾಚಲು ಆರೋಪಿಯು ಆಕೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.