ಭಾರತೀಯ ಯುವಜನರಲ್ಲಿ ಉದ್ಯೋಗ ದರ ಕುಸಿದಿದೆ ಎಂದ ಜಾಗತಿಕ ಕಾರ್ಮಿಕ ವರದಿ

  • 2020ಕ್ಕೆ ಹೋಲಿಸಿದಲ್ಲಿ 2021ರಲ್ಲಿ ಯುವಜನರ ಉದ್ಯೋಗ ದರ ಕುಸಿತ
  • 2022ರಲ್ಲಿ ಜಾಗತಿಕವಾಗಿ 7.3 ಕೋಟಿ ಹೆಚ್ಚುವರಿ ನಿರುದ್ಯೋಗಿ ಯುವಕರು

2020 ಮತ್ತು 2021ರಲ್ಲಿ ಗಂಭೀರ ಪ್ರಮಾಣದಲ್ಲಿ ಉದ್ಯೋಗ ನಷ್ಟವನ್ನು ಕಂಡಿದೆ. ಅಲ್ಲದೆ, ಒಟ್ಟು ಕೆಲಸದ ಅವಧಿಯೂ ಅತಿಯಾಗಿ ಕುಸಿದಿದೆ. 2020ಕ್ಕೆ ಹೋಲಿಸಿದರೆ 2021ರಲ್ಲಿ ಭಾರತೀಯ ಯುವ ಉದ್ಯೋಗಿಗಳ ಸಂಖ್ಯೆ ಕುಸಿದಿದೆ ಎಂದು 2022ರ ಯುವಜನರ ಜಾಗತಿಕ ಉದ್ಯೋಗ ಪ್ರವೃತ್ತಿ ವರದಿ ಹೇಳಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು (ಐಎಲ್ಒ) ಆಗಸ್ಟ್ 11ರಂದು ಈ ವರದಿ ಬಿಡುಗಡೆ ಮಾಡಿದೆ. 

ಯುವಜನರ ಉದ್ಯೋಗ ಸೃಷ್ಟಿಯ ಪುನಶ್ಚೇತನಕ್ಕೆ ಜಾಗತಿಕವಾಗಿ ಸಮಸ್ಯೆಯಾಗಿದೆ. ಇತರ ವಯೋಮಾನದವರಿಗೆ ಹೋಲಿಸಿದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ಯುವಕರಿಗೆ ದೊಡ್ಡ ಹೊಡೆತ ನೀಡಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಕೋವಿಡ್‌ನಿಂದ 15ರಿಂದ 24 ವರ್ಷ ವಯಸ್ಸಿನವರು ಉದ್ಯೋಗವಕಾಶದ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ವಯಸ್ಕರಿಗೆ ಹೋಲಿಸಿದರೆ 15-24ರ ವಯೋಮಾನದ ಹೆಚ್ಚಿನ ಪ್ರಮಾಣದಲ್ಲಿ ಶೇಕಡಾವಾರು ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ವರದಿ ಹೇಳಿದೆ.

“2022ರಲ್ಲಿ ಜಾಗತಿಕವಾಗಿ ಒಟ್ಟು ನಿರುದ್ಯೋಗಿ ಯುವಕರ ಸಂಖ್ಯೆ 7.3 ಕೋಟಿ ತಲುಪಬಹುದು ಎಂದು ಅಂದಾಜಿಸಲಾಗಿದೆ. 2021ರಲ್ಲಿ 7.5 ಕೋಟಿ ನಿರುದ್ಯೋಗಿ ಯುವಕರಿದ್ದ ಸ್ಥಿತಿಯಿಂದ ಸ್ವಲ್ಪ ಸುಧಾರಣೆಯಾಗಿದೆ ನಿಜ. ಆದರೆ 2019ರ ಕೋವಿಡ್ ಪೂರ್ವ ಸ್ಥಿತಿಗಿಂತ 60 ಲಕ್ಷ ಹೆಚ್ಚು ನಿರುದ್ಯೋಗಿಗಳು 2022ರಲ್ಲಿ ಉದ್ಯೋಗವಕಾಶಗಳಿಂದ ವಂಚಿತರಾಗಿದ್ದಾರೆ” ಎಂದು ವರದಿ ಹೇಳಿದೆ.

ಭಾರತದಲ್ಲಿ, 'ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ' (ಸಿಎಮ್ಐಇ) ನಡೆಸಿದ ಸಮೀಕ್ಷೆ ಪ್ರಕಾರ, “ಉದ್ಯೋಗದಲ್ಲಿ ಯುವಜನರ ಭಾಗವಹಿಸುವಿಕೆ ಕುಸಿದಿದೆ. 2021ರ ಮೊದಲ ಒಂಭತ್ತು ತಿಂಗಳಿಗೆ ಹೋಲಿಸಿದಲ್ಲಿ ಯುವಕರು ಉದ್ಯೋಗದಲ್ಲಿ ಭಾಗವಹಿಸುವ ದರ ಶೇ. 0.9ರಷ್ಟು ಕಡಿಮೆಯಾಗಿದೆ. ಯುವಜನರಿಗೆ ಹೋಲಿಸಿದಲ್ಲಿ ಇದೇ ಅವಧಿಯಲ್ಲಿ ವಯಸ್ಕರ ಉದ್ಯೋಗ ದರ ಶೇ. 2ರಷ್ಟು ಹೆಚ್ಚಾಗಿದೆ. ವಿಶೇಷವಾಗಿ 15ರಿಂದ 20 ವರ್ಷ ವಯಸ್ಸಿನ ಯುವಜನರ ಉದ್ಯೋಗ ಬಿಕ್ಕಟ್ಟು ತೀವ್ರವಾಗಿದೆ” ಎಂದು ವರದಿ ಹೇಳಿದೆ. 

2022ರಲ್ಲಿ ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶಗಳಲ್ಲಿ ಯುವಜನರ ನಿರುದ್ಯೋಗ ದರ ಶೇ. 14.9ರಷ್ಟು ತಲುಪುತ್ತದೆ ಎಂದು ಸಿಎಮ್ಐಇ ಎಚ್ಚರಿಕೆ ನೀಡಿದೆ. 

“ಗುಣಮಟ್ಟದ ಶಿಕ್ಷಣ, ತರಬೇತಿ, ಉದ್ಯೋಗ ಅವಕಾಶಗಳ ಜೊತೆಗೆ ಉನ್ನತ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ವಿಶೇಷವಾಗಿ ಪರಿಸರಕ್ಕೆ ಹಾನಿಯಾಗದ ಸುಸ್ಥಿರ ಅಭಿವೃದ್ಧಿ, ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆಯ ಹಾಗೂ ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ಸಮರ್ಥವಾಗಿ ಕೆಲಸ ಮಾಡಲು ಯುವಕರು ತೊಡಗಿಸಿಗೊಳ್ಳುವ ಮೂಲಕ ಹೆಚ್ಚು ಸುಸ್ಥಿರವಾದ, ಎಲ್ಲರನ್ನೊಳಗೊಂಡ ಹಾಗೂ ಬಲವಾದ ಅರ್ಥವ್ಯವಸ್ಥೆಯ ಕಡೆಗೆ ಸಾಗಬೇಕಿದೆ.” ಎಂದು ದಕ್ಷಿಣ ಏಷ್ಯಾ ಮತ್ತು ಐಎಲ್ಒ ತಂಡದ ಉಪನಿರ್ದೇಶಕಿ ಸತೋಶಿ ಸಸಾಕಿ ಹೇಳಿರುವ ಬಗ್ಗೆ ‘ದಿ ಹಿಂದೂ’ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶದಲ್ಲಿ 18 ತಿಂಗಳವರೆಗೆ ಶಾಲೆಗಳನ್ನು ಮುಚ್ಚಾಲಾಗಿತ್ತು. ಶಾಲೆಗೆ ಹೋಗುವ 24 ಕೋಟಿ ಮಕ್ಕಳ ಪೈಕಿ, ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಶೇ. 8ರಷ್ಟು ಮತ್ತು ನಗರ ಪ್ರದೇಶಗಳಲ್ಲಿ ಶೇ. 23ರಷ್ಟು ಮಕ್ಕಳು ಆನ್‌ಲೈನ್ ಶಿಕ್ಷಣ ಪಡೆದುಕೊಳ್ಳುವ ಅವಕಾಶ ಪಡೆದಿದ್ದರು ಎಂದು ವರದಿ ಹೇಳಿದೆ. 

“ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಆನ್‌ಲೈನ್ ಸಂಪನ್ಮೂಲಗಳು ಎಲ್ಲರಿಗೂ ಲಭ್ಯವಿಲ್ಲದಿರುವಾಗ, ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಬಹುತೇಕ ಮಕ್ಕಳು ಆನ್‌ಲೈನ್‌ ಶಿಕ್ಷಣದ ಅವಕಾಶ ಹೊಂದಿಲ್ಲ. ಶಾಲೆಗಳನ್ನು ಮುಚ್ಚಿರುವುದು ಹೊಸ ಕಲಿಕೆಗೆ ತೆರೆದುಕೊಳ್ಳದಂತೆ ತಡೆದಿರುವುದು ಮಾತ್ರವಲ್ಲದೆ, ವಿದ್ಯಾಭ್ಯಾಸದ ಹಿಂಜರಿತಕ್ಕೆ ಕಾರಣವಾಗಿದೆ. ಜೊತೆಗೆ ಮಕ್ಕಳು ತಾವು ಈ ಹಿಂದೆ ಕಲಿತಿದ್ದ ವಿಷಯಗಳನ್ನು ಮರೆಯುವಂತಾಗಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಸುದ್ದಿ ವಿವರ | ಭಾರತದಲ್ಲಿ ನಿರುದ್ಯೋಗ ಬಿಕ್ಕಟ್ಟಿಗೆ ಕಾರಣವೇನು?

“ಭಾರತದಲ್ಲಿ ಶೇ. 92ರಷ್ಟು ಮಕ್ಕಳು ಭಾಷಾ ಕಲಿಕೆಯ ತಳಹದಿಯಂತಿರುವ ಕನಿಷ್ಠ ಒಂದು ಕೌಶಲ್ಯವನ್ನಾದರೂ (ಫೌಂಡೇಶನ್ ಎಬಿಲಿಟಿ) ಕಳೆದುಕೊಂಡಿದ್ದಾರೆ. ಶೇ.82ರಷ್ಟು ಮಕ್ಕಳು ಗಣಿತ ವಿಷಯದಲ್ಲಿ ತಳಹದಿಯಂತಿರುವ ಕನಿಷ್ಠ ಒಂದು ಕೌಶಲ್ಯ ಕಳೆದುಕೊಂಡಿದ್ದಾರೆ” ಎಂದು ಅಧ್ಯಯನ ಬಹಿರಂಗಪಡಿಸಿದೆ.

ಮಹಿಳೆಯರಿಗೆ ಉದ್ಯೋಗ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ 2005ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು (ಮನರೇಗಾ) ವರದಿ ಶ್ಲಾಘಿಸಿದೆ. ಆದರೆ, ಭೂಮಿ, ನೀರು ಹಾಗೂ ಮರಗಳು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಭಿತವಾಗಿರುವ ಈ ಯೋಜನೆಯ ಕೆಲಸಗಳಿಂದ ಇಂಗಾಲ ಕಡಿತದ ಉದ್ದೇಶದ ಮೇಲೆ ವಿರುದ್ಧ ಪರಿಣಾಮ ಬೀರಲಿದೆ ಎಂದು ಸಹ ತಿಳಿಸಿದೆ.

ಭಾರತವು ಯುವ ಮಹಿಳಾ ಉದ್ಯೋಗಿಗಳಿಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಉದ್ಯೋಗವಕಾಶವನ್ನು ಹೊಂದಿದೆ. 2021 ಮತ್ತು 2022ರಲ್ಲಿ ದೇಶದ ಯುವತಿಯರು, ಯುವಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವಕಾಶದಿಂದ ವಂಚಿತರಾಗಿದ್ದಾರೆ ಎಂದು ವರದಿ ತಿಳಿಸಿದೆ. 

“ಜಾಗತಿಕವಾಗಿ ಉದ್ಯೋಗದಲ್ಲಿರುವ ಯುವಕರಲ್ಲಿ ಭಾರತೀಯ ಯುವಕರ ಪ್ರಮಾಣ ಶೇ.16ರಷ್ಟು ಇದ್ದರೆ, ಭಾರತೀಯ ಯುವತಿಯರ ಪಾಲು ಶೇ. 5ರಷ್ಟು ಮಾತ್ರ” ಎಂದು ವರದಿ ಹೇಳಿದೆ.

“ಭಾರತದಲ್ಲಿ ಮನೆಕೆಲಸವು ಹೆಚ್ಚು ಅನೌಪಚಾರಿಕ ಕೆಲಸವಾಗಿದ್ದು, ಮಹಿಳೆಯರು ಮತ್ತು ಹುಡುಗಿಯರಿಗೆ ಕಡಿಮೆ ಸಂಬಳ ನೀಡುವುದರ ಜೊತೆಗೆ ನಿಂದನೆಗೆ ಒಳಗಾಗಿದ್ದಾರೆ. ಯುವ ಮನೆ ಕೆಲಸಗಾರರು ಬೈಗುಳ, ದೈಹಿಕ ನಿಂದನೆ ಹಾಗೂ ಲೈಂಗಿಕ ಶೋಷಣೆ ಅನುಭವಿಸುತ್ತಿದ್ದಾರೆ” ಎಂದು ವರದಿ ಹೇಳಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180