ಟೆಕ್‌ ಸುದ್ದಿ | ಸ್ಕಿಪ್‌ ಮಾಡಲಾಗದ ಜಾಹೀರಾತು ಪ್ರಯೋಗ ಕೈಬಿಟ್ಟ ಯೂಟ್ಯೂಬ್‌

  • ಯೂಟ್ಯೂಬ್‌ನಲ್ಲಿ ಸ್ಕಿಪ್‌ ಮಾಡಲಾಗದ ಜಾಹೀರಾತುಗಳ ಹಾವಳಿ
  • ಈ ʻಹೊಸ ಪ್ರಯತ್ನʼವನ್ನು ಮುಕ್ತಾಯಗೊಳಿಸಿದ ಯೂಟ್ಯೂಬ್‌

ಕಳೆದ ಕೆಲವು ದಿನಗಳಿಂದ ಯೂಟ್ಯೂಬ್‌ನಲ್ಲಿ ಸ್ಕಿಪ್‌ ಮಾಡಲಾಗದ ದೊಡ್ಡ ದೊಡ್ಡ ಜಾಹೀರಾತುಗಳು ಬರುತ್ತಿರುವುದು ಬಳಕೆದಾರರ ಗಮನಕ್ಕೆ ಬಂದಿದೆ. ಅದಕ್ಕಿಂತ ಹೆಚ್ಚಾಗಿ ಈ ಜಾಹೀರಾತುಗಳು ಕಿರಿಕಿರಿ ಉಂಟುಮಾಡಿರುವುದು ಸಹ ಇದೆ. ಈ ಜಾಹೀರಾತುಗಳ ಬಗ್ಗೆ ಬಳಕೆದಾರರು ಹಲವು ದೂರುಗಳನ್ನು ನೀಡಿದ್ದಾರೆ.

ವೀಡಿಯೊ ʻಸ್ಟ್ರೀಮಿಂಗ್ʼ ವೇದಿಕೆ ಯೂಟ್ಯೂಬ್‌, ವಿಡಿಯೋವನ್ನು ವೀಕ್ಷಿಸುವಾಗ 10ರ ತನಕ ಸ್ಕಿಪ್ ಮಾಡಲಾಗದ ಜಾಹೀರಾತುಗಳನ್ನು ತೋರಿಸುವ ಹೊಸ ಯೋಜನೆಯೊಂದನ್ನು ಪರೀಕ್ಷಿಸುತ್ತಿದೆ. ಆದರೆ ಬಳಕೆದಾರರು ಈ ಹೊಸ ಪರೀಕ್ಷೆಯಿಂದ ಬೇಸತ್ತಿರುವ ಬಗ್ಗೆ ರೆಡ್ಡಿಟ್ ಮತ್ತು ಟ್ವಿಟರ್‌ನಲ್ಲಿ  ದೂರು ಮತ್ತು ನಿರಾಶೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರ ದೂರುಗಳನ್ನು ಸ್ವೀಕರಿಸಿರುವ ಯೂಟ್ಯೂಬ್‌ ಈ ಜಾಹೀರಾತು ಪ್ರಯೋಗವನ್ನು ಅಂತ್ಯಗೊಳಿಸಿದೆ.

ʻʻಬಂಪರ್ ಜಾಹೀರಾತುಗಳೊಂದಿಗೆ ಯೂಟ್ಯೂಬ್‌ನ ಪ್ರಯೋಗಗಳು 'ಮುಕ್ತಾಯವಾಗಿವೆ' ಎಂದು ಯೂಟ್ಯೂಬ್‌ ವಕ್ತಾರರು ಮಾಹಿತಿ ನೀಡಿರುವುದಾಗಿ ಲೈವ್‌ ಮಿಂಟ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?: ‘ಭಾರತ್ ಜೋಡೋ ಯಾತ್ರೆ’ಗೆ ರಾಜ್ಯದ ಜನಪರ ಸಂಘಟನೆಗಳ ಬೆಂಬಲ | ಗಾಂಧಿ ಭವನದಲ್ಲಿ ಪೂರ್ವಭಾವಿ ಸಭೆ

“ವಿಶ್ವದಾದ್ಯಂತ ಯೂಟ್ಯೂಬ್‌ ಬಳಕೆದಾರರಿಗೆ ಬ್ರ್ಯಾಂಡ್‌ಗಳನ್ನು ಸಂಪರ್ಕಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ನಾವು ಗಮನಹರಿಸಿದ್ದೇವೆ. ವೀಕ್ಷಕರ ಅನುಭವ ಹೆಚ್ಚಿಸುವ ಜಾಹೀರಾತುಗಳನ್ನು ಮೇಲ್ಮೈಗೆ ತರಲು ಹೊಸ ಮಾರ್ಗಗಳನ್ನು ಪರೀಕ್ಷಿಸುತ್ತಿದ್ದೇವೆ. ಟಿವಿಗಳಲ್ಲಿ ವೀಕ್ಷಕರು ದೀರ್ಘ ವಿಡಿಯೋಗಳನ್ನು ವೀಕ್ಷಿಸಿದಾಗ ʼಜಾಹೀರಾತು ಪಾಡ್‌ʼನಲ್ಲಿ (ಯೂಟ್ಯೂಬ್‌ ವೀಕ್ಷಿಸುವಾಗ ವಿಡಿಯೋದಲ್ಲಿ ಕಾಣುವ ಮಾರ್ಕ್‌) ಬಹು ಜಾಹೀರಾತುಗಳನ್ನು ಒದಗಿಸುವ ಸಣ್ಣ ಪ್ರಯೋಗವನ್ನು ನಾವು ಜಾಗತಿಕವಾಗಿ ನಡೆಸಿದ್ದೇವೆ. ಜಾಹೀರಾತು ವಿರಾಮಗಳನ್ನು ಕಡಿಮೆ ಮಾಡುವ ಮೂಲಕ ವೀಕ್ಷಕರಿಗೆ ಉತ್ತಮ ಅನುಭವ ನಿರ್ಮಿಸುವುದು ಈ ಹೊಸ ಪ್ರಯೋಗದ ಗುರಿ. ಆದರೆ, ಈ ಸಣ್ಣ ಪ್ರಯೋಗವನ್ನು ಮುಕ್ತಾಯಗೊಳಿಸಿದ್ದೇವೆ” ಎಂದು ಯುಟ್ಯೂಬ್ ಹೇಳಿದೆ.

ಟ್ವಿಟರ್‌ ಮತ್ತು ರೆಡ್ಡಿಟ್‌ ಸಾಮಾಜಿಕ ಜಾಲತಾಣಗಳ ಮೂಲಕ ದೀರ್ಘ ಜಾಹೀರಾತುಗಳಲ್ಲಿ ಬಳಕೆದಾರರ ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ, ಯೂಟ್ಯೂಬ್‌ನ ಎಲ್ಲ ವಿಡಿಯೋಗಳಲ್ಲಿ ಈ ಪ್ರಯೋಗ ಇರುವುದಿಲ್ಲ ಹಾಗೂ ಜಾಹೀರಾತುಗಳು ಹೆಚ್ಚು ಉದ್ದವಾಗಿರುವುದಿಲ್ಲ ಎಂದು ಯೂಟ್ಯೂಬ್‌ ಸ್ಪಷ್ಟಪಡಿಸಿದೆ.

ವಿಡಿಯೋ ಸ್ಟ್ರೀಮಿಂಗ್ ವೇದಿಕೆಯಾದ ಯೂಟ್ಯೂಬ್‌ನಲ್ಲಿ ಪ್ರತಿ ಜಾಹೀರಾತು ಕೇವಲ ಆರು ಸೆಕೆಂಡುಗಳು ಮಾತ್ರ ಇರುತ್ತದೆ ಮತ್ತು ಅದಕ್ಕಿಂತ ಹೆಚ್ಚು ಸಮಯ ಇರುವುದಿಲ್ಲ ಎಂದು ಕಂಪನಿ ದೃಢಪಡಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್