
- 15 ದಿನಗಳ ಒಳಗಾಗಿ ಮಾಹಿತಿ ನೀಡಿ ಎಂದು ಪೊಲೀಸರಿಗೆ ಸೂಚನೆ
- ಪೊಲೀಸರ ವಶಕ್ಕೆ ನೀಡಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಝುಬೇರ್
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಝುಬೇರ್ ಅವರನ್ನು ಪೊಲೀಸರ ವಶಕ್ಕೆ ನೀಡಿರುವುದು ಮತ್ತು ಅವರ ಲ್ಯಾಪ್ಟಾಪ್-ಮೊಬೈಲ್ ವಶಕ್ಕೆ ಪಡೆಯುವ ವಿಚಾರವಾಗಿ ಪ್ರತಿಕ್ರಿಯೆ ಕೋರಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ನೋಟಿಸ್ ನೀಡಿದೆ.
ತಮ್ಮನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿರುವ ಪಟಿಯಾಲ ಹೌಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಝುಬೇರ್ ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ನರುಲಾ, ಈ ಕುರಿತ ಪ್ರತಿಕ್ರಿಯೆ ಕೋರಿ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಝುಬೇರ್ ಅವರ ಲ್ಯಾಪ್ಟಾಪ್ ಮತ್ತು ಮೊಬೈಲ್ ವಶಪಡಿಸಿಕೊಳ್ಳುವುದಕ್ಕೆ ಪಟಿಯಾಲಾ ಹೌಸ್ ನ್ಯಾಯಾಲಯವು ಪೊಲೀಸರಿಗೆ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಝುಬೇರ್ ಅವರು ದೆಹಲಿ ಹೈಕೋರ್ಟ್ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಎರಡು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸಲು ದೆಹಲಿ ಪೊಲೀಸರಿಗೆ ಸೂಚಿಸಿದ್ದು, ಜುಲೈ 27ಕ್ಕೆ ವಿಚಾರಣೆ ಮುಂದೂಡಿದೆ.
ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಮೊಹಮ್ಮದ್ ಝುಬೇರ್ ಅವರನ್ನು ದೆಹಲಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧಾ ಸರ್ವರಿಯಾ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದ್ದರು.
ಈ ವೇಳೆ "ಝುಬೇರ್ ಅವರು ಪೊಲೀಸ್ ತನಿಖೆಗೆ ಸಹಕರಿಸುತ್ತಿಲ್ಲ. ಅವರ ಬಳಿಸಿರುವ ಫೋನ್ ಮತ್ತು ಲ್ಯಾಪ್ಟಾಪ್ ಪಡೆಯಲು ಅವರನ್ನು ಬೆಂಗಳೂರಿಗೆ ಕರೆದೊಯ್ಯಬೇಕಿದೆ" ಎಂದು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧಾ ಸರ್ವರಿಯಾ ಹೇಳಿದ್ದರು. ಇದರಂತೆ ಜೂನ್ 30ರಂದು ದೆಹಲಿ ಪೊಲೀಸರು ಝುಬೇರ್ ಅವರನ್ನು ಬೆಂಗಳೂರಿಗೆ ಕರೆತಂದು ಅವರ ನಿವಾಸವನ್ನು ಶೋಧ ಮಾಡಿದ್ದರು.
ಪ್ರಕರಣದ ಹಿನ್ನೆಲೆ
ಟ್ವೀಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಗಳ ಮೇಲೆ ಫ್ಯಾಕ್ಟ್ ಚೆಕಿಂಗ್ ವೆಬ್ಸೈಟ್ ʻಆಲ್ಟ್ ನ್ಯೂಸ್' ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರನ್ನು ದೆಹಲಿ ಪೊಲೀಸರು ಜುಲೈ 27ರಂದು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ದೋಷಮುಕ್ತನಾದರೂ ಸಿಗದ ಪಾಸ್ಪೋರ್ಟ್; ನ್ಯಾಯಾಲಯದ ಮೊರೆ ಹೋದ ಆರ್ಯನ್ ಖಾನ್
ಜುಬೇರ್ 2018ರಲ್ಲಿ ಮಾಡಿದ್ದ ಟ್ವೀಟ್ನಲ್ಲಿ "ಅತ್ಯಂತ ಪ್ರಚೋದನಾಕಾರಿ ಮತ್ತು ಜನರಲ್ಲಿ ದ್ವೇಷದ ಭಾವನೆ ಮೂಡಿಸುವಂತಹ ಬರಹವನ್ನು ಬರೆದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ" ಎಂದು ದೆಹಲಿ ಪೊಲೀಸರು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಜುಬೈರ್ ಟ್ವಿಟರ್ನಲ್ಲಿ ಚಲನಚಿತ್ರ ʼಕಿಸ್ಸಿ ಸೆ ನಾ ಕೆಹನಾʼದ ದೃಶ್ಯವೊಂದನ್ನು ಹಂಚಿಕೊಂಡಿದ್ದರು. ಈ ದೃಶ್ಯದಲ್ಲಿ ʼಹನುಮಾನ್ ಹೋಟೆಲ್ʼ ಎಂದು ಬರೆದಿರುವ ಫಲಕವನ್ನು ತೋರಿಸಲಾಗಿದೆ. "ಹನಿಮೂನ್ ಹೋಟೆಲನ್ನು ಹನುಮಾನ್ ಹೋಟೆಲ್ ಆಗಿ ಬದಲಾಯಿಸಲಾಗಿದೆ ಎಂದು ಬಣ್ಣದ ಗುರುತುಗಳು ಸೂಚಿಸುತ್ತವೆ. 2014ಕ್ಕಿಂತ ಮುಂಚೆ ಈ ಹೋಟೆಲನ್ನು ಹನಿಮೂನ್ ಹೋಟೆಲ್ ಎಂದು ಬರೆಯಲಾಗಿತ್ತು. 2014ರ ನಂತರ ಹನುಮಾನ್ ಹೋಟೆಲ್ ಎಂದು ಬದಲಾಯಿಸಲಾಗಿದೆ" ಎಂದು ಝುಬೈರ್ ಟ್ವಿಟರ್ನಲ್ಲಿ ಬರೆದಿದ್ದರು.