ಸುದ್ದಿಯಾದವರು | ಲಂಕೆಯನ್ನು ಹಸಿವಿನಲ್ಲಿ ಮುಳುಗಿಸಿದ ರಾಜಪಕ್ಸ ಸಹೋದರರು

Rajapaksa Brothers

ರಾಜಪಕ್ಸ ಸಹೋದರರ ವಂಶಪಾರಂಪರ್ಯ ಆಡಳಿತ, ಭ್ರಷ್ಟಚಾರ, ಅಸಮರ್ಪಕ ನಿರ್ಧಾರಗಳಿಂದಾಗಿ ಇಂದು ಇಡೀ ಶ್ರೀಲಂಕಾ ಬೀದಿಗೆ ಬಂದಿದೆ. ಜನರು ಭಾರತ ಸೇರಿದಂತೆ ಹತ್ತಿರದ ದೇಶಗಳಿಗೆ ವಾಮಮಾರ್ಗಗಳಲ್ಲಿ ವಲಸೆ ಹೋಗುತ್ತಿದ್ದಾರೆ. ದ್ವೀಪರಾಷ್ಟ್ರ ಹಸಿವಿನಿಂದ ಕಂಗೆಟ್ಟಿದೆ. ಮುಂದೇನು ಎಂಬುದು ಲಂಕೆಯ ಜನರ ಕಂಗಳಲ್ಲಿನ ಆತಂಕದ ಪ್ರಶ್ನೆ

ಶ್ರೀಲಂಕಾ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ದೇಶವನ್ನು ಪ್ರಕ್ಷುಬ್ಧ ಸ್ಥಿತಿಗೆ ದೂಡಿದೆ. ಸರ್ಕಾರದ ವಿರುದ್ಧ ಜನ ಬೀದಿಗಿಳಿದಿದ್ದು, ತಾವು ಅನುಭವಿಸುತ್ತಿರುವ ಇಂಧನ, ಆಹಾರ, ಔಷಧಿ ಮತ್ತು ವಿದ್ಯುತ್‌ ಕೊರತೆಗೆ ನೇರವಾಗಿ ರಾಜಪಕ್ಸ ಕುಟುಂಬವೇ ಕಾರಣ ಎಂದು ಬೆರಳು ತೋರುತ್ತಿದ್ದಾರೆ. ಶ್ರೀಲಂಕಾ ಸರ್ಕಾರದಲ್ಲಿ ಪ್ರಮುಖ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದ ಮಹಿಂದ ರಾಜಪಕ್ಸ, ಗೋತಬಯ ರಾಜಪಕ್ಸ, ಬಸಿಲ್‌ ರಾಜಪಕ್ಸ ಸದ್ಯ ಮೆತ್ತಗಾಗಿರುವಂತೆ ಕಾಣುತ್ತಿದ್ದಾರೆ.

Eedina App

ಗೋತಬಯ ರಾಜಪಕ್ಸ ಲಂಕೆಯ ಅಧ್ಯಕ್ಷ. ಇವರ ಹಿರಿಯ ಸಹೋದರ ಮಹಿಂದ ರಾಜಪಕ್ಸ ಸಹ ಅಧ್ಯಕ್ಷರಾಗಿದ್ದವರು. ಕಿರಿಯ ಸಹೋದರ ಬಸಿಲ್ ರಾಜಪಕ್ಸ ಹಣಕಾಸು ಸಚಿವರಾಗಿದ್ದರು. ಚಮಲ್ ರಾಜಪಕ್ಸ ನೀರಾವರಿ ಸಚಿವರಾಗಿದ್ದರು. ಅವರ ತಂದೆ ಡಿ ಎ ರಾಜಪಕ್ಸ ಪ್ರಮುಖ ರಾಜಕಾರಣಿಯಾಗಿದ್ದರು. ರಾಜಪಕ್ಸ ಕುಟುಂಬ ಶ್ರೀಲಂಕಾದ ಹಂಬನ್‌ತೋಟ ಜಿಲ್ಲೆಯವರು. ಗ್ರಾಮೀಣ ಭೂಮಾಲೀಕರಾಗಿದ್ದ ಇವರ ಪೂರ್ವಜರು ವಸಾಹತುಶಾಹಿ ಯುಗದಲ್ಲಿ ಊಳಿಗಮಾನ್ಯ ಪದ್ಧತಿಯನ್ನು ಉಳಿಸಿ ಬೆಳೆಸಿದವರು!

ರಾಜಪಕ್ಸ ವಂಶ ರಾಜಕೀಯದ ಪ್ರಬಲ ಶಕ್ತಿ ಈಗಿನ ಪ್ರಧಾನಿ ಮಹಿಂದ ರಾಜಪಕ್ಸ. ವೃತ್ತಿಯಲ್ಲಿ ವಕೀಲ. 2005ರಿಂದ 2015ರವರೆಗೆ ಸತತ ಎರಡು ಬಾರಿ ಪ್ರಧಾನಿ ಹುದ್ದೆಗೇರಿದವರು. ಮಹಿಂದಾ ರಾಜಪಕ್ಸ ಮತ್ತು ಅವರ ಸಹೋದರ ಚಮುಲ್‌ 1989ರ ಸಂಸತ್‌ ಚುನಾವಣೆಯಲ್ಲಿ ಹಂಬನ್‌ತೋಟವನ್ನು ಪ್ರತಿನಿಧಿಸಿ ಆಯ್ಕೆಯಾಗಿದ್ದರು. 2005ರಲ್ಲಿ ಮಹಿಂದಾ ರಾಜಪಕ್ಸ ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆಯಾದ ತಕ್ಷಣ, ಸಹೋದರ ಗೋತಬಯರನ್ನು ರಕ್ಷಣಾ ಕಾರ್ಯದರ್ಶಿ ಮತ್ತು ಇನ್ನೊಬ್ಬ ಸಹೋದರನನ್ನು ಹಿರಿಯ ಅಧ್ಯಕ್ಷೀಯ ಸಲಹೆಗಾರರನ್ನಾಗಿ ನೇಮಿಸಿಕೊಂಡರು.

AV Eye Hospital ad

2009ರಲ್ಲಿ ಎಲ್‌ಟಿಟಿಇ ನಾಯಕ ಪ್ರಭಾಕರನ್‌ ಹತ್ಯೆ ಮೂಲಕ, ತಮಿಳು ಈಳಮ್‌ಗಾಗಿ ನಡೆಯುತ್ತಿದ್ದ ಹೋರಾಟ ಕೊನೆಗೊಂಡಿತು. ಈ ಘಟನೆ ಜನರೆದುರು ರಾಜಪಕ್ಸ ಸಹೋದರನ್ನು ʼಸಮರ ವೀರʼರನ್ನಾಗಿಸಿತು. ದೇಶದ ಬಹುಸಂಖ್ಯಾತ ಸಿಂಹಳೀಯರು ಮತ್ತು ಬೌದ್ಧರಿಗೆ ಇವರು ಅಭಿವೃದ್ಧಿಯ ಹರಿಕಾರರಾಗಿ ಕಾಣಿಸಿದರು. ಇದು ಅವರ ಕುಟುಂಬಕ್ಕೆ ದೇಶಿಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹೆಸರು ತಂದುಕೊಟ್ಟಿತು.

Sri Lanka Crisis

2010ರಲ್ಲಿ ಲಿಬರೇಶನ್‌ ಟೈಗರ್ಸ್‌ ಆಫ್‌ ತಮಿಳ ಈಳಂ ಪಕ್ಷವನ್ನು ಸೋಲಿಸಿ ಮಹಿಂದಾ ರಾಜಪಕ್ಸ ಅಧ್ಯಕ್ಷರಾದರು. ಈ ವೇಳೆಗೆ ಆರು ಮಂದಿ ರಾಜಪಕ್ಸ ಸಹೋದರರಲ್ಲಿ ನಾಲ್ವರು ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಹಿಂದಾ ಅವರ ಸೊಸೆ ನಿರುಪಮಾ ಸೇರಿ ಕುಟುಂಬದ ಅನೇಕ ಸದಸ್ಯರು ಸರ್ಕಾರದ ಭಾಗವಾಗಿದ್ದರು.

ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಹಿಂದಾ ಅನೇಕ ಆರೋಪಗಳನ್ನು ಎದುರಿಸಬೇಕಾಯಿತು. ನ್ಯಾಯಾಂಗ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಅಲ್ಪಸಂಖ್ಯಾತ ತಮಿಳರ ಕ್ಷೇಮಾಭಿವೃದ್ಧಿಯ ಬದಲು ತಮ್ಮ ಸಮುದಾಯದವರಿಗೆ ಹೆಚ್ಚು ಒತ್ತು ನೀಡಿದ್ದು, ಅವರು 2015ರಲ್ಲಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತು. ರಾಜಕೀಯ ಅಸ್ಥಿರತೆ ಉಂಟಾಗಿ, ಮಹಿಂದಾ ಅವರನ್ನು 2018ರಲ್ಲಿ ಮತ್ತೆ ಪ್ರಧಾನಿ ಪಟ್ಟಕ್ಕೆ ಕೂರಿಸಲಾಯಿತು. ಆದರೆ, ಶ್ರೀಲಂಕಾ ಸುಪ್ರೀಂ ಕೋರ್ಟ್‌ ಇವರ ಆಯ್ಕೆಯನ್ನು ರದ್ದುಗೊಳಿಸಿತು. ಇದರಿಂದಾಗಿ ಎಂಟು ವಾರಗಳಲ್ಲಿಯೇ ಅವರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

2019ರಲ್ಲಿ ರಾಜಪಕ್ಸ ಕುಟುಂಬ ಮತ್ತೆ ಅಧಿಕಾರಕ್ಕೆ ಬಂದಿತು. ಮಹಿಂದಾ ಬದಲಿಗೆ ಅವರ ಕಿರಿಯ ಸಹೋದರ ಗೊತಬಯ ಅಧ್ಯಕ್ಷರಾದರು. ದೇಶದ ಉನ್ನತ ಹುದ್ದೆಯಲ್ಲಿ ಎರಡು ಅವಧಿಯ ಮಿತಿಯಿಂದಾಗಿ ಮಹಿಂದಾ ಸ್ಪರ್ಧೆಯಿಂದ ಅನಿವಾರ್ಯವಾಗಿ ಹಿಂದೆ ಸರಿಯಬೇಕಾಯಿತು. ಆದರೆ, ಗೋತಬಯ ಅವರು ಮಹಿಂದಾ ಅವರನ್ನು ಪ್ರಧಾನಿಯಾಗಿ ನೇಮಿಸಿದರು.

ಶ್ರೀಲಂಕಾದಲ್ಲಿ ಸೇನಾ ಹಿನ್ನೆಲೆಯುಳ್ಳ ಮೊದಲ ಅಧ್ಯಕ್ಷ ಗೋತಬಯ. ಇವರು 1971ರಲ್ಲಿ ಶ್ರೀಲಂಕಾ ಸೇನೆಯಲ್ಲಿದ್ದರು. 1998ರಲ್ಲಿ ಅವಧಿಪೂರ್ವ ನಿವೃತ್ತಿ ಪಡೆದು ಅಮೆರಿಕಕ್ಕೆ ತೆರಳಿದ್ದರು. 2005ರಲ್ಲಿ ಮಹಿಂದಾ ಬಹುಮತ ಪಡೆದಾಗ ವಾಪಸಾಗಿ, ರಕ್ಷಣಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಅಧಿಕಾರಾವಧಿಯಲ್ಲಿ ಶ್ರೀಲಂಕಾ ಸಶಸ್ತ್ರ ಪಡೆಗಳು ಎಲ್‌ಟಿಟಿಇಯನ್ನು ಸದೆಬಡಿದವು. ಮುಂದೆ 2015ರಲ್ಲಿ ಮಹಿಂದಾ ಸೋತಾಗ, ಗೋತಬಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು. 2019ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನೇರವಾಗಿ ಅಧ್ಯಕ್ಷ ಸ್ಥಾನಕ್ಕೇರಿದರು.

ಇದನ್ನು ಓದಿದ್ದೀರಾ?: ವಾರಾಂತ್ಯದ ಓದು | ಹಿಂದಿ ಹೇರಿಕೆಗೆ ಪ್ರತಿರೋಧದ ಪೆಟ್ಟು; ಗೆರೆಗಳಲ್ಲಿ ಬರೆ ಎಳೆದ ತಮಿಳು ವ್ಯಂಗ್ಯಚಿತ್ರಕಾರರು

2019ರ ಚುನಾವಣೆ ವೇಳೆ ಗೋತಬಯ, ಪಾರದರ್ಶಕ ಆಡಳಿತ ನೀಡುವ ಮತ್ತು ದೇಶವನ್ನು ಸಮೃದ್ಧಗೊಳಿಸುವ ಭರವಸೆ ನೀಡಿದ್ದರು. ಇದು ಲಂಕಾದ ಸಿಂಹಳೀಯರು ಮತ್ತು ಬೌದ್ಧ ಮತದಾರರನ್ನು ಸೆಳೆಯಿತು. ಆದರೆ, ಗೋತಬಯರಿಗೆ ಅಲ್ಪಸಂಖ್ಯಾತರ ಭಯವಿತ್ತು. ಅಂತರ್ಯುದ್ಧದ ಸಮಯದಲ್ಲಿ ಭಿನ್ನಮತೀಯರು ಮತ್ತು ಪತ್ರಕರ್ತರನ್ನು ಗುರಿಯಾಗಿಸಿ ಡೆತ್‌ಸ್ಕ್ವಾಡ್‌ಗಳನ್ನು ನಡೆಸಿ, ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಗುರುತರ ಆರೋಪ ಈಗಲೂ ಇವರ ಮೇಲಿದೆ.

ಮಹಿಂದಾ ಮತ್ತು ಗೋತಬಯ ನಂತರ ಸರದಿಯಲ್ಲಿರುವುದು ಬಸಿಲ್‌ ರಾಜಪಕ್ಸ. ಸಹೋದರನ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದವರು. ದೇಶ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮಂತ್ರಿಮಂಡಲದ ಸಚಿವರು ಸಾಮೂಹಿಕ ರಾಜಿನಾಮೆ ನೀಡಿದಾಗ ಇವರು ಸಹ ರಾಜಿನಾಮೆ ನೀಡಬೇಕಾಯಿತು.

ಶ್ರೀಲಂಕಾ ಪೊದುಜನ ಪೆರಮುನಾ (ಎಸ್‌ಎಲ್‌ಪಿಪಿ) ಪಕ್ಷವನ್ನು ಬಲಪಡಿಸುವಲ್ಲಿ ಬಸಿಲ್ ಪಾತ್ರ ಮುಖ್ಯವಾದುದು. 2019ರಲ್ಲಿ ರಾಜಪಕ್ಸ ವಂಶವನ್ನು ಅಧಿಕಾರಕ್ಕೆ ಮತ್ತೆ ಕರೆತಂದ ಪ್ರಮುಖ ಶಕ್ತಿಗಳಲ್ಲಿ ಬಸಿಲ್‌ ಕೂಡ ಒಬ್ಬರು. ಚುನಾವಣಾ ಕಾರ್ಯತಂತ್ರಗಾರನಾಗಿ ಬಸಿಲ್‌ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ಇವರ ಮೇಲೆ ಭ್ರಷ್ಟಾಚಾರದ ಅನೇಕ ಆರೋಪಗಳಿದ್ದು, ಸಣ್ಣಪುಟ್ಟ ಶಿಕ್ಷೆಗಳಿಗೂ ಗುರಿಯಾಗಿದ್ದಾರೆ. ಇವರು 'ಮಿಸ್ಟರ್‌ ಟೆನ್‌ ಪರ್ಸೆಂಟ್‌ʼ ಎಂದೇ ಪ್ರಸಿದ್ಧ.

2019ರಲ್ಲಿ ಅಧಿಕಾರಕ್ಕೆ ಬಂದ ಗೋತಬಯ ರಾಜಪಕ್ಸ ತಮ್ಮ ಚುನಾವಣಾ ಭರವಸೆಗಳಲ್ಲಿ ಹೆಚ್ಚುವರಿ ತೆರಿಗೆ ಮತ್ತು ವ್ಯಾಟ್‌ ಅನ್ನು ಅರ್ಧದಷ್ಟು ಕಡಿತಗೊಳಿಸುವ ಭರವಸೆ ನೀಡಿದ್ದರು. ಅದರಂತೆ, 2019ರ ಡಿಸೆಂಬರ್‌ನಲ್ಲಿ ಈ ನಿಯಮ ಜಾರಿ ಮಾಡಲಾಯಿತು. ಇದಾದ ಕೇವಲ ಮೂರೇ ತಿಂಗಳಲ್ಲಿ ಕೋವಿಡ್‌ ಸಾಂಕ್ರಾಮಿಕದ ಹೊಡೆತಕ್ಕೆ ಸಿಕ್ಕಿದ್ದರಿಂದ ಸರ್ಕಾರದ ವಿಚಾರ ಬುಡಮೇಲಾಯಿತು. ಜನರ ಖರೀದಿ ಮಾಡುವ ಶಕ್ತಿ ಕಡಿಮೆಯಾಯಿತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗತೊಡಗಿತು.

Sri Lanka Crisis 2

ಕೃಷಿ ಕ್ಷೇತ್ರವನ್ನು ಸಂಪೂರ್ಣ ಸಾವಯವ ಮಾಡುವ ಯೋಜನೆ ಹಾಕಿಕೊಂಡಿದ್ದ ಗೋತಬಯ ಸರ್ಕಾರ, ರಾತ್ರೋರಾತ್ರಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಮೇಲೆ ನಿರ್ಬಂಧ ಹೇರಿತು. ರಾಸಾಯನಿಕ ಗೊಬ್ಬರಗಳ ಆಮದನ್ನು ಕಡಿಮೆ ಮಾಡಿ ಹಣ ಉಳಿಸುವ ಲೆಕ್ಕಾಚಾರ ಸರ್ಕಾರದ್ದಾಗಿತ್ತು. ಸರ್ಕಾರದ ಈ ನಡೆಗೆ ಭಾರಿ ಪ್ರಶಂಸೆ ಸಹ ವ್ಯಕ್ತವಾಗಿತ್ತು. ಆದರೆ, ಈ ಯೋಜನೆ ಕೂಡ ನೆಲಕಚ್ಚಿತು.

ಭತ್ತ ಬೆಳೆಯುವಲ್ಲಿ ಸ್ವಾವಲಂಬನೆ ಸಾಧಿಸಿದ್ದ ಲಂಕಾ, ಸಾವಯವ ಕೃಷಿ ಯೋಜನೆ ಪ್ರಕಟವಾದ ಆರೇ ತಿಂಗಳಲ್ಲಿ ಹೊರದೇಶಗಳಿಂದ ಅಕ್ಕಿ ಆಮದು ಮಾಡಿಕೊಳ್ಳುವ ಸ್ಥಿತಿಗೆ ಬಂದು ತಲುಪಿತು. ಟೀ ಬೆಳೆ ಸಹ ಶ್ರೀಲಂಕಾದಿಂದ ರಫ್ತಾಗುತ್ತಿದ್ದ ಮುಖ್ಯ ಸರಕಾಗಿತ್ತು; ಸರ್ಕಾರದ ಈ ನಿರ್ಧಾರದಿಂದ ಟೀ ವ್ಯಾಪಾರದ ಮೇಲೂ ಕಗ್ಗತ್ತಲು ಕವಿಯಿತು. ಇವೆಲ್ಲಕ್ಕಿಂತ ಮುಖ್ಯವಾಗಿ, ರಾಜಪಕ್ಸ ಸರ್ಕಾರ ಚೀನಾದೆಡೆಗೆ ತೋರಿದ ಒಲವು ಇಂದು ಲಂಕಾವನ್ನು ಸಾಲದ ಸಮುದ್ರದಲ್ಲಿ ಮುಳುಗಿಸಿದೆ. ಚೀನಾ ರಾಜತಾಂತ್ರಿಕವಾಗಿ ಶ್ರೀಲಂಕಾವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ ಎಂದರೆ ತಪ್ಪಾಗದು.

ರಾಜಪಕ್ಸ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಶ್ರೀಲಂಕಾದ ವಿರೋಧ ಪಕ್ಷ ಸಮಾಗಿ ಜನ ಬಲವೆಗಯ (ಎಸ್‌ಜೆಬಿ) ಘೋಷಿಸಿದೆ. ಲಂಕೆಯಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ವರ್ಷಗಳ ಕಾಲ ಲಂಕೆಯನ್ನು ಆಳಿದ್ದ ಗೋತಬಯ ರಾಜಪಕ್ಸ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಪತನದ ಅಂಚಿನಲ್ಲಿದೆ.

ರಾಜಪಕ್ಸ ಸಹೋದರರ ವಂಶಪಾರಂಪರ್ಯ ಆಡಳಿತ, ಭ್ರಷ್ಟಚಾರ, ಅಸಮರ್ಪಕ ನಿರ್ಧಾರಗಳಿಂದಾಗಿ ಇಂದು ಇಡೀ ಶ್ರೀಲಂಕಾ ಬೀದಿಗೆ ಬಂದಿದೆ. ಜನರು ಭಾರತ ಸೇರಿದಂತೆ ಹತ್ತಿರದ ದೇಶಗಳಿಗೆ ವಾಮಮಾರ್ಗಗಳಲ್ಲಿ ವಲಸೆ ಹೋಗುತ್ತಿದ್ದಾರೆ. ದ್ವೀಪರಾಷ್ಟ್ರ ಹಸಿವಿನಿಂದ ಕಂಗೆಟ್ಟಿದೆ. ಮುಂದೇನು ಎಂಬುದು ಲಂಕೆಯ ಜನರ ಕಂಗಳಲ್ಲಿನ ಆತಂಕದ ಪ್ರಶ್ನೆ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app