ಮುಳ್ಳುಹಾದಿಗೆ ಮಣ್ಣು ಹೊತ್ತವರು | 'ಲೇಡಿ ಸಚಿನ್ ಅಲ್ಲ, ನಾನು ಮಿಥಾಲಿ ರಾಜ್'

Mithali Raj 8

ಭಾರತದ ಎಲ್ಲ ವೈಭವೋಪೇತ ಸಿರಿವಂತ ಕ್ಷೇತ್ರಗಳಂತೆ ಕ್ರಿಕೆಟ್ ಜಗತ್ತಿನಲ್ಲಿಯೂ ಹೆಣ್ಣುಮಕ್ಕಳಿರಲಿಲ್ಲ. ಇಲ್ಲವೆಂದಲ್ಲ, ಇದ್ದರು, ಅದೃಶ್ಯರಾಗಿದ್ದರು. ಬ್ಯಾಟು ಹಿಡಿದ ಮಹಿಳೆಯರೂ 'ಬ್ಯಾಟ್ಸ್‌ಮ್ಯಾನ್' ಎಂದೇ ಕರೆಯಲ್ಪಡುತ್ತಿದ್ದರು! ಮಹಿಳಾ ಕ್ರಿಕೆಟ್ಟಿಗೆ ಅಭಿಮಾನಿ ಪಡೆ ಇರಲಿಲ್ಲ. ಹೆಂಗಸರು ಏನು ಆಡಿಯಾರೆಂದು ನೋಡುವವರೇ ಇರಲಿಲ್ಲ. ಅಂಥ ಹೊತ್ತಲ್ಲಿ...

ಭಾರತದಲ್ಲಿ ಕ್ರಿಕೆಟ್ ಆಟವಲ್ಲ, ಅದೊಂದು ಧರ್ಮ. ಕೆಲವರ ಸಂತೋಷ, ರೋಮಾಂಚನ, ಸಂಭ್ರಮ, ದುಃಖ, ಸಿಟ್ಟು, ಗಳಿಕೆ ಎಲ್ಲವೂ ಕ್ರಿಕೆಟ್‌ನ ಸುತ್ತಲೇ ಸುತ್ತುತ್ತವೆ. ಇಲ್ಲಿ ಕ್ರಿಕೆಟ್ ಆಟಗಾರರು ಕಲಿಗಳು; ದೇಶದ ಮಾನ ಉಳಿಸುವವರು; ದಿನಚರಿ, ವೇಳಾಪಟ್ಟಿಗಳ ಹಿಂದೆಮುಂದೆ ಮಾಡುವ ಶಕ್ತಿಶಾಲಿಗಳು; ದೇವರಂತೆ ಪೂಜಿಸಲ್ಪಡುವವರು. ಪ್ರತಿ ಆಟಗಾರನ ಪ್ರತಿ ಚಲನೆಯೂ ಕಾಸು ತರುವ, ಕಳೆಯುವ ಬೆಟ್ಟಿಂಗ್ ಧಂಧೆಯನ್ನು ಪೋಷಿಸುತ್ತದೆ. ಪಂದ್ಯ ಶುರುವಾದರೆ ಆಟಕ್ಕಾಗಿ, ನೋಟಕ್ಕಾಗಿ ನೋಡುವವರ ಸಾವಿರ ಪಾಲು ಜನ ಜೂಜು ಕಟ್ಟಲಿಕ್ಕಾಗಿ ನೋಡುತ್ತಾರೆ. ಹರಾಜಿನಲ್ಲಿ ಒಬ್ಬೊಬ್ಬ ಆಟಗಾರನ 'ಬೆಲೆ' ಕೋಟ್ಯಂತರ ರುಪಾಯಿಗಳು. ದುಬಾರಿ ಬೆಲೆ ತೆತ್ತು ಅವರನ್ನು ರೂಪದರ್ಶಿಯಾಗಿ ಪಡೆದರೆ ತಾವು ಉದ್ಧಾರವಾದಂತೆಯೇ ಎಂದು ಬಟ್ಟೆ, ವಿಮಾನಯಾನ, ಹಾಲಿನಪುಡಿ, ಗುಟ್ಕಾ, ಕಾರು ಮೊದಲಾದ ಕಂಪನಿಗಳು ಭಾವಿಸಿವೆ. ಆಟಗಾರರನ್ನು ನೋಡಿಕೊಳ್ಳಲೆಂದೇ ಒಂದು ನಿಯಂತ್ರಣ ಮಂಡಳಿ. ಮಂಡಳಿಯ ಗದ್ದುಗೆಯೇರಲು ನಾ, ತಾ ಎಂಬ ಪೈಪೋಟಿ, ಯುದ್ಧ. "ಎಲಎಲಾ! ಇದೇನಿದೇನು?! ನನ್ನನ್ನೇ ಕೆಳಗಿಳಿಸಿ ಸಚಿನು, ವಿರಾಟು, ಧವನುಗಳು ಮೆರೆಯುತ್ತಿದ್ದಾರಲ್ಲಾ!" ಎಂದು ಅಕಸ್ಮಾತ್ ದೇವರೆಂಬವನಿದ್ದರೂ ಕಂಗೆಡಬೇಕು, ಅಂಥ ವೈಭವ.

Eedina App

ಎಂದಿನಂತೆ, ಭಾರತದ ಎಲ್ಲ ವೈಭವೋಪೇತ ಸಿರಿವಂತ ಕ್ಷೇತ್ರಗಳಂತೆ ಕ್ರಿಕೆಟ್ ಜಗತ್ತಿನಲ್ಲಿಯೂ ಹೆಣ್ಣುಮಕ್ಕಳಿರಲಿಲ್ಲ. ಇಲ್ಲವೆಂದಲ್ಲ, ಇದ್ದರು, ಅದೃಶ್ಯರಾಗಿದ್ದರು. ಮಹಿಳೆಯರೂ ಕ್ರಿಕೆಟ್ ಆಡುತ್ತಾರೆ, ಬ್ಯಾಟೆತ್ತಿ ಬೀಸಿ ಬೌಂಡರಿ, ಸಿಕ್ಸರ್ ಹೊಡೆದು ರೋಮಾಂಚನ ಉಂಟುಮಾಡುತ್ತಾರೆ, ಅವರೂ ಐದು ದಿನದ ಟೆಸ್ಟ್, ಒಂದಿಡೀ ದಿನದ ಪಂದ್ಯ, ಸರಸರ ರನ್ ಗಳಿಸಬೇಕಾದ ಟಿ-20 ಆಡುತ್ತಾರೆ; ಅವರೂ ಜಿಗಿದು ಕ್ಯಾಚ್ ಹಿಡಿಯುತ್ತಾರೆ; ಓಡೋಡಿ ರನೌಟ್ ಮಾಡುತ್ತಾರೆ ಎಂದು ಬಹಳ ಜನ ಕಲ್ಪಿಸಿಕೊಂಡಿರಲಿಲ್ಲ. ಬ್ಯಾಟು ಹಿಡಿದ ಮಹಿಳೆಯರೂ 'ಬ್ಯಾಟ್ಸ್‌ಮ್ಯಾನ್' ಎಂದೇ ಕರೆಯಲ್ಪಡುತ್ತಿದ್ದರು! ಮಹಿಳಾ ಕ್ರಿಕೆಟ್ಟಿಗೆ ಅಭಿಮಾನಿ ಪಡೆ ಇರಲಿಲ್ಲ. ಹೆಂಗಸರು ಏನು ಆಡಿಯಾರೆಂದು ನೋಡುವವರೇ ಇರಲಿಲ್ಲ. ತನಗೂ ಮಹಿಳಾ ಕ್ರಿಕೆಟ್‌ಗೂ ಸಂಬಂಧವೇ ಇಲ್ಲ ಎಂದುಕೊಂಡಿತ್ತು ಬಿಸಿಸಿಐ. ತಂಡಕ್ಕೆ ಯಾರೂ ಪ್ರಾಯೋಜಕರಿರಲಿಲ್ಲ. ತಂಡಕ್ಕೊಬ್ಬರು ಫಿಸಿಯೋಥೆರಪಿಸ್ಟ್ ಇಲ್ಲ. ಹುಡುಗಿಯರು ಆಡುತ್ತಿದ್ದರೆ ಅದಕ್ಕೆ ವೀಕ್ಷಕ ವಿವರಣೆ ಹೇಳುವವರಿರಲಿಲ್ಲ. ಅವರಿಗೇ ಬೇರೆ ಡ್ರೆಸ್ ಇಲ್ಲ. ಪುರುಷ ಟೀಮಿನ ಸಣ್ಣ ಅಳತೆಯ ಬಟ್ಟೆಗಳೇ ಬಂದದ್ದೂ ಇತ್ತು. ಅಂಥ ಹೊತ್ತಲ್ಲಿ...

ಬಂದಳಪ್ಪ ಬಂದಳು...

AV Eye Hospital ad
Mithali Raj 13

ಎಲ್ಲರೂ ಹುಬ್ಬೇರಿಸುವಂತೆ, ಮಹಿಳೆಯರ ಕ್ರಿಕೆಟ್ ಆಟವೂ 'ಬೆಟ್'ಗೆ ಅರ್ಹವೆಂದು ಭಾವಿಸುವಂತೆ, ಇವರನ್ನೂ ತಾನು ತನ್ನ ನಿಯಂತ್ರಣದಲ್ಲಿ ತಂದುಕೊಳ್ಳಬೇಕು ಎಂದು ಬಿಸಿಸಿಐ 'ದೊಡ್ಡ' ಮನಸು ಮಾಡುವಂತೆ ಬಂದಳಪ್ಪ ಒಬ್ಬಳು. ಅವಳು ಆಡಿದಳು, ತಂಡವನ್ನು ಮುನ್ನಡೆಸಿದಳು. ಏರಿದ ಹುಬ್ಬುಗಳಿಗೆ, ಗೊಣಗಾಟದ ಪ್ರಶ್ನೆಗಳಿಗೆ ತನ್ನ ಆಟದಲ್ಲೇ ಉತ್ತರ ಕೊಟ್ಟಳು.

ಅವಳೇ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್. ಟೆಸ್ಟ್ ಕ್ರಿಕೆಟ್, ಒಂದು ದಿನದ ಪಂದ್ಯ, ಟಿ-20 ಎಲ್ಲ ಪ್ರಕಾರಗಳಲ್ಲೂ ವಿಶ್ವದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಮಹಿಳಾ ಕ್ರಿಕೆಟರ್. ಹತ್ತಾರು ದಾಖಲೆಗಳ ಬರೆದಾಕೆ. ಚೆಂಡು, ದಾಂಡು, ಮೈದಾನ, ನಾಯಕತ್ವ ಎಲ್ಲದರಲ್ಲೂ ಯಶಸ್ಸು ಕಂಡಾಕೆ. ಅತಿ ಹೆಚ್ಚು ಸಲ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದಾಕೆ. ಅವಳು ಮಹಿಳಾ ಕ್ರಿಕೆಟ್‌ಗಿತ್ತ ಜನಪ್ರಿಯತೆಯ ಬಳಿಕ 'ಬ್ಯಾಟ್ಸ್‌ಮ್ಯಾನ್' ಎಂದೇ ಕರೆಯಲ್ಪಡುತ್ತಿದ್ದ ಹೆಣ್ಣು 'ದಾಂಡಿಗ'ರು ಈಗ ಲಿಂಗತಟಸ್ಥ ಪದ 'ಬ್ಯಾಟರ್' ಎಂದು ಕರೆಸಿಕೊಳ್ಳುತ್ತಿದ್ದಾರೆ.

Mithali Raj 14

ರಾಜಸ್ಥಾನದ ಜೋಧಪುರದಲ್ಲಿ ಭಾರತೀಯ ನೌಕಾಪಡೆಯ ಏರ್‌ಮನ್ ಆಗಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ದೊರೈರಾಜ್ ಮತ್ತು ಲೀಲಾ ಅವರ ಮಗಳು ಮಿಥಾಲಿ (1982). ತಮಿಳು ಮಾತೃಭಾಷೆಯ ಮಿಥಾಲಿ ಓದಿದ್ದು ಹೈದರಾಬಾದಿನಲ್ಲಿ. ತಮ್ಮ ಆರನೆಯ ವಯಸ್ಸಿಗೆ ಕ್ರಿಕೆಟ್ ಆಡಲು ಆರಂಭಿಸಿದ ಸಮಯದಲ್ಲಿ, ಮುಂದೆ ಭಾರತ ತಂಡದ ಯಶಸ್ವಿ ನಾಯಕಿಯಾಗಿ ಮಹಿಳಾ ಕ್ರಿಕೆಟ್‌ಗೊಂದು ಗರಿಮೆ ತಂದುಕೊಡುವೆನೆಂದು ಕನಸು ಮನಸಿನಲ್ಲೂ ಊಹಿಸಿರಲಿಲ್ಲ. ಕ್ರಿಕೆಟ್ ಆಡಿ ಏನಾದರೂ ಸಾಧಿಸುವ ಗುರಿಯನ್ನು ಹೊಂದಿರಲಿಲ್ಲ. ಆಕೆಗಿದ್ದದ್ದು ಉತ್ತಮ ನೃತ್ಯಪಟುವಾಗಬೇಕೆಂಬ ಹೆಬ್ಬಯಕೆ. ಒಂಟಿ ಮಹಿಳೆಯಾಗಿ ದಿಟ್ಟ ಬದುಕನ್ನು ನಡೆಸುತ್ತಿದ್ದ, ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದ, ವಾತ್ಸಲ್ಯಮೂರ್ತಿಯಾಗಿದ್ದ ನರ್ತನ ಗುರು ಮಿಥಾಲಿಯ ಮಾದರಿಯಾಗಿದ್ದರು. ಆದರೆ, ಕ್ರಿಕೆಟ್ ಹುಚ್ಚಿನ ಅಣ್ಣನೊಡನೆ ಆಡುತ್ತ-ಆಡುತ್ತ ತಂಗಿ ತಾನೂ ಆಟದ ಬಯಲಿಗೆ ಹೆಜ್ಜೆ ಇಟ್ಟಳು. ಪಂದ್ಯಗಳಲ್ಲಿ ಆಡಿದಳು. ಹಲವು ಪಂದ್ಯಗಳಲ್ಲಿ ಜಯದ ರೂವಾರಿಯಾದಳು. ಕ್ರಿಕೆಟ್‌ನ ಎಲ್ಲ ವಿಭಾಗಗಳಲ್ಲೂ ನೈಪುಣ್ಯ ಸಾಧಿಸಿದಳು. ಶಾಲೆಯ ತಂಡಗಳಿಗೆ ತರಬೇತಿ ನೀಡುವಷ್ಟು ಕ್ರಿಕೆಟ್ ಪ್ರವೀಣಳಾದಳು.

Mithali Raj 9

ಟಿ.ವಿ ಇರದಿದ್ದ ಕಾಲದಲ್ಲಿ ಮಿಥಾಲಿ ಕ್ರಿಕೆಟ್ ಆಟವನ್ನು ಹೆಚ್ಚು ನೋಡಲಿಲ್ಲ, ಸೀದಾ ಆಡಿದ್ದೇ. ಹದಿನಾಲ್ಕು ವರ್ಷದವಳಿರುವಾಗಲೇ 1997ರಲ್ಲಿ ಮಹಿಳಾ ವಿಶ್ವಕಪ್, 1999ರಲ್ಲಿ ಮೊದಲ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆಡುವ ಅವಕಾಶ ಪಡೆದ ಮಿಥಾಲಿ, ಭಾರತೀಯ ಮಹಿಳಾ ಕ್ರಿಕೆಟ್‌ನ ಹಲವು ದಾಖಲೆಗಳನ್ನು ಬರೆಯುತ್ತ, ಇದ್ದ ದಾಖಲೆಗಳನ್ನು ಅಳಿಸುತ್ತ ಸಾಗಿದಳು. ಮೊದಲ ಒಂದು ದಿನದ ಪಂದ್ಯದಲ್ಲೇ ಐರ‍್ಲೆಂಡ್ ಎದುರು 114 ರನ್ ಬಾರಿಸಿ, ಶತಕದಿಂದ ಕ್ರಿಕೆಟ್ ಲೋಕ ಪ್ರವೇಶಿಸಿದ ಮಿಥಾಲಿ ಹಿಂತಿರುಗಿ ನೋಡಿದ್ದೇ ಇಲ್ಲ. 16 ವರ್ಷದವಳಿದ್ದಾಗ ಸೀನಿಯರ‍್ಸ್ ಜೊತೆ ಮೊದಲ ಅಂತಾರಾಷ್ಟ್ರೀಯ ಮ್ಯಾಚ್ ಆಡಿದಾಗ, ತೊಟ್ಟ ಬಟ್ಟೆಯನ್ನು ಸರಿಯಾಗಿ ಮಡಿಚಿಡಲೂ ಅವಳಿಗೆ ಬರುತ್ತಿರಲಿಲ್ಲ. ಕಟ್ಲೆರಿ ಬಳಸಲು ಗೊತ್ತಿರಲಿಲ್ಲ. ಎಲ್ಲರಿಗಿಂತ ಚಿಕ್ಕವಳಾಗಿದ್ದ ಅವಳಿಗೆ ಹಿರಿಯ ಆಟಗಾರ್ತಿಯರ ಜೊತೆ ಬೆರೆಯಲು ಆಗದೆ ಏಕಾಂಗಿಯಾದಳು. ವರುಷಗಳು ಕಳೆದಂತೆ ತಂಡದಲ್ಲಿ ಮಿಥಾಲಿಯ ಸ್ಥಾನ ಗಟ್ಟಿಯಾಯಿತು. ಬಳಿಕ ಬಂದ ಆಟಗಾರ್ತಿಯರಿಗೆಲ್ಲ ಮಿಥಾಲಿಯೇ ಮುನ್ನಡೆಸುವ ಅಕ್ಕನಾದಳು. 19 ವರ್ಷದವಳಿದ್ದಾಗ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿ ವಿಶ್ವ ದಾಖಲೆ (214 ರನ್) ಮಾಡಿದಳು. 2005ರಲ್ಲಿ ಭಾರತ ತಂಡದ ನಾಯಕಿಯಾದಳು. 2005, 2017ರ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿ, ಈಗ ಮೂರನೆಯ ಬಾರಿಗೆ ತಂಡದ ನಾಯಕಿಯಾಗಿ ವಿಶ್ವಕಪ್ ಗೆಲುವಿನತ್ತ ಗುರಿ ಇಟ್ಟಿದ್ದಾಳೆ. ಅವಳ ಜೀವನಾಧಾರಿತ 'ಶಭಾಶ್ ಮಿಥು' ಚಲನಚಿತ್ರ 2020ರಲ್ಲಿ ಸೆಟ್ಟೇರಿತು. ತಾಪ್ಸಿ ಪನ್ನು ಅವಳ ಪಾತ್ರದಲ್ಲಿ ಅಭಿನಯಿಸುವುದು ಎಂದಾಯಿತು. ಕೋವಿಡ್ ಕಾರಣದಿಂದ ಚಿತ್ರೀಕರಣ ನಿಧಾನಗೊಂಡಿದೆ.

Mithali iRaj 16

ಮನಬಿಚ್ಚಿ ಮಾತನಾಡುವುದರಲ್ಲಿ ಮಿಥಾಲಿ ಎತ್ತಿದ ಕೈ. ಈ ನೇರ ನಡತೆಯೇ ಬೆಂಬಲಿಗರನ್ನೂ, ವಿರೋಧಿಗಳನ್ನೂ ಸೃಷ್ಟಿಸಿದೆ. 2002ರಲ್ಲಿ ಅವಳು ಟೈಫಾಯ್ಡ್‌ಗೆ ತುತ್ತಾದಾಗ ಭಾರತ ತಂಡ ಹಿನ್ನಡೆ ಅನುಭವಿಸಿತು. ಅದರಿಂದ ಹೊರಬರಲು ಮೂರು ವರ್ಷ ಹಿಡಿಯಿತು. ಆಗ ಅವಳ ಬಗೆಗೆ ಟೀಕೆ ಕೇಳಿಬಂದರೂ, 2006ರಲ್ಲಿ ಏಷ್ಯಾಕಪ್ ಗೆಲ್ಲುವುದರೊಂದಿಗೆ ಶುರುವಾದ ವಿಜಯಯಾತ್ರೆ ಒಂದೇ ಸಮ ಮುಂದುವರಿಯಿತು. ಭಾರತೀಯ ಮಹಿಳಾ ಕ್ರಿಕೆಟ್‌ನ ಎಲ್ಲ ವಿಭಾಗಗಳಲ್ಲೂ ಅತಿ ಹೆಚ್ಚು ರನ್ ಗಳಿಸಿದ ಮಿಥಾಲಿ, ಹಲವು 'ಮೊದಲ' ಮತ್ತು 'ಹೆಚ್ಚು'ಗಳ ಒಡತಿಯಾಗಿದ್ದಾಳೆ. ಅರ್ಜುನ, ಖೇಲ್‌ರತ್ನ, ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಪ್ರಸ್ತುತ ವಿಶ್ವಕಪ್ ತಯಾರಿಯಲ್ಲಿ ನಿರತಳಾಗಿರುವ ಮಿಥಾಲಿ, ಅದಾದ ಬಳಿಕ ನಿವೃತ್ತಿಯ ಆಲೋಚನೆಯಲ್ಲಿದ್ದಾಳೆ.
 
ಸೂಕ್ತ ಸಂಗಾತಿ ಸಿಕ್ಕರೆ ಮಾತ್ರ ಮದುವೆ

Mithali iRaj 3

ಮಿಥಾಲಿಯನ್ನು ಪದೇ-ಪದೇ 'ಲೇಡಿ ಸಚಿನ್' ಎನ್ನುತ್ತ, ಸಚಿನ್‌ಗೆ ಹೋಲಿಸಲಾಗುತ್ತದೆ. "ಸಚಿನ್ ತುಂಬ ದೊಡ್ಡವರೇ ಹೌದು. ಆದರೆ, ನಾನು ಮಿಥಾಲಿ, ಮಿಥಾಲಿ ರಾಜ್ ಆಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ," ಎನ್ನುವ ಅವಳ ಬಗೆಗೆ ಮಾಹಿತಿ ಬೇಕೆಂದು ಗೂಗಲಿಸಿದರೆ ಮಿಥಾಲಿ ಹಸ್ಬಂಡ್, ಮಿಥಾಲಿ ಫ್ಯಾಮಿಲಿ, ಮಿಥಾಲಿ ಕರಿಯರ್, ಮಿಥಾಲಿ ಕಿಡ್ಸ್, ಮಿಥಾಲಿ ಬಾಯ್‌ಫ್ರೆಂಡ್ ಮುಂತಾದ ಸಾಧ್ಯತೆಗಳು ಕಣ್ಣೆದುರು ಹರಡಿಕೊಳ್ಳುತ್ತವೆ. ಹೆಣ್ಣೊಬ್ಬಳ ಸಾಧನೆ, ಸಾಧ್ಯತೆ, ಮಾಹಿತಿಗಳನ್ನು ಅವಳ ಗಂಡ/ಅಪ್ಪ/ಮಕ್ಕಳು/ಕುಟುಂಬದ ಮೂಲ ಹಿಡಿದು ಗುರುತಿಸುವ ಸಮಾಜದ ಪೂರ್ವಗ್ರಹಕ್ಕೆ ಇದು ಸಾಕ್ಷಿಯಾಗಿದೆ. ಇಂದಿಗೂ ಲೋಕ, ಮದುವೆಯೇ ಹೆಣ್ಣಿಗೆ ಅಂತಿಮ ಸಾರ್ಥ್ಯಕ್ಯದ ಗುರಿ ಎಂದು ಭಾವಿಸಿದೆ. ಅಂಥವರಿಗೆ ಮಿಥಾಲಿ, "ನಾನು ಸಿದ್ಧ ಆದಾಗಲಷ್ಟೇ ಮದುವೆ ಆಗುವೆ. ಅದೂ ನನಗೆ ಸೂಕ್ತ ಸಂಗಾತಿ ಸಿಕ್ಕರೆ ಮಾತ್ರ. ಆಟದಲ್ಲಿ ತೊಡಗಿದರೆ ಸಂಬಂಧ ನಿಭಾಯಿಸುವುದು ಕಷ್ಟ. ಸಾಧಾರಣವಾಗಿ ಹೆಂಡತಿಯಿಂದ ಏನನ್ನು ನಿರೀಕ್ಷಿಸುತ್ತಾರೋ ಅದನ್ನು ನಾನು ಪೂರೈಸಲಾರೆ. ತಮಗಿಂತ ಯಶಸ್ವಿ ಮಹಿಳೆಯನ್ನು ಕಂಡರೆ ಪುರುಷರೊಳಗೊಂದು ವಿಚಿತ್ರ ಕಾಂಪ್ಲೆಕ್ಸ್ ಹುಟ್ಟುತ್ತದೆ. ಭಾರತದ ಪುರುಷರಿಗೆ ಅದು ಹೆಚ್ಚು. ನನ್ನ ಯಶಸ್ಸನ್ನು ಕಂಡು ಖುಷಿ ಪಡುವವ, ನನ್ನನ್ನು ಸಮಾನವಾಗಿ ನೋಡುವವ ಸಿಗಬೇಕು. ಅಂತಹ ಸಂಗಾತಿ ಸಿಕ್ಕಾಗ ಮದುವೆಯ ಯೋಚನೆ ಮಾಡುತ್ತೇನೆ," ಎಂದು ಬಾಯಿ ಮುಚ್ಚಿಸುತ್ತಾಳೆ.

Mithali iRaj 10

ಮೊದಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಡಿಯಲ್ಲಿ ಮಹಿಳಾ ಕ್ರಿಕೆಟ್ ಇರಲಿಲ್ಲ. ಅದರಲ್ಲಿ ತಾವೂ ಸೇರಿಕೊಂಡಾಗ, ಪುರುಷ ಆಟಗಾರರ ಪ್ರಸಿದ್ಧಿ ಮಹಿಳೆಯರನ್ನು ಬೆರಗಾಗಿಸಿತಂತೆ. ತನ್ನ ಬ್ಯಾಟಿಂಗ್ ಗಮನಿಸಿ ರಾಹುಲ್ ದ್ರಾವಿಡ್ ಮೆಚ್ಚಿ ಕೆಲವು ಸಲಹೆಗಳನ್ನು ನೀಡಿದ್ದು, ವಿಶ್ವಕಪ್ ಮುಗಿಯುವವರೆಗೆ ಸಚಿನ್ ಆಟಗಾರ್ತಿಯರ ಸಂಪರ್ಕದಲ್ಲಿದ್ದು ಬೆಂಬಲ ತುಂಬಿದ್ದು ಸ್ಮರಣೀಯ ಕ್ಷಣಗಳು ಎಂದು ಮಿಥಾಲಿ ನೆನಪಿಸಿಕೊಳ್ಳುತ್ತಾಳೆ. ಈಗ ಪುರುಷರ ಕ್ರಿಕೆಟ್ ತಂಡವು ಮಹಿಳೆಯರ ತಂಡವನ್ನು ಬೆಂಬಲಿಸಿ, ಪ್ರೋತ್ಸಾಹಿಸುತ್ತದೆ. ಒಬ್ಬರಿಗೊಬ್ಬರು ಬೆಂಬಲ ಹಂಚಿಕೊಳ್ಳುತ್ತ ಪೂರಕವಾಗಿದ್ದಾರೆ.

ಮಿಥಾಲಿ ಕುರಿತು ವಿವಾದಗಳೂ ಇಲ್ಲದಿಲ್ಲ. ಹೆಚ್ಚಿನ ಆರೋಪಗಳು ಅಸೂಯೆ, ಸ್ಪರ್ಧೆಯಿಂದ ಬಂದಿರುವ ಸಾಧ್ಯತೆ ಇದೆ. "ಮಿಥಾಲಿ ಬ್ಯಾಟಿಂಗ್ ಯಾದಿಯಲ್ಲಿ ಸದಾ ಮೊದಲಿಗೇ ಇರಬೇಕೆಂದು ಬಯಸುತ್ತಾಳೆ. ಮೊದಲ ಅವಕಾಶ ಸಿಗದಿದ್ದರೆ ನಿವೃತ್ತಿ ಆಗುವೆನೆಂದು ಬೆದರಿಸುತ್ತಾಳೆ. ತಂಡವನ್ನು ಒಡೆಯುತ್ತ ಕೋಚ್ ಮೇಲೆ ಒತ್ತಡ ಹೇರುತ್ತಾಳೆ. ಹಿರಿಯ ಆಟಗಾರಳಾಗಿ ತಂಡದ ಸಭೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳದೆ, ಸಲಹೆ-ಸೂಚನೆ ಕೊಡದೆ ಸುಮ್ಮನಿರುತ್ತಾಳೆ. ತಂಡಕ್ಕಿಂತ ಹೆಚ್ಚು ತನ್ನ ದಾಖಲೆಗಳಿಗಾಗಿ ಆಡುತ್ತಾಳೆ," ಮುಂತಾದ ಆರೋಪಗಳು ಬಂದವು. ಆದರೆ, ಯಾವುದೇ ಆರೋಪದಲ್ಲೂ ಹುರುಳಿಲ್ಲವೆಂದು ತನ್ನ ಆಟದ ಮೂಲಕವೇ ಸಾಬೀತು ಪಡಿಸುತ್ತ ಬಂದಳು. ಆಟಗಾರರಿಗೆ ಪ್ರತಿಸ್ಪರ್ಧಿಗಳು ಇರುವರೇ ಹೊರತು ಮೈದಾನದಲ್ಲಿ ಆಪ್ತರು ಸಿಗುವುದಿಲ್ಲ ಎಂದು, ಸಹಆಟಗಾರಳ ಜೊತೆಗಿನ ವಿರಸಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದಳು!  

ನನ್ನ ಬೆವರಿನ ಬಗೆಗೆ ನನಗೆ ಹೆಮ್ಮೆಯಿದೆ

Mithali iRaj 7

ಮಿಥಾಲಿಯ ವಿಶೇಷತೆ ಕ್ರಿಕೆಟ್ಟಿನಲ್ಲಷ್ಟೇ ಇಲ್ಲ. ಚಿಂತನೆಯಲ್ಲೂ ಇದೆ. ಒಮ್ಮೆ ಪಂದ್ಯ ಮುಗಿದ ಬಳಿಕ ಗೆಳತಿಯರೊಂದಿಗೆ ಒಂದು ಸೆಲ್ಫೀ ತೆಗೆದು ಟ್ವಿಟರಿನಲ್ಲಿ ಹಾಕಿದಳು. ಅದರಲ್ಲಿ ಕಂಕುಳ ಭಾಗ ಬೆವೆತದ್ದು ಎದ್ದು ಕಾಣುವಂತಿತ್ತು. "ಕಂಕುಳು ಬೆವೆತದ್ದು ಫೊಟೋದಲ್ಲಿ ಕಾಣಿಸುತ್ತಿದೆ. ಫ್ಯಾಷನ್ನಿನ ಗಂಧಗಾಳಿಯೂ ಗೊತ್ತಿಲ್ಲವೇ? ಬೆವರು ತೋರಿಸಲು ನಾಚಿಕೆಯಾಗುವುದಿಲ್ಲವೇ?" ಎಂದೊಬ್ಬರು ಪ್ರತಿಕ್ರಿಯಿಸಿದರು. ಸಾರ್ವಜನಿಕವಾಗಿ ಅವಮಾನಿಸಬೇಕು ಎಂದುಕೊಂಡಿರುವವರಿಗೆ ಬಹಿರಂಗವಾಗಿಯೇ, "ನನ್ನ ಬೆವರಿನ ಬಗ್ಗೆ ನನಗೆ ನಾಚಿಕೆಯೇ? ಊಂಹ್ಞೂಂ, ಅಷ್ಟು ಬೆವರು ಹರಿಸಿದ್ದರಿಂದಲೇ ಇವತ್ತು ನಾನಿಲ್ಲಿ ಇದ್ದೇನೆ. ಬೆವರು ಹರಿಸಿದ್ದರಿಂದಲೇ ರಾಜಸ್ಥಾನದ ಒಬ್ಬ ಸಾಮಾನ್ಯ ಹುಡುಗಿಯಾಗಿದ್ದವಳು ಇವತ್ತಿನ ನಾನಾಗಿದ್ದೇನೆ. ಕ್ಷಮಿಸಿ, ನನ್ನ ಬೆವರಿನ ಬಗೆಗೆ ನನಗೆ ನಾಚಿಕೆಯಲ್ಲ, ಹೆಮ್ಮೆ ಇದೆ!" ಎಂದು ತಿರುಗೇಟು ನೀಡಿದಳು.

ಇದನ್ನು ಓದಿದಿರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಹಲವು ಮಕ್ಕಳ ತಾಯಿ ಸಿಂಧೂತಾಯಿ

ಅವಳಿಗೆ ದೇಶವೆಂದರೆ ಜನ. "ನಾವು ಎಲ್ಲರಂತೆ ಹುಟ್ಟಿ, ಬೆಳೆದು ಈ ಜನರಿಂದಲೇ ಸೆಲೆಬ್ರಿಟಿ ಆಗಿರುವವರು. ಅವರಿಗೆ ಏನು ಅನ್ಯಾಯ ಆಗುತ್ತಿದೆಯೋ ಅದರ ಬಗೆಗೆ ಮಾತನಾಡಲು ನಮ್ಮ ಜನಪ್ರಿಯತೆ ಎಂಬ ವೇದಿಕೆಯನ್ನು ಬಳಸಿಕೊಳ್ಳಬೇಕು," ಎಂದು ಭಾವಿಸುತ್ತಾಳೆ. ಸಾಮಾಜಿಕ ಮಾಧ್ಯಮದಲ್ಲಿ ಮಿಥಾಲಿಯ ಕೆಲವು ಸಂದೇಶಗಳು ಅವಳ ಧೋರಣೆಗೆ ಸಾಕ್ಷಿಯಾಗಿವೆ.

  • ಭಾರತಕ್ಕೆ ಹಸಿವು, ಬಡತನ, ತಾರತಮ್ಯ, ಲಿಂಗಭೇದ, ದೌರ್ಜನ್ಯ, ದುಃಖಗಳಿಂದ ಸ್ವಾತಂತ್ರ್ಯ ಸಿಗಲಿ’ (ಸ್ವಾತಂತ್ರ್ಯ ದಿನಾಚರಣೆಯ ಸಂದೇಶ.)
  • 72 ವರ್ಷಗಳಿಂದ ನೀವು ಇಟ್ಟ ಗುರಿ ತಲುಪಲು ಸಾಧ್ಯವಾಗಿಲ್ಲ ಬಾಪು. ಈಗ ಎಲ್ಲಾದರೂ ಅದರ ಸನಿಹದಲ್ಲಿರುವೆವೇ? ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರನ್ನು ಗೌರವಿಸೋಣ (ಗಾಂಧಿ ಜಯಂತಿ ಸಂದೇಶ)
  • ನಿಮ್ಮ ಗುರಿಗಳನ್ನು ಇಟ್ಟುಕೊಳ್ಳುವಾಗ ನಿಮ್ಮ ಜಾತಿ, ಕುಲ, ಹೆಣ್ಣು, ಗಂಡು ಮುಂತಾದ ಮಿತಿ ಹೇರಿಕೊಳ್ಳಬೇಡಿ.
  • ಎಲ್ಲರೂ ದುಡಿಯುತ್ತಾರೆ, ಕಷ್ಟ ಪಡುತ್ತಾರೆ. ಪ್ರಚಾರ ಮಾಧ್ಯಮದಲ್ಲಿ ಹೆಚ್ಚು ಕಾಣಿಸಿಕೊಂಡವರೆಂದು ಯಶಸ್ಸು ಅಳೆಯಬೇಡಿ. ಅವರವರ ಪ್ರಯತ್ನಗಳನ್ನು ಗಮನಿಸಿ, ಗೌರವಿಸಿ.

* * * * *

Mithali iRaj 6

ಹೆಣ್ಣುಗಳದಲ್ಲದ ಆಟದ ಮೈದಾನವನ್ನು ಪ್ರವೇಶಿಸಿ ತನ್ನ ಇರುವಿಕೆ, ವರ್ತನೆಗಳಿಂದ ಹೆಣ್ತನಕ್ಕೂ, ಆಟಕ್ಕೂ ಘನತೆಯನ್ನು ತಂದುಕೊಟ್ಟ ಮಿಥಾಲಿ ಯುವಜನತೆಗೆ ಸೂಕ್ತ ಮಾದರಿಯಾಗಿದ್ದಾಳೆ. ಧೃಢ ಮನಸ್ಸಿನಿಂದ ಹೆಜ್ಜೆ ಇಟ್ಟರೆ ತುಳಿದ ದಾರಿಯ ಮುಳ್ಳುಗಳೆಲ್ಲ ಯಶಸ್ಸಿನ ಹೂವೇ ಆಗುತ್ತವೆ ಎಂದು ಯುವ ಪೀಳಿಗೆಗೆ ತಿಳಿಸುವ ಮಾದರಿಯಾಗಿದ್ದಾಳೆ. ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರವೂ, ಶುಭವಾಗಲಿ ಮಿಥಾಲಿ.

ನಿಮಗೆ ಏನು ಅನ್ನಿಸ್ತು?
7 ವೋಟ್
eedina app