ಅರ್ಥ ಪಥ | ಆರ್ಥಿಕ ಪ್ರಗತಿಗೂ ಬೇಕು ಸೌಹಾರ್ದಯುತ ವಾತಾವರಣ

Nirmala Sitharaman

ಇಂದು ನಿರುದ್ಯೋಗ ನಮ್ಮನ್ನು ತೀವ್ರವಾಗಿ ಬಾಧಿಸುತ್ತಿದೆ. ಸಂಪತ್ತು ಹಾಗೂ ವರಮಾನದ ಅಸಮಾನತೆ ಗಂಭೀರವಾಗಿದೆ. ಕೊರೊನ ಪಿಡುಗು ಲಕ್ಷಾಂತರ ಜನರನ್ನು ನಿರ್ಗತಿಕರನ್ನಾಗಿಸಿದೆ. ಏರುತ್ತಿರುವ ಹಣದುಬ್ಬರವು ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ದೇಶ ಆರ್ಥಿಕವಾಗಿ ಕುಸಿಯುತ್ತಿದೆ. ಆರ್ಥಿಕ ಪುನಶ್ಚೇತನ ತುರ್ತಾಗಿ ಆಗಬೇಕಾಗಿದೆ. ಜೊತೆಗೆ, ಸಂಕಷ್ಟದಲ್ಲಿರುವ ಬಡವರಿಗೆ ಪರಿಹಾರ ಸಿಗಬೇಕು. ಹಣದುಬ್ಬರ ಹತೋಟಿಗೆ ಬರಬೇಕು. ಉದ್ಯೋಗ ಎಲ್ಲರಿಗೂ ಸಿಗುವಂತಾಗಬೇಕು. ಇವಕ್ಕೆ ಯೋಜನೆಗಳು ರೂಪುಗೊಳ್ಳಬೇಕು. ಇದು ಇಂದಿನ ತುರ್ತು. ಆದರೆ, ಸರ್ಕಾರ ಈ ಕಡೆ ಅಷ್ಟಾಗಿ ಗಮನ ಕೊಡದಿರುವುದು ಆಶ್ಚರ್ಯದ ವಿಷಯ. ಜೊತೆಗೆ ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಒಂದಿಷ್ಟು  ಘೋಷಣೆಗಳನ್ನಾದರೂ ಕೇಳುತ್ತಿದ್ದೆವು. "ರೈತರ ವರಮಾನವನ್ನು ದ್ವಿಗುಣಗೊಳಿಸಲಾಗುವುದು," "೫ ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲಾಗುವುದು," "ಪ್ರತಿವರ್ಷ ಒಂದು ಮಿಲಿಯನ್ ಉದ್ಯೋಗ ಸೃಷ್ಟಿಸಲಾಗುವುದು," "ಕಪ್ಪುಹಣ, ಭ್ರಷ್ಟಾಚಾರವನ್ನು ಅಂತ್ಯಗೊಳಿಸಲಾಗುವುದು," - ಹೀಗೆ ವರ್ಷಕ್ಕೊಂದು ಘೋಷಣೆಗಳನ್ನು ಕೇಳುತ್ತಿದ್ದೆವು. ಕೆಲವೇ ದಿನಗಳಲ್ಲಿ ಮರೆತುಬಿಟ್ಟರೂ ಕೆಲವು ದಿನಗಳ ಮಟ್ಟಿಗಾದರೂ ಅವನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿತ್ತು. ಸಾಧಿಸಿಯೇಬಿಟ್ಟೆವು ಅನ್ನುವ ಮಟ್ಟಿಗೆ ಬೀಗುತ್ತಿದ್ದನ್ನು ಕಾಣಬಹುದಿತ್ತು.

ಆದರೆ, ಈ ವರ್ಷದ ಬಜೆಟ್ಟಿನಲ್ಲಿ ಅಂತಹ ಮಾತುಗಳೂ ಇಲ್ಲ. ಅದು ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಅದನ್ನು ಸ್ವಾಭಾವಿಕವಾಗಿಯೇ ನಿರೀಕ್ಷಿಸಬಹುದಿತ್ತು. ಅಂದರೆ, ಅಂತಹ ಕ್ರಮಗಳು ಆರ್ಥಿಕವಾಗಿ ಇರಲಿ, ರಾಜಕೀಯವಾಗಿಯೂ ಬೇಕಾಗಿಲ್ಲ ಅಂತ ಸರ್ಕಾರಕ್ಕೆ ಅನ್ನಿಸಿರಬೇಕು. ಮತಗಳನ್ನು ಗಳಿಸುವುದಕ್ಕೆ ಅದಕ್ಕಿಂತಲೂ ಬೇರೆ ದಾರಿಯೇ ಹೆಚ್ಚು ಪರಿಣಾಮಕಾರಿ ಅನ್ನಿಸಿರಬಹುದು.

Image
UP election

ಈಗಷ್ಟೇ ಕರೊನಾ ಮಹಾಮಾರಿಯ ಹೊಡೆತದಿಂದ ಜಗತ್ತು ಚೇತರಿಸಿಕೊಳ್ಳುತ್ತಿದೆ. ಸಮಯಕ್ಕೆ ಸಿಕ್ಕ ಲಸಿಕೆಗಳಿಂದ ಪಿಡುಗಿನ ತೀವ್ರತೆ ಕಡಿಮೆಯಾಗಿದೆ. ಪಿಡುಗಿನ ಪ್ರಮಾಣವೂ ಕಡಿಮೆ ಆಗುತ್ತಿದೆ. ಕರೋನಾ ಅಪ್ಪಳಿಸುವ ಮೊದಲೇ ನಮ್ಮ ಆರ್ಥಿಕತೆ ಬಿಕ್ಕಟ್ಟಿಗೆ ಸಿಕ್ಕಿತ್ತು. ಈಗ ಕಾಣುತ್ತಿರುವ ಹೆಚ್ಚಿನ ಸಮಸ್ಯೆಗಳು ಆಗಲೇ ಇದ್ದವು. ಕರೋನಾ ಅದನ್ನು ತೀವ್ರಗೊಳಿಸಿತ್ತು. ವಾಸ್ತವವನ್ನು ನಮ್ಮ ಮುಂದೆ ಅನಾವರಣಗೊಳಿಸಿತು.

ಈಗ ಕೇವಲ ಪಿಡುಗಿನ ಪೂರ್ವಸ್ಥಿತಿಗೆ ತಲುಪಿದರೆ ಸಾಲದು. ಇನ್ನೂ ಹೆಚ್ಚಿನ ಪ್ರಗತಿ ಸಾಧ್ಯವಾಗಬೇಕು. ಇದು ಆರ್ಥಿಕತೆಯ ದೃಷ್ಟಿಯಿಂದ, ಜನಸಾಮಾನ್ಯರ ಬದುಕಿನ ದೃಷ್ಟಿಯಿಂದ, ದೇಶದ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿದೆ. ಎಲ್ಲವನ್ನೂ ಖಾಸಗಿ ಕ್ಷೇತ್ರಕ್ಕೆ, ಮಾರುಕಟ್ಟೆಯ ಕೃಪೆಗೆ ಬಿಟ್ಟ ಹಾಗೆಯೇ, ಆರ್ಥಿಕತೆ ಬೆಳವಣಿಗೆಯ ಜವಾಬ್ದಾರಿಯನ್ನೂ ಅವುಗಳಿಗೇ ವಹಿಸಿಬಿಡುವುದು ಸೂಕ್ತವಲ್ಲ ಅನ್ನುವುದು ಇಂದು ಬಹುತೇಕ ಸ್ವೀಕೃತವಾಗಿರುವ ಸತ್ಯ. ಸರ್ಕಾರ ಹೆಚ್ಚಿನ ಬಂಡವಾಳ ಹೂಡಬೇಕು ಅನ್ನುವುದನ್ನು ಬಂಡವಾಳಿಗರೂ ಹೇಳುತ್ತಿದ್ದಾರೆ. ಅಮೆರಿಕದಂತಹ ದೇಶಗಳು ಈ ಕೆಲಸವನ್ನು ಮಾಡುತ್ತಿವೆ. ಅರ್ಥಶಾಸ್ತ್ರಜ್ಞ ಕೇನ್ಸನ 'ಬೇಡಿಕೆಯ ನಿರ್ವಹಣೆಯ ಮಾದರಿ'ಯನ್ನು ಆರ್ಥಿಕ ಬೆಳವಣಿಗೆಗೆ ಸೂಕ್ತ ಮಾರ್ಗವಾಗಿ ಒಪ್ಪಿಕೊಂಡಿದೆ.

Image
Covid Crisis

ಸರ್ಕಾರ ವಿತ್ತೀಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಅನ್ನುವುದನ್ನು ತಾತ್ವಿಕವಾಗಿ ಸರ್ಕಾರವೂ ಹೇಳುತ್ತಿದೆ. ಜನರ ಬಳಕೆಯಿಂದ, ಖಾಸಗಿ ಹೂಡಿಕೆಯಿಂದ, ಸರ್ಕಾರದ ಹೂಡಿಕೆಯಿಂದ ಅಥವಾ ರಫ್ತಿನಿಂದ ರಾಷ್ಟ್ರೀಯ ವರಮಾನ ಹೆಚ್ಚುತ್ತದೆ. ಆದರೆ, ಎಷ್ಟು ಹೆಚ್ಚುತ್ತದೆ ಅನ್ನುವುದಕ್ಕೆ ನಿಖರವಾದ ಉತ್ತರವಿಲ್ಲ. ಹಲವು ಅಂದಾಜುಗಳಿವೆ. ಮಾಡುವ ಹೂಡಿಕೆಗಿಂತ ವರಮಾನ ಹಲವು ಪಟ್ಟು ಹೆಚ್ಚಾದರೆ ಅದನ್ನು ಮಲ್ಟಿಫ್ಲೈಯರ್ ಅಥವಾ ಗುಣಕ ಪರಿಣಾಮ ಅನ್ನಲಾಗುತ್ತದೆ. ಎಲ್ಲ ಹೂಡಿಕೆಗಳಲ್ಲೂ ಈ ಗುಣಕ ಪ್ರಮಾಣ ಒಂದೇ ರೀತಿ ಇರುವುದಿಲ್ಲ. ಉದಾಹರಣೆಗೆ, ಸರ್ಕಾರದ ಬಂಡವಾಳದ ಖರ್ಚು ಅಂದರೆ, ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಆದಾಯವನ್ನು ೨.೪೫ ಪಟ್ಟು ಹೆಚ್ಚಿಸುತ್ತದೆ ಅನ್ನುವುದು ಒಂದು ಅಂದಾಜು. ಸರ್ಕಾರ ಸಬ್ಸಿಡಿ, ಪಿಂಚಣಿ ಇತ್ಯಾದಿ ನಿವೃತ್ತ ಭತ್ಯಗಳ ಮೂಲಕ ಹಣವನ್ನು ವರ್ಗಾಯಿಸುವುದರಿಂದ ೦.೯೯ರಷ್ಟು ವರಮಾನ ಬೆಳೆಯುತ್ತದೆ. ಹಾಗೆಯೇ, ತೆರಿಗೆ ಇಳಿಸುವುದರಿಂದಲೂ ಜನರ ಬಳಿ ಹಣ ಉಳಿಯುತ್ತದೆ. ಅವರು ಅದನ್ನು ಖರ್ಚು ಮಾಡುತ್ತಾರೆ. ಅದರಿಂದಲೂ ಆರ್ಥಿಕತೆ ಬೆಳೆಯುತ್ತದೆ, ಅದರ ಪ್ರಮಾಣ ೧.೨; ಹೀಗೆ ಹಲವು ಅಂದಾಜುಗಳು ಲಭ್ಯವಿದೆ. ಇವುಗಳ ನಿಖರತೆಯನ್ನು ಗಮನಿಸುವುದು ನಮ್ಮ ಸದ್ಯದ ಉದ್ದೇಶವಲ್ಲ. ಆರ್ಥಿಕತೆಯನ್ನು ಸುಧಾರಿಸುವುದಕ್ಕೆ ಸರ್ಕಾರ ಹಣವನ್ನು ಹೂಡಬೇಕು ಅನ್ನುವುದು ಸ್ವೀಕೃತವಾದ ಅಭಿಪ್ರಾಯ. ಅದರಿಂದ ರಾಷ್ಟ್ರೀಯ ವರಮಾನ ಹೆಚ್ಚುತ್ತದೆ. ಇದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವುದಕ್ಕೆ ನೆರವಾಗುತ್ತದೆ.  ಖಾಸಗಿ ವಲಯದಿಂದ ಅಷ್ಟಾಗಿ ಹೂಡಿಕೆ ಬಾರದಿರುವ ಈ ಸಂದರ್ಭದಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚು.

Image
MNREGA

ಸರ್ಕಾರ ಹಲವು ರೀತಿಯಲ್ಲಿ ಹಣವನ್ನು ಖರ್ಚು ಮಾಡುತ್ತದೆ. ಯಂತ್ರೋಪಕರಣಗಳನ್ನು ಕೊಳ್ಳುತ್ತದೆ, ಆರೋಗ್ಯ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಖರ್ಚು ಮಾಡುತ್ತದೆ, ಭೂಮಿ ಕೊಳ್ಳುತ್ತದೆ. ಇವೆಲ್ಲವೂ ಬಂಡವಾಳದ ಹೂಡಿಕೆ ಅನ್ನಿಸಿಕೊಳ್ಳುತ್ತದೆ. ಇನ್ನು, ಸಬ್ಸಿಡಿ ಕೊಡುವುದು, ಪಿಂಚಣಿ ಇತ್ಯಾದಿ ನಿವೃತ್ತ ಭತ್ಯೆಗಳನ್ನು ನೀಡುವುದು, ನೈಸರ್ಗಿಕ ಅನಾಹುತಗಳಾದಾಗ ಪರಿಹಾರ ಕೊಡುವುದು ಇತ್ಯಾದಿ ಖರ್ಚುಗಳು ಇರುತ್ತವೆ. ಇವೆಲ್ಲ, ಸರ್ಕಾರ ಬೇರೆ ಖಾತೆಗಳಿಗೆ ಮಾಡಿದ ಹಣದ ವರ್ಗಾವಣೆ ಎನಿಸಿಕೊಳ್ಳುತ್ತದೆ. ಮೂರನೆಯದು, ಸರ್ಕಾರದ ಕಂದಾಯದ ವೆಚ್ಚ. ಹೀಗೆ, ಸರ್ಕಾರ ಹಲವು ರೀತಿಯಲ್ಲಿ ಹಣ ಖರ್ಚು ಮಾಡುತ್ತದೆ. ಅದು ಯಾವುದೇ ಬಾಬ್ತಿಗೆ ಇರಲಿ, ಸರ್ಕಾರ ಮಾಡುವ ವೆಚ್ಚ ಆರ್ಥಿಕತೆಯಲ್ಲಿ ಅದರ ಪಾಲ್ಗೊಳ್ಳುವಿಕೆಯನ್ನು ತೋರಿಸುತ್ತದೆ.

ಈ ವರ್ಷದ ಬಜೆಟ್ಟಿನಲ್ಲಿ ಸರ್ಕಾರ ೩೯.೪೫ ಲಕ್ಷ ಕೋಟಿ ರುಪಾಯಿಗಳನ್ನು ಖರ್ಚು ಮಾಡುವುದಾಗಿ ಘೋಷಿಸಲಾಗಿದೆ. ಅಂದರೆ, ಕಳೆದ ವರ್ಷದ ಪರಿಷ್ಕೃತ ವೆಚ್ಚಕ್ಕೆ ಹೋಲಿಸಿದರೆ, ಕೇವಲ ಶೇಕಡ ೪.೬ರಷ್ಟು ಹೆಚ್ಚು. ಹಣದುಬ್ಬರ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರುತ್ತದೆ. ಅಂದರೆ, ಹಣದುಬ್ಬರವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಸರ್ಕಾರದ ಹೂಡಿಕೆ ನೈಜ ಮೌಲ್ಯದಲ್ಲಿ ಕಡಿಮೆಯಾಗಿದೆ. ಜಿಡಿಪಿಗೆ ಹೋಲಿಸಿದರೂ ತುಂಬಾ ಕಡಿಮೆ. ಈ ವರ್ಷದ ಆರ್ಥಿಕ ಸಮೀಕ್ಷೆಯಲ್ಲಿ ಜಿಡಿಪಿಯ ಬೆಳವಣಿಗೆಯನ್ನು ೮-೮.೫ರಷ್ಟಿರುತ್ತದೆ ಎಂದು ಅಂದಾಜು ಮಾಡಲಾಗಿದೆ. ಅದಕ್ಕೆ ಹೋಲಿಸಿದರೆ ಸರ್ಕಾರದ ಈ ವರ್ಷದ ಹೂಡಿಕೆ ಸಾಕಷ್ಟು ಕಡಿಮೆ. ಅಂದರೆ, ಸರ್ಕಾರ ವಿತ್ತೀಯ ಕ್ರಮಗಳ ಮೂಲಕ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಗಂಭೀರವಾಗಿ ಇದ್ದಂತಿಲ್ಲ.

ಇದನ್ನು ಓದಿದಿರಾ?: ಸರ್ಕಾರ ಮಾಡುತ್ತಿರುವುದು 'ಮಾತೃ ವಂದನೆ'ಯಲ್ಲ, ಮಾತೃ ವಂಚನೆ!

ಇನ್ನೊಂದು ಕ್ರಮ, ವಿತ್ತೀಯ ಕೊರತೆಯನ್ನು ಹೆಚ್ಚಿಸುವ ಮೂಲಕವೂ ಆರ್ಥಿಕತೆಯನ್ನು ಸುಧಾರಿಸಬಹುದಿತ್ತು. ಆದರೆ, ಸರ್ಕಾರ ಅಂತಾರಾಷ್ಟ್ರೀಯ ಬಂಡವಾಳದ ಒತ್ತಡಕ್ಕೆ ಮಣಿದು ವಿತ್ತೀಯ ಕೊರತೆಯನ್ನು ಶೇಕಡ ೩ರಷ್ಟಕ್ಕೆ ಸೀಮಿತಗೊಳಿಸುವ ನಿರ್ಧಾರಕ್ಕೆ ಕಟ್ಟುಬಿದ್ದಿದೆ. ಹಾಗಾಗಿ, ವಿತ್ತೀಯ ಕೊರತೆಯ ಮಿತಿಯನ್ನು ಕಾಪಾಡಿಕೊಳ್ಳುವ ನಿರ್ಣಯಕ್ಕೆ ಅದು ಬದ್ಧವಾಗಿದೆ. ಅದು ಸಾಧ್ಯವಾಗದಿದ್ದರೂ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ.

Image
Unemployment Protest

ಈಗ ಸರ್ಕಾರಕ್ಕೆ ಇರುವ ಒಂದೇ ದಾರಿ ಅಂದರೆ, ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಕಡಿತಗೊಳಿಸುವುದು. ಈ ಬಜೆಟ್ಟಿನಲ್ಲಿ ಆ ಪ್ರಯತ್ನ ನಡೆದಿದೆ. ಪಿಡುಗಿನ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಕೆಲಸ ಒದಗಿಸಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ). ವಲಸೆ ಕಾರ್ಮಿಕರ ಜೀವ ಉಳಿಸಿದ ಯೋಜನೆ ಈ ಮನರೇಗಾ. ಮೊದಲ ಪಿಡುಗಿನ ಸಂದರ್ಭದಲ್ಲಿ ೨೦೨೦-೨೧ರಲ್ಲಿ ಅದನ್ನು ೧,೧೧,೧೭೦ ಕೋಟಿಗೆ ಏರಿಸಲಾಗಿತ್ತು. ನಂತರ ಅದನ್ನು ೨೦೨೧-೨೨ರಲ್ಲಿ ೯೮,೦೦೦ ಕೋಟಿಗೆ ಇಳಿಸಲಾಯಿತು. ೨೦೨೨-೨೩ರಲ್ಲಿ ಅದು ೭೩,೦೦೦ ಕೋಟಿಗೆ ಇಳಿದಿದೆ.

ಮತ್ತೊಂದು ಯೋಜನೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್. ಅದರಲ್ಲಿ ಹೆಚ್ಚುವರಿಯಾಗಿ ೫ ಕೆ.ಜಿ ಅಕ್ಕಿಯನ್ನು ಪಡಿತರ ವ್ಯವಸ್ಥೆಯ ಮೂಲಕ ವಿತರಿಸಲಾಗುತ್ತಿತ್ತು. ಅದಕ್ಕಾಗಿ ಆಹಾರದ ಸಬ್ಸಿಡಿಯ ಪ್ರಮಾಣವನ್ನು ಹೆಚ್ಚು ಮಾಡಲಾಗಿತ್ತು. ೨೦೧೯-೨೦ರಲ್ಲಿ ೧,೧೫,೭೭೦ ಕೋಟಿ ಇದ್ದುದನ್ನು, ೨೦೨೦-೨೧ರಲ್ಲಿ ೫,೪೧,೩೩೦ ಕೋಟಿ ರುಪಾಯಿಗಳಿಗೆ ಏರಿಸಲಾಯಿತು. ಈಗ ಅದು ೧,೦೫,೨೨೨ ಕೋಟಿ ರುಪಾಯಿಗಳಿಗೆ ಕಡಿತಗೊಂಡಿದೆ. ಅಂದರೆ, ಸರ್ಕಾರಕ್ಕೆ ಅದನ್ನು ೨೦೨೨ರ ಮಾರ್ಚ್ ನಂತರ ಮುಂದುವರಿಸುವ ಯೋಚನೆ ಇದ್ದಂತಿಲ್ಲ. ಹಾಗೆಯೇ, ಗೊಬ್ಬರದ ಸಬ್ಸಿಡಿ ಶೇಕಡ ೨೫ರಷ್ಟು ಕಡಿಮೆಯಾಗಿದೆ, ಪೆಟ್ರೋಲಿಯಂ ಮೇಲಿನ ಸಬ್ಸಿಡಿ ಶೇಕಡ ೧೧ರಷ್ಟು ಕಡಿಮೆಯಾಗಿದೆ. ಉಳಿದ ಸಬ್ಸಿಡಿಗಳು ಶೇಕಡ ೩೧ರಷ್ಟು ಕಡಿಮೆಯಾಗಿವೆ. ಹಾಗೆಯೇ, ಮಧ್ಯಾಹ್ನದ ಊಟ, ಪಿ ಎಂ ಕಿಸಾನ್ ಯೋಜನೆ ಇವುಗಳ ಬಾಬ್ತು ಅಷ್ಟೇ ಇದೆ. ಅಂದರೆ, ನೈಜ ದರದಲ್ಲಿ ಕಡಿಮೆಯಾಗಿದೆ.

Image
Poverty in india

ಮುಂದುವರಿದ ದೇಶಗಳು ಆರ್ಥಿಕತೆಗೆ ಹೆಚ್ಚೆಚ್ಚು ಬಂಡವಾಳವನ್ನು ಹೂಡುತ್ತಿವೆ. ಬೇಡಿಕೆಯನ್ನು ಸುಧಾರಿಸುವುದಕ್ಕೆ ಕೇನ್ಸ್ ಹೇಳುವ 'ಬೇಡಿಕೆಯ ನಿರ್ವಹಣೆಯ ಕ್ರಮ'ಕ್ಕೆ ಆತುಕೊಳ್ಳುತ್ತಿವೆ. ಟ್ರಂಪ್, ಪಿಡುಗಿನ ಸಂದರ್ಭದಲ್ಲಿ ೨ ಟ್ರಿಲಿಯನ್ ಡಾಲರ್ ಖರ್ಚು ಮಾಡಿದ. ನಂತರ ಬೈಡೆನ್ ಮತ್ತೆ ೨ ಟ್ರಿಲಿಯನ್ ಡಾಲರ್, ಅಮೇಲೆ ಮೂಲಭೂತ ಸೌಕರ್ಯಕ್ಕಾಗಿ ೧.೯ ಟ್ರಿಲಿಯನ್ ಡಾಲರ್ ವಿನಿಯೋಗಿಸಿದ. ತಮಾಷೆ ಅಂದರೆ, ಈ ರಾಷ್ಟ್ರಗಳಲ್ಲಿ ವಿತ್ತೀಯ ಕೊರತೆ ಹೆಚ್ಚೇ ಇದೆ. ಅವರೆಲ್ಲ ಹೆಚ್ಚೆಚ್ಚು ಸಬ್ಸಿಡಿ ನೀಡುತ್ತಿದ್ದಾರೆ. ಅಲ್ಲೆಲ್ಲ ಸರ್ಕಾರದ ಹೂಡಿಕೆ ಹೆಚ್ಚುತ್ತಿದೆ. ಆದರೆ, ತೃತೀಯ ಜಗತ್ತಿನ ರಾಷ್ಟ್ರಗಳ ಮೇಲೆ ಮಾತ್ರ ಇದನ್ನು ಕಡಿತಗೊಳಿಸುವ ಒತ್ತಾಯ ಏರುತ್ತಿದೆ.

ಸರ್ಕಾರ ವಿತ್ತೀಯ ಕ್ರಮಗಳಿಂದ ಸಂಪೂರ್ಣವಾಗಿ ಆಚೆ ಸರಿಯುತ್ತಿರುವುದು ಆತಂಕದ ವಿಷಯ. ಈ ಚುನಾವಣಾ ಸಮಯದಲ್ಲಿ ಮತದಾರರನ್ನು ಒಲೈಸುವುದಕ್ಕೂ ಯಾವುದೇ ವಿತ್ತೀಯ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದನ್ನು ನೋಡಿದರೆ, ಈ ವಿತ್ತೀಯ ಕ್ರಮಗಳು, ಬಜೆಟ್ ಇವೆಲ್ಲ ರಾಜಕೀಯವಾಗಿ ಲಾಭ ತಂದುಕೊಡುವ ಸಾಧನವಾಗಿ ಅವರಿಗೆ ಕಾಣುತ್ತಿಲ್ಲ. ಜನರನ್ನು ವಿಭಜಿಸುವ, ಭಾವೋದ್ರೇಕದ ಭಾವನೆಗಳನ್ನು ಹರಡುವ ಮೂಲಕ ಚುನಾವಣೆಯನ್ನು ಗೆಲ್ಲುವುದನ್ನೇ ಹೆಚ್ಚು ಪರಿಣಾಮಕಾರಿಯಾದ ಕ್ರಮವಾಗಿ ನೋಡುತ್ತಿರುವಂತೆ ಕಾಣುತ್ತಿದೆ. ಜನ ಎಷ್ಟೇ ಬವಣೆ ಅನುಭವಿಸಬೇಕಾಗಿ ಬಂದರೂ, ಬಂಡವಾಳಿಗರ ಹಿತಾಸಕ್ತಿಯೇ ಮುಖ್ಯವಾದಂತೆ ತೋರುತ್ತಿದೆ. ಪಿಡುಗಿನ ಸಂದರ್ಭದಲ್ಲಿ ಅವರು ಮಾಡಿಕೊಂಡಿರುವ ಲಾಭವನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಜಾಗತಿಕ ಹಣಕಾಸು ನಿರೀಕ್ಷಿಸುತ್ತಿರುವುದೂ ಅದನ್ನೇ.

Image
Modi and Shah

ಪ್ರಮುಖ ವಿಷಯಗಳು ಅಂಚಿಗೆ ಸರಿಯುತ್ತಿವೆ. ನಿಜವಾದ ಸಮಸ್ಯೆಗಳನ್ನು ಮರೆಯುತ್ತಿದ್ದೇವೆ. ಅಥವಾ ಅದನ್ನು ಸ್ವಾಭಾವಿಕ ಅನ್ನುವಂತೆ ಒಪ್ಪಿಕೊಳ್ಳುವ ಸ್ಥಿತಿ ತಲುಪುತ್ತಿದ್ದೇವೆ. ದಾರಿದ್ರ್ಯ, ಅಸಮಾನತೆ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳು ತಿರುಗಿ ದೇಶದ ಭವಿಷ್ಯದ ದೃಷ್ಟಿಯಿಂದ ಕೇಂದ್ರ ವಿಷಯಗಳಾಗಬೇಕು. ಸರ್ಕಾರ ಅದಕ್ಕೆ ಬೇಕಾದ ಹಣವನ್ನು, ಆಸ್ತಿಯ ಮೇಲೆ ತೆರಿಗೆ ವಿಧಿಸುವುದು ಇತ್ಯಾದಿ ಕ್ರಮಗಳ ಮೂಲಕ ಸಂಗ್ರಹಿಸಬೇಕು. ಜನಪರ ಕಾರ್ಯಕ್ರಮಗಳಲ್ಲಿ ಸರ್ಕಾರ ಹಣ ತೊಡಗಿಸಬೇಕು. ಬೇಡಿಕೆಯನ್ನು ಹೆಚ್ಚಿಸಿ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ನಡೆಯಬೇಕು.

ರೈತರು ಇತ್ತೀಚೆಗೆ ನಮ್ಮ ಕೃಷಿ ಸಮಸ್ಯೆಯನ್ನು ಮತ್ತು ಆ ಮೂಲಕ ನಮ್ಮ ಆರ್ಥಿಕತೆಯ ಕೇಂದ್ರ ಸಮಸ್ಯೆಯನ್ನು ಒಂದು ಕೇಂದ್ರ ವಿಷಯವನ್ನಾಗಿ ಮಾಡುವುದರಲ್ಲಿ ಯಶಸ್ವಿಯಾದರು. ಆ ಚರ್ಚೆ ಮುಂದುವರಿಯಬೇಕು. ಆರ್ಥಿಕತೆಯನ್ನು ಕುರಿತ ಚರ್ಚೆ ಹೆಚ್ಚೆಚ್ಚು ಗಂಭೀರವಾಗಿ ನಡೆಯುವುದು, ಆರ್ಥಿಕ ಪುನಶ್ಚೇತನಕ್ಕೆ ಒತ್ತಾಯ ಹೆಚ್ಚುವುದು ದೇಶದ, ಜನತೆಯ ಒಳಿತಿಗೆ ಅನಿವಾರ್ಯ. ಇಲ್ಲದೆಹೋದರೆ ಹಿಜಾಬ್‌ನಂತಹ ವಿಷಯಗಳಲ್ಲಿ ಮುಳುಗಿಹೋಗುತ್ತೇವೆ. ಅದರಿಂದ ಒಟ್ಟಾರೆಯಾಗಿ ಒಂದಿಷ್ಟು ವಿಷವನ್ನು ಹರಡುವುದಕ್ಕಿಂತ ಹೆಚ್ಚೇನೂ ಸಾಧಿಸಲಾಗುವುದಿಲ್ಲ. ವಾಸ್ತವವಾಗಿ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಅದು ಹಾನಿಕಾರಕವೂ ಹೌದು. ಸೌಹಾರ್ದತೆ ಮತ್ತು ಸ್ವಾತಂತ್ರ್ಯ ಇದ್ದಾಗಲೇ ಆರ್ಥಿಕ ಪ್ರಗತಿ ಸಾಧ್ಯವಾಗುವುದು.

(ಲೇಖಕರು, ಅರ್ಥಶಾಸ್ತ್ರ ಪ್ರಾಧ್ಯಾಪಕರು)

ನಿಮಗೆ ಏನು ಅನ್ನಿಸ್ತು?
1 ವೋಟ್