ಪಠ್ಯಪರಿಷ್ಕರಣೆ: ಅಲ್ಪಸಂಖ್ಯಾತರ ವಿಷಯವನ್ನು ಸಂಪೂರ್ಣವಾಗಿ ಕೈಬಿಟ್ಟ 8ನೇ ತರಗತಿಯ ಸಮಾಜವಿಜ್ಞಾನ ಪಠ್ಯ

namaz

ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ 8ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ಉಲ್ಲೇಖಿಸಿದ ಇತಿಹಾಸ ಪಠ್ಯಗಳು ಜಾತ್ಯತೀತ ವಿರೋಧಿಯಾಗಿದ್ದು, ಮುಸ್ಲಿಂ, ಕ್ರೈಸ್ತರನ್ನೊಳಗೊಂಡ ಅಲ್ಪಸಂಖ್ಯಾತರ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಒಂದೇ ಒಂದು ಪಾಠಗಳಿಲ್ಲ. ಹಿಂದೂ ಧರ್ಮವನ್ನು ಸರ್ವಾನುಮತದ ಧರ್ಮ ಎಂದು ಬಿಂಬಿಸಲಾಗಿದೆ

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮರುಪರಿಷ್ಕರಣೆ ಮಾಡಿದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಉಲ್ಲೇಖಿಸಿದ ಇತಿಹಾಸ ಪಾಠಗಳೆಲ್ಲವೂ ಹಿಂದೂ ಧರ್ಮದ ಇತಿಹಾಸದ ಬಗ್ಗೆ ಪ್ರಚುರಪಡಿಸುತ್ತಿದ್ದು, ಜಾತ್ಯತೀತ ಮತ್ತು ಧರ್ಮಾತೀತ ಪರಿಕಲ್ಪನೆಯ ಆಶಯಗಳನ್ನು ಅಲ್ಲಗಳೆದಿದೆ. ಹಿಂದೂ ಧರ್ಮದ ತಾತ್ವಿಕ ಮತ್ತು ಸೈದ್ಧಾಂತಿಕ ಮನೋಭಾವವನ್ನು ಪಠ್ಯದ ಮೂಲಕ ಬಿಂಬಿಸಲಾಗಿದೆ. ಪಠ್ಯದ ಹೆಚ್ಚಿನ ಭಾಗಗಳಲ್ಲಿ ಉಲ್ಲೇಖಿಸಿದ ಇತಿಹಾಸದುದ್ದಕ್ಕೂ ಸಂಪೂರ್ಣವಾಗಿ ಹಿಂದೂ ಧರ್ಮದ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಪ್ರಚಾರಪಡಿಸಲಾಗಿದೆ. ಇದನ್ನು ಓದುವ ಅಲ್ಪಸಂಖ್ಯಾತ ಮಕ್ಕಳಿಗೆ ತಮ್ಮ ಬಗ್ಗೆಯೇ ಪರಕೀಯ ಭಾವನೆ ಬರುವ ಅಪಾಯವಿದೆ.

ಭಾರತ ದೇಶವು ಪರಿಪಕ್ವತೆಯಿಂದ ಕೂಡಿರುವ ಸಾಂವಿಧಾನಿಕ ತತ್ವಗಳನ್ನು ಒಳಗೊಂಡಿರುವ ಒಂದು ಸುಂದರ ದೇಶ. ಈ ದೇಶದ ಮೂಲ ಧ್ಯೇಯಗಳೆಂದರೆ ಜಾತ್ಯತೀತ, ಪ್ರಜಾಪ್ರಭುತ್ವ ಹಾಗೂ ಬದುಕುವ ಸ್ವಾತಂತ್ರ್ಯದ ಆಶಯಗಳು. ಸಾಮಾನ್ಯವಾಗಿ ಮಕ್ಕಳು ಕಲಿಯುವ ಪಠ್ಯದಲ್ಲಿ ಹೆಚ್ಚಾಗಿ ಇದೇ ಮೂರು ಸಂಗತಿಗಳನ್ನು ಮೆಲುಕು ಹಾಕಬೇಕು. ಆದರೆ ವಿವಿಧ ಭಾಷೆ, ಜನಾಂಗ, ಧರ್ಮ, ಮತಗಳನ್ನು ಮೀರಿದ ಒಂದು ಐಕ್ಯತೆಯನ್ನು ಪ್ರತಿಪಾದಿಸುವ, ಸರ್ವರೂ ಸಮಾನರು ಎಂದು ವಾದಿಸುವ ಜಾತ್ಯತೀತ, ಧರ್ಮಾತೀತ ಮತ್ತು ಭಾಷಾತೀತ ಸಿದ್ಧಾಂತದ ವಿಚಾರಧಾರೆಗಳು ಪ್ರಸ್ತುತ ಪಠ್ಯದಲ್ಲಿ ಕಣ್ಮರೆಯಾಗಿದೆ. ಬ್ರಾಹ್ಮಣ್ಯದ ವಿಚಾರಧಾರೆಗಳನ್ನು ಪುಟಾಣಿ ಮಕ್ಕಳಲ್ಲಿ ಹೇರಿಕೆ ಮಾಡುವ ಮೂಲಕ ಮನುವಾದದ ಸೈದ್ಧಾಂತಿಕ ದುರಾಲೋಚನೆಯು ಪ್ರಸ್ತುತ ಪಠ್ಯದಲ್ಲಿ ಹೇರಳವಾಗಿ ಸಿಗುತ್ತದೆ. ಊಹಾತೀತ ಕಲ್ಪನೆಗಳಿಂದ ಕೂಡಿದ ಇತಿಹಾಸಗಳನ್ನು ನಿರ್ವಿವಾದದ ಮೋರೆಯಲ್ಲಿ ಓದುಗರು ಅಥವಾ ಅಭ್ಯಾಸ ಮಾಡುವವರು ಅರಗಿಸಿಕೊಳ್ಳಬೇಕೆಂಬ ಮಹದುದ್ದೇಶವೂ ಇದರಲ್ಲಿ ಅಡಗಿಕೊಂಡಿದೆ.

ಅಲ್ಪಸಂಖ್ಯಾತರ ವಿಷಯವೇ ಇಲ್ಲ

ವಿವಿಧ ಧರ್ಮಗಳ, ಭಾಷೆಗಳ ಬಗ್ಗೆ ಅಧ್ಯಯನ ಮಾಡಿ, ಮೂಲ ಆಶಯ ಸಹಬಾಳ್ವೆಯೆಂಬ ಪರಿಕಲ್ಪನೆಯನ್ನು ಸಾರುವ ಜಾತ್ಯತೀತ ಆಶಯವನ್ನು ಸಣ್ಣ ಪ್ರಾಯದ ಮಕ್ಕಳಿಗೆ ಅದೇ ಶೈಲಿಯಲ್ಲಿ ಬೋಧಿಸಬೇಕಾಗುವ ಅನಿವಾರ್ಯತೆಯಿರುವಾಗ, ರೋಹಿತ್ ಚಕ್ರತೀರ್ಥ ಸಮಿತಿ ರಚಿಸಿದ 8ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ಉಲ್ಲೇಖಿಸಿದ ಇತಿಹಾಸ ಪಠ್ಯಗಳು ಜಾತ್ಯತೀತ ವಿರೋಧಿಯಾಗಿದ್ದು, ಒಂದೇ ಒಂದು ಮುಸ್ಲಿಂ, ಕ್ರೈಸ್ತರನ್ನೊಳಗೊಂಡ ಅಲ್ಪಸಂಖ್ಯಾತರ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಪಾಠಗಳೇ ಇಲ್ಲ. ಇದು ಕೇವಲ ಹಿಂದೂ ಧರ್ಮವನ್ನು ಸರ್ವಾನುಮತದ ಧರ್ಮ ಎಂದು ಬಿಂಬಿಸಿ, ಇತರ ಧರ್ಮಗಳ ವಿರುದ್ಧ  ಮಕ್ಕಳ ಮನಸ್ಸಲ್ಲಿ ದ್ವೇಷ, ಅಸೂಯೆಗಳಂತಹ ವಿಷಕಾರಿ ಮನೋಭಾವಗಳು ಹುಟ್ಟಲು ಪ್ರೇರಣೆ ನೀಡುತ್ತದೆ.

Image
Constitution of India

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರಚಿಸಿದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದ ಇತಿಹಾಸ ಭಾಗದಲ್ಲಿ ಪುಟ ಸಂಖ್ಯೆ 2 ರಲ್ಲಿ 'ದೇಶಕ್ಕೆ ಸಾಹಿತಿಗಳ ಕೊಡುಗೆ' ಎನ್ನುವ ಉಲ್ಲೇಖದಲ್ಲಿ ಕೇವಲ ಹಿಂದೂ, ಜೈನ, ಬೌದ್ಧ ಮತ್ತು ವಿದೇಶಿ ಕ್ರೈಸ್ತರ ಸಾಹಿತಿಗಳನ್ನು ಮಾತ್ರ ಅಳವಡಿಸಿದ್ದಾರೆಯೇ ಹೊರತು ಒಂದೇ ಒಂದು ಮುಸ್ಲಿಂ ಸಾಹಿತಿಗಳ ಹೆಸರು ಉಲ್ಲೇಖಿಸಲಿಲ್ಲ.

ಪುಟ ಸಂಖ್ಯೆ 3ರಲ್ಲಿ ಉಲ್ಲೇಖಿಸಿದ ಹಾಗೆ 'ದೇಶಕ್ಕೆ ಸಾಹಿತ್ಯಿಕ ಸ್ಮಾರಕಗಳ ಕೊಡುಗೆ' ಎಂಬ ಬೋಧನೆಯಲ್ಲೂ ಮುಸ್ಲಿಮರು ನೀಡಿದ ತಾಜ್ ಮಹಲ್, ಚಾರ್ ಮಿನಾರ್, ಗೋಲ್ ಗುಂಬಝ್, ಕುತುಬ್ ಮಿನಾರ್ ಗಳಂತಹ ಸ್ಮಾರಕಗಳ ಹೆಸರುಗಳನ್ನು ಅಲಕ್ಷಿಸಲಾಗಿದೆ.

ಪುಟ ಸಂಖ್ಯೆ 3ರಲ್ಲಿ 'ಪರೀಕ್ಷಿತ ಮಹಾರಾಜನಿಗೆ ಮಹಾಭಾರತದ ಕಥೆ ಹೇಳುತ್ತಿರುವ ಶುಕಮುನಿಗಳು' ಎಂಬ ಚಿತ್ರದ ಉಲ್ಲೇಖ, ಭಾರತದ ವರ್ಷಾರಂಭವನ್ನು ಭರತ ವರ್ಷವೆಂಬ ಉಲ್ಲೇಖ ಮುಂತಾದ ಕೆಲವು ಬೋಧನೆಗಳಲ್ಲಿ ಸಂಪೂರ್ಣವಾಗಿ ಹಿಂದೂ ಧರ್ಮದ ಕಲ್ಪನೆಯನ್ನು ಚಿತ್ರೀಕರಿಸಲಾಗಿದೆ.

ಪುಟ ಸಂಖ್ಯೆ 18ರಲ್ಲಿ ಮಧ್ಯ ಏಷ್ಯಾದಿಂದ ವಲಸೆ ಬಂದ ಆರ್ಯನ್ನರನ್ನು 'ಆರ್ಯರೆಲ್ಲರೂ ಭಾರತೀಯರೇ' ಎಂದು ಹುಸಿ ಚಿತ್ರಣವನ್ನು ನೀಡಿ, ಆರ್ಯರ ಕುರಿತು ಕೆಲವು ಸುಳ್ಳು ಅರ್ಥಗಳನ್ನು ನೀಡುವ ಮೂಲಕ ಬ್ರಾಹ್ಮಣ್ಯದ ಪರಿಕಲ್ಪನೆಯನ್ನು ತುರುಕಲಾಗಿದೆ.

'ಸನಾತನ ಧರ್ಮ' ಎಂಬ ಒಂದು ನವ ಅಧ್ಯಾಯವನ್ನು ಅಳವಡಿಸಿ ಬ್ರಾಹ್ಮಣ್ಯ ಪ್ರೇರಿತ ಹಿಂದೂ ಧರ್ಮವನ್ನು ಪಾರದರ್ಶಕವಾಗಿ ಪ್ರಚಾರ ಮಾಡುವ ಹುನ್ನಾರವೂ ಈ ಪಠ್ಯಪುಸ್ತಕದಲ್ಲಿ ಅಡಗಿದೆ.

ವೇದಗಳ ಅರ್ಥ, ಸನಾತನ ಧರ್ಮದ ಪರಿಚಯ, ಮನುಸ್ಮೃತಿ ಮತ್ತು ಸ್ಮೃತಿಗಳ ಪರಿಚಯ, ಕೆಲವು ವೈದಿಕ ಶಾಸ್ತ್ರಗಳು, ವೈದಿಕತೆ ಮತ್ತು ಅವೈದಿಕತೆಯ ಬಗ್ಗೆ ಅರಿವು, ವೇದ ಸಾಹಿತ್ಯಗಳ ಹುಟ್ಟು, ಸಂಹಿತೆಗಳ ಪರಿಚಯ, ಉಪನಿಷತ್ತುಗಳ ಪ್ರಚಾರ, ಋಷಿ ಮುನಿಗಳ ಮತ್ತು ಭಿಕ್ಕುಗಳ ಕುರಿತಾದ ಅಂಶಗಳು ಮುಂತಾದವುಗಳನ್ನು ಪ್ರಸ್ತುತ ಅಧ್ಯಾಯದಲ್ಲಿ ಉಲ್ಲೇಖಿಸಲಾಗಿದೆ.

ಜೈನ ಮತ್ತು ಬೌದ್ಧ ಮತಗಳು

ಇತಿಹಾಸ ವಿಭಾಗದ ಬಹುತೇಕ ಅಧ್ಯಾಯಗಳಲ್ಲಿ ಬಹುದೇವತಾರಾಧನೆ ಮತ್ತು ದೇವತಾರಾಧನೆಯ ಬಗ್ಗೆ ಅತ್ಯಧಿಕವಾಗಿ ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದಲ್ಲಿದ್ದ ಅಸ್ಪೃಶ್ಯತೆ, ಮೂಢನಂಬಿಕೆ ಮತ್ತು ಅವೈಜ್ಞಾನಿಕ ಪದ್ಧತಿಗಳಿಂದ ಹೊರ ಬಂದು ಹೊಸ ಜೀವನಶೈಲಿಗಳನ್ನು, ಆಚಾರ ವಿಚಾರ ಪದ್ಧತಿಗಳನ್ನು ಕಟ್ಟಲು ನಾಂದಿ ಹಾಡಿದ ಧರ್ಮಗಳಾಗಿರುತ್ತದೆ ಜೈನ ಮತ್ತು ಬೌದ್ಧ. ಈ ಧರ್ಮಗಳು ಉದಯವಾಗಲು ನೇರ ಕಾರಣ ಹಿಂದೂ ಧರ್ಮದ ಹೇರಿಕೆಗಳು. ಈ ಎರಡು ಧರ್ಮಗಳನ್ನು ಈ ಪಠ್ಯದಲ್ಲಿ 'ಮತಗಳೆಂದು' ಬಿಂಬಿಸಿ ಹಿಂದೂ ಧರ್ಮದ ಒಳಗಿರುವ ಆಸ್ತಿಕ ಹಾಗೂ ನಾಸ್ತಿಕ ವಿಭಾಗಗಳಿಗೆ ಸೇರಿದ್ದು ಎನ್ನುವ ಮೂಲಕ ಒಂದು ಹುಸಿ ಇತಿಹಾಸವನ್ನು ಚಿತ್ರಿಸಲಾಗಿದೆ.

Image
cross

ಇಡೀ ಪಠ್ಯದಲ್ಲಿ ಒಂದು ಬಾರಿ ಮುಸ್ಲಿಂ ಮತ್ತು ಒಂದು ಬಾರಿ ಕ್ರೈಸ್ತ ಎಂದು ಉಲ್ಲೇಖಿಸುವ ಮೂಲಕ ಸಂಪೂರ್ಣವಾಗಿ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ. ಇಸ್ಲಾಂ, ಕ್ರೈಸ್ತ ಮತ್ತು ಯಹೂದಿ ಈ ಮೂರು ಧರ್ಮಗಳಲ್ಲ. ಇದು ವಿದೇಶಿ ಪದವನ್ನು ಬಳಸಿ 'ರಿಲೀಜನ್' ಗಳು ಎಂದು ಉಲ್ಲೇಖಿಸಲಾಗಿದೆ. ಧರ್ಮ ಎಂದರೆ ಅದು ಹಿಂದೂ ಅಥವಾ ಸನಾತನ ಮಾತ್ರ. ಉಳಿದವು ಕೆಲ ಮತಗಳು ಮತ್ತು ಕೆಲವು ರಿಲೀಜನ್‌ಗಳು ಎನ್ನಲಾಗಿದೆ.

ರಿಲೀಜನ್ ಎಂದರೆ ಈ ಪಠ್ಯದ ಪ್ರಕಾರ ' ಒಂದು ದೇವದೂತ, ಒಂದು ಪವಿತ್ರ ಗ್ರಂಥ ಮತ್ತು ಒಂದಿಷ್ಟು ಅನುಯಾಯಿಗಳನ್ನು ಹೊಂದಿರುವ ಪರಿಕಲ್ಪನೆ' ಎಂದು ಬಿಂಬಿಸಲಾಗಿದೆ. ಸನಾತನ ಧರ್ಮಕ್ಕೆ ಯಾವುದೇ ನಿರ್ದಿಷ್ಟ ದೇವದೂತರಿಲ್ಲ, ನಿರ್ದಿಷ್ಟ ದೇವರುಗಳಿಲ್ಲ. ಆದ್ದರಿಂದ ಇದು ನಿಜವಾದ ಜೀವನ ಶೈಲಿಯ ಧರ್ಮ ಎಂದು ಬಿಂಬಿಸಲಾಗಿದೆ.

ಅಲ್ಪಸಂಖ್ಯಾತ ಸಮುದಾಯವನ್ನು ಮಾತ್ರ ಕಡೆಗಣಿಸದೆ, ಹಿಂದೆ ಬರಗೂರು ಅವರ ಸಮಿತಿ ರಚಿಸಿದ ಪಠ್ಯದಲ್ಲಿದ್ದ 'ಪ್ರಜಾಪ್ರಭುತ್ವ' ಎಂಬ ಅಧ್ಯಾಯವನ್ನೇ ಪ್ರಸ್ತುತ ಪಠ್ಯದಲ್ಲಿ ಅಳಿಸಿ ಹಾಕಲಾಗಿದೆ.

ಇದನ್ನು ಓದಿದ್ದೀರಾ? ಅಪರೂಪದ ಜ್ಞಾನಿಯನ್ನೂ ರಾಜಕೀಯ ದುಷ್ಟತನ ನುಂಗಿ ಹಾಕಿತ್ತಲ್ಲ !: ವಿಶ್ವಾರಾಧ್ಯ ಸತ್ಯಂಪೇಟೆ

ಒಟ್ಟಾರೆಯಾಗಿ ಪ್ರಸ್ತುತ ಪಠ್ಯದಲ್ಲಿ ಉಲ್ಲೇಖಿಸಿರುವ ಪರಿ ಗಮನಿಸಿದರೆ ನಂಜೇರಿದ ಮನಸ್ಥಿತಿಯಿಂದ ಇಂಗಿಹೋದ ಅಜ್ಞ ಸಿದ್ಧಾಂತಗಳನ್ನು ಹೇರಿಕೆಯ ರೂಪದಲ್ಲಿ ಅಧ್ಯಾಯಗಳಲ್ಲಿ ಅಳವಡಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯವನ್ನು ದ್ವೇಷದ ರೂಪದಲ್ಲಿ ಗುರಿಪಡಿಸಿ, ಅವರ ಅಸ್ತಿತ್ವ, ಅಸ್ಮಿತೆ ಯಾವುದೂ ಸ್ಮರಣೀಯವಾಗಿರಬಾರದು ಎಂದು ಪರೋಕ್ಷವಾಗಿ ಪ್ರತಿಪಾದಿಸಲಾಗಿದೆ. ಈ ಬೆಳವಣಿಗೆಯು ದೇಶದ ಸಾಂವಿಧಾನಿಕ ನಿಲುವನ್ನೇ ನಾಶ ಮಾಡುತ್ತದೆ.

ನಿಮಗೆ ಏನು ಅನ್ನಿಸ್ತು?
3 ವೋಟ್