ಅಂಗನವಾಡಿ ಅಕ್ಕಂದಿರ ಹೋರಾಟ | ನಾಯಕಿಯರ ನೀರಸ ಪ್ರತಿಕ್ರಿಯೆ; ಬೆಂಬಲಿಸಿದ ಭವ್ಯ

ಉದ್ಯೋಗ ಭದ್ರತೆ, ಕನಿಷ್ಠ ವೇತನ, ಮೂಲಭೂತ ಸೌಲಭ್ಯ- ಅಂಗನವಾಡಿ ಕಾರ್ಯಕರ್ತೆಯರ ಹಕ್ಕೊತ್ತಾಯಗಳಿವು. ರಾಜ್ಯದ ನಾನಾ ಮೂಲೆಗಳಿಂದ ಬೆಂಗಳೂರಿಗೆ ಬಂದು, ಕೊರೆವ ಚಳಿಯಲ್ಲಿ ಕೂತು, ನ್ಯಾಯಕ್ಕಾಗಿ ಹೋರಾಡುತ್ತಿರುವ ಅಕ್ಕಂದಿರ ಧರಣಿ ಕುರಿತು ಮೂರೂ ಪಕ್ಷಗಳ ಮಹಿಳಾ ರಾಜಕಾರಣಿಗಳು ನೀಡಿರುವ ಪ್ರತಿಕ್ರಿಯೆ ಇಲ್ಲಿದೆ....

ಮಕ್ಕಳಿಗೆ ಪ್ರಾಥಮಿಕ ಪೂರ್ವ ಶಿಕ್ಷಣ ನೀಡುವುದು, ಸರ್ಕಾರಕ್ಕೆ ಗ್ರಾಮಮಟ್ಟದಲ್ಲಿ ಬೇಕಿರುವ ಅಗತ್ಯ ದಾಖಲೆಗಳನ್ನು, ಅಂಕಿ-ಅಂಕಿ-ಅಂಶಗಳನ್ನು ಒದಗಿಸುವ ಅಂಗನವಾಡಿ ಕಾರ್ಯಕರ್ತೆಯರು, ಉದ್ಯೋಗ ಭದ್ರತೆ, ನಿಶ್ಚಿತ ಕನಿಷ್ಠ ವೇತನ, ಗ್ರಾಚ್ಯುಟಿ ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನಿಟ್ಟುಕೊಂಡು ಮತ್ತೆ ಬೀದಿಗಿಳಿದಿದ್ದಾರೆ.

ಬೆಂಗಳೂರಿನ ಫ್ರೀಡಂಪಾರ್ಕ್‌‌ನಲ್ಲಿ ಆರಂಭವಾಗಿರುವ ಅಂಗನವಾಡಿ ಕಾರ್ಯಕರ್ತೆಯರ ಧರಣಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿದ್ದಾರೆ. ಕೊರೆವ ಚಳಿ, ಸುಡು ಬಿಸಿಲನ್ನೂ ಲೆಕ್ಕಿಸದೇ, ರಸ್ತೆಯಲ್ಲಿಯೇ ಮಲಗಿ ಧರಣಿ ಮಾಡುತ್ತಿದ್ದಾರೆ. ತಮ್ಮ ನ್ಯಾಯಯುತ ಹಕ್ಕೊತ್ತಾಯಗಳು ಈಡೇರುವವರೆಗೂ ಹೋರಾಟ ಮುಂದುವರೆಸುವುದಾಗಿ ಪಣತೊಟ್ಟಿದ್ದಾರೆ.

‌ಇನ್ನು ಚುನಾವಣೆ ಹತ್ತಿರ ಬರುತ್ತಿದ್ದಂತೆ, ಉದ್ಯೋಗ ಭರವಸೆ, ಮನೆಯ ಗೃಹಲಕ್ಷ್ಮಿಗೆ ಸಿಲಿಂಡರ್‌, ಮಾಸಿಕ ಪಿಂಚಣಿ ಎಂಬಿತ್ಯಾದಿ ಪುಂಖಾನುಪುಂಖ ಭರವಸೆಗಳನ್ನು ನೀಡುತ್ತಿರುವ ರಾಜಕೀಯ ಪಕ್ಷಗಳು, ಅಂಗನವಾಡಿ ಕಾರ್ಯಕರ್ತೆಯರ ಹೋರಾಟವನ್ನು ಕಡೆಗಣಿಸಿರುವುದು ಕಂಡು ಬರುತ್ತಿದೆ! ರಾಜಕಾರಣಿಗಳು ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತೆಯರ ಮಾತುಗಳನ್ನು ಆಲಿಸುವುದಿರಲಿ, ಕನಿಷ್ಠ ಅವರ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಲೂ ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರವಂತೂ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

ಈ ಬಾರಿ ಚುನಾವಣೆಯಲ್ಲಿ ಗೆದ್ದರೆ, ಮಹಿಳೆಯರಿಗಾಗಿ ನಾನಾ ಬಗೆಯ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎನ್ನುತ್ತಿರುವ ಮೂರು ಪಕ್ಷಗಳು ನಾಯಕಿಯರು ಈ ಹೋರಾಟದ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿಯಲು ಈದಿನ.ಕಾಮ್‌ ಪ್ರಯತ್ನಿಸಿತು. ಆಡಳಿತ ಪಕ್ಷದ ನಾಯಕಿಯರ ನಿರಾಶದಾಯಕ ಪ್ರತಿಕ್ರಿಯೆ ಮುಖಕ್ಕೆ ರಾಚಿದಂತಿತ್ತು. ಕಾಂಗ್ರೆಸ್‌ನ ಯುವ ಅಭ್ಯರ್ಥಿ ಭವ್ಯ ನರಸಿಂಹಮೂರ್ತಿ ಅವರ ಮಾತುಗಳು ಭರವಸೆ ಮೂಡಿಸಿದವು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ಅವರು ಪ್ರತಿಕ್ರಿಯೆ ಕಳಕಳಿಯಿಂದ ಕೂಡಿತ್ತು. 

ಮಹಿಳಾ ಮೀಸಲಾತಿ, ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ಬಿತ್ತಿರುವ ಕಾಂಗ್ರೆಸ್‌ ಕೂಡ ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ಸೂಚಿಸಿದಂತಿಲ್ಲ. ಧರಣಿನಿರತ ತಾಯಂದಿರ ಕುರಿತು ಪ್ರತಿಕ್ರಿಯೆ ಕೋರಿ ಕಾಂಗ್ರೆಸ್ ಮಹಿಳಾ ಮುಖಂಡರಾದ ಸೌಮ್ಯಾ ರೆಡ್ಡಿ ಭವ್ಯ ನರಸಿಂಹಮೂರ್ತಿ ಹಾಗೂ ಕುಸುಮಾ ಅವರನ್ನು ಸಂಪರ್ಕಿಸಲಾಯಿತು. ಸೌಮ್ಯಾ ರೆಡ್ಡಿ ಮತ್ತು ಕುಸುಮಾ ಅವರು ಕರೆ ಸ್ವೀಕರಿಸಲಿಲ್ಲ.

ಹೋರಾಟದ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ನಾಯಕಿ ಭವ್ಯ ನರಸಿಂಹಮೂರ್ತಿ, “ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಕೆಲಸದ ನಿಮಿತ್ತ ಬೇರೆ ಜಿಲ್ಲೆಗೆ ಬಂದಿರುವುದರಿಂದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಅಕ್ಕಂದಿರನ್ನು ಭೇಟಿಯಾಗಲು ಆಗಿಲ್ಲ. ಸಾಧ್ಯವಾದರೇ ಇಂದು ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ” ಎಂದರು.

“ನಾನು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆ ತಯಾರಿ ಮಾಡುವ ತಂಡದಲ್ಲಿ ನಾನು ಇದ್ದೇನೆ. ಅಂಗನವಾಡಿ ನೌಕರರಿಗೆ ಒದಗಿಸಲೇಬೇಕಿರುವ ಕನಿಷ್ಟ ವೇತನ, ಉದ್ಯೋಗ ಭದ್ರತೆ ಹಾಗೂ ಅವರ ಮಕ್ಕಳಿಗೆ ವಿದ್ಯಾರ್ಥಿವೇತನದ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿಯೂ ಬರುವಂತೆ ಮಾಡುತ್ತೇನೆ” ಎಂದು ಭವ್ಯ ವಿವರಿಸಿದರು.

ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, “ರಾಜ್ಯದಲ್ಲಿ ನಮ್ಮ ಸರ್ಕಾರವೇ ಆಡಳಿತ ನಡೆಸುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಬಗ್ಗೆ ನಮ್ಮ ಸರ್ಕಾರದ ನಿಲುವೇನು ನನಗೆ ತಿಳಿದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸಚಿವರು ನಿಲುವೇನು ಎಂಬುದನ್ನು ತಿಳಿದುಕೊಂಡು ನಂತರ ಸಂಪರ್ಕಿಸುತ್ತೇನೆ” ಎಂದರು.

ನಂತರ ಕರೆಮಾಡಿ ಪ್ರತಿಕ್ರಿಯಿಸಿದ ಅವರು, “ನಮ್ಮ ಮಂತ್ರಿಗಳು ಬೆಂಗಳೂರಿನಲ್ಲಿ ಇಲ್ಲ. ಪಕ್ಷದ ಕಾರ್ಯಕ್ರಮವೊಂದಿತ್ತು. ಅದನ್ನು ಮುಗಿಸಿಕೊಂಡು ಊರಿಗೆ ಹೋಗಿದ್ದಾರೆ. ಬೆಂಗಳೂರಿಗೆ ಬಂದ ನಂತರ, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಬಹುದು. ಈ ಹಿಂದೆ ಇನ್ನೊಂದು ಸಂಘಟನೆಯ ಕಾರ್ಯಕರ್ತರು ಇದೇ ವಿಷಯವಾಗಿ ಪ್ರತಿಭಟನೆ ನಡೆಸಿದ್ದರು. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಯನ್ನು ಬಜೆಟ್‌ ಪೂರ್ವ ಸಭೆಯಲ್ಲಿ ಚರ್ಚಿಸಲಾಗಿದೆ” ಎಂದರು.

ಬಿಜೆಪಿ ನಾಯಕಿ ಚಿತ್ರನಟಿ ತಾರಾ ಅನೂರಾಧ ಅವರನ್ನು ಈ ಬಗ್ಗೆ ಕೇಳಿದಾಗ, “ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ನನಗೆ ತುಂಬಾ ಗೌರವವಿದೆ. ಈಗ ಲೈವ್‌ನಲ್ಲಿ ಇದ್ದೇನೆ. ನಂತರ ಕರೆ ಮಾಡುತ್ತೇನೆ” ಎನ್ನುತ್ತಾ ಫೋನ್ ಕಟ್ ಮಾಡಿದರು.

ಇನ್ನು ಜೆಡಿಎಸ್‌ನ ಭವಾನಿ ರೇವಣ್ಣ ಮತ್ತು ಶೀಲಾ ನಾಯಕ್ ಅವರನ್ನು ಸಂಪರ್ಕಿಸಲಾಯಿತು. ಭವಾನಿ ಅವರು ಕರೆ ಸ್ವೀಕರಿಸಲಿಲ್ಲ.  ಕರೆ ಸ್ವೀಕರಿಸಿದ ಶೀಲಾ ನಾಯಕ್‌, ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಎಂದು ಮಾತು ಶುರು ಮಾಡುವ ಮೊದಲೇ ಕರೆ ಕೊನೆಗೊಂಡಿತು.

ನಾವು ಆಡಳಿತಕ್ಕೆ ಬಂದರೆ, ಹೆಣ್ಣುಮಕ್ಕಳಿಗೆ ಹಣ ನೀಡುತ್ತೇವೆ, ಉದ್ಯೋಗ ನೀಡುತ್ತೇವೆ, ಮಹಿಳಾ ಸಬಲೀಕರಣಕ್ಕಾಗಿ ಹಗಲಿರುಳು ದುಡಿಯುತ್ತೇವೆ ಎನ್ನುವ ರಾಜಕಾರಣಿಗಳ ಭರವಸೆಯ ಮಾತುಗಳು, ಬರೀ ಭರವಸೆಯ ಮಾತುಗಳೇ ಹೊರತು ಕಾರ್ಯರೂಪಕ್ಕಿಳಿಯುವುದಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಇಷ್ಟಾದರೂ ಅಸಹಾಯಕ ಅಂಗನವಾಡಿ ಕಾರ್ಯಕರ್ತೆಯರು, ಇವತ್ತಲ್ಲ ನಾಳೆ ನಮ್ಮ ಬದುಕು ಕೊಂಚ ನಿಸೂರಾಗಬಹುದು ಎಂದು ಆಶಾಭಾವನೆಯಿಂದ ಕೆಲಸ ಮುಂದುವರೆಸಿಕೊಂಡು ಹೋಗುತ್ತಲೇ ಇದ್ದಾರೆ. 

anganavadi

ಪುಡಿಗಾಸಿಗೆ ಹಗಲಿರುಳು ದುಡಿವ ಹೆಣ್ಣುಮಕ್ಕಳು

ಅಂಗನವಾಡಿ ಶಿಕ್ಷಕಿಯಾಗಿಯೋ, ಸಹಾಯಕಿಯಾಗಿಯೋ ಮುವತ್ತು ವರ್ಷಗಳಿಗೂ ಹೆಚ್ಚು ಕಾಲ ‘ಅಭದ್ರತೆ’ಯಲ್ಲಿಯೇ ಕೆಲಸ ಮಾಡಿರುವ ತಾಯಂದಿರು ಈ ಹೋರಾಟದಲ್ಲಿದ್ದಾರೆ. ಬೆಳಗ್ಗೆ ಒಂಬತ್ತುವರೆ ಆಗ್ತಿದ್ದಂಗೆ ಹಳ್ಳಿ ಮನೆಗಳಲ್ಲಿರುವ 3-5 ವರ್ಷದೊಳಗಿನ ಮಕ್ಕಳನ್ನು ಕೈಹಿಡಿದು ಕರೆದೊಯ್ಯುವ ಅಂಗನವಾಡಿ ಕಾರ್ಯಕರ್ತೆಯರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಮಕ್ಕಳಿಗೆ ಅ, ಆ, ಇ, ಈ…. ಹೇಳಿಕೊಡುತ್ತಿದ್ದ, ಗ್ರಾಮದಲ್ಲಿ ಯಾರಿಗಾದರೂ ವೋಟರ್ ಐಡಿ ಬೇಕು ಎಂದ ಕೂಡಲೇ ಮಾಡಿಸಿಕೊಡುತ್ತಿದ್ದ, ಸರ್ಕಾರ ಗ್ರಾಮಗಳ ಬಗ್ಗೆ ಮಾಹಿತಿ ಕೇಳಿದರೆ ಅದನ್ನೂ ತುಂಬಾ ಶಿಸ್ತಿನಿಂದ ಮಾಡುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು, ಕನಿಷ್ಠ ವೇತನ, ಉದ್ಯೋಗ ಭದ್ರತೆಗಾಗಿ ಕಾಡಿಬೇಡಿ ಹೈರಾಣಾಗಿದ್ದಾರೆ. 

ಪ್ರಸ್ತುತ ಅಂಗನವಾಡಿಯಲ್ಲಿ  ಕೆಲಸ ಮಾಡುವವರಿಗೆ ಹಲವು ವರ್ಷಗಳ ಹೋರಾಟದ ನಂತರ 11,000 ರೂ ಗೌರವಧನ ನೀಡಲಾಗುತ್ತಿದೆ. ಸಹಾಯಕಿಯಾಗಿ ಕೆಲಸ ಮಾಡುವವರಿಗೆ 6,000 ರೂ ನೀಡಲಾಗುತ್ತಿದೆ. ಇದನ್ನು ಏರಿಕೆ ಮಾಡಬೇಕು, 21,000 ರೂ ಕನಿಷ್ಠ ವೇತನ ನೀಡಬೇಕು, ಇಎಸ್‌ಐ ಸೌಲಭ್ಯ ಕಲ್ಪಿಸಬೇಕು, ನಮ್ಮನ್ನು ಸರ್ಕಾರಿ ನೌಕಕರೆಂದು ಪರಿಗಣಿಸಬೇಕು ಎಂಬುದು ಈ ಅಕ್ಕಂದಿರ ಪ್ರಮುಖ ಬೇಡಿಕೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app