'ಹಿಂದಿ ದಿವಸ್' ಎಂಬ ಸಾಂಸ್ಕೃತಿಕ ಅಪಮಾನದ ವಾರ್ಷಿಕ ಆಚರಣೆ

Hindi divas

ಹಾಗೆ ನೋಡಿದರೆ ನಾವು ಹಿಂದಿ ಹೇರಿಕೆಯ ಎರಡನೆಯ ದಾಳಿಯ ಅವಧಿಯಲ್ಲಿದ್ದೇವೆ. 60ರ ದಶಕದಲ್ಲಿ ತ್ರಿಭಾಷಾ ಸೂತ್ರದ ಅಡಿ ದಕ್ಷಿಣ ಭಾರತೀಯ ಭಾಷಿಕ ಸಮುದಾಯಗಳ ಮೇಲೆ ನಡೆಸಿದ ಸಾಂಸ್ಕೃತಿಕ ದಾಳಿ ಮೊದಲಿನದ್ದಾದರೆ, ಕಳೆದ ವರ್ಷ ಕೇಂದ್ರಸರ್ಕಾರ ಮತ್ತೊಮ್ಮೆ  ತ್ರಿಭಾಷಾ ಸೂತ್ರದಡಿ‌ ಹಿಂದಿ ಹೇರುವ ಅಧಿಕೃತ ಪ್ರಯತ್ನಕ್ಕಿಳಿದಿದ್ದು ಎರಡನೆಯ ದಾಳಿ

'ಹಿಂದಿ ದಿವಸ್ ' ಎಂಬ ಸಾಂಸ್ಕೃತಿಕ ಅಪಮಾನದ ವಾರ್ಷಿಕ ಆಚರಣೆಗೆ ಕರ್ನಾಟಕ‌ ಸರ್ಕಾರ ಮತ್ತೊಮ್ಮೆ ಸಜ್ಜಾಗಿದೆ.   ಆತ್ಮಗೌರವಹೀನ ಸಮುದಾಯವೊಂದು ಮಾತ್ರ ಇಂತಹ ಆಚರಣೆಗೆ ಮುಂದಾಗಬಲ್ಲದು. ಕೇಂದ್ರ ಸರ್ಕಾರದ ಭಾಷಾ ನೀತಿಯ ಈ ಹೇರಿಕೆಯನ್ನು ಕಳೆದ 50ಕ್ಕೂ ಹೆಚ್ಚು  ವರ್ಷಗಳಿಂದಲೂ ಕನ್ನಡಿಗರು ಶಿರಸಾವಹಿಸಿ ಪಾಲಿಸುತ್ತಿರುವ  ಫಲವೇ ಈ ನಾಚಿಕೆಗೆಟ್ಟ ಘಟನೆ ವರ್ಷವೂ‌ ನಡೆಯಲು ಕಾರಣವಾಗಿದೆ.

ಐತಿಹಾಸಿಕವಾಗಿ ನೋಡಿದಲ್ಲಿ ನಾವು ಹಿಂದಿ ಹೇರಿಕೆಯ ಎರಡನೆಯ ದಾಳಿಯ ಅವಧಿಯಲ್ಲಿದ್ದೇವೆ. ಅರವತ್ತರ ದಶಕದಲ್ಲಿ ತ್ರಿಭಾಷಾ ಸೂತ್ರದ ಅಡಿ ದಕ್ಷಿಣ ಭಾರತೀಯ ಭಾಷಿಕ ಸಮುದಾಯಗಳ ಮೇಲೆ ನಡೆಸಿದ ಸಾಂಸ್ಕೃತಿಕ ದಾಳಿ ಮೊದಲಿನದ್ದಾದರೆ, ಕಳೆದ ವರ್ಷ ಕೇಂದ್ರದ ಬಿಜೆಪಿ ಸರ್ಕಾರ ಮತ್ತೊಮ್ಮೆ ತ್ರಿಭಾಷಾ ಸೂತ್ರದಡಿ‌ ಹಿಂದಿ ಹೇರುವ   ಅಧಿಕೃತ ಪ್ರಚಾರ ಮತ್ತು ಪ್ರಯತ್ನಕ್ಕಿಳಿದಿದ್ದು ಎರಡನೆಯ ಸಾಂಸ್ಕೃತಿಕ ದಾಳಿ. ಇತ್ತೀಚಿನ ದಾಳಿ ತಮಿಳುನಾಡನ್ನು   ಉದ್ದೇಶಿಸಿ ನಡೆದಿದ್ದೆನ್ನುವುದಂತೂ ನಿಜವೇ. ಆದರೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನೂ ಒಳಗೊಂಡು  ಅಲ್ಲಿನ ಬಹುತೇಕ ನಾಯಕ ಗಣ ಕೇಂದ್ರದ ಈ ಅತಿಕ್ರಮಣವನ್ನು ಹಿಮ್ಮೆಟ್ಟಿಸಿದವು.

ಆದರೆ, ಅರವತ್ತರ ದಶಕದಲ್ಲೇ ಕರ್ನಾಟಕ ಹಿಂದಿ ಆಕ್ರಮಣಕಾರಿಗಳಿಗೆ ಸುಲಭದ ತುತ್ತಾಯಿತು. ಆದರೆ ಅಂದಿನಿಂದಲೂ ಎದೆಗೆಡದೆ ಅಥವಾ ಬೆನ್ನುಕೊಡದೆ ಹಿಂದಿಯನ್ನು ತಮ್ಮ ತಾಯ್ನಾಡಿನ ಗಡಿಯೊಳಗೆ ಬಿಡದೆ ಹಿಮ್ಮೆಟ್ಟಿಸಿ ನಿಂತಿದ್ದು‌ ತಮಿಳುನಾಡು. ಆದರೆ ಕನ್ನಡಿಗರ ಹಿಂದಿ ಗುಲಾಮಗಿರಿಯ ಇತಿಹಾಸ ಅರ್ಧ ಶತಮಾನದಷ್ಟು ದಿರ್ಘಾವಧಿ ಹಿಂದಕ್ಕೆ   ವಿಸ್ತರಿಸಿಕೊಳ್ಳುತ್ತದಷ್ಟೇ ಅಲ್ಲ. ಮುಂದೆಯೂ ನಾವು ಹಿಂದಿಯ ಗುಲಾಮರಾಗಿ ಕಾಲ ಸವೆಸಬೇಕಾಗಿದೆ..

ಹಿಂದೆ ನಾನು ಹಲವು ಸಲ ಬೆಂಗಳೂರನ್ನು ಪ್ರವೇಶಿಸುತ್ತಿರುವಾಗ, ಗೊರಗುಂಟೆ ಪಾಳ್ಯದ ಹತ್ತಿರವಿರುವ central  machine tools institute (CMTI) ಹೆಬ್ಬಾಗಿಲಿಗೆ 'ಹಿಂದಿ ದಿವಸ್ ' ಬ್ಯಾನರ್ ಕಟ್ಟಿರುವುದನ್ನು ನೋಡಿದ್ದೇನೆ. ಅದನ್ನು ನೋಡಿದಾಗೆಲ್ಲ ನನಗೆ hmt ಯಲ್ಲಿ  ಕೆಲಸ ಮಾಡುತ್ತಿರುವಾಗ ನಮ್ಮ ಫ್ಯಾಕ್ಟರಿಯ ಕಾರ್ಮಿಕರಿಗೆ ಹಿಂದಿ  ಹೇಳಿಕೊಡುವ ಭಾಗವಾಗಿ ಕಾರ್ಮಿಕರಿಗೆ ಶಿಫ್ಟ್ ಗಳಲ್ಲಿ 'ರಿಲೀಸ್' ಅವಕಾಶ ಕಲ್ಪಿಸಲಾಗುತ್ತಿದ್ದದ್ದು ಮತ್ತು  ನಮ್ಮ ಕಾರ್ಖಾನೆಯ ನಾಜೂಕಾದ ಶಿಖಂಡಿಗಳಂತಹ‌ ಅವಕಾಶವಾದಿ ಕನ್ನಡದ ಜನ ನೋಟ್ ಬುಕ್ಕು, ಪೆನ್ನು ಹಿಡಿದು ಕರ್ಚೀಪು ಅಲ್ಲಾಡಿಸುತ್ತ ಹಿಂದಿ ಕ್ಲಾಸಿಗೆ ಹೋಗುತ್ತಿದ್ದದ್ದು ‌ನೆನಪಾಗುತ್ತದೆ.

CMTI ಕೇಂದ್ರ ಸರ್ಕಾರಿ ಒಡೆತನದ ಸಾರ್ವಜನಿಕ ಉದ್ದಿಮೆ. ಈ ಸಂಸ್ಥೆ ಕರ್ನಾಟಕದಲ್ಲಿ ತಳವೂರಿರುವುದರಿಂದ ಅಲ್ಲಿ ಕನ್ನಡಕ್ಕೆ ಪ್ರಾದಾನ್ಯತೆ ಇರಬೇಕಾಗುತ್ತದೆ‌. ಆದರೆ official language implementation ಹೆಸರಿನಲ್ಲಿ  ಹಿಂದಿಯನ್ನು  ಎಲ್ಲ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಅಲ್ಲಿನ ನೌಕರರಿಗೆ ಕಲಿಸುವ ಪ್ರಯತ್ನ ನಡೆಸಲಾಗುತ್ತಿದೆ.  

ಕುವೆಂಪು ನೀಡಿದ ಎಚ್ಚರಿಕೆ

'ಹಿಂದಿ ದಿವಸ್ ' ಆಚರಣೆ ವಾಸ್ತವವಾಗಿ ಕೇಂದ್ರದ ತ್ರಿಭಾಷಾ ನೀತಿಯ ಫಲ. ಈ ತ್ರಿಬಾಷಾ ಸೂತ್ರವನ್ನು ತ್ರಿಶೂಲವೆಂದು ಕರೆದು, ಹಿಂದಿಯನ್ನು ಹಿಂದಿನ ಬಾಗಿಲಿನಿಂದ ಕರ್ನಾಟಕದ ಒಳಗೆ ನುಗ್ಗಿಸುವ‌ ಹುನ್ನಾರ ‌ಇದು ಎಂದು ಕನ್ನಡಿಗರನ್ನು   ಸತತವಾಗಿ ಎಚ್ಚರಿಸಿದ ಏಕೈಕ ವ್ಯಕ್ತಿಯೆಂದರೆ ಕುವೆಂಪು. ತಮ್ಮ ಬದುಕಿನುದ್ದಕ್ಕೂ ಕನ್ನಡಿಗರನ್ನು ಈ ಹಿಂದಿ ಎಂಬುದು  ಕನ್ನಡಕ್ಕೊಡ್ಡಿದ ಬೆದರಿಕೆ ಎಂದು ಎಚ್ಚರಿಸಿದರೂ ಎಂದಿನಂತೆ ಸ್ವಾಭಿಮಾನ ಶೂನ್ಯ ಕನ್ನಡಿಗರು ಮಹಾಕವಿಯ ಮಾತನ್ನು ನಿರ್ಲಕ್ಷಿಸಿದರು.

ಆದರೆ, ಈ ಬಾರಿಯ "ಹಿಂದಿ ದಿವಸ್ " ಆಚರಣೆ ವಿರುದ್ಧ ಎದ್ದ ಕನ್ನಡದ ಪ್ರತಿಭಟನೆಯ ದನಿಗಳು ಈ ವರ್ಷ ಕ್ಷೀಣಿಸಿದಂತೆ ಕಾಣುವಾಗ ಕರ್ನಾಟಕದ ಮುಖ್ಯವಾದ ರಾಜಕೀಯ ಪಕ್ಷವಾದ 'ಜಾತ್ಯತೀತ ಜನತಾದಳ' ದ ಅದ್ಯಕ್ಷರಾದ ಸಿ ಎಂ ಇಬ್ರಾಹಿಂ ಹಾಗೂ ಕುಮಾರಸ್ವಾಮಿಯವರು 'ಹಿಂದಿ ದಿವಸ್ ' ಹೇರಿಕೆಯ ವಿರುದ್ದ ದನಿಯೆತ್ತಿರುವುದು ಸ್ವಾಗತಾರ್ಹವಾಗಿ ಕಾಣುತ್ತದೆ.

ಇದೇ ಅಗ್ರಹವನ್ನು ಕಾಂಗ್ರೆಸ್ ಪಕ್ಷವೂ ಸೇರಿದಂತೆ ಕರ್ನಾಟಕದ ಇನ್ನಿತರ ರಾಜಕೀಯ ಪಕ್ಷ ಮತ್ತು ಸಂಘಟನೆಗಳಾದ ,  ಎಎಪಿ, ಬಿಎಸ್‌ಪಿ, ಕೆಆರ್‌ಎಸ್, ಸರ್ವೋದಯ ಕರ್ನಾಟಕ, ಕಮ್ಯೂನಿಸ್ಟ್ ಪಕ್ಷಗಳನ್ನೂ ಒಳಗೊಂಡು ಕನ್ನಡ ಹೋರಾಟದ  ಸಾಂಸ್ಕೃತಿಕ ಸಂಘಟನೆಗಳು ಆದ್ಯತೆಯಿಂದ ಮುಂದಾಗುವುದು ಕನ್ನಡದ ಉಳಿವಿಗೆ ತಕ್ಷಣದ ಅಗತ್ಯವಾಗಿದೆ.

'ಹಿಂದಿ ದಿವಸ್ ' ಕೇವಲ tip of the iceberg ಇದ್ದ ಹಾಗೆ. ಅದು ತ್ರಿಭಾಷಾ ಸೂತ್ರದ ಫಲವಾದ್ದರಿಂದ ಕನ್ನಡದ ಅಸ್ತಿತ್ವಕ್ಕೆ ಮಾರಕವಾಗಿರುವ ಈ ಭಾಷಾ ನೀತಿಯನ್ನು ಕಿತ್ತೆಸೆಯುವುದರಲ್ಲಿ ಮಾತ್ರ ಕನ್ನಡಿಗರ ಅಸ್ಮಿತೆಗೆ, ಅಭಿಮಾನಕ್ಕೆ ಕಳಂಕ ತರುವ 'ಅಪಮಾನದ ದಿವಸ್' ದಿಂದ ‌ಮುಕ್ತಿ ಪಡೆಯಬಹುದು.

ಪ್ರತಿ ವರ್ಷ ಈ ದಿನ‌ ಬಂದಾಗೆಲ್ಲ ನನಗೆ ಈ ಹಿಂದಿ ಹೇರಿಕೆಯ ವಿರುದ್ಧ ದಂಗೆಯೇಳದ ಅವಕಾಶವಾದಿಯಾದ, ಎದೆಯ ದನಿ ಸತ್ತ ನಮ್ಮ ಜನ ನೆನಪಾಗುತ್ತಾರೆ. ತಮ್ಮ ಮಕ್ಕಳನ್ನು ಅಂಕದ ಆಸೆಗೆ ಕನ್ನಡದ ಬದಲಿಗೆ ಹಿಂದಿ ಮತ್ತು  ಸಂಸ್ಕೃತಕ್ಕೆ ಸೇರಿಸುವ 'ಅಂಕಬುರುಕ‌' ಕನ್ನಡ ಜನ ನೆನಪಾಗುತ್ತಾರೆ

ಪಕ್ಕದ ತಮಿಳುನಾಡಿನ ಸ್ಟಾಲಿನ್ ತರಹದ ರಾಜಕಾರಣಿಗಳಂತೆ ತ್ರಿಭಾಷಾ ಸೂತ್ರದ ಮೂಲಕ ಹಿಂದಿ ಹೇರಿಕೆಯನ್ನು ಕಿತ್ತೆಸೆಯದ ಕನ್ನಡದ್ರೋಹಿ ರಾಜಕಾರಣಿಗಳು ನೆನಪಾಗುತ್ತಿದ್ದಾರೆ.

ಇದನ್ನು ಓದಿದ್ದೀರಾ? ಹಿಂದಿ ದಿವಸ | ರಾಜ್ಯ ಸರ್ಕಾರ ಮೊದಲು ತುಳು, ಹವ್ಯಕ, ಕೊಡವ ದಿನ ಆಚರಿಸಲಿ - ಕೆ ಮರುಳಸಿದ್ದಪ್ಪ ಆಗ್ರಹ

"ಹಿಂದಿ ದಿವಸ್ '' ದಿನ ಮಾತ್ರ ಹಿಂದಿಯ ವಿರುದ್ಧ  ಪ್ರತಿಭಟಿಸುವುದರಿಂದ ಏನೂ ಆಗುವುದಿಲ್ಲ. ಹಿಂದಿ ಕೇವಲ ರೋಗದ ಲಕ್ಷಣ ಮಾತ್ರ. ರೋಗ ಕಾರಕ ವೈರಸ್ ತ್ರಿಭಾಷಾ ನೀತಿಯಾಗಿದೆ. ಹಿಂದಿ ಭಾಷೆ ನಮ್ಮ ತಲೆಗಳೊಳಗೆ ಭದ್ರವಾಗಿ ಕೂತುಕೊಳ್ಳಲು ಮತ್ತು ಕನ್ನಡಿಗರಾದ ನಮ್ಮನ್ನು ಕನ್ನಡದ ವಿರುದ್ಧ ಎತ್ತಿಕಟ್ಟಲು ಕಾರಣವಾದ ತ್ರಿಭಾಷಾ ಸೂತ್ರವನ್ನು ಕಿತ್ತೆಸೆಯುವ ಹೋರಾಟ ಮಾತ್ರ ಹಿಂದಿಯನ್ನು ಕರ್ನಾಟಕದಿಂದ ಸಮೂಲವಾಗಿ ಕಿತ್ತೆಸೆಯಬಲ್ಲದು.

ಕುವೆಂಪು ಅವರು ಹೇಳಿದ ''ಬಹುಭಾಷೆಗಳಲ್ಲಿ ದ್ವಿಭಾಷೆ'' ‌ನುಡಿ ನೀತಿಯನ್ನು ಒಪ್ಪಿಕೊಳ್ಳಲು ನಾವೀಗ, ತಮ್ಮನ್ನು ರಾಷ್ಟ್ರೀಯವಾದಿ ಸರ್ಕಾರ ಎಂದು ಘೋಷಿಸಿಕೊಂಡು ಪ್ರಾದೇಶಿಕ ಅಸ್ಮಿತೆಗಳನ್ನು ನಾಶ ಮಾಡಲು ಪಣ ತೊಟ್ಟಿರುವ ಬಿಜೆಪಿಗರ ಗೊಡ್ಡು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್