ಉದಯಪುರ ಪ್ರಕರಣ: ಯಾವ ಹತ್ಯೆಗಳೂ ಸಮರ್ಥನೀಯವಲ್ಲ

Murder

ಯಾವುದೇ ಧರ್ಮ ಕೊಲೆಯನ್ನು ಬೋಧಿಸುವುದಿಲ್ಲ. ವ್ಯಕ್ತಿಗಳು, ಸಂಘಟನೆಗಳು ಒಂದು ಧರ್ಮದ ಜನರ ‌ಪ್ರತಿನಿಧಿಗಳಾಗಲು ಸಾಧ್ಯವಿಲ್ಲ. ನೂಪುರ್ ಶರ್ಮ ಅವರ ಹೇಳಿಕೆಯನ್ನು ಬೆಂಬಲಿಸಿ ಹತ್ಯೆಗೀಡಾದ ವ್ಯಕ್ತಿ ಹಿಂದು ಧರ್ಮದ ಎಲ್ಲರನ್ನೂ ಪ್ರತಿನಿಧಿಸುವುದಿಲ್ಲ. ಅದೇ‌ ರೀತಿ ಕನ್ನಯ್ಯರ ಕೊಲೆಗಾರರು ಮುಸ್ಲಿಂ ಧರ್ಮದ ಎಲ್ಲರನ್ನೂ ಪ್ರತಿನಿಧಿಸುವುದಿಲ್ಲ

ಉದಯಪುರದಲ್ಲಿ ನಡೆದ ‌ಹತ್ಯೆ‌ ಭಾರತೀಯರು ತಲೆ ತಗ್ಗಿಸಲೇ ಬೇಕಾದ ಪ್ರಕರಣ. ಅದರಲ್ಲೂ ಅದನ್ನು ವೀಡಿಯೋ ‌ಮಾಡಿ, ಅದರ ಬಳಿಕ ಇನ್ನೊಂದು ವೀಡಿಯೋ ‌ಮಾಡಿ ಪ್ರಧಾನಿ ಮೋದಿಯವರನ್ನೂ ಕೊಲ್ಲಲಾಗುವುದು ಎಂದು‌ ಹೇಳುವುದು ಇನ್ನೂ‌ ಖಂಡನೀಯ.

ನಾಗರಿಕ‌ ಸಮಾಜದಲ್ಲಿ ಪ್ರಜಾಪ್ರಭುತ್ವದಲ್ಲಿ ವಿಚಾರಗಳನ್ನು ವಿರೋಧಿಸಬೇಕೆ ಹೊರತು ವ್ಯಕ್ತಿಗಳನ್ನಲ್ಲಾ. ತಮ್ಮ ವಿಚಾರಗಳಿಂದ ವ್ಯತಿರಿಕ್ತ ವಿಚಾರಗಳನ್ನು ಹೊಂದಿರುವವರ ಮೇಲೆ ಪ್ರಭಾವ ಬೀರಿ ಅವರನ್ನೂ ತಮ್ಮ ವಿಚಾರಧಾರೆಯತ್ತ ಸೆಳೆಯುವ ಪ್ರಯತ್ನ ಪ್ರಜಾಪ್ರಭುತ್ವದಲ್ಲಿ ನಿರಂತರ ಆಗಬೇಕು. ಯಾರ ವಿಚಾರವನ್ನು ಜಾಸ್ತಿ‌ ಜನ ಒಪ್ಪುತ್ತಾರೋ ಅವರ ವಿಚಾರಗಳಿಗೆ ಚುನಾವಣೆಯಲ್ಲಿ ಜಯ ಸಿಗುತ್ತದೆ, ಅವರ ವಿಚಾರ ಸರಿಯೋ ತಪ್ಪೋ ಅದು ಚರ್ಚಾಸ್ಪದ ವಿಚಾರ.

ಭಾರತದಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರ ಮೇಲೆ ಆಳುವ ಪಕ್ಷದವರಿಂದ ನಿರಂತರವಾಗಿ ನೇರ ಹಾಗೂ‌‌ ಪರೋಕ್ಷ ಅವಹೇಳನ ಆಗಿ, ಬಹುಸಂಖ್ಯಾತ ಧರ್ಮದವರನ್ನು ಓಲೈಸುತ್ತಾ ಅಲ್ಪಸಂಖ್ಯಾತರೆಲ್ಲರೂ ಕೆಟ್ಟವರು ಎಂಬ ಸರಳ ಸುಳ್ಳನ್ನು ಜನಮಾನಸದಲ್ಲಿ ಆಳವಾಗಿ ಬಿತ್ತಿ ಆದ‌ ಸಂದರ್ಭದಲ್ಲಿ ಈ ಹತ್ಯಾ ಪ್ರಕರಣ‌ ನಿಜವಾಗಿ ಅಪಾಯಕಾರಿ‌ ಘಟನೆ. ಏಕೆಂದರೆ ಹಂತಕರು ಇಸ್ಲಾಮ್ ಧರ್ಮದ ಅವಹೇಳನ ಮಾಡಿದ ವ್ಯಕ್ತಿಗೆ ಬೆಂಬಲ ಸೂಚಿಸಿದ್ದಕ್ಕೆ ಪ್ರತೀಕಾರ ತೀರಿಸಿದ್ದೇವೆ ಅಂದಿದ್ದಾರೆ. ಹಾಗಾಗಿ ಸಾಮಾನ್ಯ ಜನರ ಮನಸಿನಲ್ಲಿ ಅವರಿಬ್ಬರು ಇಸ್ಲಾಮ್ ಧರ್ಮದ ಪ್ರತಿಪಾದಕರು, ಅದೇ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ ಎಂಬ ಭಾವನೆ ಬಂದು ಈಗಾಗಲೇ ಜನಮಾನಸದಲ್ಲಿ ಬೇರೂರಿದ ದ್ವೇಷಾಗ್ನಿಗೆ ತುಪ್ಪ ಎರೆದಂತಾಗುತ್ತದೆ.

ಯಾವುದೇ ಧರ್ಮ ಕೊಲೆಯನ್ನು ಬೋಧಿಸುವುದಿಲ್ಲ. ಹಾಗೂ‌ ಇಬ್ಬರು ವ್ಯಕ್ತಿಗಳು, ಸಂಘಟನೆಗಳು, ಅಥವಾ ಹಲವಾರು‌ ವ್ಯಕ್ತಿಗಳು ಕೂಡ ಒಂದು ಧರ್ಮದ ಪಾಲನೆ‌ ಮಾಡುವ ಸಂಪೂರ್ಣ ಜನರ ‌ಪ್ರತಿನಿಧಿಗಳಾಗಲು ಸಾಧ್ಯವಿಲ್ಲ. ಯಾವ ರೀತಿ ನೂಪುರ್ ಶರ್ಮ ಅಥವಾ ಅವರ ಹೇಳಿಕೆಯನ್ನು ಬೆಂಬಲಿಸಿ ಹತ್ಯೆಗೀಡಾದ ವ್ಯಕ್ತಿ ಹಿಂದು ಧರ್ಮದ ಎಲ್ಲರನ್ನು‌ ಪ್ರತಿನಿಧಿಸುವುದಿಲ್ಲವೋ ಅದೇ‌ ರೀತಿ ಕೊಲೆಗಾರರು ಮುಸ್ಲಿಮ್ ಧರ್ಮದ ಎಲ್ಲರನ್ನೂ ಪ್ರತಿನಿಧಿಸುವುದಿಲ್ಲ ಎಂಬ ಸೂಕ್ಷ್ಮ ಸತ್ಯವನ್ನು ಪರಿಣಾಮಕಾರಿಯಾಗಿ ಜನರಿಗೆ ತಿಳಿಸುವುದೇ ಈಗ ಪ್ರಬುದ್ಧ ‌ನಡೆ. ಇಲ್ಲವಾದರೆ ಇದು ಯಥಾ ಪ್ರಕಾರ ಹಿಂದುಗಳ ಹಾಗೂ ಮುಸಲ್ಮಾನರ ನಡುವಿನ ಘರ್ಷಣೆ ಎಂದು‌‌ ಬಿಂಬಿತವಾಗುತ್ತದೆ ಭಾರತ‌ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರು‌ ಕೂಡ ದೇಶದಲ್ಲಿ ಪರಸ್ಪರ ದ್ವೇಷ ಹರಡದ ಹಾಗೆ ನೋಡಿಕೊಳ್ಳಬೇಕು.

Image
Udayapur

ಧಾರ್ಮಿಕ ‌ಅಲ್ಪಸಂಖ್ಯಾತರ ಮೇಲೆ ಇಂತಹ ಸಂದರ್ಭಗಳಲ್ಲಿ ‌ವಿನಾಕಾರಣ ಅಪವಾದ, ಆಪಾದನೆ ಮಾಡಿ ಅವರನ್ನು ಇನ್ನಷ್ಟು‌ ಮಾನಸಿಕವಾಗಿ ಕುಗ್ಗಿಸುತ್ತಾ ಅವರ ವಿರುದ್ಧ ಇನ್ನಷ್ಟು ‌ಜನರು ದ್ವೇಷ ಮಾಡದಂತೆ ನೋಡಿಕೊಳ್ಳಬೇಕು.

ಈ‌ ಹತ್ಯೆಯಲ್ಲಿ ಭಾಗಿ‌ ಆದ‌ವರ ಹಿಂದಿನ‌ ಶಕ್ತಿಗಳನ್ನೂ‌ ಗುರುತಿಸಬೇಕು. ಆಳುವ ಪಕ್ಷವಾದ ‌ಬಿಜೆಪಿಯರು ಈ ಕೊಲೆಯನ್ನು ಎಷ್ಟು ‌ಉಗ್ರವಾಗಿ‌ ಖಂಡಿಸಿದ್ದಾರೋ, ಕಾಂಗ್ರೆಸ್ ‌ಪಕ್ಷದವರು‌ ಹಾಗೂ ಇತರ ಪ್ರಗತಿಪರ ಚಿಂತಕರೂ‌ ಅಷ್ಟೇ ಉಗ್ರವಾಗಿ ಇದನ್ನು‌ ಖಂಡಿಸಿದ್ದಾರೆ. ಬಿಜೆಪಿಯವರು ಅನ್ಯ ಧರ್ಮದವರ ಕೊಲೆ ಆದಾಗ, ಹಾಗೂ ಕೆಲವು ಕೊಲೆಗಳಲ್ಲಿ ತಮ್ಮ ಪಕ್ಷದವರೇ ಆರೋಪಿ ಆಗಿದ್ದಾಗ ಕನಿಷ್ಠ ‌ಖಂಡನೆ ಕೂಡ ಮಾಡದೇ ಇದ್ದದ್ದನ್ನೂ, ಅವರ ಈ ದ್ವಿಮುಖ‌ ನೀತಿಗಳನ್ನೂ ಈ ಸಂದರ್ಭದಲ್ಲಿ ದೇಶಪ್ರೇಮಿಗಳು ದೇಶದ ಜನರಿಗೆ ತಿಳಿಸುವ ಕೆಲಸ ಮಾಡಬೇಕು.

ಒಟ್ಟಾರೆ ಆಗಿ ಯಾವುದೇ ಕಾರಣಕ್ಕೂ ಮಾನವ ಹತ್ಯೆ ಸಮರ್ಥನೀಯವಲ್ಲ. ಹತ್ಯೆ ಹಾಗೂ‌ ಸಾವುಗಳ ಮೇಲೆ ರಾಜಕೀಯ ಮಾಡುವವರ ಬಗ್ಗೆ ದೇಶದ ಜನ ಜಾಗೃತರಾದಾಗ ಮಾತ್ರ ಹತ್ಯೆಗಳ ಸಂಖ್ಯೆ ಕಡಿಮೆಯಾಗಬಹುದು.

ನಿಮಗೆ ಏನು ಅನ್ನಿಸ್ತು?
2 ವೋಟ್