
ರಾಜಾರಾಂ ತಲ್ಲೂರು ಬರಹ | ಈಗಲೂ ಮಾತಾಡದಿದ್ದರೆ, ನಿಮ್ಮ ಗೂಗಲ್ ಪೇ, ಫೋನ್ ಪೇ, ಪೇಟಿಯೆಂ ಇತ್ಯಾದಿಗಳ ಪ್ರತೀ ಪಾವತಿಗೂ 'ವೆಚ್ಚ' ತೆರಬೇಕಾಗಲಿದೆ. ನೀವು ಪಾವತಿಸುವ ಹದಿನೈದು-ಇಪ್ಪತ್ತು ರೂಪಾಯಿಗೂ ವೆಚ್ಚ ವಿಧಿಸಬಹುದು. ಈ ಬಗ್ಗೆ ರಿಸರ್ವ್ ಬ್ಯಾಂಕಿಗೆ ಜನ ಅಕ್ಟೋಬರ್ ಮೂರರೊಳಗೆ ಅಭಿಪ್ರಾಯ ಹೇಳಬೇಕಂತೆ. ಈಗಲಾದರೂ ಮಾತನಾಡಿ
ಭಾರತೀಯ ರಿಸರ್ವ್ ಬ್ಯಾಂಕ್ ಈಗ ಯುಪಿಐ (Unified Payments Interface - UPI) ಸಹಿತ ಎಲ್ಲ ಡಿಜಿಟಲ್ ಪಾವತಿಗಳಿಗೆ 'ವೆಚ್ಚ ವಿಧಿಸುವ' ಮಾತಾಡುತ್ತಿದೆ. ಪಕ್ಕಾ ದಂಧೆಗೆ ಕುಳಿತವರು ಆಡಳಿತಕ್ಕೆ ಬಂದರೆ ಏನಾಗಬೇಕೋ ಅದು ಆಗತೊಡಗಿದೆ. ಜನ ಮಾತನಾಡದಿದ್ದರೆ, ನಾಳೆ ಶುದ್ಧ ಗಾಳಿ ಕೊಟ್ಟದ್ದಕ್ಕಾಗಿ ಪ್ರತೀ ಉಸಿರಿಗೆ ತೆರಿಗೆ ಹಾಕಲಿದ್ದಾರೆ ಇವರು.
ದೇಶದಲ್ಲಿ ಬ್ಯಾಂಕುಗಳ ಖಾಸಗೀಕರಣ ಆರಂಭ ಆದಲ್ಲಿಂದ ಇಲ್ಲಿಯತನಕ ಯಾವ-ಯಾವ ಲಾಜಿಕ್ ಬಳಸಿ ಜನರನ್ನು 'ಮಂಗ' ಮಾಡಲಾಯಿತು ಎಂಬುದನ್ನು ಗಮನಿಸುತ್ತ ಬನ್ನಿ. (ಗಮನಿಸಿ: ಬ್ಯಾಂಕು ಖಾಸಗೀಕರಣ ಪ್ರಕ್ರಿಯೆ ಆರಂಭಗೊಂಡದ್ದು ಮನಮೋಹನ್ ಸಿಂಗ್ ಕಾಲದಲ್ಲಿ. ಹಾಗಾಗಿ ಇದು 'ಕೇವಲ ಈಗಿನವರಿಗೆ ಬೈಯುವ ಪೋಸ್ಟ್' ಅಲ್ಲ!)
ಮೊದಲಿಗೆ ಬ್ಯಾಂಕುಗಳಲ್ಲಿ ಸಿಬ್ಬಂದಿ ಜಾಸ್ತಿ, ಕೆಲಸ ಕಡಿಮೆ ಆಗ್ತಿದೆ, ಲಾಭ ಇಲ್ಲ, ಸ್ಟ್ರೈಕ್ ಮಾಡ್ತಾರೆ ಅಂತ ಹೇಳಿ ಕೆಲಸದ ಎಫೀಷಿಯನ್ಸಿ ಹೆಸರಲ್ಲಿ ಕಂಪ್ಯೂಟರೀಕರಣ ಬಂತು. ಸಿಬ್ಬಂದಿ ಕಡಿಮೆ ಆಯಿತು.
ಆ ಬಳಿಕ ಖಾಸಗಿ ಬ್ಯಾಂಕುಗಳಿಗೆ ಅವಕಾಶ ಮಾಡಿಕೊಡಲಾಯಿತು. ಅಲ್ಲಿ 'ಲಾಭ ಗಳಿಕೆ'ಯ ಹೆಸರಲ್ಲಿ, ಜನಸಾಮಾನ್ಯರನ್ನು ಬ್ಯಾಂಕುಗಳಿಂದ ದೂರ ಅಟ್ಟಲಾಯಿತು.
ಬ್ಯಾಂಕುಗಳನ್ನು ದೊಡ್ಡದಾಗಿಸಲು, ಎಫೀಷಿಯಂಟ್ ಮಾಡಲು ಒಂದರೊಳಗಿನ್ನೊಂದು ವಿಲೀನಗೊಳಿಸಲಾಯಿತು.
ಬ್ಯಾಂಕುಗಳಲ್ಲಿ ಕ್ಷಿಪ್ರ ವ್ಯವಹಾರ, ಸಿಬ್ಬಂದಿ ಕಡಿಮೆ ಮಾಡಿ ಇನ್ನಷ್ಟು ಲಾಭ ಎಂದು ಹೇಳಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಆಯಿತು.
ಜನ ಬ್ಯಾಂಕಿಗೆ ಬಂದರೆ ಖರ್ಚು ಜಾಸ್ತಿ ಎಂದು ಹೇಳಿ ATM, ಡಿಜಿಟಲ್ ಪಾವತಿ (RTGS, IMPS ಇತ್ಯಾದಿ) ಬಂದವು. ಮನೆ ಬಾಗಿಲಿಗೇ ಬ್ಯಾಂಕ್ ಬಂದಿದೆ ಎಂದು ಬೂಸಿ ಬಿಡಲಾಯಿತು.
ಡಿಜಿಟಲ್ ಇಂಡಿಯಾದಲ್ಲಿ UPI ಆಯಿತು; ಜನ ನಗದು ಚಲಾವಣೆ ಮಾಡಲಿಕ್ಕಿಲ್ಲ, ನೋಟು ಪ್ರಿಂಟ್ ಮಾಡಿದರೆ ಖರ್ಚು ಜಾಸ್ತಿ, ಕಾಳಧನ ಹೆಚ್ಚಾಗ್ತದೆ ಎಂದೆಲ್ಲ ಹೇಳಿ ಮೊಬೈಲ್ ಬ್ಯಾಂಕಿಂಗ್ ಚಾಲ್ತಿಗೆ ಬಂತು.
ಈ ಲೇಖನ ಓದಿದ್ದೀರಾ?: ಅರ್ಥ ಪಥ | ಭಾರತದ ಆರ್ಥಿಕ ಬೆಳವಣಿಗೆಯ ದಾರಿ ಕುರಿತು ರಘುರಾಂ ರಾಜನ್ ಹೇಳುವುದೇನು?
ಈಗ ಎಲ್ಲ ಮುಗಿದ ಮೇಲೆ ಯುಪಿಐ ಪಾವತಿಗೂ 'ವೆಚ್ಚ' ವಿಧಿಸುವ ಮಾತು ಆಡಲಾಗುತ್ತಿದೆ. ಅಂದರೆ, ಶೀಘ್ರವೇ ನೀವು ಪಾವತಿಸುವ ಗೂಗಲ್ ಪೇ, ಫೋನ್ ಪೇ, ಪೇಟಿಯೆಂ ಇತ್ಯಾದಿಗಳಿಗೂ ಪ್ರತೀ ಪಾವತಿಗೆ 'ವೆಚ್ಚ' ತೆರಬೇಕಾಗಲಿದೆ. ಮೊದಲಿಗೆ ದೊಡ್ಡ ಮೊತ್ತಕ್ಕೆ ಮಾತ್ರ ವೆಚ್ಚ ಎಂದು ಹೇಳಿ, ಮುಂದೆ ಮೂರು ಬಜೆಟ್ ಮುಗಿಯುವಾಗ, ಅಂಗಡಿಯಲ್ಲಿ ನೀವು ಪಾವತಿ ಮಾಡುವ ಹದಿನೈದು-ಇಪ್ಪತ್ತು ರೂಪಾಯಿಗೂ ವೆಚ್ಚ ಬರಬಹುದು!
ಸ್ವಾಮೀ... ದೇಶ ನಡೆಸುವ ತಜ್ಞರೇ, ಒಂದು ಮಾತು ಹೇಳಿ ಮುಂದುವರಿಯಿರಿ: ಸಾಂಪ್ರದಾಯಿಕ ಬ್ಯಾಂಕಿಂಗಿನಿಂದ ಬರುವ ಆದಾಯ ಬರುತ್ತಿದ್ದರೂ (ಅಂದರೆ, ಸಾಲದ ಬಡ್ಡಿ, ಠೇವಣಿಯ ಮರುಹೂಡಿಕೆ, ಬ್ಯಾಂಕಿಂಗ್ ಸೇವೆಗಳಿಗೆ ವಿಧಿಸುವ ವೆಚ್ಚ), ಇಲ್ಲಿಯತನಕ ಇಷ್ಟೆಲ್ಲ ವೆಚ್ಚ ಕಡಿತ ಪ್ರಯತ್ನ ಮಾಡಿ ಕೂಡ ನಿಮ್ಮ ಹೊಟ್ಟೆ ತುಂಬಿಲ್ಲ ಯಾಕೆ? ಈಗ ಜನ ತಮ್ಮ ಕಿಸೆಯಲ್ಲಿಟ್ಟುಯ್ಕೊಂಡು ತಿರುಗುವ ದುಡ್ಡನ್ನೂ ಡಿಜಿಟಲ್ ಮಾಡಿ, ಅದರಲ್ಲೂ ಪಾಲಿಗೆ ಬರುತ್ತಿದ್ದೀರಲ್ಲ, ಉದ್ದೇಶ ಏನು?
ಜನ ಈ ಪ್ರಶ್ನೆಗಳನ್ನು ಕೇಳದಿದ್ದರೆ ಮುಂದಿನ ದಿನಗಳು ಬಹಳ ಕಷ್ಟ ಇವೆ.
ಸದ್ಯಕ್ಕೆ ಯುಪಿಐ ಪಾವತಿಗಳ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯದಿಂದ ಹೇಳಿಕೆ ಹೊರಬಿದ್ದಿದೆ. ಆದರೆ, ರಿಸರ್ವ್ ಬ್ಯಾಂಕ್ ಈ ವಿಷಯದಲ್ಲಿ ಮುಂದುವರಿಯುವ ಸಾಧ್ಯತೆ ಹೆಚ್ಚು.
ಈಗ, ರಿಸರ್ವ್ ಬ್ಯಾಂಕಿಗೆ ಜನ ಅಕ್ಟೋಬರ್ ಮೂರರ ಒಳಗೆ ತಮ್ಮ ಅಭಿಪ್ರಾಯ ಹೇಳಬೇಕಂತೆ. ಬಾಯಿಬಿಟ್ಟು ಮಾತನಾಡಿ. ಅದಕ್ಕಾಗಿ ಅಭಿಯಾನವನ್ನೇ ನಡೆಸಿ. ಇಲ್ಲದಿದ್ದರೆ, ಬಾಯಿ ಮುಚ್ಚಿಕೊಂಡು ಕಿಸೆಗೆ ಕತ್ತರಿ ಹಾಕಿಸಿಕೊಂಡು ತೆಪ್ಪಗಿರಿ. ಆಯ್ಕೆ ನಿಮ್ಮದು.
ರಿಸರ್ವ್ ಬ್ಯಾಂಕ್ ನೀಡಿರುವ ವಿವರಣೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.