ಮಾನವ ಹಕ್ಕುಗಳ ಹೋರಾಟದಲ್ಲಿ ತೀಸ್ತಾ ಸೆಟಲ್ವಾಡ್ ಎಂಬ ಜಾಗೃತ ನದಿ

ನ್ಯಾಯಾಲಯದ ಈ ನಡೆ ದ್ವೇಷ ರಾಜಕಾರಣದ ವಿರುದ್ಧ ಹೋರಾಟದಲ್ಲಿ ದಶಕಗಳಿಂದ ಸಕ್ರಿಯರಾದ ತೀಸ್ತಾ ಸೆತಲ್ವಾಡ್‌ ಅವರ 'ರಕ್ಷಕರೇ ವಿಶ್ವಾಸಘಾತುಕರಾದಾಗ 'ಎಂಬ ಅವರದೇ ಲೇಖನದ ಸಾಲುಗಳನ್ನೂ ಮತ್ತೆ ನೆನಪಿಗೆ ತರುತ್ತಿವೆ.
Teesta Setalvad

ಹೆಚ್ಚಿನ ದೇಶಗಳಲ್ಲಿ ಸರ್ಕಾರಗಳು ತಮ್ಮ ಅಮಾನವೀಯ ನಡೆಗಳನ್ನು ಪ್ರಶ್ನಿಸುವ ಲೇಖಕರು, ಪರಿಸರವಾದಿಗಳು, ಮಾನವ ಹಕ್ಕು ಹೋರಾಟಗಾರರನ್ನು ಸುಸ್ತು ಹೊಡೆಸುವಂತೆ ಕಾಡುವುದು ಈಗೀಗ ಸಹಜ ಎನ್ನುವಂತಾಗಿದೆ. ಆದರೆ ಸರ್ಕಾರಗಳ ಜೊತೆ ನ್ಯಾಯಾಲಯಗಳೂ ಸಂವೇದನೆ ಕಳೆದುಕೊಂಡಂತೆ ವರ್ತಿಸುತ್ತಿರುವುದು ಇನ್ನೂ ನಿರಾಶಾದಾಯಕ ಬೆಳವಣಿಗೆ.

ಕಳೆದ ಒಂದು ವಾರದಲ್ಲಿ ಅಮೆರಿಕದ ಸುಪ್ರೀಂ ಕೋರ್ಟು ತನ್ನ ದೇಶದ ಹೆಣ್ಣು ಮಕ್ಕಳಿಗೆ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತದ ಹಕ್ಕುಗಳನ್ನು ನಿರಾಕರಿಸಿದರೆ, ಝಾಕಿಯ ಜಾಫ್ರಿ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಭಾರತದ ನ್ಯಾಯಾಲಯದ ತೀರ್ಪು, ನ್ಯಾಯಾಧೀಶರ ಮಾತುಗಳು, ಇಡೀ ದೇಶದ ಜನತೆ ಸಂತ್ರಸ್ಥರನ್ನು ಮತ್ತು ಮಾನವ ಹಕ್ಕು ಹೋರಾಟಗಾರರನ್ನು ಅನುಮಾನದಿಂದ, ನಿರಾಶೆಯಿಂದ ನೋಡುವಂತೆ ಮಾಡಿತು..

ನ್ಯಾಯಾಲಯದ ಈ ನಡೆ ದ್ವೇಷ ರಾಜಕಾರಣದ ವಿರುದ್ಧ ಹೋರಾಟದಲ್ಲಿ ದಶಕಗಳಿಂದ ಸಕ್ರಿಯರಾದ ತೀಸ್ತಾ ಸೆಟಲ್ವಾಡ್‌ ಅವರ 'ರಕ್ಷಕರೇ ವಿಶ್ವಾಸಘಾತುಕರಾದಾಗ 'ಎಂಬ ಅವರದೇ ಲೇಖನದ ಸಾಲುಗಳನ್ನೂ ಮತ್ತೆ ನೆನಪಿಗೆ ತರುತ್ತಿವೆ.

1983ರಲ್ಲಿ ಪತ್ರಕರ್ತೆಯಾಗಿ ವೃತ್ತಿ ಆರಂಭಿಸಿದ ತೀಸ್ತಾ 1984ರ ಭಿವಂದಿ ಕೋಮು ದಂಗೆಯನ್ನು ತನ್ನ ಪತ್ರಿಕೆಗಾಗಿ ವರದಿ ಮಾಡುವಾಗ, ಈ ಹಿಂದೆ 1970ರಲ್ಲಿ ಭಿವಾಂಡಿಯಲ್ಲಿ ನಡೆದ ಕೋಮುಗಲಭೆಗಳು ಮತ್ತು ಅದರ ವಿಚಾರಣೆಗಾಗಿ ನಿಯಮಿಸಿದ ಸಮಿತಿಯ ಸಲಹೆಗಳು ಆಚರಣೆಗೆ ಬರದೇ ಇದ್ದುದನ್ನು ಗಮನಿಸಿದರು.

1993 ರಲ್ಲಿ ಬಾಬ್ರಿ ಮಸೀದಿಯ ನಾಶದ ಪರಿಣಾಮವಾಗಿ ನಡೆದ ಮುಂಬಯಿ ಕೋಮುಗಲಭೆಯ ತನಿಖೆ- ವಿಚಾರಣೆಗಾಗಿ ಜಸ್ಟೀಸ್ ಶ್ರೀಕೃಷ್ಣ ಸಮಿತಿಯನ್ನು ನೇಮಿಸಲಾಯಿತು. ಸಮಿತಿಯ ಮುಂದೆ ಪತ್ರಕರ್ತೆಯಾಗಿ ಹೇಳಿಕೆ ದಾಖಲಿಸಲು ಹಾಜರಾದ ತೀಸ್ತಾ 1970 ರ ಕೋಮು ಗಲಭೆಯ ಬಗ್ಗೆ ತನಿಖೆ ನಡೆಸಿದ ಸಮಿತಿಯ ಸಲಹೆಗಳನ್ನೂ ಸರ್ಕಾರಗಳು ಆಚರಣೆಗೆ ತರಲೂ ವಿಫಲವಾಗಿದ್ದುದರ ಬಗ್ಗೆ ತಿಳಿಸಿದರು.

ಆದರೆ ಜನಸಂಘದೊಂದಿಗೆ 1970ರ ದಂಗೆಗಳು ಮತ್ತು 1993ರ ದಂಗೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಶಿವ ಸೇನಾ ಮತ್ತು ಅವರದೇ ಮಿತ್ರ ಪಕ್ಷಗಳು ಇಂದಿನವರೆಗೂ ಶ್ರೀಕೃಷ್ಣ ಸಮಿತಿಯ ಸಲಹೆಗಳನ್ನು ಕೂಡ ಪಾಲಿಸದೆ ನುಣುಚಿಕೊಂಡಿವೆ.

Image
Protesting Teesta Setlvad

1993ರ ಕೋಮು ಗಲಭೆಯ ನಂತರ ತೀಸ್ತಾ ಕಮ್ಯುನಲಿಸಂ ಕೊಂಬಾಟ್ (Communalism combat )ಎಂಬ ಪತ್ರಿಕೆ ಆರಂಭಿಸಿದರು. ತನ್ನ ವೃತ್ತಿ ಜೀವನದ ಆರಂಭದಿಂದ ಕೋಮುವಾದ, ಅದನ್ನು ಜಾಗೃತವಾಗಿಡಲು, ರಾಜಕೀಯವಾಗಿ ಬಳಸಿಕೊಳ್ಳಲು ಪಕ್ಷ- ಸಂಘಟನೆಗಳು ಮಾಡುವ ಪ್ರಯತ್ನಗಳನ್ನೂ ಹತ್ತಿರದಿಂದ ಕಂಡ ತೀಸ್ತಾ ಮತ್ತು ಅವರ ಪತಿ ತಮ್ಮ ಪತ್ರಿಕೆಯ ಮೂಲಕ ಜನರಿಗೆ ದ್ವೇಷ ರಾಜಕರಣದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದರು.

ಕೋಮುವಾದದ ವಿರುದ್ಧ ಅವರ ಹೋರಾಟ ಈಗಿನ ಪ್ರಧಾನಿಗಳ ಅಧಿಕಾರಾವಧಿಗಿಂತ ಧೀರ್ಘವಾಗಿದ್ದುದಾದರೂ, ಪ್ರಧಾನಿಗಳ ಆಪ್ತ ಮಾಧ್ಯಮಗಳು ತೀಸ್ತಾರನ್ನು ಕೇವಲ ಪ್ರಧಾನಿಗಳ ಮೇಲೆ ದ್ವೇಷ ಸಾಧಿಸಲು ಪ್ರತಿ ಪಕ್ಷಗಳು ಬಳಸುತ್ತಿರುವ ಆಯುಧದಂತೆ ಬಿಂಬಿಸುತ್ತಿವೆ. 2002 ರ ಗುಜರಾತ್ ಗಲಭೆಯ ಸಂತ್ರಸ್ತರ ಪರವಾಗಿ ತೀಸ್ತಾ ಸೆಟಲ್ವಾಡ್ ನೇರವಾಗಿ ಸಂಘ ಪರಿವಾರದೊಂದಿಗೆ ಸಂಘರ್ಷಕ್ಕೆ ಇಳಿದದ್ದು ಇದಕ್ಕೆ ಕಾರಣವಿರಬಹುದು.

ಯುದ್ಧ, ಕೋಮುಗಲಭೆಗಳೇ ಅಮಾನವೀಯವಾದವು. ಆದರೆ, ಯುದ್ಧ, ಗಲಭೆಗಳ ಸಂದರ್ಭದಲ್ಲಿ ಎದುರಾಳಿಗಳನ್ನು ಮಾನಸಿಕವಾಗಿ ಕುಗ್ಗಿಸಲು ಅವರ ಕುಟುಂಬದ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ, ಕೊಲೆಗಳು ಅತಿ ಭೀಕರವಾದುವು.

ದೇಶ ವಿಭಜನೆಯ ಸಂದರ್ಭದ ಕೋಮುಗಲಭೆಗಳಲ್ಲಿ, ಕೊಲೆಯಷ್ಟೇ ಕ್ರೂರವಾಗಿ, ಸಮಸಂಖ್ಯೆಯಲ್ಲಿ, ಅತ್ಯಾಚಾರಗಳು ನಡೆದವು. ಅದರ ನಂತರ ಬಹುಶಃ ಅತ್ಯಾಚಾರಗಳನ್ನು ಹಿಂಸೆಯ ಅಸ್ತ್ರವಾಗಿ ಯಶಸ್ವಿಯಾಗಿ ಅತಿ ಹೆಚ್ಚು ಸಂಖ್ಯೆಯಲ್ಲಿ ಬಳಸಿದ್ದು 2002ರ ಗುಜರಾತ್ ದಂಗೆಯಲ್ಲಿಯೇ ಇರಬೇಕು ಅಥವಾ ಈ ಮುಂಚಿನ ಗಲಭೆಗಳಲ್ಲಿ ನಡೆದ ಅತ್ಯಾಚಾರಗಳ ಬಗ್ಗೆ ಯಾರೂ ಅಧ್ಯಯನ ಮಾಡದೇ ಇದ್ದುದು ಕೂಡ ಕಾರಣವಿರಬಹುದು..

ಸಾವಿರಾರು ಜನರ ಕೊಲೆ, ಕೋಟ್ಯಾಂತರ ಆಸ್ತಿ ನಷ್ಟ , ಧಾರ್ಮಿಕ ಅಲ್ಪಸಂಖ್ಯಾತರನ್ನು ರಾಜ್ಯದುದ್ದಕ್ಕೂ ಲಕ್ಷಾಂತರ ಜನ  ನಿರಾಶ್ರಿತರನ್ನಾಗಿ ಮಾಡಿದ ಗಲಭೆಯ ನಂತರದ ದಿನಗಳಲ್ಲಿ ಅಂದಿನ ಪ್ರಧಾನಿಗಳು ಮುಖ್ಯಮಂತ್ರಿಗೆ 'ರಾಜಧರ್ಮ ನಿಭಾಯಿಸಲು' ಹೇಳಿ ಸುಮ್ಮನಾದರು. ಕೇಂದ್ರ ಸರ್ಕಾರದಿಂದ ನ್ಯಾಯ ಸಿಗುವ ಭರವಸೆ ಕಳೆದುಕೊಂಡ ಗುಜರಾತಿನ ಹೋರಾಟಗಾರ್ತಿಯರ ಸಂಘಗಳು international initiative for justice in Gujarat (IIJG) ಎಂಬ ಯೋಜನೆ ರೂಪಿಸಿದವು. ರಾಜ್ಯದ ಉದ್ದಕ್ಕೂ ಈ ಸಂಘಟನೆಯ ಮಹಿಳೆಯರು ಸಂಚರಿಸಿ ಕೋಮುಗಲಭೆಯ ಸಂತ್ರಸ್ಥರ, ಅತ್ಯಾಚಾರಕ್ಕೊಳಗಾದ ನೂರಾರು ಮಹಿಳೆಯರ ನೋವಿನ ಕಥೆಗಳನ್ನು ದಾಖಲಿಸಿದವು. ಕೆಲವು ಸಂತ್ರಸ್ಥರು ತಮ್ಮ ಮೇಲೆ ಗಲಭೆಕೋರರು ದಾಳಿ ಮಾಡುವಾಗ ಮೂಕ ಪ್ರೇಕ್ಷಕರಾಗಿ ನಿಂತ ಪೊಲೀಸರ ಬಗ್ಗೆ ಹೇಳಿದರೆ, ಇನ್ನು ಕೆಲವು ಸಂತ್ರಸ್ಥರು ಪೋಲೀಸರು ಕೂಡ ಗಲಭೆಕೋರರೊಂದಿಗೆ ತಮ್ಮ ಮೇಲೆ ದಾಳಿ ಮಾಡಿ ಅತ್ಯಾಚಾರ ಮಾಡಲು ಉತ್ತೇಜಿಸಿದುದನ್ನು ದಾಖಲಿಸಿದರು. ಅತ್ಯಾಚಾರಕ್ಕೊಳಗಾದ ಇನ್ನೂ ಕೆಲ ಮಹಿಳೆಯರು ತಮ್ಮ ಕುಟುಂಬವನ್ನು ಅಘಾತಕ್ಕೆ ತಳ್ಳಿ ಸಾವನ್ನಪ್ಪಿದರು.
ಈ ಮಹಿಳಾ ಸಂಘಟನೆಗಳ ಸಾಮೂಹಿಕ ಪ್ರಯತ್ನ 2002ರ ಗುಜರಾತ್ ದಂಗೆಯಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರಗಳ ಬಗ್ಗೆ ಅಂತರರಾಷ್ಟ್ರೀಯ ಸಂಘಟನೆಗಳ ಗಮನಕ್ಕೆ ತಂದು, ಆ ಮೂಲಕ ಕೇಂದ್ರ ಸರ್ಕಾರದ ಮೇಲೆ ಸಂತ್ರಸ್ತರಿಗೆ ನ್ಯಾಯ ದೊಕಿಸಿಕೊಡುವಂತೆ ಒತ್ತಡ ಹೇರುವುದಾಗಿತ್ತು.

ತೀಸ್ತಾ ಸೆಟಲ್ವಾಡ್ ಕೂಡ ತಮ್ಮ ಪತ್ರಿಕೆಯ ಮೂಲಕ ಹಲವು ಸಂತ್ರಸ್ಥರ ಅನುಭವಗಳನ್ನು, ದಾಖಲಿಸಿದರು. ಸಂತ್ರಸ್ತರಿಗೆ ಕಾನೂನು ಸಲಹೆ, ನ್ಯಾಯಾಲಯದಲ್ಲಿ ಹೋರಾಟ ಮತ್ತು ಆರ್ಥಿಕ ನೆರವು ಒದಗಿಸುವ ಸಲುವಾಗಿ Citizens for Peace and justice ಎಂಬ ಸ್ವಯಂ ಸೇವಾ ಸಂಸ್ಥೆಯನ್ನೂ ಆರಂಭಿಸಿದರು. ದೇಶ ವಿದೇಶಗಳ ಪ್ರಜ್ಞಾವಂತ ನಾಗರಿಕರಿಂದ ವರ್ಷಗಳ ಕಾನೂನು ಹೋರಾಟಕ್ಕೆ ಹಣ ಸಂಗ್ರಹಿಸಿದರು.

ತೀಸ್ತಾ ಸೇರಿದಂತೆ ಹಲವು ಸಂಘಟನೆಗಳ ಹೋರಾಟ ಅಂತರರಾಷ್ಟ್ರೀಯ ಸಂಘಟನೆಗಳ ಗಮನ ಸೆಳೆಯಲು ಯಶಸ್ವಿಯೂ ಆಯಿತು. ಕೆಲವು ದೇಶಗಳು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ ತಮ್ಮ ದೇಶಕ್ಕೆ ಬರದಂತೆ ನಿಷೇಧ ಕೂಡ ವಿಧಿಸಿದವು. ಆದರೆ ಇದೇ ಕೋಮು ಗಲಭೆಗಳು ಧಾರ್ಮಿಕ ಬಹುಸಂಖ್ಯಾತರಲ್ಲಿ ಅವರ ಬಗೆಗೆ ಅಪರಿಮಿತ ಅಂಧಾಭಿಮಾನ ಬೆಳೆಸಿ ರಾಜ್ಯವಲ್ಲದೆ ಮುಂಬರುವ ಚುನಾವಣೆಗಳಲ್ಲಿ ದೇಶದೆಲ್ಲೆಡೆ ಅಧಿಕಾರಕ್ಕೆ ಬರಲು ನಾಂದಿ ಹಾಡಿದವು.

ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಿಜೆಪಿ ಸರ್ಕಾರವು ತನಗೆ ಅಪಾಯಕಾರಿ ಆಗಬಹುದು ಅನ್ನಿಸಿದ ಎಲ್ಲ ಸಂಘ ಸಂಸ್ಥೆಗಳ ಮೇಲೆ ನಿಗಾ ಇಡುವುದು. ಅವರಿಗೆ ಆರ್ಥಿಕ ನೆರವು ಸಿಗದಿರಲೂ ಏನೇನು ಪ್ರಯತ್ನ ಮಾಡಬೇಕು ಅದೆಲ್ಲವನ್ನೂ ನಿರಂತರವಾಗಿ ಮಾಡುತ್ತ ಬಂದಿದೆ.

ಸಾಮಾಜಿಕ ಮಾಧ್ಯಮಗಳನ್ನು ಆವರಿಸಿಕೊಂಡಿರುವ ಸರ್ಕಾರ ಮತ್ತು ಅದರ ಬೆಂಬಲಿಗರು ತನ್ನನ್ನು ಹಣಿಯಲು ವಿದೇಶಿ ಶಕ್ತಿಗಳು ಒಂದಾಗಿ ಕೆಲಸ ಮಾಡುತ್ತಿವೆ ಎಂದು ತನ್ನ ವಿವೇಚನಾರಹಿತ ನಡೆಗಳನ್ನು ವಿರೋಧಿಸುವ ಕುರಿತ ಹೋರಾಟಗಳ ಬಗ್ಗೆ ಒಂದು ದಿನ ಅತ್ತರೆ, ಇನ್ನೊಂದು ದಿನ ತನ್ನ ಪ್ರಧಾನಿಗಳ ಯಶಸ್ವಿ ವಿದೇಶ ಯಾತ್ರೆ, ವಿದೇಶಿ ಪ್ರಮುಖರ/ಉದ್ಯಮಿಗಳ ಅಲಿಂಗನವನ್ನು ಸಂಭ್ರಮಿಸುತ್ತವೆ.

Image
Zakia Jafri- Teesta Setlvad
ಝಾಕಿಯಾ ಜಾಫ್ರಿ ಜೊತೆ ತೀಸ್ತಾ

ಝಾಕಿಯಾ ಜಾಫ್ರಿ ಮತ್ತು ತೀಸ್ತಾ ಸೆಟಲ್ವಾಡರ ಸಿಜೆಪಿ ಸಂಸ್ಥೆ ಸಹ ಅರ್ಜಿದಾರರಾಗಿ ಅಂದಿನ ಗುಜರಾತ್ ಮುಖ್ಯಮಂತ್ರಿ ಮತ್ತು ರಾಜಕಾರಣಿಗಳು ಆರೋಪಿಗಳಾದ ಕೋಮುಗಲಭೆಯ ಸಂಚಿನ ವಿಚಾರಣೆಯಲ್ಲಿ ತೀರ್ಪು ಪ್ರಧಾನಿಗಳ ಪರವಾಗಿಯೇ ಬರುವುದು ಅನಿರೀಕ್ಷಿತವೇನೂ ಇರಲಿಲ್ಲ. ಆದರೆ ತೀರ್ಪು ನೀಡುವಾಗ ನ್ಯಾಯಾಧೀಶರು ಅರ್ಜಿದಾರರು/ಸಂತ್ರಸ್ತರ ಹೋರಾಟವನ್ನು 'ಪರಿಸ್ಥಿತಿಯನ್ನು ನಿರಂತರವಾಗಿ ಉದ್ವಿಗ್ನವಾಗಿಡುವ ಪ್ರಯತ್ನ 'ಎಂದು ಹೇಳಿರುವುದು ನ್ಯಾಯಾಂಗ ಸಂವೇದನಾ ರಹಿತವಾಗುತ್ತಿದೆಯೇ ಎಂದು ಸಂದೇಹ ಮೂಡುವಂತೆ ಮಾಡುತ್ತಿದೆ. ನ್ಯಾಯಾಲಯದ ಈ ಅಭಿಪ್ರಾಯ ದೇಶದ ಅತಿ ಪ್ರಭಾವಿ ವ್ಯಕ್ತಿ ಆರೋಪಿ ಸ್ಥಾನದಲ್ಲಿ ಇರುವ ಇದೊಂದು ಅರ್ಜಿ ವಿಚಾರಣೆಯ ಬಗ್ಗೆಯೇ ಅಥವಾ ನ್ಯಾಯಾಂಗದಲ್ಲಿ ನಂಬಿಕೆ ಇಟ್ಟು ವರ್ಷಗಟ್ಟಲೆ ಕೋರ್ಟುಗಳಿಗೆ ಓಡಾಡುವ ಎಲ್ಲ ಸಂತ್ರಸ್ಥರು, ಅವರಿಗೆ ಬೆಂಬಲವಾಗಿ ನಿಲ್ಲುವ ಎಲ್ಲ ಸಾಮಾಜಿಕ ಕಾರ್ಯಕರ್ತರ ಬಗ್ಗೆಯೇ ಗೊತ್ತಿಲ್ಲ..

ಈ ಲೇಖನ ಓದಿದ್ದೀರಾ? | ಮೈಕ್ರೋಸ್ಕೋಪು | ಬಸಿರಿಳಿಸಿಕೊಳ್ಳುವುದು ಭ್ರೂಣ ಹೊರುವ ಹಕ್ಕಿನ ಕುರುಹೋ, ಕೊಲೆಯೋ?

ಗುಜರಾತ್ ದಂಗೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಕೌಸರ್ ಳ ಕುಟುಂಬ ಸರ್ಕಾರ, ನ್ಯಾಯಾಂಗದ ಮೇಲೆ ಭರವಸೆ ಕಳೆದುಕೊಂಡು ಸಮಾಜದಿಂದ ದೂರವಾಗಿ ಅಘಾತದಲ್ಲೆ ಬದುಕುತ್ತಿದ್ದರೆ, ತೀಸ್ತಾ ಸೆತಲ್ವಾಡ್ ಹೋರಾಟವನ್ನು ಜಾಗೃತವಾಗಿಟ್ಟ ಕಾರಣಕ್ಕಾಗಿಯೇ ಬಿಲ್ಕಿಸ್ ಬಾನು, ತನ್ನ ಮತ್ತು ಕುಟುಂಬದ ಇನ್ನಿತರ ಅತ್ಯಾಚಾರ ಸಂತ್ರಸ್ತ ಮಹಿಳೆಯರ ಪರವಾಗಿ, ಪ್ರಭಾವಶಾಲಿ ಸರ್ಕಾರದ ವಿರುದ್ಧ ಹೋರಾಡಿ ನ್ಯಾಯ ದಕ್ಕಿಸಿಕೊಂಡದ್ದು.

ತಮ್ಮ ಕೋಮುವಾದದ ವಿರುದ್ಧ ಹೋರಾಟಗಳ ಬಗೆಗಿನ ಪುಸ್ತಕದಲ್ಲಿ , ʼಸಂತ್ರಸ್ತರನ್ನು ತಮಗಾದ ಅನ್ಯಾಯ - ಅತ್ಯಾಚಾರಗಳ ಬಗ್ಗೆ ಮರೆಯುವಂತೆ ಒತ್ತಡ ಹೇರುವುದು ಸಮಾಜದ ಮೇಲೆ ಅವರ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ, ಅವರ ಮೇಲಾದ ದೌರ್ಜನ್ಯವನ್ನು ಗುರುತಿಸಿ ಅವರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನಗಳಾದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲಸಬಹುದುʼ ಎಂದು ಹೇಳಿದ್ದಾರೆ.

ಆದರೆ, ಜನರು ಸಾವು ನೋವುಗಳು, ನ್ಯಾಯಕ್ಕಾಗಿ ಹೋರಾಟಗಳ ಬಗ್ಗೆ ಹಿಂದೆಂದಿಗಿಂತ ನಿರ್ಭಾವುಕರಾಗಿರುವ ಸ್ಥಿತಿ ತಲುಪಿರುವುದನ್ನುನ ಸರ್ಕಾರ ಗ್ರಹಿಸಿದೆ. ಬಹುಶಃ ಹಾಗಾಗಿಯೇ ಗಲಭೆಯ ಪ್ರಭಾವಶಾಲಿ ಆರೋಪಿಗಳಿಗೆ ಕೋರ್ಟು ಕ್ಲೀನ್ ಚಿಟ್ ನೀಡಿದ ಕೆಲವೇ ಗಂಟೆಗಳಲ್ಲಿ ತನ್ನ ವಿರುದ್ಧ ಕೇಸ್ ಹಾಕಿದ ತೀಸ್ತಾ ಮತ್ತು ಇತರ ಅರ್ಜಿದಾರರನ್ನು ಬಂಧಿಸುವ ಧಾರ್ಷ್ಟ್ಯ ತೋರಿದೆ.
ನ್ಯಾಯವಾದಿಗಳ ಕುಟುಂಬದಲ್ಲಿ ಹುಟ್ಟಿ ಬೆಳೆದ ತೀಸ್ತಾ ಕಾನೂನುಬದ್ಧ ಹೋರಾಟಗಳು ಮತ್ತು ನ್ಯಾಯಾಂಗದಲ್ಲಿ ಭರವಸೆ ಇರಿಸಿದ್ದು ಸಹಜವೇ. ಆದರೆ ದ್ವೇಷ ರಾಜಕಾರಣ ಅತಿ ಶಕ್ತಿಶಾಲಿಯಾಗಿ ಬೆಳೆದು ನ್ಯಾಯಾಂಗವನ್ನು ಕೂಡ ಭಯಗ್ರಸ್ಥವಾಗಿ, ಬಲಹೀನ ಮಾಡುವ ಎತ್ತರಕ್ಕೆ ತಲುಪು ವುದನ್ನು ಅವರೂ ನಿರೀಕ್ಷಿಸಿರಲಿಲ್ಲವೇನೋ...

ನಿಮಗೆ ಏನು ಅನ್ನಿಸ್ತು?
0 ವೋಟ್