ಬಿಜಿಎಂ ನೆನಪು | ಹೊರಗೆ ಉಕ್ಕಿನ ದಬ್ಬೆ, ಒಳಗೆ ಬಿದಿರು ಬೆತ್ತ

ಬಿಜಿಎಂ ಅವರ ಅನುವಾದಿತ ಕೃತಿಗಳಂತೂ ಕನ್ನಡದ ಜಾಯಮಾನಕ್ಕೆ ಒಗ್ಗಿ, ಬಗ್ಗಿ ಕನ್ನಡದ ಧಾರೆಯೊಳಗೆ ಮಿಳಿತವಾಗಿಬಿಟ್ಟಿದ್ದವು. ಬಿಎಂಶ್ರೀ ಅವರ ಇಂಗ್ಲಿಷ್‌ ಗೀತೆಗಳು, ವಿಸೀ ಅವರ ಮೊಬಿಡಿಕ್‌, ಆಹೋಬಲ ಶಂಕರ ಅವರ ಬೆಂಗಾಲಿ ಕಾದಂಬರಿಗಳು, ಬೇಂದ್ರೆ ಅವರ ವಾಲ್ಡೆನ್‌, ಆನಂತರದ ತೇಜಸ್ವಿ ಅವರ ಹಲವು ಅನುವಾದಗಳಂತೆ ನನ್ನೊಳಗೆ ಇಳಿದಿದ್ದವು

ಬಹುಶಃ ಜನವರಿ 1999 ಅನಿಸುತ್ತದೆ, ನವಕರ್ನಾಟಕ ಪುಸ್ತಕ ಮಳಿಗೆಯ ಒಳಗೆ ಹೋಗುತ್ತಿದ್ದೆ. ಅಷ್ಟರಲ್ಲಿ ಉಕ್ಕಿನ ದಬ್ಬೆಯಂತಹ ವ್ಯಕ್ತಿಯೊಬ್ಬರು ಪುಸ್ತಕಗಳ ಕಟ್ಟೊಂದನ್ನು ಕೈಯಲ್ಲಿ ಹಿಡಿದು ಹೊರಬಂದರು. ಆ ಕಟ್ಟಿನಲ್ಲಿ ಮಣ್ಣಿನ ಬಣ್ಣದ “ಪರಿಸರ ನಿಘಂಟು” ಕೃತಿಯ ಐದು ಕ್ಯಾಲಿಕೋ ಪ್ರತಿಗಳು ಎದ್ದು ಕಾಣುತ್ತಿದ್ದವು. ತೆಳುಗೆಂಪು ಬಣ್ಣದ, ಉದ್ದನೆಯ ಮುಖದ ಆ ವ್ಯಕ್ತಿ ತುಂಬಾ ಸಾವಕಾಶವಾಗಿ ನಡೆದು ರಸ್ತೆದಾಟಿ ಒಂದು ಆಟೋ ಹಿಡಿದು ಹೊರಟು ಹೋದರು.

ನಾನು ಒಳಹೋಗಿ‌, ಅಂಗಡಿಯವರ ಆದೇಶದಂತೆ ತಂದಿದ್ದ ನನ್ನ ಇಂದ್ರಪ್ರಸ್ಥ ಪ್ರಕಾಶನದ ಪುಸ್ತಕಗಳನ್ನು ಕಟ್ಟನ್ನು ಅವರ ಮುಂದಿಟ್ಟೆ. ನನ್ನ ಕಟ್ಟಿನ ಬಗ್ಗೆ ಗಮನವನ್ನೇ ನೀಡದ, ನನಗೆ ತುಂಬಾ ಪರಿಚಯವಿದ್ದ ಅಂಗಡಿಯ ಸಿಬ್ಬಂದಿಯೊಬ್ಬರು “ಅಯ್ಯೋ ಎರಡು ನಿಮಿಷ ಮುಂಚೆ ಬರೋದಲ್ವ ಸಾರ್‌, ಬಿಜಿಎಂ ನಿಮ್ಮನ್ನ ತುಂಬಾ ಕೇಳಿದ್ರು. ಅವರಿಗೆ ನಿಮ್ಮ ಪರಿಚಯ ಇಲ್ವಂತೆ. ನಿಮ್ಮ ನಿಘಂಟಿನ ಬಗ್ಗೆ ತುಂಬಾ ಮಾತನಾಡಿದ್ರು ಸಾರ್. ಐದು ಕಾಪಿ ತಗೊಂಡು ಹೋದ್ರು” ಎಂದು ಹೇಳಿ “ತಗೊಳಿ ಸಾರ್‌ ಅವರ ಫೋನ್‌ ನಂಬರ್‌, ಫೊನ್‌ ಮಾಡಬೇಕಂತೆ” ಎಂದು ಹೇಳಿದರು. ನಾನು ಕೇಳಿದೆ ಯಾರದು ಬಿಜಿಎಂ? ಎಂದು. “ಅವರು ಬಿ. ಗಂಗಾಧರ ಮೂರ್ತಿ ಅಲ್ಲವೇ, ಪ್ರೊ. ಬಿ ಗಂಗಾಧರಮೂರ್ತಿ ಸರ್” ಎಂದರು. ತಕ್ಷಣ ನನಗೆ ನೆನಪಾಗಿದ್ದು ಅವರ “ನಾಗಸಂದ್ರ ಭೂ ಆಕ್ರಮಣ ಚಳವಳಿ”. ಆದರೆ ಅವರನ್ನು ನಾನು ನೋಡಿರಲಿಲ್ಲ. ಅದು ಲ್ಯಾಂಡ್‌ ಲೈನ್‌ ನಂಬರ್‌ ಆಗಿದ್ದರಿಂದ, ಅದರ ಹಿಂದೆ ಗೌರಿಬಿದನೂರಿನ ಎಸ್‌ಟಿಡಿ ಕೋಡ್‌ ಇದ್ದಿದ್ದರಿಂದ, ಅವರು ಈಗತಾನೆ ಇಲ್ಲಿಂದ ಹೋಗಿರುವುದರಿಂದ, ಅವರು ಅಲ್ಲಿ ಫೋನ್‌ ತಗೆಯಲು ಸಾಧ್ಯವಿಲ್ಲ ಎಂದು ಅರಿವಾಗಿ, ರಾತ್ರಿಗೆ ಮಾಡುವುದೆಂದು ಸುಮ್ಮವಾದೆ. ಮರೆತೆ, ಮತ್ತೆಂದೋ ನೆನಪಾದಾಗ ಹುಡುಕಿದೆ, ಅವರ ನಂಬರ್‌ ಚೀಟಿ ಸಿಕ್ಕಿಲಿಲ್ಲ. ನಾನು ಅವರೊಂದಿಗೆ ಮಾತಾಡಲಿಲ್ಲ.

ಬಹುಶಃ 2015, ಆ ಹೊತ್ತಿಗೆ ಅವರ ಇನ್ನೂ ಅನೇಕ ಕೃತಿಗಳು ಬಂದಿದ್ದವು. ಇವರ ಬಗ್ಗೆ ಹಲವಾರು ಬಾರಿ ಕೇಳಿದ್ದೆ. ಬಂದಿದ್ದ ಅವರ ಪುಸ್ತಕಗಳನ್ನೆಲ್ಲಾ ಬಹುಪಾಲು ಓದಿದ್ದೆ. ಖಚಿತವಾದ, ನಿಷ್ಠುರವಾದ ಆದರೆ ಅತ್ಯಂತ ಆಪ್ತವಾದ ಅವರ ಬರವಣಿಗೆಯ ಶೈಲಿ ನನ್ನನ್ನು ಆಕರ್ಷಿಸಿತ್ತು. ಅವರ ಅನುವಾದಿತ ಕೃತಿಗಳಂತೂ ಕನ್ನಡದ ಜಾಯಮಾನಕ್ಕೆ ಒಗ್ಗಿ, ಬಗ್ಗಿ ಕನ್ನಡದ ಧಾರೆಯೊಳಗೆ ಮಿಳಿತವಾಗಿಬಿಟ್ಟಿದ್ದವು. ರ್ಯಾಂಡಮ್‌ ಆಗಿ ಹೇಳುವುದಾದರೆ ಬಿಎಂಶ್ರೀ ಅವರ ಇಂಗ್ಲಿಷ್‌ ಗೀತೆಗಳು, ವಿಸೀ ಅವರ ಮೊಬಿಡಿಕ್‌, ಆಹೋಬಲ ಶಂಕರ ಅವರ ಬೆಂಗಾಲಿ ಕಾದಂಬರಿಗಳು, ಬೇಂದ್ರೆ ಅವರ ವಾಲ್ಡೆನ್‌, ಆನಂತರದ ತೇಜಸ್ವಿ ಅವರ ಹಲವು ಅನುವಾದಗಳು ಕಾಡಿದಂತೆ, ಓದುಗನನ್ನು ಅಪ್ಪಿಕೊಳ್ಳುವಂತೆ ಬಿಜಿಎಂ ಅವರ ಅನುವಾದಗಳು ನನ್ನೊಳಗೆ ನಿಂತಿದ್ದವು.

Image
BGM book on HN

ಈ ನಡುವೆ ನನ್ನವೂ ಕೆಲವು ಪುಸ್ತಕಗಳು ಬಂದಿದ್ದವು. ಅದರಲ್ಲಿ “ಭೂಮಿಗೀತೆ”ಯೂ ಒಂದು. ಭಾರತ ಜ್ಞಾನ ವಿಜ್ಞಾನ ಸಮಿತಿ ನನ್ನ ಕೆಲವು ಪುಸ್ತಕಗಳನ್ನು ಕೇಳಿತ್ತು. ಕೊಡಲು ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿದ್ದ ಕಚೇರಿಗೆ ಹೋಗಿದ್ದೆ. ಈ ಬಸವರಾಜು ತರಹೇಳಿದ್ದರು ಅನಿಸುತ್ತದೆ. ಅವರಿಗೆ ಪುಸ್ತಕಗಳನ್ನು ಕೊಟ್ಟು ಹಣ ಪಡೆಯುವ ಪ್ರಯತ್ನದಲ್ಲಿ ಒಂದು ಕೊಠಡಿಯೊಳಕ್ಕೆ ಹೋದೆ. ಅಲ್ಲೊಂದು ಎತ್ತರದ ನಿಲುವಿನ ವ್ಯಕ್ತಿ ಏನನ್ನೋ ನೋಡುತ್ತ ನನಗೆ ಬೆನ್ನು ಮಾಡಿ ನಿಂತಿತ್ತು. ಅವರ ಎದುರಿಗೆ ಕುಳಿತಿದ್ದ ವ್ಯಕ್ತಿ ನನ್ನ ಹೆಸರು ಹಿಡಿದು, ಕುಳಿತುಕೊಳ್ಳಲು ಹೇಳಿತು. ಇನ್ನೇನು ಕುಳಿತುಕೊಳ್ಳಬೇಕು ಅನ್ನುವಷ್ಟರಲ್ಲಿ ಸರಕ್ಕನೆ ನನ್ನತ್ತ ತಿರುಗಿದ ಆ ಎತ್ತರ ನಿಲುವಿನ ವ್ಯಕ್ತಿ “ಆರ್‌ ಯು …….” ಎಂದಿತು. ನಾನು ಹೌದೆನ್ನುವ ಹೊತ್ತಿಗೆ ಅಂದು ನವಕರ್ನಾಟಕದ ಬಳಿ ಕಂಡಿದ್ದ ಚಹರೆ ತಟ್ಟನೆ ನೆನಪಾಗಿ “ಬಿಜಿಎಂ ಸರ್” ಎಂದೆ. ಉತ್ತರವನ್ನೇನೂ ಕೊಡದೆ ಅಂದು ಅವರು ನನ್ನನ್ನು ಆಲಿಂಗಿಸಿಕೊಂಡ ಆ ಬೆಚ್ಚನೆಯ ಭಾವ, ಆ ಆತ್ಮೀಯ ಅಪ್ಪುಗೆಯ ನೆನಪು ಇಂದಿಗೂ ಅವರ ಕೃತಿಗಳಷ್ಟೇ ಪ್ರಖರವಾಗಿ ನನ್ನೊಳಗೆ ಸ್ಥಾಯಿಯಾಗಿ ಕುಳಿತಿದೆ.

ನಂತರ “ಯುವರ್‌ ರೈಟಿಂಗ್ಸ್‌ ಆರ್‌ ವೆರಿ ಫ್ಯಾಸಿನೇಟಿಂಗ್” ಅಂದರು. ನಂತರ ಏನೋ ನೆನಪಿಸಿಕೊಂಡವರಂತೆ “ಮೊದಲಿಗೆ ನಾನು ನಿಮ್ಮ ಕ್ಷಮೆ ಕೇಳಬೇಕಿದೆ” ಅಂದರು. ಏಕೆ ಸಾರ್? ನಿಮ್ಮ ಭೂಮಿಗೀತೆಯ ಕೆಲವು ಲೇಖನಗಳನ್ನು ನಮ್ಮ “ಟೀಚರ್” ಪತ್ರಿಕೆಯಲ್ಲಿ ಬಳಸಿಕೊಂಡಿದ್ದೇನೆ. ನಿಮ್ಮ ಅನುಮತಿ ಪಡೆದಿಲ್ಲ ಎಂದರು. “ನನಗೆ ಗೊತ್ತು ನೋಡಿದ್ದೇನೆ, ನಮ್ಮವರಿಗೆ ಅನುಮತಿಯ ಅಗತ್ಯವಿಲ್ಲ” ಅಂದೆ. ಬೆನ್ನು ತಟ್ಟಿ ಹೆಗಲ ಮೇಲೆ ಕೈ ಹಾಕಿದರು. ಅಷ್ಟು ದೊಡ್ಡ ಬರಹಗಾರ, ಅಂಥ ಪ್ರಬುದ್ಧ ಅನುವಾದಕನ ಆ ವಿನಯಪೂರ್ವಕ ನಡತೆ ನನ್ನಲ್ಲಿ ವಿಸ್ಮಯ ಮತ್ತು ರೋಮಾಂಚನ ಹುಟ್ಟಿಸಿತ್ತು.

ನನ್ನ ಬೈಕಿನಲ್ಲಿ ಜೊತೆಯಾಗಿ ಹೊರಟ ನಾವು ಮಲ್ಲೇಶ್ವರಕ್ಕೆ ಬಂದಾಗ ಅಲ್ಲೊಂದು ಹೊಟೇಲಿನ ಬಳಿ ಗಾಡಿ ನಿಲ್ಲಿಸಲು ಹೇಳಿದರು. ನಿಲ್ಲಿಸಿದೆ. ಹೊಟೇಲೊಳಗೆ ಕೂತಾಗ ನನ್ನ ಪ್ರಕಟಣೆಗಳ ಬಗ್ಗೆ ಮಾತನಾಡುತ್ತಾ…., ಮಾತು ಹೇಗೋ ಕೋಟಿಗಾನಹಳ್ಳಿ ರಾಮಯ್ಯ, ಲಕ್ಷ್ಮೀಪತಿ ಕೋಲಾರ, ಕಿರಂ ನಾಗರಾಜ, ತೇಜಸ್ವಿ, ಲಂಕೇಶ್ ಸೇರಿದಂತೆ ಹಲವು ಹಿರಿಯರ ಕಡೆಗೆ ಹೊರಳಿತು. ಇಂದಿನ ಸಾಂಸ್ಕೃತಿಕ ಸಂದರ್ಭದಲ್ಲಿ ಇವರೆಲ್ಲಾ ಏಕೆ ಮುಖ್ಯರಾಗುತ್ತಾರೆ ಎಂದು ಹೇಳುತ್ತಾ ಅವರು ಅಂದು ಮಂಡಿಸಿದ್ದ ವಿಚಾರಧಾರೆ ನನ್ನನ್ನು ಮೂಕ ವಿಸ್ಮಿತನನ್ನಾಗಿ ಮಾಡಿತ್ತು. ಅವರ ವೈಚಾರಿಕ ಸ್ಪಷ್ಟತೆ, ತಳ ಸಮುದಾಯಗಳ ನೆಲೆ, ಸಮಾನತೆಯ ಪರಿಕಲ್ಪನೆಗಳು, ರೈತರು; ದಲಿತರು, ಅಲ್ಪಸಂಖ್ಯಾತರು ಏಕೆ ನಮಗೆ ಮುಖ್ಯವಾಗಬೇಕಾಗಿದೆ ಎಂದೆಲ್ಲಾ ಅವರು ನಿಧಾನವಾಗಿ ಮಾತನಾಡುತ್ತಾ ಹೋದಂತೆ “ಇದು ಹೊರ ನೋಟಕ್ಕೆ ಮಾತ್ರ ಉಕ್ಕಿನ ದಬ್ಬೆ, ಒಳಗೆ ಬಿದಿರು ಬೆತ್ತ” ಅನಿಸತೊಡಗಿತು.

Image
ವೀರಸೌಧದ ಮುಂದೆ ಜಿ ರಾಮಕೃಷ್ಣ ಅವರ ಜೊತೆ ಬಿಜಿಎಂ
ವೀರಸೌಧದ ಮುಂದೆ ಜಿ ರಾಮಕೃಷ್ಣ ಅವರ ಜೊತೆ ಬಿಜಿಎಂ

ಎಚ್ಚರಿಸುವ ಇಬ್ಬನಿಯ ಹನಿ

ನನ್ನ ಭೂಮಿಗೀತೆಯ ಕೆಲವು ಲೇಖನಗಳ ಬಗ್ಗೆ ಅವರು ಮಾಡಿದ ವಿಮರ್ಶಾತ್ಮಕ ಟಿಪ್ಪಣಿ ನನ್ನ ಮುಂದಿನ ಬರವಣಿಗೆಗಳ ಮೇಲೆ ಪ್ರಭಾವ ಬೀರಿದ್ದು ಸುಳ್ಳಲ್ಲ. ಮುಂದೆ ಏನನ್ನಾದರೂ ಬರೆಯುವಾಗ, ಮಾತನಾಡುವಾಗ ಅವರ ಮಾತುಗಳು ನನ್ನೊಳಗನ್ನು ಎಚ್ಚರಿಸುವ ಇಬ್ಬನಿಯ ಹನಿಗಳಾಗಿವೆ. ಆ ನಂತರದ ಅವರ ನನ್ನ ಸಂಬಂಧ ಬಹುತೇಕ ತಂದೆ ಮಗನ ಸಂಬಂಧದಂತೆಯೇ ಇತ್ತು. ಒಬ್ಬ ಪ್ರಬುದ್ಧ ತಂದೆ ಸ್ವತಂತ್ರವಾಗಿ ಯೋಚಿಸಿಬಲ್ಲ ಮಗನೊಂದಿಗೆ ಹೇಗೆ ವರ್ತಿಸಲು ಸಾಧ್ಯವೋ ಅಷ್ಟೆಲ್ಲವನ್ನೂ ಒಳಗೊಂಡು, ಸ್ವಲ್ಪ ಹುಸಿ ನಿಷ್ಠುರ, ಸೋತಿದ್ದಾಗ ಸಂತೈಸುವ ತಾಯ್ತನ, ಕಂಗೆಟ್ಟಿದ್ದಾಗ ನೀಡುವ ಭರವಸೆ, ಇವೆಲ್ಲವೂ ಒಟ್ಟಂದದಲ್ಲಿ ಇಂದಿಗೂ ನನ್ನನ್ನು ಆರ್ದ್ರವಾಗಿ ಕಾಡುತ್ತವೆ. ಇಂಥದ್ದೇ ನಡೆ ನುಡಿ ಅವರ ಹಿರಿಯ ಮಗ ಮತ್ತು ನನ್ನ ಗೆಳೆಯ ಚಿದಾನಂದ ಅವರಲ್ಲೂ ಕಂಡಾಗ ಬಿಜಿಎಂ ಹೊರಗಿನವರಿಗೆ ಮಾತ್ರವಲ್ಲ ಒಳಗನ್ನೂ ಸ್ವಚ್ಛವಾಗಿಯೇ ಬದುಕಿದ ಜೀವಿ ಎಂಬುದು ಅರಿವಾಗುತ್ತದೆ.

ಗೌರಿಬಿದನೂರು ನನ್ನ ಚಿರಪರಿಚಿತ ನೆಲ. ಅದು ನನ್ನ ತಾಯಿಯ ತವರು. ನನ್ನ ಬಾಲ್ಯದ ಬಹುತೇಕ ನೆನಪುಗಳು ಅದರೊಂದಿಗೆ ತೆಕ್ಕೆ ಹೊಯ್ದು ಮಲಗಿವೆ. ಅಲ್ಲಿಗೆ ಹೋಗಲು ಅನೇಕ ವರ್ಷಗಳಿಂದ ಜೀವ ತುಡಿಯುತ್ತಿತ್ತಾದರೂ ಹೋಗಲಾಗಿರಲಿಲ್ಲ. ಕೆಲವು ವರ್ಷಗಳ ಹಿಂದೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯನಾಗಿ ಸೂಫಿ ಕತೆ ಮತ್ತು ಕಾವ್ಯ ಸಂಕಲನ ಸಂಪಾದಿಸುವ ವಿಷಯಕ್ಕೆ ಅವರ ಜೊತೆ ತೀರಾ ಹತ್ತಿರದಿಂದ ಒಡನಾಡುವ ಅವಕಾಶ ಬಂದಿತ್ತು. ಆವಧಿಯಲ್ಲಿ ಕೆಲಸದ ನನ್ನ ಒತ್ತಡ ಜಾಸ್ತಿಯಾಗಿತ್ತು, ಆದರೆ ಅವರ ಆರೋಗ್ಯ ಮೊದಲಿನಂತೇನೂ ಇರಲಿಲ್ಲ. ಅದರೂ ಅವರ ಸುತ್ತಾಟ ನಿಂತಿರಲಿಲ್ಲ.

ಇದನ್ನು ಓದಿದ್ದೀರಾ? ಭಾರತ್‌ ಜೋಡೋ ಯಾತ್ರೆ | ನಾರಾಯಣ ಗುರುವಿಗೆ ಪುಷ್ಪನಮನ; ಯಾತ್ರೆ ಸೇರಿಕೊಂಡ ಸಚಿನ್‌ ಪೈಲಟ್‌

ಒಮ್ಮೆ ನಾನು “ಮುಖಾಮುಖಿ ಕುಳಿತೇ ಕೆಲವು ತೀರ್ಮಾನಗಳನ್ನು ತಗೆದುಕೊಳ್ಳ ಬೇಕಾಗಿದೆ” ಎಂದು ಹೇಳಿದೆ. “ಹಾಗಾದರೆ ನೀವೇ ಗೌರಿಬಿದನೂರಿಗೆ ಬಂದು ಬಿಡಿ” ಎಂದರು. ಹೋದೆ. ಊಟದ ಸಮಯದಲ್ಲಿ  ಅವರೂರಿನ ನಂಟು ಹೇಳಿದೆ. ಊಟದ ನಂತರ “ಬನ್ನಿ ಹೋಗಿ ಬರೋಣ” ಎಂದು ನನ್ನ ಕಾರಿನ ಬಳಿ ನಿಂತರು. ಇಡೀ ಗೌರಿಬಿದನೂರನ್ನು ಮತ್ತೆ ತೋರಿಸಿದರು. ನಾನು ಅಂದು ಕಂಡಿದ್ದಾಗ ಅ ಪ್ರದೇಶಗಳೆಲ್ಲಾ ಹೇಗಿದ್ದವು ಎಂದು ಹೇಳಿದಾಗ ಬೆರಗಾದರು. ಮತ್ತು ಕೆಲವು ಮಾತುಗಳನ್ನು ಹೇಳಿದರು. “ಕಾಲ ಹೇಗೆ ಪರಿವರ್ತನೆಯ ನಿಯಮಕ್ಕೊಳಪಟ್ಟಿದೆ. ವಿಜ್ಞಾನದ ಹಲವು ಆವಿಷ್ಕಾರಗಳು ಹೇಗೆ ಈ ಪರಿವರ್ತನೆಯ ನಿಯಮಗಳನ್ನು ಸಾಕಾರ ಮಾಡಿವೆ” ಎಂದು ತಣ್ಣಗೆ ವಿವರಿಸುತ್ತಿದ್ದರು. ಆಗ ಅರ್ಥವಾಗಿದ್ದೆಂದರೆ, ಅವರ ಕತೆಗಳ ಆಯ್ಕೆಯ ಕ್ರಮ, ಮಂಡನೆಯಲ್ಲಿರಬೇಕಾದ ಸೂಕ್ಷ್ಮ, ಭಾಷೆಯ ಬೆಡಗು, ಓದುಗನಲ್ಲಿ ಅದು ಹುಟ್ಟಿಸಬೇಕಾದ ಬೆರಗು ಇವೆಲ್ಲವನ್ನೂ ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು. ಅವರ ಸ್ವತಂತ್ರ ಬರಹಗಳಷ್ಟೇ ಪ್ರಖರವಾಗಿ, ಸಮಕಾಲೀನ ಅನುವಾದಕರಿಗೆ ಮಾರ್ಗದರ್ಶಕ ಮಾದರಿಗಳಾಗಿ ನಿಲ್ಲುವ ಅವರ ಅನುವಾದಗಳು  ಇತರರಿಗೆ ವಿಷಯದ ಆಯ್ಕೆ ಮತ್ತು ವಸ್ತು ಮಂಡನೆಗೆ ಪ್ರತಿಮೆಗಳಾಗಿ ನಿಂತಿವೆ.

ಆನಂತರದ ಅವರೊಂದಿಗಿನ ಒಡನಾಟದಲ್ಲಿ ನಾನು ಕಂಡ ಅವರ ಬದ್ಧತೆ, ಸಾಮಾಜಿಕ ಕಳಕಳಿ ಎಂಬ ಪದಾರ್ಥವನ್ನೂ ಮೀರಿದ ಕರುಳು ಬಳ್ಳಿಯ ಪ್ರೀತಿ, ಅವರು ವಿದುರಾಶ್ವತ್ಥದ ಸ್ವಾತಂತ್ರ್ಯ ಸ್ಮಾರಕವನ್ನು ರೂಪಿಸಿದ ಮುನ್ನೋಟ ನನ್ನಲ್ಲೂ ಅಚ್ಚರಿಯ ಸ್ಮಾರಕಗಳಾಗಿಯೇ ಉಳಿದಿವೆ. ಆದರೆ ಅವರೇ ಆಯ್ಕೆ ಮಾಡಿದ್ದ ನನ್ನ ಭೂಮಿಗೀತೆಯ 20 ಲೇಖನಗಳನ್ನು ಇಂಗ್ಲಿಷಿಗೆ ಅನುವಾದಿಸುತ್ತೇನೆಂದು ಕೊಟ್ಟಿದ್ದ ಮಾತನ್ನು ಈಡೇರಿಸುವ ಮುಂಚೆಯೇ ಅವರು ನಮ್ಮನ್ನು ತೊರೆದು ಹೋಗಿದ್ದ ಮಾತ್ರ ನನ್ನ ದೌರ್ಭಾಗ್ಯ.

ನಿಮಗೆ ಏನು ಅನ್ನಿಸ್ತು?
0 ವೋಟ್