ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಬಗ್ಗೆ ಹೆಮ್ಮೆಪಡಲು, ನೀವು ಲಜ್ಜೆಯಿರುವವರೂ ಆಗಿರಬೇಕು : ಯೋಗೇಂದ್ರ ಯಾದವ್‌

ಬ್ರಿಟನ್‌ ಪ್ರಧಾನಿ ಪಾಕಿಸ್ತಾನ ಮೂಲದವರು

ಅಪಾರ ಸಂಪತ್ತಿನ ಕಾರಣದಿಂದ ಬ್ರಿಟಿಷ್ ಸಮಾಜ ರಿಷಿ ಅವರನ್ನು ಅನುಮಾನದಿಂದಲೇ ನೋಡುತ್ತಿದೆ.  ಹಣಕಾಸು ಸಚಿವರಾಗಿ ರಿಷಿ ಸುನಕ್ ಅವರ ಅಧಿಕಾರಾವಧಿಯು ಅನೇಕ ವಿವಾದಗಳಿಗೆ ಒಳಪಟ್ಟಿದೆ. ಕೋವಿಡ್ ಸಮಯದಲ್ಲಿ ಬಡತನದ ಬದುಕಿಗೆ ನೂಕಲ್ಪಟ್ಟ ಬ್ರಿಟನ್ನರು, ಅವರನ್ನು ಸಂವೇದನಾರಹಿತ ವಿತ್ತಮಂತ್ರಿ ಎಂದು ನೆನಪಿಸಿಕೊಳ್ಳುತ್ತಾರೆ

ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದಾಗಿನಿಂದ ಪ್ರತಿಯೊಬ್ಬ ಭಾರತೀಯನಲ್ಲಿ "ನಮ್ಮ ದೇಸೀ ಹುಡುಗ" ಎಂಬ ಭಾವನೆಯೊಂದು ಹರಿಯುತ್ತಿರುವಂತಿದೆ. ದೀಪಾವಳಿಯ ಝಗಮಗ ಹೆಚ್ಚಿ ಹೋದಂತೆ, ವಿಶ್ವದೆಲ್ಲೆಡೆ ನಮ್ಮ ದೇಶವು ದಿಗ್ವಿಜಯದ ಧ್ವಜಗಳನ್ನು ನೆಟ್ಟಂತೆ. ಯಾರೋ ಭಾರತೀಯನೊಬ್ಬ 200 ವರ್ಷಗಳ ಬ್ರಿಟಿಷರ ಆಳ್ವಿಕೆಯ ಬದಲಾಗಿ ಮುಯ್ಯಿ ತೀರಿಸಿಕೊಂಡಂತೆ.

Eedina App

ಹೆಮ್ಮೆ ಎನ್ನುವುದು ಮಾನವ ಸಹಜ ಭಾವನೆ. ತಮ್ಮ ಅಥವಾ ತಮ್ಮವರ ಸಾಧನೆಯ ಬಗ್ಗೆ ಹೆಮ್ಮೆ ಪಡುವುದು ಸಾಮಾನ್ಯ ಪ್ರತಿಕ್ರಿಯೆಯಾಗಿದೆ. ಆದರೆ ಈ ಹೆಮ್ಮೆಯು ಅಹಂಕಾರದ ರೂಪವನ್ನು ಪಡೆದರೆ, ಆಗ ಅದು ಶ್ರೇಷ್ಠತೆಯ ವ್ಯಸನದಂಥ ಅವಗುಣ ವಾಗಬಹುದು. ಆದರೆ ದಾಸ್ಯದಲ್ಲಿದ್ದ ದೇಶವೊಂದಕ್ಕೆ ಅಥವಾ ಬಡ ಸಮುದಾಯಕ್ಕೆ ಹೆಮ್ಮೆಯು ಒಂದು ಗುರಾಣಿಯಾಗಬಹುದು, ಸಾಂಸ್ಕೃತಿಕ ಸ್ವಾಭಿಮಾನದೊಂದಿಗೆ ನ್ಯಾಯಕ್ಕಾಗಿ ಹೋರಾಟದ ಪ್ರಾರಂಭ ಸಾಧ್ಯವಾಗಬಹುದು.

 ಹೆಮ್ಮೆಯ ಅವಶ್ಯಕತೆಯಿದೆಯೇ ಇಲ್ಲವೇ ಎನ್ನುವುದು, ಆ ಸಾಧನೆ ನಿಜಕ್ಕೂ ಏನು? ಹೆಮ್ಮೆಪಡುವವರಿಗೂ ಸಾಧನೆಗೂ ಏನು ಸಂಬಂಧ?ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸ್ವಾಭಿಮಾನಿ ಸಮಾಜವೊಂದು ಸಾಧನೆಯ ಬಗ್ಗೆ ಹಿಗ್ಗುವ ಮೊದಲು, ಕೆಲವು ಪ್ರಶ್ನೆಗಳನ್ನು ಕೇಳುತ್ತದೆ: ಈ ಸಾಧನೆಯು ನಿಜಕ್ಕೂ ಹೆಮ್ಮೆಪಡಲು ಯೋಗ್ಯವಾಗಿದೆಯೇ? ಈ ಸಾಧನೆಗೆ ನಮ್ಮ ಕೊಡುಗೆ ಏನಾದರೂ ಇದೆಯೇ?

AV Eye Hospital ad

ಸಾಧಕನು ನಿಜವಾಗಿಯೂ ನಮ್ಮವನೆ?
ಆದರೆ ಕೀಳರಿಮೆಯ ಭಾವದಿಂದ ನರಳುವ ಸಮಾಜವು ಯಾರದೋ ಮದುವೆಯ ಬಗ್ಗೆ ಹುಚ್ಚು ಉತ್ಸಾಹಿತನಾದ ಯುವಕನಂತೆ ವರ್ತಿಸುತ್ತದೆ, ಸಾಧನೆಯೊಂದಿಗೆ ಯಾವುದಾದರೊಂದು ಸಂಬಂಧ ಜೋಡಿಸಲು ಉತ್ಸುಕವಾಗಿರುತ್ತದೆ. ಸಾಧನೆಯು ಅತ್ಯುನ್ನತವಾಗಿದ್ದಲ್ಲಿ ಮತ್ತು ನಾವೇ ಅತ್ಯಂತ ಕೆಳಭಾಗದಲ್ಲಿ ನಿಂತಿದ್ದರೆ, ಹುಸಿ ಹೆಮ್ಮೆಯ ಭಾವನೆಯು ಅನಾಯಾಸವಾಗಿ ದಟ್ಟವಾಗುತ್ತದೆ. ಇತರರು ಕೊಡುವ ಆಹಾರದಿಂದ ಹೊಟ್ಟೆ,ಇತರರ ಜ್ಞಾನದಿಂದ ನಮ್ಮ ಬುದ್ಧಿ ಮತ್ತು ಇತರರ ಸಾಧನೆಯಿಂದ ನಮ್ಮ ಮನಸ್ಸನ್ನು ತುಂಬಿಕೊಳ್ಳುವುದು ಕೀಳರಿಮೆಯ ಒಂದು ರೂಢಿ. ಜೇಬಿನಲ್ಲಿ ಏನೂ ಇಲ್ಲದವನು ದೂರದ ಬಂಧುತ್ವವನ್ನು ಹುಡುಕುತ್ತಾನೆ.

ರಿಷಿ ಸುನಕ್‌ರ ಸಾಧನೆಯಲ್ಲಿ ಮುಳುಗಿರುವ ನಾವು, ಹೆಮ್ಮೆ ಪಡಬೇಕೇ ಬೇಡವೋ, ಯಾರು ಹೆಮ್ಮೆ ಪಡಬೇಕು, ಈ ಹೆಮ್ಮೆಯನ್ನು ಹೇಗೆ ವ್ಯಕ್ತಪಡಿಸಬೇಕು ಎಂಬ ಪ್ರಶ್ನೆ ಕೇಳುವುದನ್ನೇ ಮರೆತಿದ್ದೇವೆ.

ಬೋರಿಸ್‌ ಜಾಣ್‌ಸನ್‌ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್‌
ಬೋರಿಸ್‌ ಜಾನ್‌ಸನ್‌ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್‌

' ಗ್ರೇಟ್' ಬ್ರಿಟನ್ ಶ್ರೇಷ್ಠವಾಗೇನೂ ಉಳಿದುಕೊಂಡಿಲ್ಲ, ಆದರೆ ಅದರ ಪ್ರಧಾನಿಯಾಗುವುದನ್ನು ಸಾಧನೆ ಎನ್ನಲಾಗುತ್ತದೆ.ಆದರೆ ಅವರು ಎಷ್ಟು ದಿನ ಪ್ರಧಾನಿಯಾಗಿ ಇರುತ್ತಾರೆ ಅಥವಾ ಪ್ರಧಾನಿಯಾಗಿ ಏನು ಜಾದೂ ಮಾಡಲಿದ್ದಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಬ್ರಿಟನ್‌ನಲ್ಲಿ ಪ್ರಧಾನಿ ಹುದ್ದೆಯೇ ಒಂದು ತಮಾಷೆಯ ವಿಷಯವಾಗಿದೆ, ವಿಶೇಷವಾಗಿ ಲಿಜ್ ಟ್ರಸ್ ರ ಆಗಮನ - ನಿರ್ಗಮನದ ನಂತರ. ನಿರಂತರವಾಗಿ ಅರ್ಹತೆಯಲ್ಲಿ ಕುಗ್ಗುತ್ತಿರುವ ಕುರ್ಚಿಯ ಮೇಲೆ ಯಾರಾದರೂ ಕುಳಿತಲ್ಲಿ ಅದು ಎಷ್ಟು ಹೆಮ್ಮೆಯ ವಿಷಯ ಎಂದು ಹೇಳುವುದು ಕಷ್ಟ.

ರಿಷಿ ಸುನಕ್ ನಾಯಕ ಮತ್ತು ಪ್ರಧಾನ ಮಂತ್ರಿಯಾಗಿ ಎಷ್ಟು ಯಶಸ್ವಿಯಾಗುವರು ಎಂದು ಹೇಳುವುದು ಕೂಡ ಸದ್ಯಕ್ಕೆ ಕಷ್ಟ. ನಿಜವೆಂದರೆ ಬ್ರಿಟಿಷ್ ಸಮಾಜ ಅವರನ್ನು ಅನುಮಾನದಿಂದಲೇ ನೋಡುತ್ತಿದೆ, ಅವನ ಚರ್ಮದ ಬಣ್ಣದಿಂದಲ್ಲ ಆದರೆ ಅವರ ಅಪಾರ ಸಂಪತ್ತಿನ ಕಾರಣದಿಂದ. ನಿಜವೆಂದರೆ ಹಣಕಾಸು ಸಚಿವರಾಗಿ ರಿಷಿ ಸುನಕ್ ಅವರ ಅಧಿಕಾರಾವಧಿಯು ಅನೇಕ ವಿವಾದಗಳಿಗೆ ಒಳಪಟ್ಟಿದೆ. ಕೋವಿಡ್ ಸಮಯದಲ್ಲಿ ಬಡತನದ ಬದುಕಿಗೆ ನೂಕಲ್ಪಟ್ಟ ಬ್ರಿಟನ್ನರು, ಅವರನ್ನು ಜಿಪುಣ ಮತ್ತು ಸಂವೇದನಾರಹಿತ ವಿತ್ತ ಮಂತ್ರಿ ಎಂದು ನೆನಪಿಸಿಕೊಳ್ಳುತ್ತಾರೆ. ಸತ್ಯವೆಂದರೆ ಅವರ ಕನ್ಸರ್ವೇಟಿವ್ ಪಕ್ಷದ ಜನಪ್ರಿಯತೆ ಇಂದು ಪಾತಾಳದಲ್ಲಿದೆ ಮತ್ತು ಜನಾಭಿಪ್ರಾಯ ಸಂಗ್ರಹಣೆಯ ಸರ್ವೆಯಲ್ಲಿ ಅವರು ಲೇಬರ್ ಪಕ್ಷಕ್ಕಿಂತ 30% ರಷ್ಟು ಹಿಂದುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಶಸ್ವಿ ಪ್ರಧಾನ ಮಂತ್ರಿಯಾಗಲು, ರಿಷಿ ಸುನಕ್ ಪವಾಡಗಳನ್ನು ಮಾಡಬೇಕು. ಇಲ್ಲದಿದ್ದರೆ ಅವರು ಪ್ರಧಾನಿಯಾಗುವುದು ನಾಚಿಕೆಗೇಡಿನ ಸಂಗತಿಯಾಗಬಹುದೇ ಹೊರತು ಹೆಮ್ಮೆಯಲ್ಲ.

ಆದರೂ ಅವರು ಪ್ರಧಾನಿಯಾಗುವುದು ಅವರಿಗೆ ಮತ್ತು ಅವರ ಕುಟುಂಬಕ್ಕೆ ಹೆಮ್ಮೆಯ ವಿಷಯವಾಗಿ ಉಳಿಯುತ್ತದೆ. ಆದರೆ ಈ ಸಾಧನೆಯಲ್ಲಿ ನಮ್ಮ ಪಾಲು ಏನು ಎಂಬುದೇ ಪ್ರಶ್ನೆ. ಸತ್ಯವೆಂದರೆ ರಿಷಿ ಸುನಕ್‌ಗೂ ಇಂದಿನ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ಸುನಕ್ ಅವರ ಕುಟುಂಬದ ವಂಶವೃಕ್ಷದ ಬೇರು ಇರುವ ಮಣ್ಣು ಇಂದಿನ ಪಾಕಿಸ್ತಾನದಲ್ಲಿದ್ದರೆ, ಅದರ ಗಿಡವನ್ನು ನಂತರ ಆಫ್ರಿಕಾದ ಮಣ್ಣಲ್ಲಿ ನೆಡಲಾಗಿದೆ. ಗೊಬ್ಬರ- ನೀರು ಬ್ರಿಟಿಷ್ ಆಳ್ವಿಕೆಯ ವಸಾಹತುಗಳಿಂದ ದೊರೆತು, ಫಲವು ಇಂಗ್ಲೆಂಡಿನಲ್ಲಿ ದೊರೆಯುತ್ತಿದೆ.

ರಿಷಿ ಸುನಕ್‌ ಪತ್ನಿ ಭಾರತದವರು, ಆದರೆ ಭಾರತ ಬ್ರಿಟನ್‌ ಸಂಬಂಧದ ಬಗ್ಗೆ ಯಾವುದೇ ಉತ್ಸಾಹ ತೋರಿಸಿಲ್ಲ

ರಿಷಿ ಸುನಕ್‌ಗೆ ಸಂಬಂಧಿಸಿದಂತೆ, ಅವರದು ಕಪ್ಪು ಚರ್ಮದ ಶುದ್ಧ ಇಂಗ್ಲಿಷ್‌ ವ್ಯಕ್ತಿತ್ವ. ಇಂಗ್ಲೆಂಡಿನಲ್ಲಿ ಹುಟ್ಟಿ, ಅಲ್ಲೇ ಓದಿ, ಅಲ್ಲಿಯೇ ವೃತ್ತಿಜೀವನ ಆರಂಭಿಸಿ ಬೆಳೆದಿದ್ದಾರೆ. ಇಂಗ್ಲೆಂಡಿನಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೊರ ಹೋಗಬೇಕಾದಾಗ ಭಾರತಕ್ಕೆ ಬರದೆ ಅಮೆರಿಕಕ್ಕೆ ಹೋದರು. ಅವರು ರಾಜಕೀಯ ಪ್ರವೇಶಿಸಿದ್ದು ಕೂಡ, ಭಾರತೀಯ ಮೂಲದ ಬ್ರಿಟಿಷ್ ಜನರ ಪ್ರತಿನಿಧಿಯಾಗಿ ಅಲ್ಲ, ಬ್ರಿಟನ್ನಿನ ಶ್ರೀಮಂತರ ಪ್ರತಿನಿಧಿಯಾಗಿ. ಸಹಜವಾಗಿ ಅವರು ಹುಟ್ಟು ಮತ್ತು ಸಂಸ್ಕಾರದಿಂದ ಹಿಂದೂ, ಆದರೆ ಅವರು ಸ್ಪಷ್ಟವಾಗಿ ಗೋಮಾಂಸ ಅಥವಾ ಕಸಾಯಿಖಾನೆ ವ್ಯಾಪಾರದಿಂದ ಅವರಿಗೆ ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅವರ ಪತ್ನಿ ಭಾರತೀಯರು, ಆದರೆ ಅವರು ಭಾರತ-ಬ್ರಿಟನ್‌ ಸಂಬಂಧದ ಬಗ್ಗೆ ಯಾವುದೇ ಉತ್ಸಾಹವನ್ನು ತೋರಿಸಿಲ್ಲ. ಆದ್ದರಿಂದ ಚರ್ಮದ ಬಣ್ಣ ಮತ್ತು ನಾವು ಹುಟ್ಟಿದ ಕುಲದ ಧರ್ಮವೇ ನಮ್ಮ ಹೆಮ್ಮೆಯ ಆಧಾರವಾಗಬಹುದೇ?

ಹೌದು, ಬ್ರಿಟನ್‌ಗೆ ಮತ್ತು ಅಲ್ಲಿನ ಬಹುಸಂಖ್ಯಾತ ಬಿಳಿ ಕ್ರಿಶ್ಚಿಯನ್ ಸಮುದಾಯಕ್ಕೆ ರಿಷಿ ಸುನಕ್ ಪ್ರಧಾನಿಯಾಗುವುದು ಹೆಮ್ಮೆಯ ಕ್ಷಣ. ಜಗತ್ತಿನಲ್ಲಿ ವಸಾಹತುಶಾಹಿ ಆಡಳಿತದಿಂದ ಶೋಷಣೆ ಮಾಡಿದ ದೇಶ, ತನ್ನಿಂದ ತುಳಿತಕ್ಕೊಳಗಾದ ದೇಶ- ಸಮುದಾಯದ ಒಬ್ಬ ವ್ಯಕ್ತಿಗೆ ತನ್ನ ಅತ್ಯುನ್ನತ ಸ್ಥಾನವನ್ನು ನೀಡುವುದು ಒಂದು ವಿಶಿಷ್ಟ ಘಟನೆಯಾಗಿದೆ. ಇದನ್ನು ನೆಲ್ಸನ್ ಮಂಡೇಲಾ ಅಧ್ಯಕ್ಷರಾದಂತಹ ಉದಾಹರಣೆಯ ಪ್ರಾಯಶ್ಚಿತ್ತವೆಂದೇನೂ ಹೇಳಲಾಗದು. ಆದರೂ ಇದು ಬ್ರಿಟನ್‌ನ ಉದಾರ ಮನಸ್ಸಿನ ಸಂಕೇತವೆಂದು ಪರಿಗಣಿಸಲ್ಪಡುತ್ತದೆ, ವಿಶೇಷವಾಗಿ ಏಕೆಂದರೆ ಆ ನಾಯಕ ಮತಗಳ ದೃಷ್ಟಿಯಿಂದ ಅಷ್ಟೇನೂ ಮುಖ್ಯವಲ್ಲದ ಅಲ್ಪಸಂಖ್ಯಾತ ಧಾರ್ಮಿಕ ಸಮಾಜದವನಾದ್ದರಿಂದ. ನಿಜ ಹೇಳಬೇಕೆಂದರೆ ರಿಷಿ ಸುನಕ್ ಬ್ರಿಟನ್ ಜನರ ನಂಬಿಕೆ ಗೆದ್ದು ಪ್ರಧಾನಿಯಾಗಲಿಲ್ಲ, ಆದರೂ ಕನ್ಸರ್ವೇಟಿವ್ ಪಕ್ಷದಿಂದ ಅವರು ನಾಯಕನಾಗಿ ಆಯ್ಕೆಯಾಗಿ ಸ್ವೀಕೃತವಾದದ್ದು ಬ್ರಿಟಿಷ್ ರಾಜಕೀಯಕ್ಕೆ ಹೆಮ್ಮೆಯ ಕ್ಷಣವಾಗಿದೆ.

ಇದನ್ನು ಓದಿದ್ದೀರಾ ? ಬ್ರಿಟನ್‌ | ರಿಷಿ ಸುನಕ್‌ ಮೊದಲ ಬಜೆಟ್‌ ಮಂಡನೆ ; ಕಠಿಣ ಕ್ರಮ ಕೈಗೊಳ್ಳುವ ನಿರೀಕ್ಷೆ

ನಾವೇಕೆ ಈ ಹೆಮ್ಮೆಯ ಕ್ಷಣಗಳಲ್ಲಿ ಭಾಗಿಯಾಗಬಾರದು? ಜಗತ್ತು ತನ್ನ ಹೃದಯ ಮತ್ತು ಮನಸ್ಸನ್ನು ಬದಲಾವಣೆಗೆ ತೆರೆದುಕೊಂಡರೆ ಖಂಡಿತ ನಾವು ಅದರ ಬಗ್ಗೆ ಹೆಮ್ಮೆ ಪಡಬಹುದು. ಒಬಾಮಾ ಅವರು ಯುಎಸ್ ಅಧ್ಯಕ್ಷರಾದದ್ದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಿತ್ತು. ಈ ಅರ್ಥದಲ್ಲಿ ವಿಶ್ವ ಸಮುದಾಯ ಪ್ರಜೆಯಾಗಿ, ಧರ್ಮ, ಬಣ್ಣ, ಜಾತಿ ಮೀರಿದ ಜಗತ್ತನ್ನು ಕನಸುವ ಭಾರತೀಯರು ರಿಷಿ ಸುನಕ್ ರ ಬಗ್ಗೆ ಒಂದು ಕ್ಷಣ ಹೆಮ್ಮೆಪಡಬಹುದು. ಆದರೆ ಅವರು ಭಾರತದಲ್ಲಿ ಒಂದಲ್ಲ ಒಂದು ದಿನ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ಪ್ರಧಾನಿಯಾಗುತ್ತಾನೆ ಎಂಬುದನ್ನು ಸ್ವಾಗತಿಸಲು ಸಿದ್ಧರಿದ್ದಲ್ಲಿ ಮಾತ್ರ.

ವಿದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಹಕ್ಕುಗಳಿಗಾಗಿ ಒತ್ತಾಯಿಸುವರು ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ವಿಷ ಕಾರುವುದನ್ನು ಖಂಡಿಸಲು ಸಿದ್ಧರಾಗಿದ್ದಲ್ಲಿ ಮಾತ್ರ. ಭಾರತದಲ್ಲಿ  "ವಿದೇಶಿ ಮೂಲದ ವ್ಯಕ್ತಿಯೊಬ್ಬರು
ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವೆವು" ಎಂಬ ಹೇಳಿಕೆಗಳು ವಿಷಾದನೀಯ ಎನ್ನಿಸಿದಲ್ಲಿ. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಅಧಿಕಾರಶಾಹಿಯ ಆಶೀರ್ವಾದದಿಂದ ನಡೆಯುತ್ತಿರುವ ದ್ವೇಷದ ಪ್ರಚಾರದ ಬಗ್ಗೆ ನಮಗೆ ಲಜ್ಜೆಯಿದ್ದಲ್ಲಿ ಮಾತ್ರ.

ಅನುವಾದ | ರಂಜಿತಾ ಜಿ ಹೆಚ್‌
ನಿಮಗೆ ಏನು ಅನ್ನಿಸ್ತು?
1 ವೋಟ್
eedina app