ಬಹುಸಂಖ್ಯಾತ ಕೋಮುವಾದ ಮತ್ತು ಅಲ್ಪಸಂಖ್ಯಾತ ಕೋಮುವಾದ ಒಂದೇ ಅಲ್ಲ, ಯಾಕೆಂದರೆ...

communal clash

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿರುವ ಬಹುಸಂಖ್ಯಾತರು ಹಿಂದೂ ಕೋಮುವಾದವನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಪೋಷಿಸುತ್ತಾರೆ. ಹಿಂಸಾಚಾರ ನಡೆಸಿದ ಹಿಂದೂಗಳನ್ನು ಪೊಲೀಸರು ಬಂಧಿಸಿರಬಹುದು‌. ಆ ಬಂಧನದ ಬಳಿಕ ಅವರ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳು ದಿಢೀರನೆ ಅಭಿವೃದ್ಧಿಯಾಗುತ್ತದೆ 

ಬಹುಸಂಖ್ಯಾತರ ಕೋಮುವಾದ ಮತ್ತು ಅಲ್ಪಸಂಖ್ಯಾತರ ಕೋಮುವಾದ ಎರಡೂ ಒಂದೆನಾ ? ಹಿಂದೂ ಕೋಮುವಾದಕ್ಕೆ ನಿಜವಾದ ಕಾರಣಗಳೇನು ? ಮುಸ್ಲಿಂ ಕೋಮುವಾದದ ಹಿಂದಿನ ಸಾಮಾಜಿಕ ಕಾರಣಗಳೇನು ಎಂಬುದನ್ನು ಅರ್ಥೈಸಿಕೊಳ್ಳದೇ ಇವೆರಡೂ ಒಂದೇ ಅಥವಾ ಬೇರೆ ಬೇರೆ ಎಂಬ ನಿರ್ಧಾರಕ್ಕೆ ಬರಲಾಗದು.

Eedina App

ಹಿಂದೂ ಕೋಮುವಾದ ಎಂಬುದು ಅಲ್ಪಸಂಖ್ಯಾತರ ವಿರೋಧಿ ಮಾತ್ರವಲ್ಲ. ಅದೊಂದು ಹಿಂದೂ ಸನಾತನ ಸಂರಚನೆಯನ್ನು ಅದೇ ರೀತಿ ಉಳಿಸಿಕೊಳ್ಳಲು ಮಾಡಿರುವ ತಂತ್ರಗಾರಿಕೆ. ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಆರೋಗ್ಯ ಎಂದು ನಿರ್ಧರಿಸಿ ಯಾವಾಗ ಭಾರತದಲ್ಲಿ ಸರ್ಕಾರ ಮತ್ತು ಮಿಶಿನರಿಗಳ ಮೂಲಕ ಕೆಲಸ ಮಾಡಲು ಶುರು ಮಾಡಿದ್ರೋ ಅಲ್ಲಿಂದ ಇಲ್ಲಿಯವರೆಗೂ ಸಂಘಪರಿವಾರ ಸನಾತನ ಹಿಂದೂ ಧರ್ಮದ ಆಚರಣೆ ಮತ್ತು ನಿಯಮಗಳನ್ನು ಜಾರಿಗೆ ತರಲು ಹಿಂದುತ್ವದ ಮೂಲಕ ಹೆಣಗಾಡುತ್ತಿದೆ.

ಮಂಗಳೂರಿನಲ್ಲಿ ಅಮ್ನೇನಿಶಿಯಾ ಪಬ್ ಅಟ್ಯಾಕ್ ಯಾಕೆ ನಡೆಯಿತು ? ಅಲ್ಲಿ ಮುಸ್ಲಿಂ ಹುಡುಗರು-ಹಿಂದೂ ಹುಡುಗಿಯರು ಒಟ್ಟಿಗಿದ್ದರು ಎಂಬ ಕಾರಣಕ್ಕೆ ಶ್ರೀರಾಮ ಸೇನೆ ದಾಳಿ ನಡೆಸಲಿಲ್ಲ. ಅಲ್ಲಿ ಮುಸ್ಲಿಂ ಹುಡುಗರು ಇರಲೂ ಇಲ್ಲ. ಹಿಂದೂ ಹುಡುಗಿಯರು ಭಾರತೀಯ ಸಂಸ್ಕೃತಿಗೆ ವಿರುದ್ದವಾಗಿ ಬಟ್ಟೆಗಳನ್ನು ಧರಿಸಿಕೊಂಡು ನೃತ್ಯ ಮಾಡುತ್ತಾ ಕುಡಿಯುತ್ತಿದ್ದರು ಎಂಬುದು ಶ್ರೀರಾಮ ಸೇನೆಯು ದಾಳಿಗೆ ಕೊಟ್ಟ ಕಾರಣವಾಗಿತ್ತು.

AV Eye Hospital ad

ಹಾಗಿದ್ರೆ ಮುಸ್ಲೀಮರಲ್ಲಿ ಕೋಮುವಾದ ಇಲ್ಲವೇ ? ಅಲ್ಪಸಂಖ್ಯಾತ ಕೋಮುವಾದ ಎನ್ನುವುದು ಅಪಾಯಕಾರಿ ಅಲ್ಲವೇ ? ಅದೊಂದು ಕ್ರೈಂ ಅಷ್ಟೆಯಾ? ಮುಸ್ಲಿಂ ಕೋಮುವಾದ ಎನ್ನುವುದು "ಜಾತಿ ವ್ಯವಸ್ಥೆಯೇ ಸಮಾಜ"ವಾಗಿರುವ ಭಾರತದ ಮೇಲೆ ಯಾವ ಪರಿಣಾಮವನ್ನೂ ಬೀರಲ್ಲ.  

ದಲಿತ ಕ್ರೀಡಾಳುಗಳ ಮೇಲೆ ದಾಳಿ

2007ರಲ್ಲಿ  ನಾನು ಸುರತ್ಕಲ್ ನಲ್ಲಿ ಬಿಡಿ ವರದಿಗಾರ (ಸ್ಟ್ರಿಂಜರ್) ಆಗಿದ್ದೆ. ಮೂಡಬಿದ್ರೆಯ ಪಕ್ಕದಲ್ಲಿರುವ ಎಡಪದವಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆಯಲಿದ್ದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸುತ್ತಿದ್ದರು. ಈ ವಿದ್ಯಾರ್ಥಿಗಳ ಪೈಕಿ ಇಬ್ಬರು ಇಬ್ಬರು ಹಿಂದೂ ವಿದ್ಯಾರ್ಥಿನಿಯರಿದ್ದರು. ಅವರಿಬ್ಬರೂ ದಲಿತ ಸಮುದಾಯಕ್ಕೆ ಸೇರಿದವರು. ಕಾಲೇಜಿನ ಪ್ರಾಂಶುಪಾಲರೇ ವಿದ್ಯಾರ್ಥಿನಿಯರು ಆಯ್ಕೆ ಮಾಡಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಸೂಚಿಸಿದ್ದರು. ಅದೇ ಬಸ್ಸಿನಲ್ಲಿ ಇಬ್ಬರು ಮುಸ್ಲಿಂ ಯುವಕರೂ ಇದ್ದರಂತೆ. ಇದು ಮಂಗಳೂರಿನ ಮಟ್ಟಿಗೆ ಮಹಾ ಅಪರಾಧ. ಈ ಅಪರಾಧಕ್ಕಾಗಿ ಈ ವಿದ್ಯಾರ್ಥಿಗಳಿದ್ದ ಬಸ್ಸನ್ನು ಮಾರ್ಗ ಮಧ್ಯದಲ್ಲಿ ಭಜರಂಗದಳದವರು ತಡೆದರು. ಬಸ್ಸಿಗೆ ನುಗ್ಗಿ ನಾಲ್ಕೂ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ಬಸ್ಸಿನಿಂದ ಇಳಿಸಲಾಯಿತು. ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಲಾಯಿತು. ವಿದ್ಯಾರ್ಥಿನಿಯರು ಕ್ರೀಡಾಕೂಟದಲ್ಲಿ ಭಾಗವಹಿಸದಂತೆ ಮಾಡಲಾಯಿತು.‌ ಹಲ್ಲೆ ನಡೆಸಿದ ಭಜರಂಗದಳ ಮತ್ತು ವಿಹಿಂಪ ಗೌರವಾಧ್ಯಕ್ಷರಾಗಿದ್ದ ಮೋಹನ್ ಆಳ್ವರು ಈ ಬಗ್ಗೆ ಮಾತನಾಡುತ್ತಾ “ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿಲ್ಲ. ಮಜಾ ಮಾಡಲು ಹೊರಟಿದ್ದರು” ಎಂದು ಹೇಳಿಕೆ ನೀಡಿದ್ದರು.

communal clash

ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ತನ್ನ ಕಾಲೇಜಿನ ವಿದ್ಯಾರ್ಥಿಗಳು ತನ್ನ ಅನುಮತಿಯನ್ನು ಪಡೆದು ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿದ್ದರು ಎಂದು ಪತ್ರಿಕಾ ಹೇಳಿಕೆ ನೀಡಿದಾಗ ಮೋಹನ ಆಳ್ವರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧವೇ ಹರಿಹಾಯ್ದಿದ್ದರು. ನಾನು ವರದಿಗಾರಿಕೆಗಾಗಿ ಈ ಪ್ರಕರಣವನ್ನು ಫಾಲೋಅಪ್ ಮಾಡುತ್ತಾ ಆ ವಿದ್ಯಾರ್ಥಿನಿಯರ ಹಳ್ಳಿಗೆ ಬೇಟಿ ನೀಡಿದಾಗ ಹಲವರು "ಆ ಹುಡುಗಿಯರಿಗೆ ಯಾಕೆ ಚಿಕ್ಕ ಚಿಕ್ಕ ಚಡ್ಡಿ ಹಾಕುತ್ತಾ, ಹುಡುಗರಂತೆ ಪ್ಯಾಂಟ್ ಹಾಕುತ್ತಾ ಕ್ರೀಡಾಕೂಟದ ರಗಳೆ ? ಭಜರಂಗದಳದವರು ಮಾಡಿದ್ದು ಸರಿ ಇದೆ" ಎಂದೋ "ಆ ಜಾತಿಯವರದ್ದು ಜಾಸ್ತಿಯಾಯಿತು. ಒಂಚೂರು ಭಯ ಭಕ್ತಿ ಇಲ್ಲ. ಸುಮ್ನೆ ಶಾಲೆಗೆ ಹೋಗೋದು ಬಿಟ್ಟು ಇದೆಲ್ಲಾ ಯಾಕೆ ಬೇಕು ?ಎಂದೇ ಊರ ಜನ ಪ್ರತಿಕ್ರಿಯಿಸುತ್ತಿದ್ದರು. ದಲಿತ ವಿದ್ಯಾರ್ಥಿನಿಯರು ಕ್ರೀಡೆಯಲ್ಲಿ ಸಾಧನೆ ಮಾಡುವುದು ಅವರ್ಯಾರೂ ಸಹಿಸುವಂತಿರಲಿಲ್ಲ. ಅದಕ್ಕಾಗಿ ಮುಸ್ಲಿಂ ಯುವಕರ ಜೊತೆ ಇದ್ದರು ಎಂಬ ಕಾರಣ ನೀಡಿ ಹಲ್ಲೆ ಮಾಡಲಾಗುತ್ತದೆ. ಆ ಮೂಲಕ ತಮ್ಮ ಕ್ರಿಮಿನಲ್ ಕೃತ್ಯಕ್ಕೆ ಬಹುಸಂಖ್ಯಾತರ ಮನ್ನಣೆಯನ್ನೂ, ಬೆಂಬಲವನ್ನೂ ಪಡೆಯುತ್ತಾರೆ.

ಹಿಂದುಳಿದ ವರ್ಗದ ಯುವಕರು ʼಹೊಡಿ ಬಡಿʼ ಕಾಲಾಳುಗಳು

ಬಹುಸಂಖ್ಯಾತ ಕೋಮುವಾದದ ಲಾಭದಾಯಕ ವರ್ಗವೊಂದು ಹಿಂದುಳಿದ ಮತ್ತು ದಲಿತ ವರ್ಗಗಳಿಗೆ ಮುಸ್ಲೀಮರೆಂಬ ಶತ್ರುಗಳನ್ನು ಸೃಷ್ಟಿಸಿಕೊಟ್ಟು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತದೆ. ಭೂಸುಧಾರಣೆಯ ಬಳಿಕವಂತೂ ಹಿಂದೂ ಸಮಾಜದೊಳಗಿನ ಕೆಳವರ್ಗಗಳೂ ಕೂಡಾ ಭೂಮಿ ಪಡೆದುಕೊಂಡು ಅರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮೇಲ್ವರ್ಗಗಳಿಗೆ ಸಮಾನಾಗಿ ನಿಂತುಕೊಳ್ಳಬಹುದು ಎಂದುಕೊಳ್ಳುವಾಗಲೇ ಕೋಮುವಾದವನ್ನು ಮನೆ ಮನೆಗೆ ಹಿಂದುತ್ವದ ಹೆಸರಿನಲ್ಲಿ ಪಸರಿಸಲಾಗುತ್ತದೆ. ಹಿಂದುಳಿದ ವರ್ಗಗಳ ಯುವ ಮನಸ್ಸುಗಳಿಗೆ ಮುಸ್ಲಿಂ ಎಂಬ "ಶತ್ರು"ಗಳನ್ನು ತೋರಿಸಿಕೊಟ್ಟು, ಹೊಡಿ ಬಡಿ ಕಾಲಾಳುಗಳನ್ನಾಗಿ ಮಾಡಲಾಗುತ್ತದೆ.

ಹಿಂದೂ ಕೋಮುವಾದ ಅಥವಾ ಬಹುಸಂಖ್ಯಾತ ಕೋಮುವಾದ ಎನ್ನುವುದು ದೇಶದ ಆಡಳಿತದೊಂದಿಗೆ ಮಿಳಿತವಾಗಿದೆ. ಸರ್ಕಾರ ಯಾವುದೇ ಇರಲಿ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿರುವ ಬಹುಸಂಖ್ಯಾತರು ಹಿಂದೂ ಕೋಮುವಾದವನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಪೋಷಿಸುತ್ತಾರೆ. ಹಿಂಸಾಚಾರ ನಡೆಸಿದ ಹಿಂದೂ ಕೋಮುವಾದಿಗಳನ್ನು ಪೊಲೀಸರು ಬಂಧಿಸಿರಬಹುದು‌. ಆ ಬಂಧನದ ಬಳಿಕ ಹಿಂದೂ ಕೋಮುವಾದಿಗಳ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳು ದಿಢೀರನೆ ಅಭಿವೃದ್ದಿಯಾಗುತ್ತದೆ. ಒಂದು ಕಾಲದ ರೌಡಿ ಶೀಟರ್, ಭೂಗತ ಲೋಕದ ಡಾನ್, ಹಫ್ತಾ ವಸೂಲಿ ಮಾಡುವವನು ಹಿಂದುತ್ವ ಸಂಘಟನೆ ಸೇರಿಕೊಂಡರೆ ಆತ ಎಲ್ಲಾ ಆರೋಪಗಳನ್ನು ಕಳಚಿಕೊಂಡು ಹಿಂದೂ ನಾಯಕನಾಗುತ್ತಾನೆ. ಅದೇ ಒಬ್ಬ ಮುಸ್ಲಿಂ ರೌಡಿ ಮುಸ್ಲಿಂ ನಾಯಕನಾಗಲು ಸಾಧ್ಯವೇ ಇಲ್ಲ. ಮುಸ್ಲಿಂ ನಾಯಕ ಆಯೋಜಿಸಿದ್ದ ಪ್ರತಿಭಟನೆಯಲ್ಲೋ ಕಾರ್ಯಕ್ರಮದಲ್ಲೋ ಯಾರೊ ಭಾಷಣಕಾರ ಪ್ರಚೋದನಾಕಾರಿಯಾಗಿ ಮಾತನಾಡಿದರೂ ಆಯೋಜಕ ಮುಸ್ಲಿಂ ನಾಯಕನೇ ಭಯೋತ್ಪಾದಕನೆಂದೋ, ದೇಶದ್ರೋಹಿಯೆಂದೂ ಅನ್ನಿಸಿಕೊಳ್ಳುತ್ತಾನೆ.  

ಹಿಂದೂ ಆರೋಪಿಗೆ ಹಿಂದುತ್ವ ಸಂಘಟನೆಗಳ ಸಂಪರ್ಕ ಇದೆ ಎಂದಾದರೆ ಆತ ಅಟೋಮ್ಯಾಟಿಕಲಿ ರಕ್ಷಣೆಗೆ ಒಳಪಡುತ್ತಾನೆ. ಅದೇ ಅಮಾಯಕ ಸಂತ್ರಸ್ತ ಮುಸ್ಲೀಮನೊಬ್ಬನಿಗೆ ಪಿಎಫ್ಐ, ಎಸ್ ಡಿಪಿಐ ರಕ್ಷಣೆ ನೀಡಿದೆ ಎಂದಾದರೆ ಸಂತ್ರಸ್ತನೂ ದೇಶದ್ರೋಹಿಯಂತೆ ಬಿಂಬಿತನಾಗುತ್ತಾನೆ.

Hijab 4

ಯಶಪಾಲ್‌ ಸುವರ್ಣ ಹಿನ್ನೆಲೆಯೇನು?

ಉದಾಹರಣೆಗೆ ಉಡುಪಿ ಹಿಜಾಬ್ ಪ್ರಕರಣವನ್ನೇ ತೆಗೆದುಕೊಳ್ಳಿ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬರಬಾರದು ಎಂದು ತಾಕೀತು ಮಾಡಿದ್ದು ಶಾಲಾ ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಯಶಪಾಲ್ ಸುವರ್ಣ. ಈ ಯಶಪಾಲ್ ಸುವರ್ಣ ಈ ಹಿಂದೆ ದನದ ವ್ಯಾಪಾರಿ ಅಪ್ಪ ಮಗನನ್ನು ಬೆತ್ತಲಾಗಿಸಿ ಉಡುಪಿಯಲ್ಲಿ ಹಲ್ಲೆ ನಡೆಸಿದ ಆರೋಪಿ. ಹಿಜಾಬ್ ಸುದ್ದಿಯಾದಾಗ ಹಿಜಾಬ್ ಬ್ಯಾನ್ ಮಾಡಿದ ವ್ಯಕ್ತಿಯ ಹಿನ್ನಲೆ ಚರ್ಚೆಯಾಗಬೇಕಿತ್ತು. ಆದರೆ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ಪಿಎಫ್ಐ/ಸಿಎಫ್ಐ ಬೆಂಬಲ ನೀಡಿದೆ ಎಂಬುದೇ ಚರ್ಚೆಯಾಯಿತು. ಸರ್ಕಾರವೂ, ಪೊಲೀಸ್ ಇಲಾಖೆಯೂ "ಈ ವಿವಾದದ ಹಿಂದೆ ಯಾರಿದ್ದಾರೆ ? ಯಾವ ಸಂಘಟನೆ ಇದೆ? ವಿದೇಶಿ ಶಕ್ತಿಗಳಿವೆಯಾ? ಎಂಬ ತನಿಖೆ ನಡೆಸುತ್ತೇವೆ" ಎಂದು ಪಿಎಫ್ಐ ಮತ್ತು ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿ ಹೇಳಿಕೆ ನೀಡಿತ್ತು.

ನಾನು ಹಿಂದೆಯೂ ಬರೆದಿದ್ದೆ. 17 ಎಪ್ರಿಲ್ 2022 ರಂದು ಹುಬ್ಬಳ್ಳಿಯಲ್ಲಿ ಠಾಣೆಯ ಮೇಲೆ ಉದ್ರಿಕ್ತ ಮುಸ್ಲೀಮರ ಗುಂಪು  ಕಲ್ಲು ತೂರಾಟ ನಡೆಸುತ್ತೆ. ಇಲ್ಲಿ ಅರೋಪಿಗಳಾಗಿ 45 ಮುಸ್ಲೀಮರನ್ನು ಅರೆಸ್ಟ್ ಮಾಡಲಾಗುತ್ತದೆ. ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಿದವರು ಈ ದೇಶದ ಸಂವಿದಾನ ಒಪ್ಪದವರು, ದೇಶದ್ರೋಹಿಗಳು. ಹಾಗಾಗಿ ಅವರ ಮನೆ ಮೇಲೆ ಬುಲ್ಡೋಜರ್ ಹತ್ತಿಸಬೇಕು ಎನ್ನಲಾಗುತ್ತದೆ. ಪೊಲೀಸರು ಎಲ್ಲಾ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಲಾಕಪ್ಪಿನಲ್ಲಿ ವರ್ಕೌಟ್ ಮಾಡಿ ಜೈಲಿಗೆ ಹಾಕುತ್ತಾರೆ. ಇಲ್ಲಿ ಮುಸ್ಲೀಮರು ಆರೋಪಿಗಳು. ಪೊಲೀಸರು ಸಂತ್ರಸ್ತರು.

2011ರ ಡಿಸೆಂಬರ್ 14 ಕ್ಕೆ ಬನ್ನಿ. ಆಗ ಡಿ ವಿ ಸದಾನಂದ ಗೌಡರು ಮುಖ್ಯಮಂತ್ರಿಗಳು. ಸುಳ್ಯದ ಜಾಲ್ಸೂರಿನ ಹಿಂದೂ ಕಾರ್ಯಕರ್ತರು ಹಿಂದೂ ಹುಡುಗಿ-ಮುಸ್ಲಿಂ ಯುವಕ ಜೋಡಿಯನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ್ದರು. ಇದೊಂದು ನೈತಿಕ ಪೊಲೀಸ್‌ಗಿರಿ ಪ್ರಕರಣ. ಕಾನೂನಿನ ಪ್ರಕಾರ ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಬೇಕಿತ್ತು. ಬಿಜೆಪಿ ಸರ್ಕಾರವಾದ್ದರಿಂದ ನಮಗ್ಯಾಕೆ ಉಸಾಬರಿ ಎಂದು ಹಿಂದೂ ಕಾರ್ಯಕರ್ತರ ಮೇಲೂ ಕೇಸ್ ಹಾಕದೇ, ಜೋಡಿಗಳ ಮೇಲೂ ಕೇಸ್ ಹಾಕದೇ ಪೊಲೀಸರು ಬಿಟ್ಟು ಬಿಟ್ಟಿದ್ದರು.

ನಾವು ಹಿಡಿದುಕೊಟ್ಟ  ಜೋಡಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಅವರನ್ನು ಬಿಟ್ಟು ಬಿಟ್ಟಿದ್ದಕ್ಕೆ  ಆಕ್ರೋಶಗೊಂಡ ಹಿಂದುತ್ವ ಕಾರ್ಯಕರ್ತರು ರಾತ್ರಿ ಸುಮಾರು 9 ಗಂಟೆಗೆ ಪೊಲೀಸ್ ಠಾಣೆಯ ಎದುರು ಜಮಾಯಿಸಿ ಕಲ್ಲು ತೂರಾಟ ಮಾಡಿತ್ತು. ಕಲ್ಲು ತೂರಾಟದಲ್ಲಿ ಮಹಿಳಾ ಎಎಸ್ಐ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಪೊಲೀಸ್ ಕಾನ್‌ಸ್ಟೇಬಲ್‌ಗಳ ತಲೆ ಒಡೆದಿತ್ತು. ಇಡೀ ಠಾಣೆ ರಕ್ತಮಯವಾಗಿತ್ತು. ಇವೆಲ್ಲದಕ್ಕೂ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೆ. ಕೊನೆಗೆ ಪೊಲೀಸರು ಅನಿವಾರ್ಯವಾಗಿ ಲಾಠಿ ಚಾರ್ಜ್ ಮಾಡಿದರು. ಆ ಬಳಿಕ ಪೊಲೀಸರು ಕಲ್ಲು ತೂರಾಟ ನಡೆಸಿದ್ದ ಹಿಂದುತ್ವ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರ ವಿರುದ್ದ ಎಫ್ಐಆರ್ ದಾಖಲಿಸಿದರು.

Hindu karyakarthas

ಆದರೆ ಹಲ್ಲೆಗೆ ಒಳಗಾದ ಪೊಲೀಸರು ಬಿಜೆಪಿ ನಾಯಕರು ಮತ್ತು ಹಿಂದುತ್ವ ಕಾರ್ಯಕರ್ತರ ಮೇಲೆ ಎಫ್ ಐಆರ್ ದಾಖಲಿಸಿದ್ದು ತಪ್ಪು ಎಂಬ ನಿರ್ಧಾರಕ್ಕೆ ಪೊಲೀಸ್ ಇಲಾಖೆ ಬಂದಿತ್ತು. ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸೇರಿದಂತೆ ಸುಳ್ಯ ಠಾಣೆಯ ಪೊಲೀಸರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತು. ಹಿಂದುತ್ವ ಕಾರ್ಯಕರ್ತರಿಂದ ತಲೆ ಒಡೆಸಿಕೊಂಡಿದ್ದಲ್ಲದೇ, ಬ್ಯಾಂಡೇಜ್ ಹಾಕಿದ ಸ್ಥಿತಿಯಲ್ಲೇ ಪೊಲೀಸರು ವರ್ಗಾವಣೆಗೆ ಒಳಗಾಗಬೇಕಾಯಿತು.

ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ. ಅಮಾಯಕ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ದುರುದ್ದೇಶದಿಂದ ಅಮಾನತು ಮಾಡಿದ ಬಗ್ಗೆ ಆಕ್ರೋಶಗೊಂಡ ಸುಳ್ಯ ಮತ್ತು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯ ಪೊಲೀಸರ ಪತ್ನಿಯರು ಮೊದಲ ಬಾರಿಗೆ ಪ್ರತಿಭಟನೆ ನಡೆಸಿದರು. ಡ್ಯೂಟಿ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು, ಹಿಂದುತ್ವ ಕಾರ್ಯಕರ್ತರಿಂದ ಹಲ್ಲೆಗೆ ಒಳಗಾಗಿದ್ದಲ್ಲದೇ, ಅಮಾನತುಗೊಂಡು ಅನ್ಯಾಯಕ್ಕೊಳಗಾಗಿರುವ ಪೊಲೀಸರಿಗೆ ವಾರದೊಳಗೆ ನ್ಯಾಯ ಒದಗಿಸಬೇಕು. ಇಲ್ಲದೇ ಇದ್ದರೆ ನಾವು ಮತ್ತು ನಮ್ಮ ಮಕ್ಕಳ ಸಾಮೂಹಿಕವಾಗಿ ಠಾಣೆಯ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಪೊಲೀಸರ ಪತ್ನಿಯರು ಪುತ್ತೂರು ಎಎಸ್ಪಿಗೆ ಮನವಿ ಸಲ್ಲಿಸಿದರು‌. ಆದರೆ ಮೊದಲ ಬಾರಿ ಪ್ರತಿಭಟನೆ ನಡೆಸಿದ ಪೊಲೀಸರ ಪತ್ನಿಯ ಮನವಿಗೆ ಸರ್ಕಾರ ಕ್ಯಾರೇ ಅನ್ನಲಿಲ್ಲ. ವಿಪರ್ಯಾಸ ಎಂದರೆ ನಂತರದ ಬೆಳವಣಿಗೆಯಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಬ್ಯಾನರ್‌ನಡಿಯಲ್ಲಿ ಸುಳ್ಯ ಪೊಲೀಸರ ವಿರುದ್ಧ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಹಿಂದೂ ಮುಖಂಡರು ಪೊಲೀಸ್‌ ಇಲಾಖೆಯ ಸಿಬಂದಿಯ ತಾಯಿ, ಪತ್ನಿ, ಅಕ್ಕ, ತಂಗಿಯರ ಬಗ್ಗೆ ಅವಹೇಳನಾಕಾರಿ ಮಾತುಗಳನ್ನಾಡಿದರು.

communal clash

ಹುಬ್ಬಳ್ಳಿ ಮತ್ತು ಸುಳ್ಯದ ಪೊಲೀಸ್ ಠಾಣೆಗೆ ಬಿದ್ದ ಕಲ್ಲು, ಪೊಲೀಸರಿಗೆ ಗಾಯ ಎಲ್ಲವೂ ಒಂದೇ ರೀತಿಯ ಕ್ರೈಂ ಆಗಿದ್ದರೂ ನ್ಯಾಯ ಒಂದೇ ರೀತಿ ಇರುವುದಿಲ್ಲ. ಪೊಲೀಸ್ ಇಲಾಖೆ, ಇಡೀ ಸರ್ಕಾರ ಮತ್ತು ಜನಸಮೂಹದ ವರ್ತನೆಗಳು ಮುಸ್ಲೀಮರಿಗೊಂದು, ಹಿಂದೂಗಳಿಗೊಂದು ನ್ಯಾಯವನ್ನು ಪಾಲಿಸಿದವು.

ಇದನ್ನು ಓದಿದ್ದೀರಾ? ತೀಸ್ತಾರನ್ನು ಬೆಂಬಲಿಸುತ್ತಾ ನಾಗರಿಕ ಪ್ರತಿರೋಧವನ್ನು ಸಶಕ್ತಗೊಳಿಸಬೇಕಾಗಿದೆ: ಕೆ ಪಿ ಸುರೇಶ

ಹಾಗಾಗಿಯೇ ನಾವು ಮಾತನಾಡಬೇಕಿರುವುದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಿಂದ ರಕ್ಷಣೆಗೊಳಪಟ್ಟು ಹಿಂಸಾಚಾರ ನಡೆಸುತ್ತಿರುವ ಕೋಮುವಾದದ ಬಗ್ಗೆ ಮಾತ್ರ. ಹಾಗಾದರೆ ಮುಸ್ಲೀಮರನ್ನು ಮೂಲಭೂತವಾದ ಕೋಮುವಾದದಿಂದ ಹೊರತರುವ ಕೆಲಸ ಆಗಬಾರದೇ ? ಖಂಡಿತಾ ಆಗಬೇಕು. ಮುಸ್ಲಿಂ ಸಮುದಾಯದೊಳಗೆ ಸುಧಾರಣೆಯಾಗಬೇಕು. ಹಿಂದೂ ಸನಾತನವಾದಕ್ಕೆ ಕ್ರಮ ಜಾರಿ ಆಗಬೇಕಿದೆ. ಸುಧಾರಣೆ ಮತ್ತು ಕ್ರಮದ ನಡುವಿನ ವ್ಯತ್ಯಾಸವನ್ನು ತಿಳಿದು ನಾವು ಚಳವಳಿ ಮಾಡಬೇಕಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app